ನಟಿ ಪ್ರಿಯಾಂಕಾ ಚೋಪ್ರಾ (Priyanka Chopra) ಬಾಲಿವುಡ್ನಲ್ಲಿ ಗುರುತಿಸಿಕೊಂಡು, ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದರು. ಕಾಲಾನಂತರದಲ್ಲಿ ಹಾಲಿವುಡ್ನಿಂದಲೂ (Hollywood) ಅವಕಾಶಗಳು ಒಲಿದು ಬಂದಿದ್ದರಿಂದ ಅವರು ಅತ್ತ ಪಯಣ ಬೆಳೆಸಿದರು. ಅಲ್ಲದೇ ಪ್ರತಿಷ್ಠಿತ ನಿರ್ಮಾಣ ಸಂಸ್ಥೆಗಳ ಚಿತ್ರಗಳಲ್ಲಿ ಪ್ರಿಯಾಂಕಾ ಬಣ್ಣಹಚ್ಚಲು ಆರಂಭಿಸಿದರು. ಇತ್ತೀಚೆಗೆ ತೆರೆ ಕಂಡ ‘ದಿ ಮ್ಯಾಟ್ರಿಕ್ಸ್ ರೆಸರೆಕ್ಷನ್ಸ್’ (The Matrix Resurrections) ಚಿತ್ರವೂ ಇವುಗಳಲ್ಲಿ ಒಂದು. ವಿಶ್ವಾದ್ಯಂತ ಈ ಚಿತ್ರ ಸರಣಿಗೆ ಅಪಾರ ಅಭಿಮಾನಿಗಳಿದ್ದಾರೆ. ಪ್ರಿಯಾಂಕಾ ಈ ಚಿತ್ರದ ಭಾಗವಾಗಿದ್ದಕ್ಕೆ ಭಾರತೀಯರು ಹೆಮ್ಮೆ ಪಟ್ಟಿದ್ದರು. ಅಲ್ಲದೇ ಸತಿ ಪಾತ್ರವನ್ನು ಪ್ರಿಯಾಂಕಾ ನಿರ್ವಹಿಸುತ್ತಿದ್ದಾರೆ ಎಂಬ ಸಮಾಚಾರ ಕೇಳಿ ಥ್ರಿಲ್ ಆಗಿದ್ದರು. ಆದರೆ ಚಿತ್ರ ನೋಡಿದ್ದವರಿಗೆ ಶಾಕ್ ಆಗಿತ್ತು. ಪ್ರಿಯಾಂಕಾ ಪಾತ್ರ ಚಿತ್ರದಲ್ಲಿ ಕೇವಲ 10 ನಿಮಿಷಗಳ ಕಾಲ ಮಾತ್ರ ಕಾಣಿಸಿಕೊಂಡಿತ್ತು. ಇದೇ ಕಾರಣಕ್ಕೆ ಪ್ರಿಯಾಂಕಾರನ್ನು ಟ್ರೋಲ್ ಕೂಡ ಮಾಡಲಾಗಿತ್ತು. ಆದರೆ ನಟಿ ಇದ್ಯಾವುದಕ್ಕೂ ತಲೆ ಕೆಡಿಸಿಕೊಂಡಿಲ್ಲ. ಇವುಗಳಿಗೆಲ್ಲಾ ಖಡಕ್ ಆಗಿಯೇ ಉತ್ತರಿಸಿದ್ದಾರೆ.
ಇತ್ತೀಚೆಗೆ ನೀಡಿದ್ದ ಸಂದರ್ಶನವೊಂದರಲ್ಲಿ ಪ್ರಿಯಾಂಕಾ ಚಿತ್ರದಲ್ಲಿ ತಮ್ಮ ಪಾತ್ರದ ಅವಧಿಯ ಬಗ್ಗೆ ಮಾತನಾಡಿದ್ದಾರೆ. ‘‘ದಕ್ಷಿಣ ಏಷ್ಯಾದ ಜನರು ಹೆಚ್ಚಾಗಿ ನನ್ನ ಪಾತ್ರದ ಕುರಿತು ಕೇಳುತ್ತಿದ್ದಾರೆ. ಅದೊಂದು ಸಣ್ಣ ಪಾತ್ರ, ಪ್ರಮುಖ ಪಾತ್ರವಲ್ಲ. ಆದರೂ ಆ ಪಾತ್ರ ಏಕೆ ಒಪ್ಪಿಕೊಂಡೆ ಮುಂತಾದ ಮಾತುಗಳನ್ನು ಕೇಳುತ್ತಿದ್ದಾರೆ. ಅವರಿಗೆಲ್ಲಾ ನಾನು ಹೇಳುವ ಉತ್ತರ ಒಂದೇ. ಇದು ‘ದಿ ಮ್ಯಾಟ್ರಿಕ್ಸ್’ ಚಿತ್ರ ಮತ್ತು ಅತೀ ಮುಖ್ಯವಾದ ಪಾತ್ರ’’ ಎಂದಿದ್ದಾರೆ ಪ್ರಿಯಾಂಕಾ.
ಬಾಲಿವುಡ್ನಲ್ಲಿಯೂ ಚಿತ್ರಗಳ ಆಯ್ಕೆಯ ವೇಳೆ ಇದೇ ಮಾನದಂಡ ಅನುಸರಿಸುತ್ತಿದ್ದೆ ಎಂದು ಪ್ರಿಯಾಂಕಾ ನುಡಿದಿದ್ದಾರೆ. ಪಾತ್ರದ ತೂಕದ ಮೇಲೆ ಸ್ಕ್ರಿಪ್ಟ್ ಆಯ್ಕೆ ಮಾಡುತ್ತಿದ್ದೆ. ಅವೆಲ್ಲವೂ ನಾಯಕಿಯ ಪಾತ್ರವೇ ಆಗಿರಲಿಲ್ಲ. ಅಲ್ಲದೇ ಚಿತ್ರದಲ್ಲಿ ಪಾತ್ರ ಕೇವಲ 10 ನಿಮಿಷ ಕಾಣಿಸಿಕೊಳ್ಳುತ್ತದೆ ಎಂದು ಮಾತನಾಡುವುದು, ಆ ಕುರಿತು ಯೋಚಿಸುವುದೆಲ್ಲಾ ಸಣ್ಣ ಮನಸ್ಥಿತಿ ಎಂದು ಖಡಕ್ ಆಗಿಯೇ ಉತ್ತರಿಸಿದ್ದಾರೆ ಪ್ರಿಯಾಂಕಾ.
ಪ್ರಿಯಾಂಕಾ ಕೇವಲ 10 ನಿಮಿಷ ‘ಮ್ಯಾಟ್ರಿಕ್ಸ್’ನಲ್ಲಿ ಕಾಣಿಸಿಕೊಂಡಿದ್ದಾರೆ ಎನ್ನುವುದು ಬಹಳಷ್ಟು ಟ್ರೋಲ್ಗಳಿಗೆ ಆಹಾರವಾಗಿತ್ತು. ಅಲ್ಲದೇ ಇದಕ್ಕಾಗಿ ಬಾಲಿವುಡ್ನಿಂದ ಹಾಲಿವುಡ್ಗೆ ಹೋಗಬೇಕಿತ್ತೇ ಎಂಬ ಮಾತುಗಳೆಲ್ಲಾ ಕೇಳಿಬಂದಿದ್ದವು. ಇವುಗಳಿಗೆ ಪ್ರಿಯಾಂಕಾ ಅಭಿಮಾನಿಗಳು ಖಾರವಾಗಿ ಪ್ರತಿಕ್ರಿಯಿಸಿದ್ದರು.‘ಮ್ಯಾಟ್ರಿಕ್ಸ್’ ಚಿತ್ರದಲ್ಲಿ ಯಾವುದೇ ಪಾತ್ರ ಸಿಕ್ಕಿದರೂ ಯಾವ ಕಲಾವಿದನೂ ಇಲ್ಲ ಎನ್ನಲಾರ. ಕಾರಣ ಚಿತ್ರರಂಗದಲ್ಲಿ ಆ ಸರಣಿಯ ಚಿತ್ರಗಳಿಗೆ ಅಷ್ಟು ಪ್ರಾಮುಖ್ಯತೆ ಇದೆ ಎಂದು ಹಲವರು ಪ್ರಿಯಾಂಕಾ ಬೆನ್ನಿಗೆ ನಿಂತಿದ್ದರು. ಮತ್ತೆ ಹಲವರು, ಸ್ಟಾರ್ ಎನ್ನುವುದು ಒಂದು ಚಿತ್ರದಿಂದ ಆಗುವುದಲ್ಲ. ಅದು ಹಂತ ಹಂತದ ಪ್ರಕ್ರಿಯೆ. ಪ್ರಿಯಾಂಕಾ ಆ ದಿಕ್ಕಿನಲ್ಲಿ ಒಂದೊಂದೇ ಮೆಟ್ಟಿಲು ಏರುತ್ತಿದ್ದಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು.
‘ದಿ ಮ್ಯಾಟ್ರಿಕ್ಸ್ ರೆಸರೆಕ್ಷನ್ಸ್’ ಚಿತ್ರ ಡಿಸೆಂಬರ್ 22ರಂದು ತೆರೆಕಂಡಿತ್ತು. ಚಿತ್ರವನ್ನು ಮ್ಯಾಟ್ರಿಕ್ಸ್ ಸರಣಿಯ ಅಭಿಮಾನಿಗಳು ಇಷ್ಟಪಟ್ಟಿದ್ದರೆ, ಉಳಿದವರು ಮಿಶ್ರ ಅಭಿಪ್ರಾಯ ವ್ಯಕ್ತಪಡಿಸಿದ್ದರು.
ಇದನ್ನೂ ಓದಿ:
6ನೇ ಕ್ಲಾಸ್ ಪರೀಕ್ಷೆಯಲ್ಲಿ ಸೈಫ್-ಕರೀನಾ ಪುತ್ರನ ಬಗ್ಗೆ ಪ್ರಶ್ನೆ! ಇಲ್ಲಿದೆ ಪ್ರಶ್ನೆ ಪತ್ರಿಕೆಯ ವೈರಲ್ ಫೋಟೋ