
‘ಲೂಸಿಯ’ (Lucia) ಕನ್ನಡ ಚಿತ್ರರಂಗದ ಕಲ್ಟ್ ಸಿನಿಮಾ. ಹಲವು ಹೊಸಬರಿಗೆ ತಮ್ಮದೇ ಸಿನಿಮಾ ಮಾಡಲು ಪ್ರೇರಣೆ ನೀಡಿದ ಸಿನಿಮಾ ಇದು. ಕನ್ನಡ ಪ್ರೇಕ್ಷಕರು ಹೊಸ ಮಾದರಿಯ ಸಿನಿಮಾಗಳನ್ನು ನೋಡುತ್ತಾರೆ, ನೋಡಿ ಮೆಚ್ಚುತ್ತಾರೆ ಎಂಬುದನ್ನು ತೋರಿಸಿದ ಸಿನಿಮಾ ಅದು. ನೀನಾಸಂ ಸತೀಶ್ ಸೇರಿದಂತೆ ಹಲವು ಪ್ರತಿಭಾವಂತ ನಟ, ನಟಿ ಹಾಗೂ ತಂತ್ರಜ್ಞರನ್ನು ಚಿತ್ರರಂಗಕ್ಕೆ ಪರಿಚಯಿಸಿದ ಸಿನಿಮಾ ಅದು. ಹಲವರಿಗೆ ಜೀವನ ಕೊಟ್ಟ ಸಿನಿಮಾ ಅದು. ಆದರೆ ಆ ಸಿನಿಮಾದ ನಾಯಕನ ಪಾತ್ರದಲ್ಲಿ ನಟಿಸಬೇಕಿದ್ದಿದ್ದು ನೀನಾಸಂ ಸತೀಶ್ ಅಲ್ಲ, ಬದಲಿಗೆ ‘ಕುಲಶೇಖರ’ ಅಲಿಯಾಸ್ ಗುಲ್ಷನ್ ದೇವಯ್ಯ.
‘ಕಾಂತಾರ: ಚಾಪ್ಟರ್ 1’ ಸಿನಿಮಾನಲ್ಲಿ ಕುಲಶೇಖರನ ಪಾತ್ರದ ಮೂಲಕ ಕನ್ನಡ ಪ್ರೇಕ್ಷಕರಿಗೆ ಪರಿಚಯ ಆಗಿರುವ ಗುಲ್ಷನ್ ದೇವಯ್ಯ ಮೂಲತಃ ಕನ್ನಡಿಗರೇ. ಆದರೆ ಇಷ್ಟು ವರ್ಷ ಮಿಂಚಿರುವುದು ಬಾಲಿವುಡ್ನಲ್ಲಿ. ಹಿಂದಿಯ ಹಲವಾರು ಸಿನಿಮಾ, ವೆಬ್ ಸರಣಿಗಳಲ್ಲಿ ನಟಿಸಿರುವ ಗುಲ್ಷನ್ ದೇವಯ್ಯ ಅಪ್ಪಟ ಕನ್ನಡಿಗರು, ಮಾತ್ರವಲ್ಲ ಬೆಂಗಳೂರಿನಲ್ಲೇ ಹಲವು ವರ್ಷ ನೆಲೆಸಿದ್ದವರು. ಅಸಲಿಗೆ ‘ಲೂಸಿಯಾ’ ಸಿನಿಮಾನಲ್ಲಿ ಗುಲ್ಷನ್ ಅವರೇ ನಾಯಕನಾಗಿ ನಟಿಸಬೇಕಿತ್ತು ಆದರೆ ಅದು ಸಾಧ್ಯವಾಗಲಿಲ್ಲ. ಈ ಬಗ್ಗೆ ಅವರೇ ಹೇಳಿಕೊಂಡಿದ್ದಾರೆ.
‘ಮೊದಲಿಂದಲೂ ಹಿಂದಿ ಸಿನಿಮಾ, ಧಾರಾವಾಹಿ ನೋಡುತ್ತಾ ಬೆಳೆದಿದ್ದ ನನಗೆ ಹಿಂದಿ ಚಿತ್ರರಂಗದಲ್ಲಿ ಅವಕಾಶ ಗಿಟ್ಟಿಸಿಕೊಳ್ಳುವ ಆಸೆಯಿಂದ ಬಹಳ ಮುಂಚೆ ಮುಂಬೈಗೆ ಬಂದೆ. ನಾಟಕ, ಸಣ್ಣ ಪುತ್ರ ಸಿನಿಮಾಗಳಲ್ಲಿ ನಟಿಸುತ್ತಿದ್ದೆ. ನಿರ್ದೇಶಕ ಪವನ್ ಸಹ ಮುಂಬೈನಲ್ಲಿ ನಾಟಕ ಇನ್ನಿತರೆಗಳಲ್ಲಿ ತೊಡಗಿಸಿಕೊಂಡಿದ್ದ. ಆಗಲೇ ಪವನ್ ಅವರ ಪರಿಚಯ ನನಗೆ ಇತ್ತು’ ಎಂದಿದ್ದಾರೆ ಗುಲ್ಷನ್.
ಇದನ್ನೂ ಓದಿ:ಹಗಲು ಗೌರಮ್ಮ, ರಾತ್ರಿಯಾದರೆ ಕಾಳಿ: ಸಮಂತಾ ಹೊಸ ಅವತಾರ
ಪವನ್ ಒಮ್ಮೆ ಭೇಟಿ ಆಗಿ ‘ಲೂಸಿಯಾ’ ಸಿನಿಮಾ ಮಾಡಬೇಕು ಎಂದ. ನನಗೆ ಕತೆ ಬಹಳ ಹಿಡಿಸಿತು. ಆದರೆ ಅದೇ ವರ್ಷ ಹಿಂದಿಯಲ್ಲಿ ನನ್ನ ನಟನೆಯ ಮೂರು ಸಿನಿಮಾಗಳು ಬಿಡುಗಡೆ ಆಗಿದ್ದವು. ಹೊಸ ಅವಕಾಶಗಳು ಸಿಗಲು ಆರಂಭವಾಗಿದ್ದವು. ‘ಗರ್ಲ್ ಇನ್ ಯೆಲ್ಲೊ ಬೂಟ್ಸ್’, ‘ಧಮ್ ಮಾರೊ ಧಮ್’, ‘ಶೈತಾನ್’ ಸಿನಿಮಾಗಳು ಅದಾಗಲೇ ಬಿಡುಗಡೆ ಆಗಿದ್ದವು. ಬಹಳ ವರ್ಷದ ಪ್ರಯತ್ನದ ಬಳಿಕ ಬಾಲಿವುಡ್ನಲ್ಲಿ ಅವಕಾಶಗಳು ಸಿಗಲು ಆರಂಭ ಆಗಿದ್ದವು. ಆ ಸಮಯದಲ್ಲಿ ಕನ್ನಡ ಚಿತ್ರರಂಗಕ್ಕೆ ಬಂದು ಹೊಸಬರ ಜೊತೆಗೆ ಸೇರಿಕೊಂಡು, ಪ್ರಯೋಗಾತ್ಮಕ ಸಿನಿಮಾನಲ್ಲಿ ನಟಿಸುವುದು ಸೂಕ್ತ ಎಂದು ಆಗ ನನಗೆ ಅನಿಸಲಿಲ್ಲ. ಹಾಗಾಗಿ ಆಗ ನಾನು ಲೂಸಿಯಾ ಸಿನಿಮಾನಲ್ಲಿ ನಟಿಸಲಿಲ್ಲ ಎಂದಿದ್ದಾರೆ ಗುಲ್ಷನ್.
ಅಂದಹಾಗೆ ಗುಲ್ಷನ್ ದೇವಯ್ಯ ಅವರಿಗೆ ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾನಲ್ಲೂ ನಟಿಸುವ ಅವಕಾಶ ಸಿಕ್ಕಿತ್ತು. ಸ್ವತಃ ನಿರ್ದೇಶಕಿ ಗೀತು ಮೋಹನ್ದಾಸ್ ನಟಿಸುವಂತೆ ಕೇಳಿದ್ದರು. ಆದರೆ ಬೇರೆ ಸಿನಿಮಾಗಳಲ್ಲಿ ತೊಡಗಿಕೊಂಡಿದ್ದರಿಂದ ಹಾಗೂ ಅವರ ಸೀಕ್ವೆಲ್ಗಳು ಸಹ ಇರುವ ಕಾರಣ ಡೇಟ್ಸ್ ಸಮಸ್ಯೆಯಿಂದಾಗಿ ‘ಟಾಕ್ಸಿಕ್’ ಸಿನಿಮಾನಲ್ಲಿ ನಟಿಸಲಿಲ್ಲ ಎಂದು ಹೇಳಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ