‘ಕಾಂತಾರ’ (Kantara Movie) ಚಿತ್ರದ ‘ವರಾಹ ರೂಪಂ..’ ಹಾಡು ವಿವಾದದ ಕೇಂದ್ರ ಬಿಂದು ಆಗಿದೆ. ‘ತೈಕ್ಕುಡಂ ಬ್ರಿಡ್ಜ್’ ಬ್ಯಾಂಡ್ನ ‘ನವರಸಂ..’ ಹಾಡಿನ ಟ್ಯೂನ್ ‘ವರಾಹ ರೂಪಂ..’ನಲ್ಲಿ ಬಳಕೆ ಆಗಿದೆ ಎಂಬ ಆರೋಪ ಕೇಳಿ ಬಂದಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿ ‘ತೈಕ್ಕುಡಂ ಬ್ರಿಡ್ಜ್’ (Thaikkudam Bridge) ಕೇಸ್ ಕೂಡ ದಾಖಲು ಮಾಡಿತ್ತು. ಈ ಸಂಬಂಧ ಅರ್ಜಿ ವಿಚಾರಣೆ ನಡೆಸಿದ್ದ ಕೇರಳದ ಸ್ಥಳೀಯ ನ್ಯಾಯಾಲಯ ‘ವರಾಹ ರೂಪಂ..’ ಹಾಡಿಗೆ ತಡೆ ನೀಡಿದೆ. ಈ ವಿವಾದದ ಬಗ್ಗೆ ‘ತೈಕ್ಕುಡಂ ಬ್ರಿಡ್ಜ್’ ಬ್ಯಾಂಡ್ನ ವಿಯಾನ್ ಫರ್ನಾಂಡಿಸ್ ಪ್ರತಿಕ್ರಿಯೆ ನೀಡಿದ್ದಾರೆ.
‘ತೈಕ್ಕುಡಂ ಬ್ರಿಡ್ಜ್’ ಹಣಕ್ಕಾಗಿ ಇಷ್ಟೆಲ್ಲ ಮಾಡುತ್ತಿದೆ ಎಂಬ ಆರೋಪವನ್ನು ಕೆಲವರು ಮಾಡಿದ್ದರು. ಆದರೆ, ಆ ರೀತಿ ಇಲ್ಲ ಎನ್ನುತ್ತಾರೆ ವಿಯಾನ್. ‘ಕೋರ್ಟ್ನ ಆದೇಶದ ಪ್ರತಿ ಕೈ ಸೇರಿದ ನಂತರದಲ್ಲಿ ಕಾಂತಾರ ತಂಡದವರು ಯಾವ ರೀತಿಯ ನಿರ್ಧಾರ ತೆಗೆದುಕೊಳ್ಳುತ್ತಾರೆ ಅನ್ನೋದು ತುಂಬಾನೇ ಮುಖ್ಯ. ನಮಗೆ ಕ್ರೆಡಿಟ್ ಕೊಟ್ಟರೆ ಈ ಹಾಡನ್ನು ಅವರು ಪ್ಲೇ ಮಾಡಿಕೊಳ್ಳುವುದರಲ್ಲಿ ಯಾವುದೇ ಸಮಸ್ಯೆ ಇಲ್ಲ’ ಎಂದು ವಿಯಾನ್ ಹೇಳಿದ್ದಾರೆ. ಈ ಮೂಲಕ ತಮ್ಮ ಬೇಡಿಕೆ ಏನು ಎಂಬುದನ್ನು ತಿಳಿಸಿದ್ದಾರೆ.
‘ದೊಡ್ಡ ನಿರ್ಮಾಣ ಸಂಸ್ಥೆ ವಿರುದ್ಧ ಸ್ವತಂತ್ರ ಬ್ಯಾಂಡ್ ಹೋರಾಡುತ್ತಿರುವುದು ಇದೇ ಮೊದಲು. ತಮ್ಮಲ್ಲಿರುವ ಹಣ, ಅಧಿಕಾರದಿಂದ ಪಾರಾಗಬಹುದು ಎಂದು ಅವರು ಭಾವಿಸಿರಬಹುದು. ಸಂಗೀತ ಲೋಕಕ್ಕೆ ಮಾದರಿ ಆಗಬೇಕು ಎಂಬುದು ನಮ್ಮ ಉದ್ದೇಶ. ಮುಂದಿನ ದಿನಗಳಲ್ಲಿ ಈ ಪ್ರಕರಣದಲ್ಲಿ ಏನೇ ಆದರೂ ನಮಗೆ ಖುಷಿಯಿದೆ. ನಾವು ಸುಮ್ಮನೆ ಕೂತಿಲ್ಲ, ದಿಟ್ಟ ಹೆಜ್ಜೆ ತೆಗೆದುಕೊಂಡೆವು ಎಂಬ ತೃಪ್ತಿ ನಮ್ಮಲ್ಲಿರುತ್ತದೆ’ ಎಂದಿದ್ದಾರೆ ಅವರು.
‘ಕೆಲವು ಹಾಡುಗಳ ಮಧ್ಯೆ ಹೋಲಿಕೆ ಇರುತ್ತದೆ. ಅದು ಸಾಮಾನ್ಯ. ಹೀಗಾಗಿ, ಆರಂಭದಲ್ಲಿ ಈ ವಿಚಾರದಲ್ಲಿ ಅಷ್ಟಾಗಿ ತಲೆಕೆಡಿಸಿಕೊಳ್ಳಲಿಲ್ಲ. ಆದರೆ, ಕಮೆಂಟ್ಗಳು, ಮೆಸೇಜ್ಗಳು, ದೂರವಾಣಿ ಕರೆಗಳು ನಿಲ್ಲಲೇ ಇಲ್ಲ. ಹೀಗಾಗಿ ಕೇಸ್ ಹಾಕಿದೆವು. ಯೂಟ್ಯೂಬ್ ಚಾನೆಲ್ನಲ್ಲಿ ‘ವರಾಹ ರೂಪಂ..’ ಹಾಡಿಗೆ ಬಂದ ಅನೇಕ ಕಮೆಂಟ್ಗಳನ್ನು ಡಿಲೀಟ್ ಮಾಡಲಾಗಿದೆ’ ಎಂಬ ಆರೋಪವನ್ನು ಅವರು ಮಾಡಿದ್ದಾರೆ.
ಇದನ್ನೂ ಓದಿ: ‘ರಾಮ್ ಸೇತು’ ಎದುರು ಹೆಚ್ಚಾಯ್ತು ‘ಕಾಂತಾರ’ ಶೋಗಳ ಸಂಖ್ಯೆ; ಮತ್ತೆ ಎಡವಿದ ಅಕ್ಷಯ್ ಕುಮಾರ್
‘ಕಾಂತಾರ ಚಿತ್ರದ ಮ್ಯೂಸಿಕ್ ಡೈರೆಕ್ಟರ್ ಬಿ. ಅಜನೀಶ್ ಲೋಕನಾಥ್ ಅವರು ನಮ್ಮ ಬ್ಯಾಂಡ್ನ ಸ್ಥಾಪಕರಲ್ಲೊಬ್ಬರಾದ ಗೋವಿಂದ್ ವಸಂತ್ ಅವರನ್ನು ಸಂಪರ್ಕಿಸಿದ್ದರು. ನಮ್ಮ ಮ್ಯಾನೇಜ್ಮೆಂಟ್ ಅವರು ಕಾಂತಾರ ತಂಡಕ್ಕೆ ಎಚ್ಚರಿಕೆ ನೀಡಿದೆ. ಈ ಚಿತ್ರ ರಿಲೀಸ್ಗೂ ಮೊದಲು ಅವರು ನಮ್ಮ ಜತೆ ಮಾತನಾಡಿ, ಹಾಡಿನಲ್ಲಿ ನಮ್ಮ ಬ್ಯಾಂಡ್ನ ಉಲ್ಲೇಖ ಮಾಡಿದ್ದರೆ ಸಾಕಿತ್ತು. ನಾವು ಕೇಸ್ ಹಾಕುತ್ತಿರಲಿಲ್ಲ’ ಎಂದಿದ್ದಾರೆ ವಿಯಾನ್.
Published On - 3:06 pm, Mon, 31 October 22