Tom Cruise: ರಿಲೀಸ್​ಗೂ ಮುನ್ನವೇ ಲೀಕ್ ಆಯ್ತು ಟಾಮ್​ ಕ್ರೂಸ್ ಹೊಸ ಚಿತ್ರದ ಟ್ರೇಲರ್​; ಸೂಪರ್ ಸ್ಟಾರ್​ಗಳ ಸಿನಿಮಾಕ್ಕೇ ಹೀಗಾದರೆ ಸಾಮಾನ್ಯರ ಕತೆಯೇನು?

| Updated By: shivaprasad.hs

Updated on: May 22, 2022 | 2:13 PM

Mission: Impossible- Dead Reckoning Part 1 trailer: ಹಾಲಿವುಡ್​ನ ಯಶಸ್ವಿ ಫ್ರಾಂಚೈಸ್ ಚಿತ್ರಗಳಲ್ಲಿ ‘ಮಿಷನ್ ಇಂಪಾಸಿಬಲ್’ ಕೂಡ ಒಂದು. ಈ ಸರಣಿಯ ಏಳನೇ ಚಿತ್ರ ‘ಮಿಷನ್ ಇಂಪಾಸಿಬಲ್​- ಡೆಡ್ ರೆಕನಿಂಗ್ ಪಾರ್ಟ್ 1’ ದೊಡ್ಡ ಮಟ್ಟದ ನಿರೀಕ್ಷೆ ಹುಟ್ಟಿಸಿದೆ. ಆದರೆ ಟಾಮ್ ಕ್ರೂಸ್ ನಟನೆಯ ಈ ಸಿನಿಮಾದ ಟ್ರೇಲರ್​ ರಿಲೀಸ್​ಗೂ ಮುನ್ನವೇ ಲೀಕ್ ಆಗಿದೆ.

Tom Cruise: ರಿಲೀಸ್​ಗೂ ಮುನ್ನವೇ ಲೀಕ್ ಆಯ್ತು ಟಾಮ್​ ಕ್ರೂಸ್ ಹೊಸ ಚಿತ್ರದ ಟ್ರೇಲರ್​; ಸೂಪರ್ ಸ್ಟಾರ್​ಗಳ ಸಿನಿಮಾಕ್ಕೇ ಹೀಗಾದರೆ ಸಾಮಾನ್ಯರ ಕತೆಯೇನು?
‘ಮಿಷನ್ ಇಂಪಾಸಿಬಲ್’ ಚಿತ್ರದಲ್ಲಿ ಟಾಮ್​ ಕ್ರೂಸ್​​
Follow us on

ಪೈರಸಿ (Piracy) ಸದ್ಯ ಚಿತ್ರರಂಗ ಎದುರಿಸುತ್ತಿರುವ ಬಹುದೊಡ್ಡ ಸಮಸ್ಯೆ. ಇದನ್ನು ನಿರ್ವಹಿಸಲು ಚಿತ್ರತಂಡಗಳು ಶ್ರಮವಹಿಸುತ್ತಿದ್ದರೂ ಕೂಡ ದೊಡ್ಡ ಮಟ್ಟದಲ್ಲಿ ಪ್ರತಿಫಲ ಲಭ್ಯವಾಗಿಲ್ಲ. ಈ ನಡುವೆ ಚಿತ್ರತಂಡಗಳು ಹೊಸ ಸಮಸ್ಯೆಗಳನ್ನು ಎದುರಿಸಲು ಪ್ರಾರಂಭಿಸಿವೆ. ರಿಲೀಸ್​ಗೂ ಮುನ್ನವೇ ಚಿತ್ರದ ತುಣುಕುಗಳು, ಟ್ರೇಲರ್​ ಮೊದಲಾದವುಗಳು ಲೀಕ್ (Leak) ಆಗುತ್ತಿವೆ. ಚಿತ್ರೀಕರಣದ ವೇಳೆ ಖ್ಯಾತ ನಟರ ಗೆಟಪ್​ಗಳು, ಸೆಟ್​ನ ಫೋಟೋಗಳು ಸೋರಿಕೆಯಾಗುವುದು ಕೂಡ ಹೆಚ್ಚಳವಾಗಿದೆ. ಇದು ಕೇವಲ ಸಣ್ಣ ಸಣ್ಣ ಚಿತ್ರಗಳು ಎದುರಿಸುತ್ತಿರುವ ಸಮಸ್ಯೆಗಳಲ್ಲ. ಹಲವು ಸೂಪರ್​ ಹಿಟ್ ಚಿತ್ರಗಳನ್ನು ನೀಡಿರುವ ಸೂಪರ್​ ಸ್ಟಾರ್​ಗಳು ಹಾಗೂ ಪ್ರಖ್ಯಾತ ನಿರ್ಮಾಣ ಸಂಸ್ಥೆಗಳೂ ಇಂತಹ ಸಮಸ್ಯೆಗಳನ್ನು ಎದುರಿಸುತ್ತಿವೆ. ಇದಕ್ಕೆ ಹೊಸ ಸೇರ್ಪಡೆ ಟಾಮ್ ಕ್ರೂಸ್ (Tom Cruise) ನಟನೆಯ ‘ಮಿಷನ್ ಇಂಪಾಸಿಬಲ್​- ಡೆಡ್ ರೆಕನಿಂಗ್ ಪಾರ್ಟ್ 1’ (Mission: Impossible- Dead Reckoning Part 1). ‘ಮಿಷನ್ ಇಂಪಾಸಿಬಲ್’ ಸರಣಿ ಚಿತ್ರಗಳ ಬಗ್ಗೆ ಬಹುತೇಕರಿಗೆ ಪರಿಚಯವಿರುತ್ತದೆ ಹಾಲಿವುಡ್ ಚಿತ್ರರಂಗದ ಅತ್ಯಂತ ಯಶಸ್ವಿ ಚಿತ್ರ ಸರಣಿಗಳಲ್ಲಿ ಅದೂ ಒಂದು. ಮೈನವಿರೇಳಿಸುವ ಆಕ್ಷನ್ ದೃಶ್ಯಗಳನ್ನು ಹೊಂದಿರುವ ಆ ಚಿತ್ರಗಳಲ್ಲಿ ನಾಯಕರಾಗಿ ಕಾಣಿಸಿಕೊಳ್ಳುವ ಟಾಮ್ ಕ್ರೂಸ್​ ಅಪಾರ ಖ್ಯಾತಿ ಗಳಿಸಿದ್ದಾರೆ. ಇದೀಗ ಅವರ ಚಿತ್ರದ ಟ್ರೇಲರ್​ ರಿಲೀಸ್​ಗೂ ಮುನ್ನವೇ ಸೋರಿಕೆಯಾಗಿದೆ.

ಪ್ಯಾರಾಮೌಂಟ್ ಪಿಕ್ಚರ್ಸ್​ ನಿರ್ಮಾಣ ಮಾಡಿರುವ ‘ಮಿಷನ್ ಇಂಪಾಸಿಬಲ್ ಚಿತ್ರ ಡೆಡ್ ರೆಕನಿಂಗ್ ಪಾರ್ಟ್​ ಒನ್’ ಚಿತ್ರದ ಟ್ರೇಲರ್​​ ಕಳೆದ ತಿಂಗಳು ಸಿನಿಮಾಕಾನ್​ನಲ್ಲಿ ಪ್ರದರ್ಶಿಸಲಾಗಿತ್ತು. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಇನ್ನೂ ಅಧಿಕೃತವಾಗಿ ರಿಲೀಸ್ ಆಗಿರಲಿಲ್ಲ. ಚಿತ್ರದ ಬಗ್ಗೆ ದೊಡ್ಡ ಮಟ್ಟದ ನಿರೀಕ್ಷೆ ಇದ್ದು, ಅಭಿಮಾನಿಗಳು ದೀರ್ಘಕಾಲದಿಂದ ಕಾದಿದ್ದರು. ಆದರೆ ಶನಿವಾರ ಆನ್​ಲೈನ್​ನಲ್ಲಿ ಇದ್ದಕ್ಕಿದ್ದಂತೆ ಟ್ರೇಲರ್ ಲೀಕ್ ಆಗಿದೆ.

ಲೀಕ್ ಆದ ಕೆಲವೇ ನಿಮಿಷಗಳಲ್ಲಿ ಅದು ವೈರಲ್ ಆಗಿದ್ದು, ಹಲವಾರು ಟ್ವಿಟರ್​ ಖಾತೆಗಳಲ್ಲಿ ಹಂಚಿಕೊಳ್ಳಲಾಗಿದೆ. ತಕ್ಷಣ ಎಚ್ಚೆತ್ತಿರುವ ನಿರ್ಮಾಣ ಸಂಸ್ಥೆಯು ರಿಪೋರ್ಟ್​ ಮಾಡಿದ್ದು, ವಿಡಿಯೋವನ್ನು ಟ್ವಿಟರ್​ನಿಂದ ತೆಗೆಯಲು ಪ್ರಯತ್ನಿಸುತ್ತಿದೆ. ಕಾಪಿರೈಟ್ ಕಾಯ್ದೆಯನ್ವಯ ಹಕ್ಕುಸ್ವಾಮ್ಯ ವರದಿಗಳನ್ನು ಅದು ಸಲ್ಲಿಸಿ, ವಿಡಿಯೋ ಪ್ರಸರಣವನ್ನು ತಡೆಗಟ್ಟಿದೆ. ಟ್ವಿಟರ್​​ ಲೀಕ್ ಆದ ಚಿತ್ರದ ಟ್ರೇಲರ್​ ಮೇಲೆ ಹಕ್ಕು ಸ್ವಾಮ್ಯದ ವರದಿ ಲಗತ್ತಿಸಿದ್ದು, ಅಂತಹ ವಿಡಿಯೋಗಳನ್ನು ನಿಷ್ಕ್ರಿಯಗೊಳಿಸಲಾಗಿದೆ. ಆದರೆ ಲೀಕ್ ಆಗಿರುವ ಮೂಲವನ್ನು ಇದುವರೆಗೆ ಪತ್ತೆಹಚ್ಚಲು ಸಾಧ್ಯವಾಗಿಲ್ಲ.

ಇದನ್ನೂ ಓದಿ
Dhaakad Collection: ‘ಧಾಕಡ್’​ ಡಿಸಾಸ್ಟರ್; ಕಂಗನಾ ನಂಬಿ ನೂರಾರು ಕೋಟಿ ರೂಪಾಯಿ ಲಾಸ್​ ಮಾಡಿಕೊಂಡ ನಿರ್ಮಾಪಕರು ಕಂಗಾಲು
ದುಬೈನಲ್ಲಿ ಕಾಲಕಳೆಯುತ್ತಿರುವ ನಟಿ ಪ್ರಿಯಾಂಕಾ ಮೋಹನ್ ಮನಮೋಹಕ ಫೋಟೋ ವೈರಲ್
ಕೊಡವ ಶೈಲಿಯಲ್ಲಿ ಸೀರೆ ಧರಿಸಿ ಮಿಂಚಿದ ರಶ್ಮಿಕಾ ಮಂದಣ್ಣ; ಅಭಿಮಾನಿಗಳಿಂದ ಸಿಕ್ತು ಮಿಲಿಯನ್​ ಲೈಕ್ಸ್​
Samantha: ಸಮಂತಾಗೆ ಕಾಶ್ಮೀರ ಯಾವಾಗಲೂ ವಿಶೇಷ; ಕಾರಣ ವಿವರಿಸಿದ ನಟಿ

ಪ್ರಸ್ತುತ ಲೀಕ್ ಆಗಿರುವ ಟ್ರೇಲರ್ 2 ನಿಮಿಷ ಅವಧಿಯುಳ್ಳದ್ದಾಗಿದೆ. ಈ ಬಗ್ಗೆ ನಿರ್ಮಾಣ ಸಂಸ್ಥೆ ಅಧಿಕೃತವಾಗಿ ಮಾಹಿತಿಯನ್ನು ಇನ್ನಷ್ಟೇ ಬಿಡುಗಡೆ ಮಾಡಬೇಕಿದೆ. ‘ಮಿಷನ್: ಇಂಪಾಸಿಬಲ್ – ಡೆಡ್ ರೆಕನಿಂಗ್ ಪಾರ್ಟ್ ಒನ್’ ಈ ಫ್ರಾಂಚೈಸ್​ನ ಏಳನೇ ಚಿತ್ರ. ಎಥಾನ್ ಹಂಟ್ ಎಂಬ ರಹಸ್ಯ ಏಜೆಂಟ್ ಪಾತ್ರದಲ್ಲಿ ಟಾಮ್ ಕ್ರೂಸ್ ಕಾಣಿಸಿಕೊಂಡಿದ್ದಾರೆ. 2023ರ ​ಜುಲೈ 14ರಂದು ಚಿತ್ರ ರಿಲೀಸ್ ಆಗಲಿದೆ. ಈ ಫ್ರಾಂಚೈಸ್ ಚಿತ್ರಗಳಿಂದ ಟಾಮ್​ ಆಕ್ಷನ್ ಸೂಪರ್​ಸ್ಟಾರ್​ ಪಟ್ಟಕ್ಕೇರಿದ್ದರು. ಈ ಹಿಂದಿನ 6 ಮಿಷನ್ ಇಂಪಾಸಿಬಲ್ ಚಿತ್ರಗಳು ಜಾಗತಿಕ ಮಾರುಕಟ್ಟೆಯಲ್ಲಿ ಸುಮಾರು 3.57 ಬಿಲಿಯನ್ ಡಾಲರ್​​ ಕಲೆಕ್ಷನ್ ಮಾಡಿವೆ.

ಭಾರತೀಯ ಚಿತ್ರರಂಗದಲ್ಲೂ ಸಿನಿಮಾ ತಂಡಗಳು ಇಂತಹ ಸಮಸ್ಯೆಗಳನ್ನು ಎದುರಿಸಿದ ಉದಾಹರಣೆಗಳು ಹಲವಾರಿದೆ. ಇತ್ತೀಚೆಗೆ ‘ಕೆಜಿಎಫ್ ಚಾಪ್ಟರ್ 2’ ಟೀಸರ್​​ ಇಂಥದ್ದೇ ಸಮಸ್ಯೆ ಎದುರಿಸಿತ್ತು. ಇದಲ್ಲದೇ ‘ಉಡ್ತಾ ಪಂಜಾಬ್’ ಸೇರಿದಂತೆ ಕೆಲವು ಸಿನಿಮಾಗಳು ರಿಲೀಸ್​ಗೂ ಮುನ್ನವೇ ಲೀಕ್ ಆದ ಉದಾಹರಣೆಗಳಿವೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 2:11 pm, Sun, 22 May 22