90 ದಿನಗಳ ಬಳಿಕ ಜೈಲಿನಿಂದ ಹೊರಬಂದ ಪೈರಸಿ ಕಿಂಗ್ ಐಬೊಮ್ಮ ರವಿ

Ibomma Ravi: ಸಿನಿಮಾ ನಿರ್ಮಾಪಕರ ಪಾಲಿಗೆ ಅಪ್ಪಟ ವಿಲನ್ ಮತ್ತು ಸಾಮಾನ್ಯ ಜನರು, ಸಿನಿಮಾ ಪ್ರೇಮಿಗಳ ಪಾಲಿಗೆ ರಾಬಿನ್​​ಹುಡ್ ಆಗಿದ್ದ ‘ಪೈರಸಿ ಕಿಂಗ್’ ಐಬೊಮ್ಮ ರವಿ 90 ದಿನಗಳ ಬಳಿಕ ಚಂಚಲಗೂಡ ಜೈಲಿನಿಂದ ಬಿಡುಗಡೆ ಆಗಿದ್ದಾರೆ. ಕೆಲವು ಕಠಿಣ ಷರತ್ತುಗಳ ಬಳಿಕ ನ್ಯಾಯಾಲಯವು ಐಬೊಮ್ಮ ರವಿಗೆ ಜಾಮೀನು ನೀಡಿದೆ. ಇಲ್ಲಿದೆ ಪ್ರಕರಣದ ಬಗ್ಗೆ ಪೂರ್ಣ ಮಾಹಿತಿ...

90 ದಿನಗಳ ಬಳಿಕ ಜೈಲಿನಿಂದ ಹೊರಬಂದ ಪೈರಸಿ ಕಿಂಗ್ ಐಬೊಮ್ಮ ರವಿ
Ibomma Ravi

Updated on: Feb 19, 2026 | 11:31 AM

ಪೈರಸಿ (Piracy) ಪ್ರಕರಣದಲ್ಲಿ ಹೈದರಾಬಾದ್ ಪೊಲೀಸರಿಂದ ಬಂಧನಕ್ಕೆ ಒಳಗಾಗಿದ್ದ ರವಿ ಅಲಿಯಾಸ್ ಐಬೊಮ್ಮ ರವಿ ನಿನ್ನೆ ಚಂಚಗುಡ ಜೈಲಿನಿಂದ ಜಾಮೀನಿನ ಮೇಲೆ ಹೊರಬಂದಿದ್ದಾರೆ. ಐಬೊಮ್ಮ ಸೇರಿದಂತೆ ಕೆಲವು ಪೈರಸಿ ವೆಬ್​​ಸೈಟ್ ಮತ್ತು ಅಪ್ಲಿಕೇಶನ್​​ಗಳನ್ನು ನಡೆಸುತ್ತದ್ದ ರವಿಯನ್ನು ಮೂರು ತಿಂಗಳ ಹಿಂದೆ ಪೊಲೀಸರು ಬಂದಿಸಿದ್ದರು. ಐಬೊಮ್ಮ ರವಿ ವಿರುದ್ಧ ಪೈರಸಿಯ ಹಲವಾರು ಕೇಸುಗಳು ದಾಖಲಾಗಿದ್ದವು. ವಿದೇಶದಲ್ಲಿ ಕೂತು ಪೈರಸಿ ವೆಬ್​​ಸೈಟ್ ನಡೆಸುತ್ತಿದ್ದ ರವಿ, ಕೌಟುಂಬಿಕ ಕಾರಣಗಳಿಗಾಗಿ ಹೈದರಾಬಾದ್​​ಗೆ ಬಂದಾಗ ಆತನನ್ನು ಪೊಲೀಸರು ಬಂಧಿಸಿದ್ದರು.

ಆದರೆ ಬಂಧಿಸಿದ 90 ದಿನಗಳ ಬಳಿಕವೂ ಪೊಲೀಸರು ರವಿ ವಿರುದ್ಧ ಚಾರ್ಜ್​​ ಶೀಟ್ ದಾಖಲು ಮಾಡಿರಲಿಲ್ಲ. ಇದರ ಆಧಾರದ ಮೇಲೆ ಐಬೊಮ್ಮ ರವಿ ಜಾಮೀನು ಪಡೆದಿದ್ದಾರೆ. ಕೆಲವು ಕಠಿಣ ಷರತ್ತುಗಳನ್ನು ವಿಧಿಸಿರುವ ನ್ಯಾಯಾಲಯ ರವಿಗೆ ಮಧ್ಯಂತರ ಜಾಮೀನು ಮಂಜೂರು ಮಾಡಿದೆ. ಪ್ರತಿ ದಿನವೂ ತನಿಖಾಧಿಕಾರಿ ಎದುರು ಹಾಜರಾಗಿ ಸಹಿ ಹಾಕುವುದು, ತನ್ನ ಪಾಸ್​​ಪೋರ್ಟ್ ಮತ್ತು ವಿಸಾಗಳನ್ನು ಪೊಲೀಸರಿಗೆ ಒಪ್ಪಿಸಬೇಕು, ದೇಶ ಬಿಟ್ಟು ಹೊರ ಹೋಗುವ ಪ್ರಯತ್ನ ಮಾಡುವಂತಿಲ್ಲ ಮತ್ತು ಪೈರಸಿ ವೆಬ್​ಸೈಟ್​​ಗಳ ಚಟುವಟಿಕೆಯನ್ನು ಸಂಪೂರ್ಣವಾಗಿ ನಿಲ್ಲಿಸಬೇಕು ಎಂಬ ಷರತ್ತುಗಳನ್ನು ನ್ಯಾಯಾಲಯ ಹಾಕಿದೆ.

ಪೊಲೀಸರ ಪರವಾಗಿ ವಾದಿಸಿದ ವಕೀಲರು, ‘ರವಿ ಸಾವಿರಾರು ಕೋಟಿ ನಷ್ಟಕ್ಕೆ ಕಾರಣವಾಗಿದ್ದು, ಆತ ವಿದೇಶಿ ನಾಗರೀಕ ಸಹ ಆಗಿದ್ದಾನೆ. ಹಾಗಾಗಿ ಆತ ಪಲಾಯನ ಮಾಡುವ ಅಪಾಯ ಇದೆ’ ಎಂದಿದ್ದರು. ಆದರೆ 90 ದಿನಗಳ ಬಳಿಕವೂ ಚಾರ್ಜ್ ಶೀಟ್ ಸಲ್ಲಿಸದೇ ಇರುವುದನ್ನೇ ಮುಖ್ಯವಾಗಿ ಪರಿಗಣಿಸಿದ ನ್ಯಾಯಾಧೀಶರು ರವಿಗೆ ಷರತ್ತುಗಳನ್ನು ವಿಧಿಸಿ ಮಧ್ಯಂತರ ಜಾಮೀನು ನೀಡಿದ್ದಾರೆ.

ಇದನ್ನೂ ಓದಿ:‘ಮಾರ್ಕ್’ಗೆ ಪೈರಸಿ ಕಾಟ, ಸುದೀಪ್ ತೆಗೆಸಿದ ಪೈರಸಿ ಲಿಂಕ್ ಎಷ್ಟು?

ಐಬೊಮ್ಮ ರವಿ, ಸಾವಿರಾರು ಸಿನಿಮಾಗಳನ್ನು ಪೈರಸಿ ಮಾಡಿದ್ದ. ವಿದೇಶದಲ್ಲೇ ಕೂತು ತನ್ನ ಐಬೊಮ್ಮ ಸೇರಿದಂತೆ ಹಲವು ವೆಬ್​​ಸೈಟ್​​ಗಳಿಗೆ ಉಚಿತವಾಗಿ ಸಿನಿಮಾಗಳನ್ನು ಅಪ್​ಲೋಡ್ ಮಾಡುತ್ತಿದ್ದ. ಕೆಲವು ಬಾರಿಯಂತೂ ಸಿನಿಮಾಗಳು ಬಿಡುಗಡೆ ಆಗುವ ಮುಂಚೆಯೇ ಅವುಗಳನ್ನು ವೆಬ್​​ಸೈಟ್​​ಗೆ ಅಪ್​ಲೋಡ್ ಮಾಡಿಬಿಡುತ್ತಿದ್ದ. ತೆಲುಗು ಸಿನಿಮಾಗಳೇ ಹೆಚ್ಚಾಗಿ ಐಬೊಮ್ಮ ರವಿಯ ಟಾರ್ಗೆಟ್ ಆಗಿರುತ್ತಿದ್ದವು. ಕೆಲ ವರದಿಗಳ ಪ್ರಕಾರ, ಐಬೊಮ್ಮ ರವಿ ಒಬ್ಬನಿಂದಲೇ ತೆಲುಗು ಚಿತ್ರರಂಗಕ್ಕೆ ಸಾವಿರಾರು ಕೋಟಿ ನಷ್ಟವಾಗಿದೆ. ತೆಲುಗು ಚಿತ್ರರಂಗದ ಹಲವು ನಿರ್ಮಾಣ ಸಂಸ್ಥೆಗಳು, ನಿರ್ಮಾಪಕರ ಸಂಘ, ಫಿಲಂ ಚೇಂಬರ್​​ಗಳು ರವಿ ವಿರುದ್ಧ ಹಲವು ಬಾರಿ ದೂರು ನೀಡಿದ್ದವು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us