
ವಿಶ್ವದ ಅತಿ ನಿರೀಕ್ಷಿತ ಸಿನಿಮಾ ಕ್ರಿಸ್ಟೊಫರ್ ನೋಲನ್ (christopher nolan) ನಿರ್ದೇಶನದ ‘ದಿ ಆಡಸ್ಸಿ’. ಈ ಸಿನಿಮಾ ಜುಲೈ 17 ರಂದು ವಿಶ್ವದಾದ್ಯಂತ ಬಿಡುಗಡೆ ಆಗಲಿದೆ. ಆದರೆ ಭಾರತದಲ್ಲಿ ನಿನ್ನೆಯೇ ಈ ಸಿನಿಮಾದ ವಿಶೇಷ ಶೋ ಪ್ರದರ್ಶಿಸಲಾಗಿದೆ. ಅದೂ ಈ ವಿಶೇಷ ಶೋ ಅನ್ನು ಖುದ್ದು ಸಿನಿಮಾದ ನಿರ್ದೇಶಕ ಕ್ರಿಸ್ಟೊಫರ್ ನೋಲನ್, ನಟ ಮ್ಯಾಟ್ ಡೇಮನ್ ಮತ್ತು ಟಾಮ್ ಹಾಲೆಂಡ್ ಅವರುಗಳು ಆಯೋಜಿಸಿದ್ದರು. ಸಿನಿಮಾದ ವಿಶೇಷ ಪ್ರದರ್ಶನದ ವೇಳೆ ಕ್ರಿಸ್ಟೊಫರ್ ನೋಲನ್ ಅವರು ಭಾರತೀಯ ಸಿನಿಮಾ ಪ್ರೇಮಿಗಳ ಸಹೃದಯತೆ ಹಾಗೂ ಸಿನಿಮಾ ಪ್ರೀತಿಯನ್ನು ಸಹ ಕೊಂಡಾಡಿದರು.
ಮುಂಬೈನ ಲೋವರ್ ಪರಾಲ್ನ ಫೀನಕ್ಸ್ ಪಲೇಡಿಯಮ್ನ ಪಿವಿಆರ್ ಐಕಾನ್ ಮಲ್ಟಿಪ್ಲೆಕ್ಸ್ನಲ್ಲಿ ‘ದಿ ಆಡಸ್ಸಿ’ ಸಿನಿಮಾದ ವಿಶೇಷ ಪ್ರದರ್ಶನ ಮಾಡಲಾಯ್ತು. ದೇಶದ ಹಲವು ನಗರಗಳಿಂದ ಈ ಶೋಗೆ ಪ್ರೇಕ್ಷಕರು ಆಗಮಿಸಿದ್ದರು. ಹಲವು ಸಿನಿಮಾ ಸೆಲೆಬ್ರಿಟಿಗಳು, ದೇಶದ ಜನಪ್ರಿಯ ಸಿನಿಮಾ ವಿಮರ್ಶಕರು, ಸಿನಿಮಾ ವಿಧ್ಯಾರ್ಥಿಗಳು, ಸಿನಿಮಾ ತಂತ್ರಜ್ಞರುಗಳು ಸಹ ವಿಶೇಷ ಪ್ರದರ್ಶನದಲ್ಲಿ ಭಾಗಿ ಆಗಿದ್ದರು. ‘ದಿ ಆಡಸ್ಸೆ’ ಸಿನಿಮಾದ ಮೊಟ್ಟ ಮೊದಲ ವಿಶೇಷ ಪ್ರದರ್ಶನ ಇದಾಗಿತ್ತು ಎಂಬುದು ವಿಶೇಷ.
ಶೋ ಬಳಿಕ ಕ್ರಿಸ್ಟೊಫರ್ ನೋಲನ್, ಮ್ಯಾಟ್ ಡೇಮನ್ ಮತ್ತು ಟಾಮ್ ಹಾಲೆಂಡ್ ಅವರುಗಳು ಪ್ರೇಕ್ಷಕರ ಕುರಿತಾಗಿ ಮಾತನಾಡಿದರು. ಮೊದಲು ಮಾತನಾಡಿದ ನೋಲನ್, ಭಾರತಕ್ಕೆ ತಮ್ಮ ಹಿಂದಿನ ಭೇಟಿಗಳನ್ನು ನೆನಪು ಮಾಡಿಕೊಂಡರು. ತಾವು ಈ ಹಿಂದೆ, ಜೋಧ್ಪುರ ಹಾಗೂ ಮುಂಬೈಗಳಲ್ಲಿ ಸಿನಿಮಾದ ಚಿತ್ರೀಕರಣ ಮಾಡಿದ ಸಿಹಿ ಅನುಭವ ಹಂಚಿಕೊಂಡರು. ಭಾರತೀಯ ಪ್ರೇಕ್ಷಕರು ಸಿನಿಮಾಗಳನ್ನು ಬಹಳ ಪ್ರೀತಿಸುತ್ತಾರೆ ಮತ್ತು ಭಾರತೀಯ ಪ್ರೇಕ್ಷಕರು ಇಂಟೆಲಿಜೆಂಟ್ ಸಿನಿಮಾ ವೀಕ್ಷಕರು ಎಂದು ಸಹ ಅವರು ಹೇಳಿದರು.
ಇದನ್ನೂ ಓದಿ:ಬೆಂಗಳೂರಿನಲ್ಲಿ ‘ದಿ ಆಡಸ್ಸಿ’ಯನ್ನು ಹಿಂದಿಕ್ಕಿದ ‘ಸ್ಪೈಡರ್ಮ್ಯಾನ್’
‘ದಿ ಆಡಸ್ಸಿ’ ಸಿನಿಮಾವು ಶತಮಾನಗಳಷ್ಟು ಹಳೆಯದಾದ ಸಾಹಿತ್ಯ ಕೃತಿಯ ಸಿನಿಮಾ ರೂಪಾಂತರವಾಗಿದೆ. ಕುರುಡು ಸಾಹಿತಿ ಹೋಮರ್ 8ನೇ ಶತಮಾನದಲ್ಲಿ ಬರೆದ ಕಾವ್ಯವನ್ನು ಆಧರಿಸಿ ನೋಲನ್ ಸಿನಿಮಾ ಮಾಡಿದ್ದಾರೆ. ಸಿನಿಮಾನಲ್ಲಿ ಸ್ಟಾರ್ ನಟರುಗಳಾದ ಮ್ಯಾಟ್ ಡೇಮನ್, ‘ಸ್ಪೈಡರ್ ಮ್ಯಾನ್’ ಖ್ಯಾತಿಯ ಟಾಮ್ ಹಾಲೆಂಡ್, ಜೆಂಡೇಯಾ, ಅನ್ನಾ ಹಾತ್ವೇ, ರಾಬರ್ಟ್ ಪ್ಯಾಟಿನ್ಸನ್, ಟ್ರಾವಿಸ್ ಸ್ಕಾಟ್, ಎಲಿಯಟ್ ಪೇಜ್ ಇನ್ನೂ ಹಲವಾರು ಖ್ಯಾತನಾಮ ನಟರು ನಟಿಸಿದ್ದಾರೆ. ಸಿನಿಮಾಕ್ಕೆ ಮೂರು ಆಸ್ಕರ್ ವಿಜೇತ ಲೂಡ್ವಿಂಗ್ ಅವರು ಸಂಗೀತ ನೀಡಿದ್ದಾರೆ. ಜುಲೈ 17ಕ್ಕೆ ಸಿನಿಮಾ ಬಿಡುಗಡೆ ಆಗಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ