ಶೋ ರದ್ದು ಮಾಡಿ ಬೆಂಗಳೂರಿನ ಬಗ್ಗೆ ದೂರು ಹೇಳಿದ ಹಾಲಿವುಡ್ ಕಮಿಡಿಯನ್​

|

Updated on: Oct 06, 2023 | 7:01 PM

Ricky Kej: ಬೆಂಗಳೂರಿನ ಶೋ ರದ್ದು ಮಾಡಿ ನಂತರ ಮುಂಬೈನಲ್ಲಿ ಬೆಂಗಳೂರಿನ ಬಗ್ಗೆ ಲಘುವಾಗಿ ಮಾತನಾಡಿರುವ ಅಂತರಾಷ್ಟ್ರೀಯ ಕಮಿಡಿಯನ್ ಟ್ರೆವರ್ ನೋಹಾರ ಹೇಳಿಕೆಗೆ ಗ್ರ್ಯಾಮಿ ವಿಜೇತ ಸಂಗೀತ ನಿರ್ದೇಶಕ, ಬೆಂಗಳೂರಿಗ ರಿಕ್ಕಿ ಕೇಜ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಶೋ ರದ್ದು ಮಾಡಿ ಬೆಂಗಳೂರಿನ ಬಗ್ಗೆ ದೂರು ಹೇಳಿದ ಹಾಲಿವುಡ್ ಕಮಿಡಿಯನ್​
ಟ್ರೆವರ್ ನೋಹಾ-ರಿಕ್ಕಿ ಕೇಜ್
Follow us on

ಟ್ರೆವೊರ್ ನೋಹಾ, ಹಾಲಿವುಡ್​ನ ಜನಪ್ರಿಯ ಟಾಕ್ ಶೋ ಹೋಸ್ಟ್, ಮೋಟಿವೇಷನಲ್ ಸ್ಪೀಕರ್, ಸ್ಟಾಂಡಪ್ ಕಮಿಡಿಯನ್ ಹಾಗೂ ಸಿನಿಮಾ ನಟ ಕೂಡ. ದೀಗ ಭಾರತ ಪ್ರವಾಸದಲ್ಲಿರುವ ನೋಹಾ, ಸೆಪ್ಟೆಂಬರ್ ಕೊನೆಯ ವಾರದಲ್ಲಿ ಬೆಂಗಳೂರಿನಲ್ಲಿ ಎರಡು ಶೋಗಳನ್ನು ಆಯೋಜನೆ ಮಾಡಿದ್ದರು. ಆದರೆ ಕೊನೆ ಕ್ಷಣದಲ್ಲಿ ಎರಡೂ ಶೋಗಳನ್ನು ನೋಹಾ ರದ್ದು ಮಾಡಿ ಬೆಂಗಳೂರಿಗರ ಕ್ಷಮೆ ಕೇಳಿದ್ದರು. ಆದರೆ ಆ ಬಳಿಕ ಮುಂಬೈ ಶೋನಲ್ಲಿ ಬೆಂಗಳೂರಿನ ಶೋಗಳು ರದ್ದಾದ ಬಗ್ಗೆ ಮಾತನಾಡಿ ಕಾರ್ಯಕ್ರಮ ನಡೆಯಬೇಕಿದ್ದ ಸ್ಥಳದಲ್ಲಿ ಕಳಪೆ ಧ್ವನಿ ವ್ಯವಸ್ಥೆ ಇತ್ತು ಎಂಬುದನ್ನು ಸೇರಿದಂತೆ ಇನ್ನೂ ಕೆಲವು ವಿಷಯಗಳನ್ನು ಕಾರಣವಾಗಿ ಹೇಳಿದ್ದರು. ನೋಹಾ ಹೇಳಿಕೆಗೆ ಕೆಲವು ಬೆಂಗಳೂರಿಗರು ಆಕ್ಷೇಪ ಎತ್ತಿದ್ದು, ವಿಶೇಷವಾಗಿ ಬೆಂಗಳೂರಿಗ, ಮೂರು ಬಾರಿ ಗ್ರ್ಯಾಮಿ ಪ್ರಶಸ್ತಿ ವಿಜೇತ ಸಂಗೀತ ನಿರ್ದೇಶಕ ರಿಕ್ಕಿ ಕೇಜ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನ ಬಗೆಗಿನ ನೋಹಾರ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿರುವ ರಿಕ್ಕಿ ಕೇಜ್ ”ಒಬ್ಬ ಜವಾಬ್ದಾರಿಯುತ ಫರ್ಮಾರ್ಮರ್ ಶೋ ನಡೆಯುವ ಮುನ್ನ ವೇದಿಕೆ ಮೇಲಿನ ವ್ಯವಸ್ಥೆಗಳನ್ನು ಖುದ್ದಾಗಿ ಪರಿಶೀಲಿಸುತ್ತಾನೆ. ಟಿಕೆಟ್ ಖರೀದಿಸಿರುವ ಪ್ರೇಕ್ಷಕರ ಮೇಲೆ ಕಾಳಜಿ ಇರುವ ವ್ಯಕ್ತಿ ಶೋ ನಡೆಯುವ ದಿನ ಮೊದಲೇ ಸ್ಥಳಕ್ಕೆ ಆಗಮಿಸಿ, ಎಲ್ಲವೂ ಸರಿಯಾಗಿದೆಯೇ? ಪ್ರೇಕ್ಷಕರಿಗೆ ಸಮಸ್ಯೆ ಆಗದ ವ್ಯವಸ್ಥೆ ಆಗಿದೆಯೇ ಎಂಬುದನ್ನು ಪರಿಶೀಲಿಸಿ ನಂತರ ಶೋ ಪ್ರಾರಂಭಿಸುತ್ತಾನೆ” ಎಂದಿದ್ದಾರೆ.

”ಪ್ರದರ್ಶನ ನೀಡುವ ವ್ಯಕ್ತಿ ಕನಿಷ್ಠ ಮೈಕ್ ಹಾಗೂ ಶಬ್ದದ ಗುಣಮಟ್ಟವನ್ನು ಪರಿಶೀಲನೆ ಮಾಡಿಯೇ ಮಾಡುತ್ತಾನೆ. ನನಗೆ ಖಾತ್ರಿ ಇದೆ, ವಿಶ್ವದ ಹಲವು ಪ್ರಮುಖ ನಗರಗಳಲ್ಲಿ ಶೋ ಮಾಡಿರುವ ಟ್ರೆವರ್ ನೋಹಾ, ಅಲ್ಲೆಲ್ಲ ಈ ಮೈಕ್ರೋಫೋನ್ ಅಥವಾ ಮೈಕ್ ಚೆಕ್​ಗಳನ್ನು ಮಾಡಿಯೇ ಶೋ ಪ್ರಾರಂಭಿಸಿರುತ್ತಾರೆ. ಅದು ಕಲಾವಿದನ ಜವಾಬ್ದಾರಿ ಸಹ. ಆದರೆ ಬೆಂಗಳೂರಿನಲ್ಲಿ ಮಾತ್ರ ಏಕೆ ಮಾಡಲಿಲ್ಲ? ಪ್ರತಿಯೊಬ್ಬ ಪ್ರದರ್ಶಕನಿಗೂ ಶಬ್ದದ ಗುಣಮಟ್ಟದ ಬಗ್ಗೆ ಪ್ರತ್ಯೇಕ ಅಗತ್ಯಗಳಿರುತ್ತವೆ. ಅದನ್ನೆಲ್ಲ ಮೊದಲೇ ಆಗಮಿಸಿ ಸರಿ ಮಾಡಿಕೊಂಡು, ಹೊಂದಿಸಿಕೊಳ್ಳುವುದರ ಬದಲಿಗೆ, ಶೋ ಸಮಯಕ್ಕೆ ವೇದಿಕೆ ಬರುವುದು ಬೇಜವಾಬ್ದಾರಿಯನ್ನು ತೋರುತ್ತದೆ” ಎಂದಿದ್ದಾರೆ.

ಮುಂಬೈನಲ್ಲಿ ನೋಹಾ ಹೇಳಿದಂತೆ ಸ್ಕ್ರೀನ್ ನಾನು ಹೇಳಿದಂತಿರಲಿಲ್ಲ, ಸ್ಥಳ ಸರಿಯಿರಲಿಲ್ಲ ಎಂದಾಗಿದ್ದರೆ ನೋಹಾ ಅಥವಾ ಅವರ ತಂಡ ಮೊದಲೇ ಅದನ್ನು ಆಯೋಜಕರಿಗೆ ಸರಿಯಾಗಿ ಹೇಳಬೇಕಿತ್ತಲ್ಲವೆ? ಡೀಪ್ ಪರ್ಪಲ್, ಪಿಂಕ್ ಫ್ಲ್ಯಾಯ್ಡ್, ಬಿಯಾನ್ಸೆ, ಬ್ಲಾಕ್ ಐಡ್ ಪೀಸ್, ಬ್ರ್ಯಾನ್ ಆಡಮ್ಸ್, ಮೆಟಾಲಿಕಾ, ಸಿಂಫನಿ ಆರ್ಕೆಸ್ಟ್ರಾ, ರಸಲ್ ಪೀಟರ್ಸ್​ ಅಂಥಹಾ ದೊಡ್ಡ ಸಂಗೀತಗಾರರು ಯಶಸ್ವಿಯಾಗಿ ಶೋ ನಡೆಸಿರುವ ಬೆಂಗಳೂರಿನಲ್ಲಿ, ನಿಮ್ಮ ಶೋ ಏಕೆ ನಡೆಸಲಾಗಲಿಲ್ಲ? ಎಂದು ಪ್ರಶ್ನಿಸುವ ಜೊತೆಗೆ, ನಿಮ್ಮ ಶೋ ಆಯೋಜಿತವಾಗಿದ್ದ ಅದೇ ನಿರ್ದಿಷ್ಟ ಸ್ಥಳದಲ್ಲಿಯೇ ಯನ್ನಿ 2014ರಲ್ಲಿಯೇ ಅತ್ಯಂತ ಯಶಸ್ವಿಯಾಗಿ ಶೋ ಮಾಡಿದ್ದರು. ಅವರಿಗೆ ಆಗ ಸಾಧ್ಯವಾಗಿದ್ದು ನಿಮಗೆ ಈಗ ಏಕೆ ಸಾಧ್ಯವಾಗಲಿಲ್ಲ ಎಂದು ಅವರು ಪ್ರಶ್ನೆ ಮಾಡಿದ್ದಾರೆ.