ವಿಶ್ವದ ಸಾರ್ವಕಾಲಿಕ ಅತ್ಯುತ್ತಮ ಸಿನಿಮಾಗಳ ಪಟ್ಟಿ ಮಾಡಿದರೆ ಅದರಲ್ಲಿ ಟ್ಯಾಕ್ಸ್ ಡ್ರೈವರ್ (Taxi Driver) ಹೆಸರು ಬರದೇ ಇರದು. 1976 ರಲ್ಲಿ ಬಿಡುಗಡೆ ಆದ ಈ ಸಿನಿಮಾ ನಾಲ್ಕು ವಿಭಾಗದಲ್ಲಿ ಆಸ್ಕರ್ಗೆ ನಾಮಿನೇಟ್ ಆಗಿತ್ತು. ಮಾರ್ಟಿನ್ ಸ್ಕೋರ್ಸೆಸಿಯನ್ನು (Martin Scorsese) ವಿಶ್ವದ ಅತ್ಯುತ್ತಮ ನಿರ್ದೇಶಕರಲ್ಲಿ ಒಬ್ಬರ ಸಾಲಿಗೆ ನಿಲ್ಲಿಸಿದ್ದು ಇದೇ ಸಿನಿಮಾ. ಆದರೆ ಇದೇ ಸಿನಿಮಾದ ಸಲುವಾಗಿ ಸೆನ್ಸಾರ್ (Censor) ಅಧಿಕಾರಿಯೊಬ್ಬನನ್ನು ಕೊಲ್ಲಲು ಮಾರ್ಟಿನ್ ಸ್ಕೊರ್ಸೆಸಿ ತಯಾರಾಗಿದ್ದರಂತೆ. ಆದರೆ ಆ ನಂತರ ಬಂದ ಒಂದು ಸಣ್ಣ ಐಡಿಯಾದಿಂದಾಗಿ ಮಾರ್ಟಿನ್ ತಮ್ಮ ನಿರ್ಧಾರವನ್ನು ಬದಲಿಸಿದರಂತೆ.
ಟ್ಯಾಕ್ಸಿ ಡ್ರೈವರ್ ಸಿನಿಮಾ ಮಾಡಿದಾಗ ಆ ಸಿನಿಮಾವನ್ನು ನೋಡಿದ ಎನ್ಪಿಎ (ಸೆನ್ಸಾರ್ ಮಂಡಳಿ) ಸದಸ್ಯರು ಸಿನಿಮಾಕ್ಕೆ ಎಕ್ಸ್ ಕಾರ್ಡ್ ನೀಡಲು ಸಜ್ಜಾಗಿದ್ದರಂತೆ. ಇದು ಟ್ಯಾಕ್ಸಿ ಡ್ರೈವರ್ ಸಿನಿಮಾ ನಿರ್ಮಾಣ ಮಾಡಿದ ಸಂಸ್ಥೆಗೂ ಇಷ್ಟವಾಗಿಲ್ಲವಂತೆ. ಹಾಗಾಗಿ ಎಕ್ಸ್ ರೇಟ್ಗೆ ಕಾರಣವಾಗುವ ಸಿನಿಮಾದ ಕೊನೆಯ ಹಿಂಸಾತ್ಮಕ ದೃಶ್ಯಗಳನ್ನು ಕತ್ತರಿಸಿ ಎಂದರಂತೆ. ಆದರೆ ತಾನು ಒಂದು ಅತ್ಯುತ್ತಮ ಸಿನಿಮಾ ಮಾಡಿದ್ದೇನೆ ಎಂಬ ಅರಿವಿದ್ದ ಮಾರ್ಟಿನ್ ಸ್ಕೋರ್ಸೆಸಿಗೆ ತಮ್ಮ ಸಿನಿಮಾದ ದೃಶ್ಯಗಳನ್ನು ಕತ್ತರಿಸುವುದು ತುಸುವೂ ಇಷ್ಟವಿರಲಿಲ್ಲ. ಆದರೆ ಎಕ್ಸ್ ರೇಟ್ ತಪ್ಪಿಸಿಕೊಳ್ಳಬೇಕೆಂದರೆ ದೃಶ್ಯಕ್ಕೆ ಕತ್ತರಿ ಹಾಕದೇ ಬೇರೆ ವಿಧಿಯೇ ಇರಲಿಲ್ಲ.
ಈ ಘಟನೆಯಿಂದ ಬಹಳ ಬೇಸರಗೊಂಡಿದ್ದ ಮಾರ್ಟಿನ್ ಸ್ಕಾರ್ಸೆಸಿ ಇಡೀ ರಾತ್ರಿ ಬಂದೂಕೊಂದನ್ನು ಕೈಯಲ್ಲಿ ಹಿಡಿದುಕೊಂಡೇ ಮದ್ಯ ಸೇವನೆ ಮಾಡಿದ್ದರಂತೆ. ಬೆಳಿಗ್ಗೆಯೇ ಹೋಗಿ ಸೆನ್ಸಾರ್ ಅಧಿಕಾರಿಯನ್ನು ಕೊಲ್ಲುವುದು ಸ್ಕೋರ್ಸೆಸಿಯ ಉದ್ದೇಶವಾಗಿತ್ತು. ಆದರೆ ಮಾರ್ಟಿನ್ರ ಆ ಸ್ಥಿತಿಯ ಬಗ್ಗೆ ಅರಿವಾಗಿ ಅವರನ್ನು ಮತ್ತೊಬ್ಬ ಖ್ಯಾತ ನಿರ್ದೇಶಕ ಸ್ಟಿವನ್ ಸ್ಪೀಲ್ಬರ್ಗ್ ಅಂದೇ ಭೇಟಿಯಾದರಂತೆ. ಅವರು ಸಹ ಆ ಹಿಂಸಾತ್ಮಕ ಅಥವಾ ಎಕ್ಸ್ ರೇಟೆಡ್ ಪ್ರಮಾಣ ಪತ್ರಕ್ಕೆ ಕಾರಣವಾಗಬಹುದಾಗಿದ್ದ ದೃಶ್ಯಗಳನ್ನು ನೋಡಿ, ಇದು ಅದ್ಭುತವಾದ ದೃಶ್ಯ ಇದನ್ನು ಕತ್ತರಿಸುವುದು ಬೇಡ ಬದಲಿಗೆ ಬೇರೆ ಏನಾದರೂ ಮಾಡೋಣ ಎಂದು ಸಮಾಧಾನ ಪಡಿಸಿದರಂತೆ.
ಇದನ್ನೂ ಓದಿ: ಹಾಲಿವುಡ್ ಸಿನಿಮಾ ಪರ ಪ್ರಚಾರ ಶುರು ಮಾಡಿದ ಸಲ್ಮಾನ್ ಖಾನ್
ಹೀಗೆ, ರಾತ್ರಿ ಮದ್ಯ ಸೇವನೆ ಮಾಡುತ್ತಾ ಇಬ್ಬರೂ ದಿಗ್ಗಜ ನಿರ್ದೇಶಕರು ಆ ಬಗ್ಗೆಯೇ ಮಾತನಾಡುತ್ತಿರುವಾಗ ಮಾರ್ಟಿನ್ ಸ್ಕೋರ್ಸೆಸಿಗೆ ಐಡಿಯಾ ಬಂದು. ಕ್ಲೈಮ್ಯಾಕ್ಸ್ನಲ್ಲಿ ಹಿಂಸಾತ್ಮಕ ದೃಶ್ಯಗಳ ಕಲರ್ ಗ್ರೇಡಿಂಗ್ ಕಡಿಮೆ ಮಾಡಲು ನಿಶ್ಚಯ ಮಾಡಿದರಂತೆ. ಹಾಗೆ ಕಲರ್ ಕಡಿಮೆ ಮಾಡಿದ್ದರಿಂದ ಗಾಢ ಕೆಂಪು ಬಣ್ಣದ ರಕ್ತ ತುಸು ಕಪ್ಪು ಬಣ್ಣದಂತೆ ಕಾಣಿಸಿದೆ. ಇದರಿಂದಾಗಿ ಆ ದೃಶ್ಯಕ್ಕೆ ಸಹ್ಯತೆ ಒದಗಿ, ಎನ್ಪಿಎ ಯವರು ಸಿನಿಮಾಕ್ಕೆ ಎಕ್ಸ್ ಬದಲಿಗೆ ಆರ್ ಪ್ರಮಾಣ ಪತ್ರ ನೀಡಿದರಂತೆ.
ಟ್ಯಾಕ್ಸಿ ಡ್ರೈವರ್ ಸಿನಿಮಾ ಬಳಿಕ ಮಾರ್ಟಿನ್ ಸ್ಕೊರ್ಸೆಸಿ ವಿಶ್ವದ ಅತ್ಯುತ್ತಮ ನಿರ್ದೇಶಕರಲ್ಲಿ ಒಬ್ಬರೆನಿಸಿಕೊಂಡರು. ಆ ಬಳಿಕ, ಅವರದ್ದೇ ನಿರ್ದೇಶನದ ಗುಡ್ ಫೆಲಾಸ್, ರೇಜಿಂಗ್ ಬುಲ್, ದಿ ಲಾಸ್ಟ್ ಟೆಮ್ಟೇಷನ್ ಆಫ್ ಕ್ರೈಸ್ಟ್, ಗ್ಯಾಂಗ್ಸ್ ಆಫ್ ನ್ಯೂಯಾರ್ಕ್, ದಿ ಡಿಪಾರ್ಟೆಡ್, ಶಟರ್ ಐಸ್ಲ್ಯಾಂಡ್, ದಿ ವುಲ್ಫ್ ಆಫ್ ವಾಲ್ ಸ್ಟ್ರೀಟ್ ಇನ್ನೂ ಹಲವು ಸೂಪರ್ ಡೂಪರ್ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಇದೀಗ ಕಿಲ್ಲರ್ಸ್ ಆಫ್ ಫ್ಲವರ್ ಮೂನ್ ಸಿನಿಮಾವನ್ನು ಸ್ಕೋರ್ಸೆಸಿ ನಿರ್ದೇಶಿಸಿದ್ದು ಸಿನಿಮಾವು ಇನ್ನು ಕೆಲವೇ ದಿನಗಳಲ್ಲಿ ತೆರೆಗೆ ಬರಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ