ಸಿನಿಮಾ ಬಿಡುಗಡೆಗೆ ಒಂದು ವರ್ಷ ಮುಂಚೆಯೇ ಟಿಕೆಟ್ ಮಾರಾಟ
Christopher Nolan: ಸಿನಿಮಾಗಳು ಬಿಡುಗಡೆ ಆಗುವ ಕೆಲ ದಿನಗಳ ಹಿಂದೆ ಸಿನಿಮಾದ ಅಡ್ವಾನ್ಸ್ ಬುಕಿಂಗ್ ತೆರೆಯಲಾಗುತ್ತದೆ. ಆದರೆ ಇಲ್ಲೊಂದು ಸಿನಿಮಾ ಮುಂದಿನ ವರ್ಷ ಜುಲೈ ತಿಂಗಳಲ್ಲಿ ಬಿಡುಗಡೆ ಆಗಲಿದ್ದು, ಈಗಿನಿಂದಲೇ ಆ ಸಿನಿಮಾದ ಅಡ್ವಾನ್ಸ್ ಬುಕಿಂಗ್ ಓಪನ್ ಆಗಿದೆ. ಜನ ಮುಗಿಬಿದ್ದು ಸಿನಿಮಾದ ಟಿಕೆಟ್ ಖರೀದಿ ಮಾಡುತ್ತಿದ್ದಾರೆ.

ಸಿನಿಮಾಗಳು (Cinema) ಬಿಡುಗಡೆ ಆಗುವ ಒಂದೆರಡು ದಿನಗಳ ಮುಂಚಿತವಾಗಿ ಹೆಚ್ಚೆಂದರೆ ಒಂದು ವಾರಕ್ಕೆ ಮುಂಚಿತವಾಗಿ ಅಡ್ವಾನ್ಸ್ ಬುಕಿಂಗ್ ಓಪನ್ ಮಾಡುವುದು ವಾಡಿಕೆ. ಭಾರತದಲ್ಲಿ ಮಾತ್ರವಲ್ಲ ಬಹುತೇಕ ಎಲ್ಲ ದೇಶಗಳಲ್ಲಿಯೂ ಇದೇ ವಾಡಿಕೆ ಇದೆ. ಆದರೆ ಇಲ್ಲೊಂದು ಸಿನಿಮಾ ಬಿಡುಗಡೆ ಆಗುವ ಒಂದು ವರ್ಷಕ್ಕೆ ಮುಂಚಿತವಾಗಿಯೇ ಅಡ್ವಾನ್ಸ್ ಬುಕಿಂಗ್ ಓಪನ್ ಆಗಿದ್ದು, ಈಗಿನಿಂದಲೇ ಜನ ನಾ-ಮುಂದು, ತಾ ಮುಂದು ಎಂದು ಟಿಕೆಟ್ ಖರೀದಿಗೆ ಮುಗಿಬಿದಿದ್ದಾರೆ. ಅದಕ್ಕೆ ಕಾರಣ ಆ ಸಿನಿಮಾದ ನಿರ್ದೇಶಕನ ಮೇಲಿರುವ ನಂಬಿಕೆ.
ಕ್ರಿಸ್ಟೊಫರ್ ನೋಲನ್, ವಿಶ್ವದ ಅತ್ಯುತ್ತಮ ನಿರ್ದೇಶಕರಲ್ಲಿ ಒಬ್ಬರು. ಅವರ ಸಿನಿಮಾಗಳನ್ನು ವಿಶ್ವದ ಸಿನಿಮಾ ಶಾಲೆಗಳಲ್ಲಿ ಪಠ್ಯಗಳಾಗಿ ಬಳಸಲಾಗುತ್ತದೆ. ಆಧುನಿಕ ತಂತ್ರಜ್ಞಾನ ಬಳಸಿ, ಬಹಳ ಸಂಕೀರ್ಣವಾದ ವಿಜ್ಞಾನದ ವಿಷಯಗಳನ್ನು ಇರಿಸಿಕೊಂಡು ಸಿನಿಮಾ ಮಾಡುತ್ತಾರೆ ಕ್ರಿಸ್ಟೊಫರ್ ನೋಲನ್. ‘ಇಂಟರ್ಸ್ಟೆಲ್ಲರ್’, ‘ಇನ್ಸೆಪ್ಷನ್’, ‘ಮುಮೆಂಟೊ’, ‘ಟೆನೆಟ್’, ‘ಆಪನ್ಹೈಮರ್’, ‘ಡಂಕಿರ್ಕಿ’ ಸಿನಿಮಾಗಳನ್ನು ನಿರ್ದೇಶಿಸಿರುವ ಕ್ರಿಸ್ಟೊಫರ್ ನೋಲನ್, ಇದೀಗ ‘ಒಡೆಸ್ಸಿ’ ಹೆಸರಿನ ಸಿನಿಮಾ ನಿರ್ದೇಶನ ಮಾಡುತ್ತಿದ್ದು, ಈ ಸಿನಿಮಾದ ಟಿಕೆಟ್ಗಳು ಒಂದು ವರ್ಷಕ್ಕೆ ಮುಂಚೆಯೇ ಬಿಸಿ ದೋಸೆಯಂತೆ ಮಾರಾಟ ಆಗುತ್ತಿವೆ.
ಇದನ್ನೂ ಓದಿ:ನೋಲನ್ ಹೊಸ ಸಿನಿಮಾ ಪೋಸ್ಟರ್ ಬಿಡುಗಡೆ, ಕತೆ ಏನು?
ಕ್ರಿಸ್ತಪೂರ್ವ 700ರ ಆಸುಪಾಸಿನಲ್ಲಿ ಹೋಮರ್ ಎಂಬಾತ ಬರೆದಿರುವ ‘ಒಡೆಸ್ಸಿ’ ಕತೆಯನ್ನು ಆಧರಿಸಿ ಅದೇ ಹೆಸರಿನ ಸಿನಿಮಾ ನಿರ್ದೇಶಿಸುತ್ತಿದ್ದಾರೆ ಕ್ರಿಸ್ಟೊಫರ್ ನೋಲನ್. ‘ಒಡೆಸ್ಸಿ’ ಸಿನಿಮಾದ ನಾಯಕ ಪಾತ್ರದಲ್ಲಿ ಖ್ಯಾತ ಹಾಲಿವುಡ್ ನಟ ಮ್ಯಾಟ್ ಡೇಮನ್ ನಟಿಸುತ್ತಿದ್ದಾರೆ. ಇದೆ ಸಿನಿಮಾನಲ್ಲಿ ಸ್ಪೈಡರ್ಮ್ಯಾನ್ ಪಾತ್ರಧಾರಿ ಟಾಮ್ ಹಾಲೆಂಡ್, ಜೆಂಡೆಯಾ, ಅನ್ನಾ ಹಾತ್ವೇ, ರಾಬರ್ಟ್ ಪ್ಯಾಟಿನ್ಸನ್ ಇನ್ನೂ ಹಲವು ತಾರೆಯರು ನಟಿಸಿದ್ದಾರೆ.
ಈಗ ಅಡ್ವಾನ್ಸ್ ಬುಕಿಂಗ್ ಆಗುತ್ತಿರುವುದು ಕೇವಲ ಐಮ್ಯಾಕ್ಸ್ 70 ಎಂಎಂ ಸ್ಕ್ರೀನ್ಗಳಿಗೆ ಮಾತ್ರ. ಈ ಸಿನಿಮಾವನ್ನು ಕ್ರಿಸ್ಟೊಫರ್ ನೋಲನ್ ಐಮ್ಯಾಕ್ಸ್ 70 ಎಂಎಂ ಕ್ಯಾಮೆರಾನಲ್ಲಿಯೇ ಶೂಟ್ ಮಾಡುತ್ತಿದ್ದಾರೆ. ಈ ಸಿನಿಮಾದ ಚಿತ್ರೀಕರಣಕ್ಕೆ ರೀಲುಗಳನ್ನು ಬಳಸುತ್ತಿದ್ದಾರೆ. ನೋಲನ್, ಈ ಸಿನಿಮಾವನ್ನು ಐಮ್ಯಾಕ್ಸ್ ಸ್ಕ್ರೀನ್ಗಳಿಗಾಗಿಯೇ ನಿರ್ಮಿಸುತ್ತಿದ್ದಾರೆ. ಇದೇ ಕಾರಣಕ್ಕೆ ಐಮ್ಯಾಕ್ಸ್ 70 ಎಂಎಂ ಸ್ಕ್ರೀನ್ಗಳಿಗಾಗಿ ಮಾತ್ರವೇ ಈಗ ಅಡ್ವಾನ್ಸ್ ಬುಕಿಂಗ್ ಮಾಡಿಕೊಳ್ಳಲಾಗುತ್ತಿದೆ. ಒಡೆಸ್ಸಿ ಸಿನಿಮಾ ಮುಂದಿನ ವರ್ಷ ಜುಲೈ ತಿಂಗಳಲ್ಲಿ ಬಿಡುಗಡೆ ಆಗಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




