ಜಾಗತಿಕ ಸಿನಿಮಾ ಲೋಕದಲ್ಲಿ ಆಸ್ಕರ್ (Oscar Awards) ಪ್ರಶಸ್ತಿಗೆ ಭಾರಿ ಮನ್ನಣೆ ಇದೆ. ಜೀವನದಲ್ಲಿ ಒಮ್ಮೆಯಾದರೂ ಆಸ್ಕರ್ ಪಡೆಯಬೇಕು ಎಂದು ಕನಸು ಕಾಣುತ್ತಾರೆ ಸಿನಿಮಾ ಮಂದಿ. ಇನ್ನು, ಆಸ್ಕರ್ ಪ್ರಶಸ್ತಿ (ಅಕಾಡೆಮಿ ಅವಾರ್ಡ್ಸ್) ಪ್ರದಾನ ಸಮಾರಂಭ ಕೂಡ ವಿಶ್ವ ಮಟ್ಟದಲ್ಲಿ ಗಮನ ಸೆಳೆಯುತ್ತದೆ. ಹಾಲಿವುಡ್ ಸಿನಿಲೋಕದ ಘಟಾನುಘಟಿ ಕಲಾವಿದರು ಮತ್ತು ತಂತ್ರಜ್ಞರೆಲ್ಲ ಆ ಸಮಾರಂಭದಲ್ಲಿ ಭಾಗಿ ಆಗುತ್ತಾರೆ. 2022ರ ಆಸ್ಕರ್ (Academy Awards 2022) ಸಮಾರಂಭದ ಬಗ್ಗೆ ಈಗ ಅನೇಕ ಸುದ್ದಿಗಳು ಹರಿದಾಡುತ್ತಿವೆ. ಪ್ರತಿ ಬಾರಿಯೂ ಈ ಕಾರ್ಯಕ್ರವನ್ನು ಯಾರು ನಿರೂಪಣೆ ಮಾಡುತ್ತಾರೆ ಎಂಬುದು ಕೂಡ ಬಹುಮುಖ್ಯವಾಗುತ್ತದೆ. ಈ ವರ್ಷ ಪಾಪ್ ಗಾಯಕಿ ಸೆಲೆನಾ ಗೊಮೆಜ್ (Selena Gomez) ಹೆಸರು ಕೇಳಿಬರುತ್ತಿದೆ. ಆದರೆ ಅದನ್ನೂ ಅಧಿಕೃತವಾಗಿಲ್ಲ. ಅದರ ಜೊತೆ ‘ಸ್ಪೈಡರ್ ಮ್ಯಾನ್’ ಖ್ಯಾತಿಯ ನಟ ಟಾಮ್ ಹಾಲೆಂಡ್ ಸಹ ಈ ಬಾರಿ ನಿರೂಪಣೆ ಮಾಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಕಳೆದ ಕೆಲವು ವರ್ಷಗಳಿಂದ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭದ ರೂಪುರೇಷೆ ಬದಲಾಗಿದೆ. ಕೊರೊನಾ ಹಾವಳಿಯಿಂದಾಗಿ ಅನೇಕ ಮಾರ್ಪಾಡುಗಳನ್ನು ಮಾಡಿಕೊಳ್ಳಲಾಗಿದೆ. ಕಳೆದ ಮೂರು ವರ್ಷದಿಂದ ನಿರೂಪಕರು ಇಲ್ಲದೆಯೇ ಸಮಾರಂಭ ನಡೆದು ಬಂದಿದೆ. ಈ ವರ್ಷ ಮತ್ತೆ ವೇದಿಕೆ ಮೇಲೆ ನಿರೂಪಕರು ಇರಲಿದ್ದಾರೆ ಎನ್ನಲಾಗಿದೆ. ಹಾಗಾದರೆ ಈ ಬಾರಿ ನಿರೂಪಣೆ ಮಾಡುವ ಅವಕಾಶ ಯಾರಿಗೆ ಸಿಗಲಿದೆ ಎಂಬ ಕೌತುಕ ನಿರ್ಮಾಣ ಆಗಿದೆ.
ಅಮೆರಿಕದ ಖ್ಯಾತ ಹಾಸ್ಯ ನಟ ಪೀಟ್ ಡೇವಿಡ್ಸನ್ ಕೂಡ ಈ ಬಾರಿಯ ಆಸ್ಕರ್ ವೇದಿಕೆಯಲ್ಲಿ ನಿರೂಪಣೆ ಮಾಡಬಹುದು ಎಂಬ ಗಾಸಿಪ್ ಹರಿದಾಡಿತ್ತು. ಆದರೆ ಡೇಟ್ಸ್ ಸಮಸ್ಯೆ ಮತ್ತು ಇತರೆ ಪ್ರೊಡಕ್ಷನ್ ಕಂಪನಿಗಳ ಜೊತೆ ಈಗಾಗಲೇ ಮಾಡಿಕೊಂಡಿರುವ ಒಪ್ಪಂದಗಳ ಕಾರಣದಿಂದಾಗಿ ಅವರು ಕೂಡ ನಿರೂಪಣೆ ಮಾಡಲು ಸಾಧ್ಯವಾಗುತ್ತಿಲ್ಲ ಎನ್ನುತ್ತಿವೆ ಮೂಲಗಳು. ಹಾಗಾಗಿ ಸೆಲೆನಾ ಗೊಮೆಜ್ ಜೊತೆಗೆ ಹಿರಿಯ ಕಲಾವಿದರಾದ ಸ್ಟೀವ್ ಮಾರ್ಟಿನ್, ಮಾರ್ಟಿನ್ ಶಾರ್ಟ್ ಕೂಡ ನಿರೂಪಣೆ ಮಾಡಬಹುದು ಎಂಬ ಗುಮಾನಿ ಬಲವಾಗಿದೆ. ಈ ಮೂವರು ‘ಓನ್ಲಿ ಮರ್ಡರ್ಸ್ ಇನ್ ದ ಬಿಲ್ಡಿಂಗ್’ ವೆಬ್ ಸಿರೀಸ್ನಲ್ಲಿ ಒಟ್ಟಿಗೆ ನಟಿಸಿದ್ದರು. ಆ ಜನಪ್ರಿಯತೆಯ ಕಾರಣದಿಂದ ಈ ಮೂವರಿಗೆ ಆಸ್ಕರ್ ಸಮಾರಂಭವನ್ನು ನಿರೂಪಣೆ ಮಾಡಲು ಅವಕಾಶ ನೀಡಬಹುದು ಎಂದು ಅಂದಾಜಿಸಲಾಗುತ್ತಿದೆ.
‘ಈ ಮೂವರಿಗೆ ಭಾರಿ ಜನಪ್ರಿಯತೆ ಇದೆ. ಯಾರು ನಿರೂಪಣೆ ಮಾಡಬೇಕು ಎಂಬ ಕುರಿತು ನಾವಿನ್ನೂ ಚರ್ಚೆ ನಡೆಸುತ್ತಿದ್ದೇವೆ’ ಎಂದು ಆಸ್ಕರ್ ಸಮಾರಂಭದ ಆಯೋಜಕರು ಹೇಳಿಕೆ ನೀಡಿದ್ದಾರೆ. ಈಗಾಗಲೇ ಮೂರು ಬಾರಿ ಆಸ್ಕರ್ ಸಮಾರಂಭದಲ್ಲಿ ನಿರೂಪಣೆ ಮಾಡಿದ ಅನುಭವವನ್ನು ಸ್ಟೀವ್ ಮಾರ್ಟಿನ್ ಹೊಂದಿದ್ದಾರೆ.
ಇದನ್ನೂ ಓದಿ:
Sidney Poitier: ಅತ್ಯುತ್ತಮ ನಟನೆಗಾಗಿ ಆಸ್ಕರ್ ಪಡೆದ ಮೊದಲ ಕಪ್ಪು ವರ್ಣೀಯ ಕಲಾವಿದ ಸಿಡ್ನಿ ಪೊಯ್ಟಿಯರ್ ನಿಧನ