Puneeth Rajkumar: ಗೃಹ ಸಚಿವರಿಗೆ ಪತ್ರ ಬರೆದ ಪುನೀತ್ ಪತ್ನಿ ಅಶ್ವಿನಿ; ಇದರಲ್ಲಿ ಉಲ್ಲೇಖವಾದ ಪ್ರಮುಖ ಅಂಶಗಳೇನು?
Ashwini Puneeth Rajkumar: ಪುನೀತ್ ರಾಜ್‌ಕುಮಾರ್ ನಿಧನದ ಬಳಿಕ ಪರಿಸ್ಥಿತಿಯನ್ನು ರಾಜ್ಯ ಸರ್ಕಾರ ಅಚ್ಚುಕಟ್ಟಾಗಿ ನಿಭಾಯಿಸಿದೆ. ಅದಕ್ಕಾಗಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರು ಗೃಹ ಸಚಿವ ಆರಗ ಜ್ಞಾನೇಂದ್ರ ಅವರಿಗೆ ಪತ್ರ ಬರೆದು ಧನ್ಯವಾದ ಅರ್ಪಿಸಿದ್ದಾರೆ.
ಪುನೀತ್ ರಾಜ್‌ಕುಮಾರ್ ಅವರನ್ನು ಕಳೆದುಕೊಂಡ ಬಳಿಕ ಅವರ ಇಡೀ ಕುಟುಂಬ ಕಣ್ಣೀರಿನಲ್ಲಿ ದಿನ ಕಳೆಯುತ್ತಿದೆ. ಅದರಲ್ಲೂ ಪುನೀತ್ ಪತ್ನಿ ಅಶ್ವಿನಿ ಅವರ ನೋವನ್ನು ಪದಗಳಲ್ಲಿ ವಿವರಿಸಲು ಸಾಧ್ಯವಿಲ್ಲ. ಅಪ್ಪು ಅಗಲಿಕೆ ಬಳಿಯ ಅವರು ಒಂದು ಮಾತನ್ನೂ ಆಡಿಲ್ಲ. ಅಷ್ಟರಮಟ್ಟಿಗೆ ಅವರ ಮನಸ್ಸು ಘಾಸಿಗೊಂಡಿದೆ. ಈ ನೋವಿನ ನಡುವೆಯೂ ಅವರು ಗೃಹ ಸಚಿವ ಆರಗ ಜ್ಞಾನೇಂದ್ರ ಅವರಿಗೆ ಪತ್ರ ಬರೆದಿದ್ದಾರೆ. ಆ ಪತ್ರದ ಪ್ರತಿ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಪುನೀತ್ ರಾಜ್‌ಕುಮಾರ್ ನಿಧನದ ಸುದ್ದಿ ಕೇಳಿ ಕೋಟ್ಯಂತರ ಅಭಿಮಾನಿಗಳಿಗೆ ಆಘಾತ ಆಯಿತು. ಆ ಸಂದರ್ಭವನ್ನು ನಿಭಾಯಿಸುವುದು ಅಷ್ಟು ಸುಲಭದ್ದಾಗಿರಲಿಲ್ಲ. ಇಂಥ ಪರಿಸ್ಥಿತಿಯನ್ನು ರಾಜ್ಯ ಸರ್ಕಾರ ಅಚ್ಚುಕಟ್ಟಾಗಿ ನಿಭಾಯಿಸಿದೆ. ಅದಕ್ಕಾಗಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರು ಗೃಹ ಸಚಿವ ಆರಗ ಜ್ಞಾನೇಂದ್ರ ಅವರಿಗೆ ಪತ್ರ ಬರೆದು ಧನ್ಯವಾದ ಅರ್ಪಿಸಿದ್ದಾರೆ.
‘ಪುನೀತ್ ರಾಜ್‌ಕುಮಾರ್ ಅವರ ಅಕಾಲಿಕ ಅಗಲಿಕೆ ನಮಗಷ್ಟೇ ಅಲ್ಲದೇ ಇಡೀ ರಾಜ್ಯಕ್ಕೆ ಆಘಾತಕಾರಿ ವಿಷಯ. ಪುನೀತ್ ಅವರು ವಿಶ್ವದಾದ್ಯಂತ ಕೋಟ್ಯಂತರ ಅಭಿಮಾನಿಗಳನ್ನು ಹೊಂದಿದ್ದವರು. ನಮ್ಮ ನೋವನ್ನು ಅಡಗಿಸಿಟ್ಟುಕೊಂಡು ಅವರನ್ನು ಸಕಲ ಗೌರವಗಳೊಂದಿಗೆ ಕಳಿಸಿಕೊಡುವುದು ಅನಿವಾರ್ಯ ಆಗಿತ್ತು. ಇಂತಹ ಸಂದರ್ಭದಲ್ಲಿ ಗೃಹ ಮಂತ್ರಿಗಳಾದ ತಾವು ನಮಗೆ ಬೆಂಬಲವಾಗಿ ನಿಂತಿದ್ದೀರಿ’ ಎಂದು ಪತ್ರದಲ್ಲಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ತಿಳಿಸಿದ್ದಾರೆ.
‘ಲಕ್ಷಾಂತರ ಅಭಿಮಾನಿಗಳಿಗೆ ಅಂತಿಮ ದರ್ಶನದ ವ್ಯವಸ್ಥೆ ಮಾಡಿದ್ದಷ್ಟೇ ಅಲ್ಲದೆ, ಅಂತ್ಯ ಸಂಸ್ಕಾರ ಪೂರ್ಣ ಆಗುವವರೆಗೂ ಜೊತೆಗಿದ್ದು ಧೈರ್ಯ ನೀಡಿದ್ದೀರಿ. ಮೂರು ದಿನಗಳ ಕಾಲ ಯಾವುದೇ ಅಹಿತಕರ ಘಟನೆ ನಡೆಯದಂತೆ ನೀವು ಕೈಗೊಂಡ ಕ್ರಮಗಳಿಂದ ನಾವು ಅವರಿಗೊಂದು ಸೂಕ್ತವಾದ ವಿದಾಯ ಹೇಳಲು ಸಾಧ್ಯವಾಗಿದೆ. ನಿಮ್ಮ ಈ ಸಹಕಾರಕ್ಕೆ ನಮ್ಮ ಇಡೀ ಕುಟುಂಬ ಮತ್ತು ಎಲ್ಲ ಅಭಿಮಾನಿಗಳ ಪರವಾಗಿ ಹೃತ್ಪೂರ್ವಕ ಕೃತಜ್ಞತೆಗಳು’ ಎಂದು ಅಶ್ವಿನಿ ಪುನೀತ್ ರಾಜ್‌ಕುಮಾರ್ ಪತ್ರ ಬರೆದಿದ್ದಾರೆ. ಅದೇ ರೀತಿ ಬಿಬಿಎಂಪಿ ಆಯುಕ್ತರಿಗೂ ಪತ್ರ ಬರೆಯಲಾಗಿದೆ.
ಪುನೀತ್ ರಾಜ್‌ಕುಮಾರ್ ಕುಟುಂಬದವರು ಇಂದು (ನ.8) 11ನೇ ದಿನದ ಕಾರ್ಯ ನೆರವೇರಿಸಿದ್ದಾರೆ. ಈ ಪ್ರಯುಕ್ತ ಅಪ್ಪು ಸಮಾಧಿಯನ್ನು ಹಲವು ಬಗೆಯ ಹೂವುಗಳಿಂದ ಸಿಂಗರಿಸಲಾಗಿದೆ. ವಿಶೇಷವಾಗಿ ಅಲಂಕಾರಗೊಂಡ ಸಮಾಧಿಗೆ ಡಾ. ರಾಜ್ಕುಟುಂಬದವರು ಪೂಜೆ ಸಲ್ಲಿಸಿದ್ದಾರೆ. ಪುನೀತ್ಗೆ ಇಷ್ಟವಾದ ಅಡುಗೆಗಳನ್ನು ಮಾಡಿ ಸಮಾಧಿ ಮುಂದೆ ಇರಿಸಲಾಗಿದೆ. ಅಪ್ಪು ನಿವಾಸದಲ್ಲಿ ಮುಂಜಾನೆಯಿಂದಲೇ ಪೂಜಾ ಕಾರ್ಯಗಳು ಆರಂಭ ಆಗಿದ್ದವು. 10 ಗಂಟೆ ಸುಮಾರಿಗೆ ಕುಟುಂಬದವರು ಸಮಾಧಿ ಬಳಿ ಆಗಮಿಸಿ ಪೂಜೆ ಸಲ್ಲಿಸಿದರು.
ಇದನ್ನೂ ಓದಿ:
ಅಪ್ಪು ಪುಣ್ಯ ಸ್ಮರಣೆಗೆ ಹೇಗಿದೆ ಸಮಾಧಿ ಅಲಂಕಾರ? ವಿವಿಧ ಹೂವುಗಳಿಂದ ಪುನೀತ್ಗೆ ನಮನ