
ನಟಿ ರಶ್ಮಿಕಾ ಮಂದಣ್ಣ (Rashmika Mandanna) ಅವರು ಈಗ ಪ್ರವಾಸದ ಮಜಾ ಸವಿಯುತ್ತಿದ್ದಾರೆ. ಸಿನಿಮಾ ಕೆಲಸಗಳಿಗೆ ಕೊಂಚ ಬ್ರೇಕ್ ನೀಡಿರುವ ಅವರು ಈಗ ಮಾಲ್ಡೀವ್ಸ್ಗೆ (Maldives) ತೆರಳಿದ್ದಾರೆ. ಅಲ್ಲಿನ ಕಡಲ ತೀರದಲ್ಲಿ ಈಜಾಡುತ್ತಾ ಕಾಲ ಕಳೆಯುತ್ತಿದ್ದಾರೆ. ತಮ್ಮ ಪ್ರವಾಸದ ಬಗ್ಗೆ ಇನ್ಸ್ಟಾಗ್ರಾಮ್ ಮೂಲಕ ಅಪ್ಡೇಟ್ ನೀಡುತ್ತಿದ್ದಾರೆ. ನೀರಿನಲ್ಲಿ ಎಂಜಾಯ್ ಮಾಡುತ್ತಿರುವ ತಮ್ಮನ್ನು ತಾವು ‘ವಾಟರ್ ಬೇಬಿ’ ಎಂದು ಅವರು ಕರೆದುಕೊಂಡಿದ್ದಾರೆ. ಅವರು ನಟಿಸಿದ ‘ಗುಡ್ಬೈ’ (Goodbye) ಸಿನಿಮಾ ಇತ್ತೀಚೆಗೆ ರಿಲೀಸ್ ಆಗಿ ಸೋತಿದೆ. ಸೋಲಿನ ಚಿಂತೆ ಬಿಟ್ಟು ಅವರು ಮಾಲ್ಡೀವ್ಸ್ನಲ್ಲಿ ರಿಲ್ಯಾಕ್ಸ್ ಮಾಡುತ್ತಿದ್ದಾರೆ.
ದಕ್ಷಿಣ ಭಾರತದಲ್ಲಿ ಮಾತ್ರವಲ್ಲದೇ ಬಾಲಿವುಡ್ನಲ್ಲೂ ರಶ್ಮಿಕಾ ಮಂದಣ್ಣ ಅವರಿಗೆ ಬೇಡಿಕೆ ಇದೆ. ಅವರು ನಟಿಸಿದ ‘ಗುಡ್ಬೈ’ ಸಿನಿಮಾ ಬಗ್ಗೆ ಅಭಿಮಾನಿಗಳು ಹೆಚ್ಚು ನಿರೀಕ್ಷೆ ಇಟ್ಟುಕೊಂಡಿದ್ದರು. ಯಾಕೆಂದರೆ, ಹಿಂದಿಯಲ್ಲಿ ರಿಲೀಸ್ ಆದ ರಶ್ಮಿಕಾ ಮಂದಣ್ಣ ಅವರ ಮೊದಲ ಚಿತ್ರವಿದು. ಈ ಸಿನಿಮಾದಲ್ಲಿ ಅಮಿತಾಭ್ ಬಚ್ಚನ್, ನೀನಾ ಗುಪ್ತಾ ಮುಂತಾದ ಹಿರಿಯರ ಜೊತೆ ನಟಿಸುವ ಅವಕಾಶವನ್ನು ರಶ್ಮಿಕಾ ಪಡೆದುಕೊಂಡರು. ಟ್ರೇಲರ್ ಕೂಡ ಮೆಚ್ಚುಗೆ ಗಳಿಸಿತ್ತು. ಬಾಕ್ಸ್ ಆಫೀಸ್ನಲ್ಲಿ ಈ ಸಿನಿಮಾ ಸೂಪರ್ ಹಿಟ್ ಆಗಬಹುದು ಎಂದೇ ನಿರೀಕ್ಷಿಸಲಾಗಿತ್ತು. ಆದರೆ ಅದು ಸಾಧ್ಯವಾಗಿಲ್ಲ.
ಮೊದಲ ದಿನ (ಅ.7) ‘ಗುಡ್ಬೈ’ ಸಿನಿಮಾ ಗಳಿಸಿದ್ದು ಕೇವಲ 90 ಲಕ್ಷ ರೂಪಾಯಿ ಮಾತ್ರ. ಎರಡನೇ ದಿನ 1.35 ಕೋಟಿ ರೂಪಾಯಿ. ನಂತರದ ದಿನಗಳಲ್ಲಿ ಪರಿಸ್ಥಿತಿ ಏನೂ ಸುಧಾರಿಸಲಿಲ್ಲ. ಈ ಚಿತ್ರದಿಂದ ನಿರ್ಮಾಪಕರು ಕೈ ಸುಟ್ಟುಕೊಳ್ಳುವಂತಾಗಿದೆ. ಈ ಚಿಂತೆಯನ್ನು ಬದಿಗಿಟ್ಟು ರಶ್ಮಿಕಾ ಮಂದಣ್ಣ ಅವರು ಪ್ರವಾಸದಲ್ಲಿ ಖುಷಿಯಾಗಿದ್ದಾರೆ.
ಮಾಲ್ಡೀವ್ಸ್ನಿಂದ ಹಲವು ಫೋಟೋಗಳನ್ನು ರಶ್ಮಿಕಾ ಶೇರ್ ಮಾಡುತ್ತಿದ್ದಾರೆ. ಸಮುದ್ರದ ಆಳಕ್ಕೆ ಇಳಿದು ಮೀನಿನಂತೆ ಈಜಾಡಿದ್ದಾರೆ. ಅದರ ವಿಡಿಯೋವನ್ನು ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಅವರು ಹಂಚಿಕೊಂಡಿದ್ದಾರೆ. ರಶ್ಮಿಕಾ ಜೊತೆ ವಿಜಯ್ ದೇವರಕೊಂಡ ಕೂಡ ಮಾಲ್ಡೀವ್ಸ್ಗೆ ತೆರಳಿದ್ದಾರೆ ಎಂಬ ಅನುಮಾನ ಇದೆ. ಅವರಿಬ್ಬರು ಜೊತೆಯಾಗಿ ಯಾವುದೇ ಫೋಟೋ ಹಂಚಿಕೊಂಡಿಲ್ಲ. ಆದರೆ ಒಂದು ಫೋಟೋದಲ್ಲಿ ರಶ್ಮಿಕಾ ಧರಿಸಿರುವ ಕೂಲಿಂಗ್ ಗ್ಲಾಸ್ ವಿಜಯ್ ದೇವರಕೊಂಡ ಅವರದ್ದು ಎಂದು ಹಲವರು ಕಮೆಂಟ್ ಮಾಡಿದ್ದಾರೆ.
ಅಕ್ಟೋಬರ್ 7ರಂದು ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಅವರು ಕೆಲವೇ ನಿಮಿಷಗಳ ಅಂತರದಲ್ಲಿ ಮುಂಬೈ ವಿಮಾನ ನಿಲ್ದಾಣ ಪ್ರವೇಶ ಮಾಡಿದ್ದರು. ಇದು ಪಾಪರಾಜಿಗಳ ಕ್ಯಾಮೆರಾದಲ್ಲಿ ಸೆರೆ ಆಗಿತ್ತು. ಅವರಿಬ್ಬರು ಒಟ್ಟಿಗೆ ಪ್ರಯಾಣ ಮಾಡಿರಬಹುದು ಎಂಬ ಅನುಮಾನಕ್ಕೆ ಈ ಘಟನೆ ಕೂಡ ಪುಷ್ಠಿ ನೀಡುವಂತಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 1:39 pm, Mon, 10 October 22