ನಟಿ ರುಕ್ಮಿಣಿ ವಸಂತ್ ಎಐ ವಿಡಿಯೋ ಪ್ರಕರಣ: ಬೆಂಗಳೂರಲ್ಲಿ ಮೂವರು ಆರೋಪಿಗಳ ಬಂಧನ
ಪ್ಯಾನ್ ಇಂಡಿಯಾ ಮಟ್ಟದಲ್ಲಿ ಜನಪ್ರಿಯತೆ ಪಡೆದಿರುವ ನಟಿ ರುಕ್ಮಿಣಿ ವಸಂತ್ ಅವರು ಬಿಕಿನಿ ಧರಿಸಿ ಫೋಟೋಶೂಟ್ ಮಾಡಿದ ರೀತಿಯಲ್ಲಿ ವಿಡಿಯೋ ಮತ್ತು ಫೋಟೋಗಳನ್ನು ಎಡಿಟ್ ಮಾಡಲಾಗಿತ್ತು. ಎಐ ತಂತ್ರಜ್ಞಾನ ಬಳಸಿಕೊಂಡು ಈ ಕೃತ್ಯ ಎಸಗಿದ್ದ ಆರೋಪಿಗಳು ಈಗ ಬೆಂಗಳೂರು ಸೈಬರ್ ಪೊಲೀಸರ ಬಲೆಗೆ ಬಿದ್ದಿದ್ದಾರೆ.

ಕನ್ನಡ ಚಿತ್ರರಂಗದ ಖ್ಯಾತ ನಟಿ ರುಕ್ಮಿಣಿ ವಸಂತ್ (Rukmini Vasanth) ಅವರ ಫೋಟೋ ಮತ್ತು ವಿಡಿಯೋಗಳನ್ನು ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನ ಬಳಸಿ ಡೀಪ್‌ಫೇಕ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದ ಮೂವರು ಆರೋಪಿಗಳನ್ನು ಸೈಬರ್ ಕಮಾಂಡ್ ಪೊಲೀಸರು (Bengaluru Cyber Police) ಯಶಸ್ವಿಯಾಗಿ ಬಂಧಿಸಿದ್ದಾರೆ. ಬಂಧಿತರನ್ನು ಬೆಂಗಳೂರು ನಿವಾಸಿಗಳಾದ ಚಂದ್ರಕಾಂತ್ (33), ರಂಜಿತ್ (25) ಮತ್ತು ಬಾಗಲಕೋಟೆ ಮೂಲದ ರವಿಕುಮಾರ್ (24) ಎಂದು ಗುರುತಿಸಲಾಗಿದೆ.
ಕೃತ್ಯಕ್ಕೆ ಬಳಸಲಾಗಿದ್ದ ಮೂರು ಮೊಬೈಲ್ ಫೋನ್‌ಗಳನ್ನು ಬಂಧಿತ ಆರೋಪಿಗಳಿಂದ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ಎಐ ತಂತ್ರಜ್ಞಾನ ಎಲ್ಲ ಕ್ಷೇತ್ರದಲ್ಲೂ ಬಳಕೆ ಆಗುತ್ತಿದೆ. ಆದರೆ ಕೆಲವರು ಈ ತಂತ್ರಜ್ಞಾನವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಅಂಥವರಿಗೆ ಪಾಠ ಕಲಿಸಲು ರುಕ್ಮಿಣಿ ವಸಂತ್ ಅವರು ಕಾನೂನಿನ ಹಾದಿ ಹಿಡಿದಿದ್ದಾರೆ.
ಎಐ ತಂತ್ರಜ್ಞಾನವನ್ನು ದುರ್ಬಳಕೆ ಮಾಡಿಕೊಂಡು ನಟಿಯ ಮುಖವನ್ನು ಬೇರೆ ವಿಡಿಯೋಗಳಿಗೆ ಎಡಿಟ್ ಮಾಡಿ, ಸೋಶಿಯಲ್ ಮೀಡಿಯಾದಲ್ಲಿ ಹರಿಬಿಡುತ್ತಿದ್ದ ಈ ಮೂವರನ್ನು ಸದ್ಯ ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಈ ಜಾಲದ ಹಿಂದೆ ಬೇರೆ ಯಾರಾದರೂ ಇದ್ದಾರೆಯೇ ಅಥವಾ ಇವರು ಇಂತಹ ಇನ್ಯಾವ ಕೃತ್ಯಗಳಲ್ಲಿ ಭಾಗಿಯಾಗಿದ್ದಾರೆ ಎಂಬ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಸೆಲೆಬ್ರಿಟಿಗಳನ್ನು ಗುರಿಯಾಗಿಸಿಕೊಂಡು ಡೀಪ್‌ಫೇಕ್ ವಿಡಿಯೋಗಳನ್ನು ಸೃಷ್ಟಿಸುವ ಜಾಲ ಸಕ್ರಿಯವಾಗಿದೆ. ಈ ಹಿಂದೆ ರಶ್ಮಿಕಾ ಮಂದಣ್ಣ ಅವರಿಗೂ ಇಂಥ ಸಮಸ್ಯೆ ಎದುರಾಗಿತ್ತು. ರುಕ್ಮಿಣಿ ವಸಂತ್ ಅವರ ನಕಲಿ ವಿಡಿಯೋ ಮತ್ತು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆಯೇ ಅವರು ಸೈಬರ್ ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ಕ್ರಮ ತೆಗೆದುಕೊಂಡಿದ್ದು ಆರೋಪಿಗಳಿಗೆ ನಡುಕ ಶುರುವಾಗಿದೆ.
ಇದನ್ನೂ ಓದಿ: ರುಕ್ಮಿಣಿ ವಸಂತ್ ಡೀಪ್‌ಫೇಕ್ ವಿಡಿಯೋ ಹಂಚಿಕೊಂಡವರಿಗೆ ನಡುಕ; 29 ಅಕೌಂಟ್‌ಗಳ ವಿರುದ್ಧ ಎಫ್‌ಐಆರ್
ಎಐ ತಂತ್ರಜ್ಞಾನದ ಮೂಲಕ ಸಾರ್ವಜನಿಕವಾಗಿ ರುಕ್ಮಿಣಿ ವಸಂತ್ ಅವರ ಮಾನಹಾನಿ ಮಾಡಲು ಯತ್ನಿಸಿದ ಈ ಕೃತ್ಯದ ಬೆನ್ನತ್ತಿದ ಸೈಬರ್ ಕಮಾಂಡ್ ಪೊಲೀಸರು, ತಾಂತ್ರಿಕ ಸಾಕ್ಷ್ಯಾಧಾರಗಳ ನೆರವಿನಿಂದ ಆರೋಪಿಗಳಿರುವ ಸ್ಥಳವನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ನಕಲಿ ವಿಡಿಯೋ ಹಂಚಿಕೊಳ್ಳುವವರಿಗೆ ಈಗ ಭಯ ಹುಟ್ಟಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




