ಹಿರೋಶಿಮಾ ಅಣುಬಾಂಬ್ ದಾಳಿ ಕುರಿತು ಜೇಮ್ಸ್ ಕ್ಯಾಮೆರಾನ್ ಹೊಸ ಸಿನಿಮಾ

ಕಳೆದ 16 ವರ್ಷಗಳಿಂದ ನಿರ್ದೇಶಕ ಜೇಮ್ಸ್ ಕ್ಯಾಮೆರಾನ್ ಅವರು ‘ಅವತಾರ್’ ಸಿನಿಮಾ ಸರಣಿಯಲ್ಲೇ ಮುಳುಗಿದ್ದರು. ಈಗ ಅವರು ಬೇರೆ ಸಿನಿಮಾ ಕಡೆಗೆ ಗಮನ ಹರಿಸಿದ್ದಾರೆ. ಹೊಸ ಚಿತ್ರ ಘೋಷಣೆ ಮಾಡಿದ್ದಾರೆ. ‘ಟೈಟಾನಿಕ್’ ಬಳಿಕ ಅವರು ಮತ್ತೆ ರಿಯಲ್ ಘಟನೆ ಆಧಾರಿತ ಸಿನಿಮಾ ಮಾಡಲು ನಿರ್ಧರಿಸಿದ್ದಾರೆ. ಆ ಬಗ್ಗೆ ಇಲ್ಲಿದೆ ಮಾಹಿತಿ.

ಹಿರೋಶಿಮಾ ಅಣುಬಾಂಬ್ ದಾಳಿ ಕುರಿತು ಜೇಮ್ಸ್ ಕ್ಯಾಮೆರಾನ್ ಹೊಸ ಸಿನಿಮಾ
James Cameron, Hiroshima Atomic Bombing

Updated on: Aug 06, 2025 | 6:06 PM

ಇತಿಹಾಸದಲ್ಲಿ ಆಗಸ್ಟ್ 6 ಎಂದರೆ ಒಂದು ಕರಾಳ ದಿನ. 1945ರಲ್ಲಿ ಇದೇ ದಿನಾಂಕದಂದು ಜಪಾನ್ ಮೇಲೆ ಅಮೆರಿಕಾ ಅಣುಬಾಂಬ್ ದಾಳಿ ನಡೆಸಿತ್ತು. ಆಗಸ್ಟ್ 6ರಂದು ಹಿರೋಶಿಮಾ (Hiroshima) ನಗರದ ಮೇಲೆ ಅಣುಬಾಂಬ್ ಹಾಕಲಾಗಿತ್ತು. ಆಗಸ್ಟ್ 9ರಂದು ನಾಗಸಾಕಿ ನಗರದ ಮೇಲೆ ಅಣುಬಾಂಬ್ ದಾಳಿ ನಡೆಯಿತು. ಆ ಘಟನೆ ನಡೆದು 80 ವರ್ಷ ಕಳೆದಿದೆ. ಈ ಸಂದರ್ಭದಲ್ಲಿ ಹಾಲಿವುಡ್​ನ ಖ್ಯಾತ ನಿರ್ದೇಶಕ ಜೇಮ್ಸ್ ಕ್ಯಾಮೆರಾನ್ (James Cameron) ಅವರು ಹೊಸ ಸಿನಿಮಾ ಘೋಷಿಸಿದ್ದಾರೆ. ‘ಘೋಸ್ಟ್​ಸ್ ಆಫ್ ಹಿರೋಶಿಮಾ’  (Ghosts of Hiroshima) ಕೃತಿ ಆಧರಿಸಿ ಈ ಸಿನಿಮಾ ಸಿದ್ಧವಾಗಲಿದೆ.

ಜಾಗತಿಕ ಸಿನಿಮಾರಂಗದಲ್ಲಿ ತಮ್ಮ ಸಾಮರ್ಥ್ಯ ಏನು ಎಂಬುದನ್ನು ಜೇಮ್ಸ್ ಕ್ಯಾಮೆರಾನ್ ಅವರು ಸಾಬೀತು ಮಾಡಿದ್ದಾರೆ. ‘ಟರ್ಮಿನೇಟರ್’, ‘ಟೈಟಾನಿಕ್’, ‘ಅವತಾರ್’ ಮುಂತಾದ ಸಿನಿಮಾಗಳ ಮೂಲಕ ಅವರು ವಿಶ್ವಾದ್ಯಂತ ಖ್ಯಾತಿ ಪಡೆದಿದ್ದಾರೆ. ಆದರೆ ‘ಅವತಾರ್’ ಬಳಿಕ ಅವರು ಹೊಸ ಸಿನಿಮಾ ಘೋಷಿಸಿರಲಿಲ್ಲ. ಕೇವಲ ‘ಅವತಾರ್’ ಸೀಕ್ವೆಲ್​​ಗಳಲ್ಲೇ ಅವರು ಮುಳುಗಿದ್ದರು. ಈಗ ಅಂತೂ ಅವರು ಹೊಸ ಸಿನಿಮಾ ಅನೌನ್ಸ್ ಮಾಡಿದ್ದಾರೆ.

ರಿಯಲ್ ಘಟನೆ ಆಧರಿಸಿ ‘ಟೈಟಾನಿಕ್’ ಸಿನಿಮಾ ಮೂಡಿಬಂದಿತ್ತು. ಮತ್ತೆ ನೈಜ ಘಟನೆ ಆಧಾರಿತ ಸಿನಿಮಾ ಮಾಡಲು ಜೇಮ್ಸ್ ಕ್ಯಾಮೆರಾನ್ ಅವರು ಕಾಯುತ್ತಿದ್ದರು. ಅದಕ್ಕಾಗಿ ಹಿರೋಶಿಮಾದ ಕಥೆಯೇ ಸೂಕ್ತ ಎಂದು ಅವರಿಗೆ ಅನಿಸಿದೆ. ‘ಟೈಟಾನಿಕ್ ಬಳಿಕ ನನಗೆ ಇಷ್ಟು ಆಕರ್ಷಕವಾದ ಕಥೆ ಸಿಕ್ಕಿರಲಿಲ್ಲ. ಶೀಘ್ರದಲ್ಲೇ ನಾನು ಇದನ್ನು ನಿರ್ದೇಶಿಸುತ್ತೇನೆ’ ಎಂದು ಜೇಮ್ಸ್ ಕ್ಯಾಮೆರಾನ್ ಅವರು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.

ಜೇಮ್ಸ್ ಕ್ಯಾಮೆರಾನ್ ಅವರು ‘ಅವತಾರ್’ ಹೊರತುಪಡಿಸಿ ಬೇರೆ ಸಿನಿಮಾಗಳ ಕಡೆಗೆ ಗಮನ ನೀಡದೇ ಇರುವುದಕ್ಕೆ ಇಷ್ಟು ದಿನ ಅವರ ಅಭಿಮಾನಿಗಳು ಕೊಂಚ ಬೇಸರ ಮಾಡಿಕೊಂಡಿದ್ದರು. ಈಗ ಅವರು ಹೊಸ ಸಿನಿಮಾ ಘೋಷಣೆ ಮಾಡಿರುವುದಕ್ಕೆ ಅಭಿಮಾನಿಗಳಿಗೆ ಖುಷಿ ಆಗಿದೆ. ಈ ಸಿನಿಮಾ ಯಾವಾಗ ಸೆಟ್ಟೇರಲಿದೆ? ಯಾರೆಲ್ಲ ನಟಿಸಲಿದ್ದಾರೆ ಎಂಬಿತ್ಯಾದಿ ವಿವರಗಳು ಮುಂದಿನ ದಿನಗಳಲ್ಲಿ ಸಿಗಲಿದೆ.

ಇದನ್ನೂ ಓದಿ: ಗೆದ್ದು ಬೀಗಿದ ‘ಅವತಾರ್​ 2’: ಇನ್ನುಳಿದ ಸೀಕ್ವೆಲ್​ ಮಾಡಲು ಮುಂದಾದ ಜೇಮ್ಸ್​ ಕ್ಯಾಮೆರಾನ್​

ಸದ್ಯಕ್ಕೆ ಜೇಮ್ಸ್ ಕ್ಯಾಮೆರಾನ್ ಅವರ ಗಮನ ‘ಅವತಾರ್’ ಸೀಕ್ವೆಲ್ ಮೇಲಿದೆ. 2022ರಲ್ಲಿ 2ನೇ ಪಾರ್ಟ್ ‘ಅವತಾರ್: ದಿ ವೇ ಆಫ್ ವಾಟರ್’ ಬಿಡುಗಡೆ ಆಯಿತು. 3ನೇ ಪಾರ್ಟ್ ‘ಅವತಾರ್: ಫೈರ್ ಆ್ಯಂಡ್ ಆ್ಯಶ್’ ಈ ವರ್ಷ ಡಿಸೆಂಬರ್ 19ಕ್ಕೆ ಬಿಡುಗಡೆ ಆಗಲಿದೆ. ‘ಅವತಾರ್ 4’ ಸಿನಿಮಾ 2029ಕ್ಕೆ ತೆರೆಕಾಣಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 6:03 pm, Wed, 6 August 25