ಶೂಟರ್ ಮೇಘನಾ ಬೆಂಬಲಕ್ಕೆ ನಿಂತ ಆಯುಷ್ಮಾನ್ ಖುರಾನಾ; ರೈಫಲ್ ಖರೀದಿಸಲು ನೆರವು
ಬಾಲಿವುಡ್ ನಟ ಆಯುಷ್ಮಾನ್ ಖುರಾನಾ ಭಾರತದ ಉದಯೋನ್ಮುಖ ರೈಫಲ್ ಶೂಟರ್ ಮೇಘನಾ ಸಜ್ಜನರ್ ಅವರ ಅಂತಾರಾಷ್ಟ್ರೀಯ ಕ್ರೀಡಾ ಕನಸಿಗೆ ಆಸರೆಯಾಗಿದ್ದಾರೆ. ಸೂಕ್ತ ಉಪಕರಣಗಳ ಕೊರತೆಯಿಂದ ಬಳಲುತ್ತಿದ್ದ ಮೇಘನಾ ಅವರಿಗೆ ವಿಶ್ವ ದರ್ಜೆಯ ರೈಫಲ್ ಪ್ರಾಯೋಜಿಸುವ ಮೂಲಕ ಉದಾರತೆ ಮೆರೆದಿದ್ದು, ಮೇಘನಾ ಸೋಶಿಯಲ್ ಮೀಡಿಯಾದಲ್ಲಿ ನಟನಿಗೆ ಧನ್ಯವಾದ ತಿಳಿಸಿದ್ದಾರೆ.

ಮುಖ್ಯಾಂಶಗಳು
- ಶೂಟರ್ ಮೇಘನಾಗೆ ಆಯುಷ್ಮಾನ್ ಖುರಾನಾ ಬಿಗ್ ಸಪೋರ್ಟ್
- ಬಂದೂಕು ಪ್ರಾಯೋಜಿಸಿ ಉದಾರತೆ
- ಪರಿಚಯವೇ ಇಲ್ಲದಿದ್ದರೂ ನೆರವಿಗೆ ಬಂದ ಬಾಲಿವುಡ್ ನಟ
ಭಾರತದ ಉದಯೋನ್ಮುಖ ರೈಫಲ್ ಶೂಟರ್ ಮೇಘನಾ ಸಜ್ಜನರ್ ಅವರ ಅಂತಾರಾಷ್ಟ್ರೀಯ ಕ್ರೀಡಾ ಕನಸಿಗೆ ಬಾಲಿವುಡ್ ನಟ ಆಯುಷ್ಮಾನ್ ಖುರಾನಾ ಸಾಥ್ ನೀಡಿದ್ದಾರೆ. ಆಟಕ್ಕೆ ಅಗತ್ಯವಿದ್ದ ವಿಶ್ವ ದರ್ಜೆಯ ರೈಫಲ್ (ಬಂದೂಕು) ಖರೀದಿಸಲು ಆರ್ಥಿಕ ನೆರವು ನೀಡುವ ಮೂಲಕ ನಟ ಉದಾರತೆ ಮೆರೆದಿದ್ದಾರೆ.ಆಯುಷ್ಮಾನ್ ಅವರಿಗೆ ಎಲ್ಲ ಕಡೆಗಳಿಂದ ಮೆಚ್ಚುಗೆ ಸಿಗುತ್ತಿದೆ.
ಸಾಧನೆ ಮಾಡಲು ಹೊರಟಿದ್ದ ಮೇಘನಾ ಅವರಿಗೆ ಸೂಕ್ತ ಕ್ರೀಡಾ ಉಪಕರಣಗಳ ಕೊರತೆ ಇತ್ತು. ಈ ಕುರಿತು ಮಾಧ್ಯಮವೊಂದರಲ್ಲಿ ಬಂದ ಸುದ್ದಿಯನ್ನು ಓದಿದ ಆಯುಷ್ಮಾನ್, ಮೇಘನಾ ಅವರ ಪರಿಚಯವೇ ಇಲ್ಲದಿದ್ದರೂ ತಾವೇ ಖುದ್ದಾಗಿ ಮುಂದೆ ಬಂದು ರೈಫಲ್ ಪ್ರಾಯೋಜಕತ್ವ ವಹಿಸಿಕೊಂಡಿದ್ದಾರೆ. ಈ ನೆರವಿನಿಂದಾಗಿ ಮೇಘನಾ ಅವರಿಗೆ ವಿಶ್ವ ದರ್ಜೆಯ ಉಪಕರಣಗಳೊಂದಿಗೆ ಉತ್ತಮ ತರಬೇತಿ ಪಡೆಯಲು ಸಾಧ್ಯವಾಯಿತು.
ಇತ್ತೀಚೆಗೆ ಆಯುಷ್ಮಾನ್ ಅವರನ್ನು ಭೇಟಿಯಾದ ಮೇಘನಾ, ಸೋಶಿಯಲ್ ಮೀಡಿಯಾದಲ್ಲಿ ಕೃತಜ್ಞತೆ ಸಲ್ಲಿಸಿದ್ದಾರೆ. ‘ನಮ್ಮ ಕ್ರೀಡೆಯಲ್ಲಿ ಕೌಶಲ ಎಷ್ಟು ಮುಖ್ಯವೋ, ಕೈಯಲ್ಲಿರುವ ಉಪಕರಣವೂ ಅಷ್ಟೇ ಮುಖ್ಯ. ಒಂದು ವರ್ಷದ ಹಿಂದೆ ಉಪಕರಣಗಳಿಲ್ಲದೆ ಕಷ್ಟಪಡುತ್ತಿದ್ದಾಗ ಈ ಪತ್ರಿಕಾ ವರದಿ ನನ್ನ ಬದುಕನ್ನೇ ಬದಲಾಯಿಸಿತು. ನಟ ಆಯುಷ್ಮಾನ್ ನನ್ನ ಕನಸಿಗೆ ಬೆಂಬಲವಾಗಿ ನಿಂತು ಪ್ರಾಯೋಜಕತ್ವ ನೀಡಿದರು. ಭಾರತೀಯ ಕ್ರೀಡಾಪಟು ಜಾಗತಿಕ ಮಟ್ಟದಲ್ಲಿ ಗೆಲ್ಲಬೇಕು ಎಂಬ ಒಂದೇ ಉದ್ದೇಶ ಅವರಿಗಿತ್ತು’ ಎಂದು ಮೇಘನಾ ಬರೆದುಕೊಂಡಿದ್ದಾರೆ.
View this post on Instagram
ಶೂಟಿಂಗ್ ಕ್ರೀಡೆಯಲ್ಲಿ ನಿಖರತೆ ಮತ್ತು ಸರಿಯಾದ ಉಪಕರಣಗಳು ಅತ್ಯಂತ ನಿರ್ಣಾಯಕ ಪಾತ್ರ ವಹಿಸುತ್ತವೆ. ಸೂಕ್ತ ಸಮಯದಲ್ಲಿ ಸಿಕ್ಕ ಈ ನೆರವು ಮೇಘನಾ ಅವರ ಕ್ರೀಡಾ ಜೀವನಕ್ಕೆ ದೊಡ್ಡ ತಿರುವು ನೀಡಿದೆ. ಆಯುಷ್ಮಾನ್ ಖುರಾನಾ ಅವರ ಈ ಉದಾರತೆಗೆ ಮೆಚ್ಚುಗೆ ಸಿಕ್ಕಿದೆ.
ಇದನ್ನೂ ಓದಿ: ಮತ್ತೊಮ್ಮೆ ಮಹಿಳೆಯ ವೇಷದಲ್ಲಿ ಬಂದ ಆಯುಷ್ಮಾನ್ ಖುರಾನಾ; ಸೀಕ್ವೆಲ್ನಲ್ಲಿ ಮನರಂಜನೆ ಡಬಲ್?
ಅಷ್ಟೇ ಅಲ್ಲದೆ, ಆಯುಷ್ಮಾನ್ ಖುರಾನಾ ಅವರು ಕ್ರೀಡಾ ಜಾಗೃತಿ ಕಾರ್ಯಕ್ರಮಗಳಲ್ಲೂ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. 2026ರ ಮೇ ತಿಂಗಳಿನಲ್ಲಿ ಅಹಮದಾಬಾದ್‌ನಲ್ಲಿ ನಡೆದ ಕಾಮನ್‌ವೆಲ್ತ್ ಗೇಮ್ಸ್ ದಿನಾಚರಣೆಯಲ್ಲಿ ಕೇಂದ್ರ ಕ್ರೀಡಾ ಸಚಿವರೊಂದಿಗೆ ಭಾಗವಹಿಸಿ, 5 ಕಿಲೋಮೀಟರ್ ಸೈಕ್ಲಿಂಗ್ ರ‍್ಯಾಲಿಯಲ್ಲಿ ಪಾಲ್ಗೊಂಡು ಕ್ರೀಡಾ ಸಂಸ್ಕೃತಿಯ ಮಹತ್ವದ ಬಗ್ಗೆ ಅರಿವು ಮೂಡಿಸಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




