ಈ ವರ್ಷದ ಬಹುನಿರೀಕ್ಷಿತ ಸಿನಿಮಾಗಳಲ್ಲಿ ‘ಆಪನ್ಹೈಮರ್’ (Oppenheimer Movie) ಮುಂಚೂಣೆಯಲ್ಲಿದೆ. ಈ ಚಿತ್ರಕ್ಕೆ ಕ್ರಿಸ್ಟೋಫರ್ ನೋಲನ್ (Christopher Nolan) ಅವರು ನಿರ್ದೇಶನ ಮಾಡಿದ್ದಾರೆ. ನೈಜ ಘಟನೆಗಳನ್ನು ಆಧರಿಸಿ ಈ ಚಿತ್ರ ತಯಾರಾಗಿದೆ. ಜುಲೈ 21ರಂದು ವಿಶ್ವಾದ್ಯಂತ ಬಿಡುಗಡೆ ಆಗಲಿರುವ ಈ ಸಿನಿಮಾದ ಬಗ್ಗೆ ಪ್ರೇಕ್ಷಕರ ವಲಯದಲ್ಲಿ ದೊಡ್ಡ ಹೈಪ್ ಸೃಷ್ಟಿ ಆಗಿದೆ. ಬಿಡುಗಡೆ ಹೊಸ್ತಿಲಿನಲ್ಲಿ ಈ ಚಿತ್ರದ ಕಲಾವಿದರು ಅನೇಕ ಮಾಧ್ಯಮಗಳಿಗೆ ಸಂದರ್ಶನ ನೀಡಿದ್ದಾರೆ. ಈ ವೇಳೆ ಅನೇಕ ಅಚ್ಚರಿಯ ಸಂಗತಿಗಳು ಬೆಳಕಿಗೆ ಬಂದಿವೆ. ಆಪನ್ಹೈಮರ್ ಪಾತ್ರ ಮಾಡಿರುವ ಕಿಲಿಯನ್ ಮರ್ಫಿ (Cillian Murphy) ಅವರು ಅಪಾಯಕಾರಿಯಾದ ಡಯೆಟ್ ಪಾಲಿಸಿದ್ದಾರೆ ಎಂಬುದು ಗಮನಿಸಬೇಕಾದ ಅಂಶ.
ಎರಡನೇ ಮಹಾಯುದ್ಧದಲ್ಲಿ ಜಪಾನ್ ಮೇಲೆ ಅಣು ಬಾಂಬ್ ಹಾಕಲಾಯಿತು. ಆ ಬಾಂಬ್ ಕಂಡುಹಿಡಿದ ವಿಜ್ಞಾನಿ ಜೆ. ರಾಬರ್ಟ್ ಆಪನ್ಹೈಮರ್ ಅವರ ಜೀವನದ ಕುರಿತು ಈ ಸಿನಿಮಾ ಮೂಡಿಬಂದಿದೆ. ಆಪನ್ಹೈಮರ್ ಪಾತ್ರಕ್ಕಾಗಿ ಕಿಲಿಯನ್ ಮರ್ಫಿ ಅವರು ಬೇರೆ ಬೇರೆ ರೀತಿಯಲ್ಲಿ ತಯಾರಿ ನಡೆಸಿದ್ದರು. ಭಗದ್ಗೀತೆಯನ್ನು ಓದಿದ್ದರು. ಅಲ್ಲದೇ ಅವರು ದೇಹದ ತೂಕವನ್ನು ಕಡಿಮೆ ಮಾಡಿಕೊಂಡರು. ಅದಕ್ಕಾಗಿ ಅವರು ಪಾಲಿಸಿದ ಡಯೆಟ್ ತೀರಾ ಅಪಾಯಕಾರಿ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: Oppenheimer: ಬಿಡುಗಡೆಗೂ ಮುನ್ನ ‘ಆಪನ್ಹೈಮರ್’ ಸಿನಿಮಾ ಬಗ್ಗೆ ಹೆಚ್ಚಿದ ಕ್ರೇಜ್; ಇಲ್ಲಿವೆ ಪ್ರಮುಖ ಕಾರಣಗಳು
ಆಪನ್ಹೈಮರ್ ಅವರು ತುಂಬ ಸ್ಲಿಮ್ ಆಗಿದ್ದರು. ಕೇವಲ ಸಿಗರೇಟ್ ಮತ್ತು ಕಾಕ್ಟೇಲ್ ಸೇವಿಸಿ ಬದುಕಿದ್ದರೇನೋ ಎಂಬಷ್ಟು ತೆಳ್ಳಗಿದ್ದರು. ಅವರ ರೀತಿಯೇ ಕಾಣಬೇಕು ಎಂಬ ಕಾರಣಕ್ಕೆ ಕಿಲಿಯನ್ ಮರ್ಫಿ ಕಟ್ಟುನಿಟ್ಟಾದ ಡಯೆಟ್ ಫಾಲೋ ಮಾಡಿದರು. ಅವರ ಜೊತೆ ಅಭಿನಯಿಸಿದ ನಟಿ ಎಮಿಲಿ ಬ್ಲಂಟ್ ಹೇಳುವ ಪ್ರಕಾರ, ಕಿಲಿಯನ್ ಮರ್ಫಿ ಅವರು ದಿನಕ್ಕೆ ಕೇವಲ ಒಂದೇ ಒಂದು ಬಾದಾಮಿ ತಿನ್ನುತ್ತಿದ್ದರು! ಟ್ರೇಲರ್ನಲ್ಲಿ ಕಿಲಿಯನ್ ಮರ್ಫಿ ಅವರ ಲುಕ್ ನೋಡಿ ಎಲ್ಲರಿಗೂ ಅಚ್ಚರಿ ಆಗಿದೆ.
ಕಿಲಿಯನ್ ಮರ್ಫಿ ಅವರು ಯಾವ ಡಯೆಟ್ ಫಾಲೋ ಮಾಡುತ್ತಿದ್ದರು ಎಂಬುದನ್ನು ಚಿತ್ರತಂಡ ಬಹಿರಂಗ ಮಾಡಿಲ್ಲ. ಯಾಕೆಂದರೆ, ಅದು ಅಪಾಯಕಾರಿ ಡಯೆಟ್ ಆದ್ದರಿಂದ ಅದನ್ನು ಯಾರೂ ಕೂಡ ಪಾಲಿಸಬಾರದು ಎಂಬುದು ಚಿತ್ರತಂಡದ ಆಶಯ. ಸ್ವತಃ ಕಿಲಿಯನ್ ಮರ್ಫಿ ಕೂಡ ‘ಇದು ಪಾಲಿಸಲು ಯೋಗ್ಯವಾದ ಡಯೆಟ್ ಅಲ್ಲ’ ಎಂದು ಹೇಳಿದ್ದಾರೆ. ಖ್ಯಾತ ನಟರಾದ ಮ್ಯಾಟ್ ಡೇಮನ್ ಮತ್ತು ರಾಬರ್ಟ್ ಡೌನಿ ಜೂನಿಯರ್ ಕೂಡ ಈ ಸಿನಿಮಾದಲ್ಲಿ ಅಭಿನಯಿಸಿದ್ದಾರೆ.
ಸೂಚನೆ:ಡಯೆಟ್ ಪಾಲಿಸುವಾಗ ವೈದ್ಯರು ಅಥವಾ ತಜ್ಞರ ಸಲಹೆ ಪಡೆಯಿರಿ. ಯಾವುದೇ ಅಪಾಯಕಾರಿ ಆಹಾರಕ್ರಮಗಳನ್ನು ಅನುಸರಿಸಬೇಡಿ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.