ಕಪಾಳಕ್ಕೆ ಹೊಡೆದ ಪ್ರಕರಣ: ವಿಲ್​ ಸ್ಮಿತ್ ಮಹತ್ವದ ನಿರ್ಧಾರ; ನಟನ ವಿರುದ್ಧ ಶಿಸ್ತಿನ ಕ್ರಮ ಎಂದ ಅಕಾಡೆಮಿ

| Updated By: ರಾಜೇಶ್ ದುಗ್ಗುಮನೆ

Updated on: Apr 02, 2022 | 1:46 PM

94 ನೇ ಅಕಾಡೆಮಿ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ನಾನು ನಡೆದುಕೊಂಡ ರೀತಿ ಸರಿ ಇರಲಿಲ್ಲ. ಹೀಗಾಗಿ, ನನ್ನ ವಿರುದ್ಧ ಯಾವ ರೀತಿಯ ಕ್ರಮಗಳನ್ನು ಬೇಕಿದ್ದರೂ ತೆಗೆದುಕೊಳ್ಳಬಹುದು. ನಾನು ಶಿಕ್ಷೆ ಅನುಭವಿಸಲು ಸಿದ್ಧಎಂದಿದ್ದಾರೆ ವಿಲ್​ ಸ್ಮಿತ್.

ಕಪಾಳಕ್ಕೆ ಹೊಡೆದ ಪ್ರಕರಣ: ವಿಲ್​ ಸ್ಮಿತ್ ಮಹತ್ವದ ನಿರ್ಧಾರ; ನಟನ ವಿರುದ್ಧ ಶಿಸ್ತಿನ ಕ್ರಮ ಎಂದ ಅಕಾಡೆಮಿ
ವಿಲ್ ಸ್ಮಿತ್
Follow us on

ಈ ವರ್ಷದ ಆಸ್ಕರ್​ ಪ್ರಶಸ್ತಿ (Oscar Awards) ಸಮಾರಂಭದಲ್ಲಿ ನಡೆದ ದುರದೃಷ್ಟಕರ ಘಟನೆ ಬಗ್ಗೆ ಎಲ್ಲರಿಗೂ ತಿಳಿದೇ ಇದೆ. ನಟ ವಿಲ್​ ಸ್ಮಿತ್​ (Will Smith) ಅವರು ವೇದಿಕೆ ಮೇಲೆ ಹಾಸ್ಯ ನಟ ಕ್ರಿಸ್​ ರಾಕ್ (Chris Rock) ಕೆನ್ನೆಗೆ ಬಾರಿಸುವ ಮೂಲಕ ಚರ್ಚೆಯ ಕೇಂದ್ರ ಬಿಂದು ಆಗಿದ್ದರು. ಈ ಘಟನೆ ಬಳಿಕ ಅವರ ಪ್ರಶಸ್ತಿಯನ್ನು ಹಿಂಪಡೆಯಲಾಗುತ್ತದೆ ಎಂದೇ ಹೇಳಲಾಗಿತ್ತು. ಆದರೆ, ಆ ರೀತಿ ಮಾಡಿಲ್ಲ. ಈ ಘಟನೆ ನಡೆದು ಒಂದು ವಾರ ಕಳೆದಿದೆ. ಈಗ ಅಕಾಡೆಮಿ ಸದಸ್ಯತ್ವಕ್ಕೆ ವಿಲ್ ಸ್ಮಿತ್​ ಅವರು ರಾಜೀನಾಮೆ ನೀಡಿದ್ದಾರೆ. ಅಲ್ಲದೆ, ಯಾವುದೇ ರೀತಿಯ ಶಿಕ್ಷೆಯನ್ನು ಅನುಭವಿಸಲು ತಾವು ಸಿದ್ಧ ಎಂದಿದ್ದಾರೆ.

‘94 ನೇ ಅಕಾಡೆಮಿ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ನಾನು ನಡೆದುಕೊಂಡ ರೀತಿ ಸರಿ ಇರಲಿಲ್ಲ. ಹೀಗಾಗಿ, ನನ್ನ ವಿರುದ್ಧ ಯಾವ ರೀತಿಯ ಕ್ರಮಗಳನ್ನು ಬೇಕಿದ್ದರೂ ತೆಗೆದುಕೊಳ್ಳಬಹುದು. ನಾನು ಶಿಕ್ಷೆ ಅನುಭವಿಸಲು ಸಿದ್ಧ. ನಾನು ಅಕಾಡೆಮಿ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತಿದ್ದೇನೆ’ ಎಂದು ಅವರು ಹೇಳಿದ್ದಾರೆ.

ಅಕಾಡೆಮಿಯ ಅಧ್ಯಕ್ಷ ಡೇವಿಡ್​ ರುಬಿನ್ ಅವರು ವಿಲ್​ ಸ್ಮಿತ್​ ಅವರ ರಾಜೀನಾಮೆ ಪತ್ರವನ್ನು ಅಂಗೀಕರಿಸಿದ್ದಾರೆ. ‘ಏಪ್ರಿಲ್ 18ರಂದು ನಮ್ಮ ಬೋರ್ಡ್​ ಮಂಡಳಿಯ ಸಭೆ ಇದೆ. ಅದಕ್ಕೂ ಮುಂಚಿತವಾಗಿ, ಅಕಾಡೆಮಿಯ ನಿಯಮಗಳ ಉಲ್ಲಂಘನೆ ಮಾಡಿದ ಸ್ಮಿತ್ ವಿರುದ್ಧ ಶಿಸ್ತಿನ ಕ್ರಮ ಕೈಗೊಳ್ಳುತ್ತೇವೆ’ ಎಂದಿದ್ದಾರೆ ಅವರು.

ಘಟನೆ ಏನು?

ಎಂದಿನಂತೆ ಆಸ್ಕರ್​ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಖುಷಿಖುಷಿಯಾಗಿ ನಡೆಯುತ್ತಿತ್ತು. ಅತ್ಯುತ್ತಮ ಡಾಕ್ಯುಮೆಂಟರಿ ಪ್ರಶಸ್ತಿಯನ್ನು ವಿತರಿಸಲು ಕ್ರಿಸ್​ ರಾಕ್​ ಅವರನ್ನು ವೇದಿಕೆಗೆ ಕರೆಯಲಾಗಿತ್ತು. ಈ ವೇಳೆ ಅವರು ಸುಮ್ಮನಿರಲಾರದೇ ವಿಲ್​ ಸ್ಮಿತ್​ ಪತ್ನಿ ಜೇಡಾ ಪಿಂಕೆಟ್​ ಸ್ಮಿತ್​ ಬಗ್ಗೆ ಮಾತನಾಡಿದರು. ಜೇಡಾ ಪಿಂಕೆಟ್​​ ಸ್ಮಿತ್​ ಬಗ್ಗೆ ಅವರು ಜೋಕ್ ಕೂಡ​ ಮಾಡಿದರು. ಅದನ್ನು ಕೇಳಿ ಇಡೀ ಸಭಾಂಗಣ ಜೋರಾಗಿ ನಕ್ಕಿತು. ಒಂದು ಕ್ಷಣ ವಿಲ್​ ಸ್ಮಿತ್​ ಕೂಡ ನಕ್ಕರು. ಆದರೆ ಅಲ್ಲಿ ಮರುಕ್ಷಣ ನಡೆದಿದ್ದು ನಿಜಕ್ಕೂ ಶಾಕಿಂಗ್​. ಕೂಡಲೇ ವೇದಿಕೆ ಏರಿದ ವಿಲ್​ ಸ್ಮಿತ್​ ಅವರು ಕ್ರಿಸ್​ ರಾಕ್​ ಮುಖಕ್ಕೆ ಬಾರಿಸಿದರು. ಸದ್ಯ ಈ ವಿಡಿಯೋ ಸಖತ್​ ವೈರಲ್​ ಆಗುತ್ತಿದೆ. ಇದಕ್ಕೆ ಅನೇಕರು ಖಂಡನೆ ವ್ಯಕ್ತಪಡಿಸಿದ್ದರು.

ಆಸ್ಕರ್ ಪ್ರತಿಕ್ರಿಯೆ ಏನಾಗಿತ್ತು?

‘ಅಕಾಡೆಮಿ ಯಾವುದೇ ರೀತಿಯ ಹಿಂಸೆಯನ್ನು ಸಹಿಸುವುದಿಲ್ಲ. ಪ್ರಪಂಚದಾದ್ಯಂತದ ಗೆಳೆಯರು ಮತ್ತು ಚಲನಚಿತ್ರ ಪ್ರೇಮಿಗಳಿಂದ ಮನ್ನಣೆಯ ಈ ಕ್ಷಣಕ್ಕೆ ಅರ್ಹರಾಗಿರುವ 94 ನೇ ಅಕಾಡೆಮಿ ಪ್ರಶಸ್ತಿ ವಿಜೇತರನ್ನು ಕೊಂಡಾಡಲು ನಾವು ಸಂತಸ ವ್ಯಕ್ತಪಡಿಸುತ್ತೇವೆ’ ಎಂದು ಅಕಾಡೆಮಿ ಟ್ವೀಟ್​ ಮಾಡಿದೆ. ಆದರೆ, ಪ್ರಶಸ್ತಿ ಹಿಂಪಡೆಯುವ ಬಗ್ಗೆ ಯಾವುದೇ ನಿರ್ಧಾರವನ್ನು ಪ್ರಕಟಿಸಿಲ್ಲ.
ಈ ರೀತಿ ಆಗಿದ್ದರ ಬಗ್ಗೆ ಸ್ವತಃ ವಿಲ್​ ಸ್ಮಿತ್​ ಅವರಿಗೂ ಬೇಸರ ಇದೆ. ಈಗ ಅವರು ಕ್ಷಮೆ ಕೇಳಿದ್ದಾರೆ. ‘ನಾನು ಅಕಾಡೆಮಿಯ ಕ್ಷಮೆ ಕೇಳುತ್ತೇನೆ. ನಾಮನಿರ್ದೇಶಕಗೊಂಡ ಎಲ್ಲರಲ್ಲೂ ಕ್ಷಮೆ ಕೇಳುತ್ತೇನೆ’ ಎಂದು ಅವರು ವೇದಿಕೆ ಮೇಲೆ ಕಣ್ಣೀರು ಹಾಕಿದ್ದಾರೆ. ಆ ವಿಡಿಯೋ ಕೂಡ ವೈರಲ್​ ಆಗುತ್ತಿದೆ.

ಇದನ್ನೂ ಓದಿ: ಕೆನ್ನೆಗೆ ಹೊಡೆದು ವಿಲ್​ ಸ್ಮಿತ್​ ರಂಪಾಟ ಮಾಡಿದ ಪ್ರಕರಣ; ಆಸ್ಕರ್ ಪ್ರಶಸ್ತಿ ಹಿಂಪಡೆಯಲಿದೆ ಅಕಾಡೆಮಿ?

ಮುತ್ತು ಕೊಟ್ಟ ಪತ್ರಕರ್ತನ ಕೆನ್ನೆಗೆ ಬಾರಿಸಿದ್ದ ವಿಲ್​ ಸ್ಮಿತ್​; ಆಸ್ಕರ್​ ಗಲಾಟೆ ಬಳಿಕ ಮತ್ತೊಂದು ವಿಡಿಯೋ ವೈರಲ್​