ಕಳೆದ ಹತ್ತಕ್ಕೂ ಹೆಚ್ಚು ವರ್ಷಗಳಿಂದಲೂ ತೆಲುಗು ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ನಟ ರಾಜ್ ತರುಣ್ ವಿರುದ್ಧ ಅವರ ಪ್ರೇಯಸಿ ದೂರು ನೀಡಿದ್ದು, ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ. ಕೆಲವು ಗುರುತರ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಶೀಘ್ರವೇ ನಟ ರಾಜ್ ತರುಣ್ ಬಂಧನ ಆಗಲಿದೆ ಎನ್ನಲಾಗುತ್ತಿದೆ. ಜೊತೆಗೆ ರಾಜ್ ತರುಣ್ರ ಹಾಲಿ ಪ್ರೇಯಸಿ ಎನ್ನಲಾಗುತ್ತಿರುವ ಹಿಮಾಚಲ ಪ್ರದೇಶ ಮೂಲದ ನಟಿಗೂ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ. ಅಷ್ಟಕ್ಕೂ ಏನಿದು ಪ್ರಕರಣ?
ರಾಜ್ ತರುಣ್, ಟಾಲಿವುಡ್ನ ಜನಪ್ರಿಯ ಯುವನಟ. ಸಾಕಷ್ಟು ರೊಮ್ಯಾಂಟಿಕ್ ಕಾಮಿಡಿ ಹಾಗೂ ಆಕ್ಷನ್ ಥ್ರಿಲ್ಲರ್ ಸಿನಿಮಾಗಳಲ್ಲಿ ರಾಜ್ ತರುಣ್ ನಟಿಸಿದ್ದಾರೆ. ರಾಜ್ ಹಲವು ವರ್ಷಗಳಿಂದಲೂ ಲಾವಣ್ಯ ಹೆಸರಿನ ಯುವತಿಯೊಟ್ಟಿಗೆ ಪ್ರೀತಿಯಲ್ಲಿದ್ದರು. ಲಾವಣ್ಯ ಅವರೇ ಹೇಳಿರುವಂತೆ 2012 ರಿಂದಲೂ ತಾವು ಪ್ರೀತಿಯಲ್ಲಿದ್ದು ಹಲವು ವರ್ಷಗಳಿಂದಲೂ ಒಂದೇ ಮನೆಯಲ್ಲಿ ಒಟ್ಟಿಗೆ ವಾಸಿಸುತ್ತಿದ್ದಾರಂತೆ. ಆದರೆ ಇತ್ತೀಚೆಗೆ ರಾಜ್, ಬೇರೊಬ್ಬ ನಟಿಗೆ ಆಕರ್ಷಿತರಾಗಿದ್ದು, ತನಗೆ ಮೋಸ ಮಾಡಿದ್ದಾರೆ ಎಂದು ಲಾವಣ್ಯ ಆರೋಪ ಮಾಡಿದ್ದಾರೆ.
ಲಾವಣ್ಯ ನರಸಿಂಗಿ ಪೊಲೀಸ್ ಠಾಣೆಯಲ್ಲಿ ರಾಜ್ ತರುಣ್ ವಿರುದ್ಧ ದೂರು ನೀಡಿದ್ದು, ವಂಚನೆ, ಮದುವೆಯಾಗುವುದಾಗಿ ನಂಬಿಸಿ ಲೈಂಗಿಕ ಕ್ರಿಯೆ, ಬೆದರಿಕೆ ಇನ್ನೂ ಕೆಲವು ಆರೋಪಗಳನ್ನು ಮಾಡಿದ್ದಾರೆ. ದೂರಿನನ್ವಯ ಪೊಲೀಸರು ರಾಜ್ ತರುಣ್ ವಿರುದ್ಧ ಸೆಕ್ಷನ್ 420 (ವಂಚನೆ), 503 (ಹಿಂಸೆಯ ಬೆದರಿಕೆ), ಸೆಕ್ಷನ್ 493 (ಕಾನೂನುಬದ್ಧ ವಿವಾಹದ ನಂಬಿಕೆ ಮೂಡಿಸಿ ಮೋಸದಿಂದ ವ್ಯಕ್ತಿಯನ್ನು ಲೈಂಗಿಕತೆಗೆ ಅಥವಾ ಬೇರೆ ಉದ್ಧೇಶಕ್ಕೆ ಬಳಸಿಕೊಳ್ಳುವುದು) ಅಡಿಯಲ್ಲಿ ಕೇಸು ನಮೂದಿಸಿಕೊಂಡಿದ್ದು, ತನಿಖೆ ಆರಂಭಿಸಿದ್ದಾರೆ.
ಇದನ್ನೂ ಓದಿ:ರಾಜ್ ಕಪ್: ನಿರ್ದೇಶಕ ತರುಣ್ ಸುಧೀರ್ ತಂಡದ ಲೋಗೋದಲ್ಲಿರುವ 4 ಸಿಂಹಗಳು ಯಾರು?
ಲಾವಣ್ಯ ನೀಡಿರುವ ದೂರಿನನ್ವಯ, ರಾಜ್ ಹಾಗೂ ಲಾವಣ್ಯ 2012 ರಿಂದಲೂ ಪ್ರೀತಿಸುತ್ತಿದ್ದಾರೆ. ಇದೀಗ ಮುಂಬೈ ಮೂಲದ ನಟಿಯೊಟ್ಟಿಗೆ ರಾಜ್ ಪ್ರೀತಿಯಲ್ಲಿದ್ದಾರೆ. ಆ ಮುಂಬೈ ಮೂಲದ ನಟಿ ಹಾಗೂ ಆಕೆಯ ಸಹೋದರ ಲಾವಣ್ಯಗೆ ಬೆದರಿಕೆಗಳನ್ನು ಹಾಕಿದ್ದು, ರಾಜ್ ತರುಣ್ ಇಂದ ದೂರ ಇರುವಂತೆ ಒತ್ತಾಯಿಸಿದ್ದಾರೆ. ಕೆಲ ತಿಂಗಳ ಹಿಂದೆ ಸಹ ಲಾವಣ್ಯ, ರಾಜ್ ಅನ್ನು ಮದುವೆಯಾಗಲು ನಿಶ್ಚಯಿಸಿದ್ದರಂತೆ. ಆ ಸಮಯದಲ್ಲಿ ಆ ನಟಿಗೆ ಕರೆ ಮಾಡಿ ರಾಜ್ ಇಂದ ದೂರ ಇರುವಂತೆ ಬೇಡಿಕೊಂಡಿದ್ದಾಗಿಯೂ ಲಾವಣ್ಯ ತಮ್ಮ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ತಮ್ಮ ಹಾಗೂ ರಾಜ್ ತರುಣ್ರ ಕೆಲ ಆಪ್ತ ಚಿತ್ರಗಳನ್ನು ಸಹ ನಟಿ ಪೊಲೀಸರೊಟ್ಟಿಗೆ ಹಂಚಿಕೊಂಡಿದ್ದಾರೆ.
ಇನ್ನು ತಮ್ಮ ಹೆಸರು ಪ್ರಕರಣದಲ್ಲಿ ಕೇಳಿ ಬಂದಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿರುವ ರಾಜ್ ತರುಣ್ರ ಹಾಲಿ ಪ್ರೇಯಸಿ ಎನ್ನಲಾಗುತ್ತಿರುವ ಹಿಮಾಚಲ ಪ್ರದೇಶ ಮೂಲದ ನಟಿ ಸಹ ಲಾವಣ್ಯ ವಿರುದ್ಧ ಇತ್ತೀಚೆಗಷ್ಟೆ ದೂರು ನೀಡಿದ್ದು, ಲಾವಣ್ಯ ತಮಗೆ ಹಾಗೂ ತಮ್ಮ ಕುಟುಂಬದವರಿಗೆ ಕರೆ ಮಾಡಿ ಬೆದರಿಕೆ ಹಾಕಿದ್ದಾರೆ. ಹಾಗೂ ತನ್ನ ಸಹೋದರನಿಗೆ ಕೊಲೆ ಮಾಡುವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ. ಜೊತೆಗೆ ತಾನೂ ಹಾಗೂ ರಾಜ್ ತರುಣ್ ಕೇವಲ ಸ್ನೇಹಿತರಷ್ಟೆ ನಮ್ಮ ನಡುವೆ ಯಾವುದೇ ಸಂಬಂಧ ಇಲ್ಲವೆಂದು ಸಹ ನಟಿ ಹೇಳಿದ್ದಾರೆ. ನಟ ರಾಜ್ ತರುಣ್, ಘಟನೆಯ ಬಗ್ಗೆ ಯಾವುದೇ ಹೇಳಿಕೆ ನೀಡಿಲ್ಲ.
ನಟ ರಾಜ್ ತರುಣ್, ಕಳೆದ ಹತ್ತು ವರ್ಷದಿಂದ ತೆಲುಗು ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ತೆಲುಗಿನ ಸೂಪರ್ ಹಿಟ್ ಸಿನಿಮಾ ‘ಉಯ್ಯಾಲ ಜಂಪಾಲ’, ‘ಕುಮಾರಿ 21 ಎಫ್’, ‘ಸಿನಿಮಾ ಚೂಪಿಸ್ತಾ ಮಾವ’, ‘ಪವರ್ ಪ್ಲೇ’, ‘ನಾ ಸಾಮಿ ರಂಗ’, ‘ಒರೇ ಬುಜ್ಜಿಗಾ’ ಇನ್ನೂ ಹಲವಾರು ರೊಮ್ಯಾಂಟಿಕ್ ಕಾಮಿಡಿ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇದೀಗ ‘ತಿರಗಬಡರಾ ಸ್ವಾಮಿ’ ಹೆಸರಿನ ಹೊಸ ಸಿನಿಮಾ ಪ್ರಾರಂಭಿಸಿದ್ದು ಚಿತ್ರೀಕರಣ ನಡೆಯುತ್ತಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ