ಬಳ್ಳಾರಿ: ಅಪ್ಪು ನಮ್ಮಗಲಿ 11 ದಿನಗಳೇ ಕಳೆದ್ರು ಅಭಿಮಾನ ಮಾತ್ರ ಇನ್ನೂ ಕರಗುತ್ತಿಲ್ಲ. ಪುನೀತ್ ರಾಜ್ಕುಮಾರ್ ನೆನಪು ಕಣ್ಣಾಲೆಯಲ್ಲೇ ಬಂಧಿಯಾಗಿದೆ. ರಾಜ್ಯದಲ್ಲಿ ಇಂದು ಪುನೀತ್ರ 11ನೇ ದಿನದ ಕಾರ್ಯ ಹಿನ್ನೆಲೆ ಅಭಿಮಾನಿಗಳು ಭಿನ್ನ ಭಿನ್ನವಾಗಿ ಶ್ರದ್ಧಾಂಜಲಿ ಅರ್ಪಿಸುತ್ತಿದ್ದಾರೆ. ಇದರ ನಡುವೆ ಬಳ್ಳಾರಿಯಲ್ಲಿ ಪುನೀತ್ ಹೆಸರಿನಲ್ಲಿ ಉಚಿತ ವಸತಿ ಶಾಲೆ ನಿರ್ಮಾಣ ಮಾಡುವ ಆಸೆಯನ್ನು ಮಾಜಿ ಸಚಿವ ಜನಾರ್ದನರೆಡ್ಡಿ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ಅವರು, ಬಳ್ಳಾರಿಯಲ್ಲಿ ಶೀಘ್ರದಲ್ಲೇ ವಸತಿ ಶಾಲೆ ನಿರ್ಮಾಣ ಮಾಡಲಾಗುತ್ತೆ. ಆರೋಗ್ಯ ಕ್ಷೇತ್ರದಲ್ಲೂ ಸೇವೆ ಸಲ್ಲಿಸುವ ಗುರಿ ಇದೆ. ಶಾಶ್ವತವಾಗಿ ಬಳ್ಳಾರಿಯಲ್ಲಿ ವಾಸಿಸಲು ‘ಸುಪ್ರೀಂ’ ಅನುಮತಿ ನೀಡಿದೆ. ಬಳ್ಳಾರಿಯಲ್ಲಿ ಹೆಚ್ಚು ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಳ್ಳುವೆ. ದಿವಂಗತ ನಟ ಪುನೀತ್ ರಾಜ್ಕುಮಾರ್ ಪದ್ಮಭೂಷಣ, ಪದ್ಮಶ್ರೀ ಸೇರಿದಂತೆ ಇನ್ನೂ ದೊಡ್ಡ ಪ್ರಶಸ್ತಿಗಳು ಲಭಿಸಲಿ ಎಂದು ತಮ್ಮ ಇಂಗಿತ ವ್ಯಕ್ತಪಡಿಸಿದ್ದಾರೆ.
ನಟ ಪುನೀತ್ ರಾಜ್‌ಕುಮಾರ್ ಪುಣ್ಯಸ್ಮರಣೆ ಹಿನ್ನೆಲೆ ಬಳ್ಳಾರಿಯ ರುಕ್ಮಿಣಿ ಚಂಗಾರೆಡ್ಡಿ ವೃದ್ಧಾಶ್ರಮದಲ್ಲಿ ಮಾಜಿ ಸಚಿವ ಜನಾರ್ದನ ರೆಡ್ಡಿ ನೇತೃತ್ವದಲ್ಲಿ ಶ್ರದ್ಧಾಂಜಲಿ ಸಭೆ ನಡೆಯುತ್ತಿದೆ. ಶ್ರದ್ಧಾಂಜಲಿ ಸಭೆಯಲ್ಲಿ ಜನಾರ್ದನ ರೆಡ್ಡಿ ಪತ್ನಿ ಗಾಲಿ ಲಕ್ಷ್ಮಿ ಅರುಣಾ, ಶಾಸಕ ಸೋಮಶೇಖರ್ ರೆಡ್ಡಿ ಭಾಗಿಯಾಗಿದ್ದಾರೆ. ಶ್ರದ್ಧಾಂಜಲಿ ಸಭೆಯಲ್ಲಿ ಜನಾರ್ದನರೆಡ್ಡಿ ಮಾತನಾಡುತ್ತ, ಪುನೀತ್ ಕರ್ನಾಟಕ ರಾಜ್ಯ ಕಂಡಿರುವ ಅತ್ಯಂತ ದೊಡ್ಡ ಕಲಾವಿದ. ಅವರು ಮಾಡಿದ ಸಾಮಾಜಿಕ ಸೇವೆ ಅನನ್ಯ. ಪಾಕಿಸ್ತಾನದಲ್ಲೂ ಕೂಡ ಪುನೀತ್ ರಾಜ್ಕುಮಾರ್ ಅವರಿಗೆ ಅಭಿಮಾನಿಗಳಿದ್ದಾರೆ. ಡಾ ರಾಜ್ ಕುಮಾರ್ ಅವರ ಚಿತ್ರಗಳಿಂದ ನಾವೆಲ್ಲಾ ಸಂಸ್ಕಾರ ಪಡೆದಿದ್ದೇವೆ. ತಂದೆಯಂತೆ ಪುನೀತ್ ರಾಜ್ ಕುಮಾರ್ ಅವರು ಕೂಡ ಒಳ್ಳೆಯ ಚಿತ್ರಗಳನ್ನ ನೀಡಿದ್ದಾರೆ. ತಂದೆಗೆ ಪ್ರತಿರೂಪವಾಗಿರುವ ಪುನೀತ್ ರಾಜ್ ಕುಮಾರ್ ಅವರಿಗೆ ಹಂಪಿ ಉತ್ಸವಕ್ಕೆ ಆಹ್ವಾನ ಮಾಡಲಾಗಿತ್ತು. ಅವರ ಸೌಜನ್ಯದ ನಡೆ ಇಡೀ ಸಮಾಜಕ್ಕೆ ಮಾದರಿ.
ಬಳ್ಳಾರಿ ನಗರದಲ್ಲಿ ರಸ್ತೆ, ಪಾರ್ಕ್ಗೆ ಡಾ.ರಾಜ್ ಹೆಸರಿಡಲಾಗಿದೆ. ಪುನೀತ್ ರಾಜ್ಕುಮಾರ್ ಅಗಲಿಕೆ ನಂಬಲು ಸಾಧ್ಯವಾಗುತ್ತಿಲ್ಲ. ನಾನು ದೇವರಲ್ಲಿ ಬೇಡಿಕೊಳ್ಳುವುದು ಒಂದೇ ನನಗೆ ಯಾವುದೇ ರಾಜಕೀಯ ಪದವಿ, ಯಾವುದೂ ಬೇಡ. ಬಳ್ಳಾರಿಯಲ್ಲಿ ನನ್ನ ಜನರ ಜತೆ ಜೀವಿಸಲು ಅವಕಾಶ ಸಿಕ್ರೆ ಸಾಕು. ದೇವರು ಅವಕಾಶ ಮಾಡಿಕೊಟ್ಟರೆ ಇನ್ನಷ್ಟು ಸಮಾಜ ಸೇವೆ ಮಾಡುವೆ ಎಂದರು.
ಇದನ್ನೂ ಓದಿ: ಪುನೀತ್ ಸಮಾಧಿಗೆ ಕಡ್ಲೆಪುರಿ ಹಾರ ತಂದ ತುಮಕೂರಿನ ಅಜ್ಜಿ