ಪವನ್ ಕಲ್ಯಾಣ್ ಇಲ್ಲದೆಯೇ ಚಿತ್ರೀಕರಣ ಆರಂಭಿಸಿದ ಅವರದ್ದೇ ಸಿನಿಮಾ

|

Updated on: Sep 15, 2024 | 7:20 AM

Pawan Kalyan: ಆಂಧ್ರ ಪ್ರದೇಶ ಉಪಮುಖ್ಯ ಮಂತ್ರಿ ಪವನ್ ಕಲ್ಯಾಣ್ ಸಿನಿಮಾಗಳಿಂದ ದೂರ ಉಳಿದಿದ್ದಾರೆ. ಆದರೆ ಡಿಸಿಎಂ ಆಗುವ ಮುನ್ನ ನಟಿಸುತ್ತಿದ್ದ ಸಿನಿಮಾಗಳ ಚಿತ್ರೀಕರಣ ಅರ್ಧಕ್ಕೆ ನಿಂತಿದೆ. ಅವುಗಳಲ್ಲಿ ಕೆಲ ಸಿನಿಮಾಗಳ ಚಿತ್ರೀಕರಣ ಪ್ರಾರಂಭವಾಗುತ್ತಿದೆ.

ಪವನ್ ಕಲ್ಯಾಣ್ ಇಲ್ಲದೆಯೇ ಚಿತ್ರೀಕರಣ ಆರಂಭಿಸಿದ ಅವರದ್ದೇ ಸಿನಿಮಾ
Follow us on

ಪವನ್ ಕಲ್ಯಾಣ್ ಈಗ ಆಂಧ್ರ ಪ್ರದೇಶದ ಉಪಮುಖ್ಯ ಮಂತ್ರಿ ಮತ್ತು ಪಂಚಾಯತ್ ರಾಜ್ ಸೇರಿದಂತೆ ಕೆಲವು ಪ್ರಮುಖ ಖಾತೆಗಳಿಗೆ ಸಚಿವ. ಈ ಬಾರಿ ಚುನಾವಣೆ ಪ್ರಚಾರಕ್ಕೆ ಧುಮುಕುವ ಕೆಲ ತಿಂಗಳ ಮೊದಲೇ ಸಿನಿಮಾಗಳಿಗೆ ವಿರಾಮ ನೀಡಿದ್ದರು ಪವನ್ ಕಲ್ಯಾಣ್. ನಾಲ್ಕು ಸಿನಿಮಾಗಳ ಚಿತ್ರೀಕರಣವನ್ನು ಅರ್ಧ ಮುಗಿಸಿರುವ ಪವನ್ ಕಲ್ಯಾಣ್, ಆ ಸಿನಿಮಾಗಳನ್ನು ಪೂರ್ಣಗೊಳಿಸಿ ಕೊಡುವುದಾಗಿ ಹೇಳಿದ್ದಾರೆ. ಆದರೆ ಸಿನಿಮಾ ಚಿತ್ರೀಕರಣ ಅರ್ಧಕ್ಕೆ ನಿಲ್ಲಿಸಿ ಸುಮಾರು ವರ್ಷವಾಗುತ್ತಾ ಬಂದಿದ್ದು ಇದೀಗ ಸಿನಿಮಾಗಳ ಚಿತ್ರೀಕರಣ ಪ್ರಾರಂಭ ಮಾಡಲು ಚಿತ್ರತಂಡ ಮುಂದಾಗಿದೆ.

ಚುನಾವಣಾ ಪ್ರಚಾರಕ್ಕೆ ಮುನ್ನ ಪವನ್ ಕಲ್ಯಾಣ್, ‘ಹರಿಹರ ವೀರಮಲ್ಲು’, ‘ಉಸ್ತಾದ್ ಭಗತ್ ಸಿಂಗ್’, ‘ಓಜಿ’ ಸಿನಿಮಾಗಳ ಚಿತ್ರೀಕರಣ ನಡೆಯುತ್ತಿತ್ತು. ಮೂರು ಸಿನಿಮಾಗಳನ್ನು ಅರ್ಧಕ್ಕೆ ನಿಲ್ಲಿಸಿ ಚುನಾವಣಾ ಪ್ರಚಾರಕ್ಕೆ ಧುಮುಕಿದ್ದರು ಪವನ್ ಕಲ್ಯಾಣ್. ಇದೀಗ ಈ ಸಿನಿಮಾಗಳ ಚಿತ್ರೀಕರಣ ನಿಂತು ವರ್ಷವಾಗುತ್ತಾ ಬಂದಿದೆ. ಸಿನಿಮಾಗಳ ನಿರ್ಮಾಪಕರು ಪವನ್ ಕಲ್ಯಾಣ್ ಮೇಲೆ ಒತ್ತಡ ಹೇರುತ್ತಿದ್ದಾರೆ ಎನ್ನಲಾಗುತ್ತಿದೆ.

ಪವನ್ ಕಲ್ಯಾಣ್, ಪ್ರಸ್ತುತ ಆಡಳಿತದಲ್ಲಿ ಬ್ಯುಸಿಯಾಗಿರುವ ಕಾರಣ, ಪವನ್ ಕಲ್ಯಾಣ್ ಇಲ್ಲದೆಯೇ ಸಿನಿಮಾದ ಚಿತ್ರೀಕರಣ ಪ್ರಾರಂಭ ಮಾಡಲು ಮುಂದಾಗಿದೆ ಚಿತ್ರತಂಡ. ‘ಹರಿಹರ ವೀರ ಮಲ್ಲು’ ಸಿನಿಮಾ ತಂಡವು ಪವನ್ ಕಲ್ಯಾಣ್ ಹೊರತಾಗಿಯೇ ಸಿನಿಮಾ ಚಿತ್ರೀಕರಣ ಪ್ರಾರಂಭ ಮಾಡಲು ಮುಂದಾಗಿದೆ.

ಇದನ್ನೂ ಓದಿ:ಆಂಧ್ರ, ತೆಲಂಗಾಣದ ಪ್ರವಾಹ ಸಂತ್ರಸ್ತರ ನೆರವಿಗೆ 6 ಕೋಟಿ ರೂ. ದೇಣಿಗೆ ನೀಡಿದ ಪವನ್ ಕಲ್ಯಾಣ್

‘ಹರಿಹರ ವೀರ ಮಲ್ಲು’ ಸಿನಿಮಾದ ಬಹುತೇಕ ಭಾಗದ ಚಿತ್ರೀಕರಣ ಪೂರ್ಣವಾಗಿದೆಯಂತೆ. ಕೆಲವು ಭಾಗಗಳ ಚಿತ್ರೀಕರಣ ಮಾತ್ರವೇ ಬಾಕಿ ಇದ್ದು, ಅದರ ಜೊತೆಗೆ ಒಂದು ಆಕ್ಷನ್ ದೃಶ್ಯದ ಚಿತ್ರೀಕರಣವೂ ಬಾಕಿ ಇದೆ. ಪವನ್ ಕಲ್ಯಾಣ್ ಇನ್ನು ಕೆಲವೇ ದಿನಗಳಲ್ಲಿ ಚಿತ್ರೀಕರಣಕ್ಕೆ ಬರುವುದಾಗಿ ನಿರ್ಮಾಪಕರಿಗೆ ಹೇಳಿದ್ದು, ಅವರು ಬರುವ ಮುಂಚೆಯೇ ಪವನ್​ರ ಡ್ಯೂಪ್ ಅನ್ನು ಬಳಸಿ ಬೇರೆ ಇತರ ದೃಶ್ಯಗಳ ಚಿತ್ರೀಕರಣ ಮಾಡಿಕೊಳ್ಳಲು ಚಿತ್ರತಂಡ ಮುಂದಾಗಿದೆ. ಡ್ಯೂಪ್ ಬಳಸಿ ಬೇರೆ ದೃಶ್ಯಗಳ ಚಿತ್ರೀಕರಣ ಮಾಡಿಕೊಳ್ಳಲಿರುವ ಚಿತ್ರತಂಡ ಪವನ್ ಶೂಟಿಂಗ್​ಗೆ ಬಂದ ದಿನ ಮುಖ್ಯವಾದ ದೃಶ್ಯಗಳ ಚಿತ್ರೀಕರಣ ಮಾಡಿಕೊಳ್ಳಲಿದೆ.

‘ಹರಿಹರ ವೀರ ಮಲ್ಲು’ ಸಿನಿಮಾ ಐತಿಹಾಸಿಕ ಕತೆ ಹೊಂದಿದೆ. ಪವನ್​ ಪಾಲಿಗೆ ಇದು ಮೊದಲ ಪೀರಿಯಡ್ ಡ್ರಾಮಾ. ಸಿನಿಮಾವನ್ನು ಜನಪ್ರಿಯ ನಿರ್ದೇಶಕ ಕ್ರಿಶ್ ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾದ ಚಿತ್ರೀಕರಣ ಬೇಗನೆ ಮುಗಿಯುತ್ತಿತ್ತು, ಆದರೆ ಸಿನಿಮಾದ ಸೆಟ್​ಗೆ ಬೆಂಕಿ ಬಿದ್ದುಬಿಟ್ಟಿತು, ಇದರಿಂದಾಗಿ ಚಿತ್ರೀಕರಣ ತಡವಾಗಿತ್ತು. ಸಿನಿಮಾದಲ್ಲಿ ಪವನ್ ಜೊತೆಗೆ ಅನುಪಮ್ ಖೇರ್, ನಾಯಕಿಯಾಗಿ ನಿಧಿ ಅಗರ್ವಾಲ್, ಬಾಬಿ ಡಿಯೋಲ್, ನೋರಾ ಫತೇಹಿ, ನರ್ಗೀಸ್ ಫಕ್ರಿ ಅವರುಗಳು ನಟಿಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ