ತೆಲುಗಿನ ಖ್ಯಾತ ನಿರ್ಮಾಣ ಸಂಸ್ಥೆ ‘ಮೈತ್ರಿ ಮೂವೀ ಮೇಕರ್ಸ್’ (Mythri Movie Makers) ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಸೋಮವಾರ (ಡಿ.12) ಈ ದಾಳಿ ನಡೆದಿದ್ದು, ಮಂಗಳವಾರ ಕೂಡ ಪರಿಶೀಲನೆ ಮುಂದುವರಿದಿದೆ. ಈ ಸಂಸ್ಥೆ ಮೇಲೆ ಜಿಎಸ್ಟಿ ವಂಚನೆ ಆರೋಪ ಎದುರಾಗಿದೆ. ಅಲ್ಲು ಅರ್ಜುನ್ ನಟನೆಯ ‘ಪುಷ್ಟ 2’ (Pushpa 2) ಸೇರಿದಂತೆ ಅನೇಕ ಸಿನಿಮಾಗಳನ್ನು ಪ್ಯಾನ್ ಇಂಡಿಯಾ ಮಟ್ಟದಲ್ಲಿ ನಿರ್ಮಿಸುತ್ತಿರುವ ಈ ಸಂಸ್ಥೆಯ ಹಣಕಾಸಿನ ವ್ಯವಹಾರದ ಮೇಲೆ ಐಟಿ ಅಧಿಕಾರಿಗಳು ಕಣ್ಣಿಟ್ಟಿದ್ದಾರೆ. ಬೆಂಗಳೂರು, ಹೈದರಾಬಾದ್ ಕಚೇರಿ ಸೇರಿ 15 ಕಡೆಗಳಲ್ಲಿ ಏಕಕಾಲಕ್ಕೆ ದಾಳಿ (IT Raid) ಮಾಡಲಾಗಿದೆ. ‘ಮೈತ್ರಿ ಮೂವೀ ಮೇಕರ್ಸ್’ನಲ್ಲಿ ವಿದೇಶಿ ಹಣ ಹೂಡಿಕೆ ಆಗಿದೆ ಎಂಬ ಮಾಹಿತಿ ಆಧರಿಸಿ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.
‘ಮೈತ್ರಿ ಮೂವೀ ಮೇಕರ್ಸ್’ ಸಂಸ್ಥೆಯ ಪ್ರಮುಖರಾದ ಎರ್ನೇನು ನವೀನ್, ಚೆರುಕುರಿ ಮೋಹನ್, ಯಲಮಂಚಿಲಿ ರವಿಶಂಕರ್ ಅವರ ನಿವಾಸ ಮೇಲೂ ಐಟಿ ದಾಳಿ ಮಾಡಲಾಗಿದೆ. ಟಾಲಿವುಡ್ನಲ್ಲಿ ಪ್ರತಿಷ್ಠಿತ ನಿರ್ಮಾಣ ಸಂಸ್ಥೆಯಾಗಿ ‘ಮೈತ್ರಿ ಮೂವೀ ಮೇಕರ್ಸ್’ ಬೆಳೆದು ನಿಂತಿದೆ. ‘ಶ್ರೀಮಂತುಡು’, ‘ರಂಗಸ್ಥಲಂ’, ‘ಜನತಾ ಗ್ಯಾರೇಜ್’, ‘ಉಪ್ಪೆನಾ’, ‘ಪುಷ್ಪ’, ‘ಸರ್ಕಾರು ವಾರಿ ಪಾಟ’ ಸೇರಿದಂತೆ ಅನೇಕ ಸಿನಿಮಾಗಳು ಈ ಸಂಸ್ಥೆ ಮೂಲಕ ಮೂಡಿಬಂದಿದೆ.
ಇದನ್ನೂ ಓದಿ: Pushpa 2: ‘ಪುಷ್ಪ 2’ ಚಿತ್ರಕ್ಕೆ ಭಯಾನಕ ವಿಲನ್ ಎಂಟ್ರಿ? ವಿದೇಶಿ ನಟನಿಗೆ ಮಣೆ ಹಾಕಿದ ನಿರ್ದೇಶಕ ಸುಕುಮಾರ್
ಸಾಲು ಸಾಲು ಸಿನಿಮಾಗಳಿಗೆ ‘ಮೈತ್ರಿ ಮೂವೀ ಮೇಕರ್ಸ್’ ಬಂಡವಾಳ ಹೂಡುತ್ತಿದೆ. ‘ವೀರ ಸಿಂಹ ರೆಡ್ಡಿ’, ‘ವಾಲ್ತೇರ್ ವೀರಯ್ಯ’, ‘ಖುಷಿ’, ‘ಉಸ್ತಾದ್ ಭಗತ್ ಸಿಂಗ್’, ‘ಪುಷ್ಪ 2’ ಮುಂತಾದ ಸಿನಿಮಾಗಳು ಈ ಸಂಸ್ಥೆ ಮೂಲಕ ತಯಾರಾಗುತ್ತಿವೆ. ಎಲ್ಲ ಸೇರಿ ಒಟ್ಟು 700 ಕೋಟಿ ರೂಪಾಯಿ ಬಂಡವಾಳ ಹೂಡಲಾಗುತ್ತಿದೆ. ಇದರ ಆದಾಯದ ಮೂಲದ ಬಗ್ಗೆ ಸೂಕ್ತ ದಾಖಲೆ ಒದಗಿಸಿಲ್ಲ ಎಂದು ಹೇಳಲಾಗುತ್ತಿದೆ. ಆ ಹಿನ್ನೆಲೆಯಲ್ಲಿ ಐಟಿ ದಾಳಿ ಮಾಡಲಾಗಿದೆ.
ಇದನ್ನೂ ಓದಿ: Pushpa 2: ‘ಪುಷ್ಪ 2’ ಚಿತ್ರಕ್ಕೆ ಸಂಭಾವನೆ ಪಡೆಯಲ್ವಾ ನಿರ್ದೇಶಕ ಸುಕುಮಾರ್? ಇಲ್ಲಿದೆ ದೊಡ್ಡ ಪ್ಲ್ಯಾನ್
ಈ ಸಂಸ್ಥೆಯಿಂದ ಕಳೆದ ವರ್ಷ ನಡೆದ ಹಣಕಾಸಿನ ವ್ಯವಹಾರದ ದಾಖಲೆಗಳನ್ನು ಪರಿಶೀಲಿಸಲಾಗುತ್ತಿದೆ. 2022-23ನೇ ಸಾಲಿನ ಐಟಿ ರಿಟರ್ನ್ಸ್ನಲ್ಲಿ ಆದಾಯದ ಮೂಲದ ಬಗ್ಗೆ ಸರಿಯಾಗಿ ಮಾಹಿತಿ ಒದಗಿಸಿಲ್ಲ. ಆ ಕಾರಣದಿಂದಲೇ ಐಟ ದಾಳಿ ನಡೆದಿದೆ ಎಂದು ವರದಿ ಆಗಿದೆ. ಈ ದಾಳಿಯಿಂದಾಗಿ ಮುಂಬರುವ ಸಿನಿಮಾಗಳ ನಿರ್ಮಾಣದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.
‘ಜನ ಸೇನಾ’ ಪಕ್ಷದ ಮುಖಂಡ ಪವನ್ ಕಲ್ಯಾಣ್ ಅವರ ‘ಉಸ್ತಾದ್ ಭಗತ್ ಸಿಂಗ್’ ಸಿನಿಮಾಗೆ ‘ಮೈತ್ರಿ ಮೂವೀ ಮೇಕರ್ಸ್’ ಬಂಡವಾಳ ಹೂಡುತ್ತಿದೆ. ಈ ಚಿತ್ರಕ್ಕೆ ಭಾನುವಾರ (ಡಿ.11) ಮುಹೂರ್ತ ಮಾಡಲಾಗಿತ್ತು. ಅದರ ಬೆನ್ನಲ್ಲೇ ಐಟಿ ದಾಳಿ ನಡೆದಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.