ಕಾಲಿವುಡ್ನ ಖ್ಯಾತ ನಟ ಧನುಷ್ ಅವರಿಗೆ ದೇಶಾದ್ಯಂತ ಅಭಿಮಾನಿಗಳಿದ್ದಾರೆ. ತಮಿಳು ಚಿತ್ರರಂಗಕ್ಕೆ ಮಾತ್ರ ಸೀಮಿತವಾಗಿರದೇ ಅವರು ಬೇರೆ ಬೇರೆ ಭಾಷೆಗಳಲ್ಲಿ ಅಭಿನಯಿಸುವ ಮೂಲಕ ದೊಡ್ಡ ಫ್ಯಾನ್ ಫಾಲೋಯಿಂಗ್ ಹೊಂದಿದ್ದಾರೆ. ಸದ್ಯ ಅವರ ಕೈಯಲ್ಲಿ ಹಲವು ಪ್ರಾಕೆಜ್ಟ್ಗಳಿವೆ. ಈ ವರ್ಷ ತೆರೆಕಂಡ ‘ಕರ್ಣನ್’ ಸಿನಿಮಾ ದೊಡ್ಡ ಮಟ್ಟದಲ್ಲಿ ಯಶಸ್ಸು ಪಡೆದುಕೊಂಡಿತು. ಆ ಬಳಿಕ ಧನುಷ್ ಸಂಭಾವನೆಯಲ್ಲಿ ದೊಡ್ಡ ಮಟ್ಟದ ಏರಿಕೆ ಆಗಿದೆ ಎಂಬ ಸುದ್ದಿ ಕೇಳಿಬರುತ್ತಿದೆ.
ಇಷ್ಟು ದಿನಗಳವರೆಗೆ ಪ್ರತಿ ಸಿನಿಮಾಗೆ ಧನುಷ್ 10ರಿಂದ 15 ಕೋಟಿ ರೂ. ಪಡೆದುಕೊಳ್ಳುತ್ತಿದ್ದರು. ಆದರೆ ಹೊಸದೊಂದು ಸಿನಿಮಾಗೆ ಅವರು 50 ಕೋಟಿ ರೂ. ಡಿಮ್ಯಾಂಡ್ ಮಾಡಿದ್ದಾರೆ ಎನ್ನಲಾಗಿದೆ. ಅಷ್ಟಕ್ಕೂ ಅವರು ಸಂಭಾವನೆಯಲ್ಲಿ ಏಕಾಏಕಿ ಇಷ್ಟು ಏರಿಕೆ ಮಾಡಿಕೊಳ್ಳಲು ಕಾರಣ ಏನು? ಖ್ಯಾತ ನಿರ್ದೇಶಕ ಶೇಖರ್ ಕಮ್ಮುಲ ಜೊತೆ ಸೇರಿ ಧನುಷ್ ಒಂದು ಹೊಸ ಸಿನಿಮಾ ಮಾಡಲಿದ್ದಾರೆ. ಆ ಚಿತ್ರ ಮೂರು ಭಾಷೆಯಲ್ಲಿ ತಯಾರಾಗಲಿದೆ. ಹಾಗಾಗಿ ಧನುಷ್ ಇಷ್ಟು 50 ಕೋಟಿ ರೂ. ಚಾರ್ಜ್ ಮಾಡುತ್ತಿದ್ದಾರೆ ಎಂಬ ಸುದ್ದಿ ಹರಡಿದೆ.
ಟಾಲಿವುಡ್ನಲ್ಲಿ ಹಲವು ಹಿಟ್ ಸಿನಿಮಾಗಳನ್ನು ನೀಡಿರುವ ಶೇಖರ್ ಕಮ್ಮುಲ ಜೊತೆ ಧನುಷ್ ಕೈ ಜೋಡಿಸುತ್ತಿರುವುದರಿಂದ ಸಹಜವಾಗಿಯೇ ಈ ಸಿನಿಮಾ ಮೇಲೆ ಹೈಪ್ ಸೃಷ್ಟಿ ಆಗಿದೆ. ತೆಲುಗು, ತಮಿಳು ಹಾಗೂ ಹಿಂದಿಯಲ್ಲಿ ಈ ಸಿನಿಮಾ ಮೂಡಿಬರಲಿದೆ. ಚಿತ್ರಕ್ಕಿನ್ನೂ ಶೀರ್ಷಿಕೆ ಅಂತಿಮವಾಗಿಲ್ಲ. ಅಂದಾಜು 120 ಕೋಟಿ ರೂ. ಬಜೆಟ್ನಲ್ಲಿ ಈ ಸಿನಿಮಾ ತಯಾರಾಗಲಿದೆ ಎಂಬುದು ಕೇಳಿಬರುತ್ತಿರುವ ಮಾಹಿತಿ.
ಕಾಲಿವುಡ್ಗೆ ಮಾತ್ರ ಸೀಮಿತವಾಗದ ಧನುಷ್ ಅವರು ಬಾಲಿವುಡ್ನಲ್ಲೂ ಸಿನಿಮಾ ಮಾಡಿದ್ದಾರೆ. ರಾಂಜಣಾ, ಶಮಿತಾಬ್ ಬಳಿಕ ಈಗ ಹಿಂದಿಯಲ್ಲಿ ಅವರು ಅತರಂಗಿ ರೇ ಸಿನಿಮಾ ಮಾಡುತ್ತಿದ್ದಾರೆ. ಅದರಲ್ಲಿ ಅಕ್ಷಯ್ ಕುಮಾರ್ ಮತ್ತು ಸಾರಾ ಅಲಿ ಖಾನ್ ಜೊತೆ ಅವರು ತೆರೆ ಹಂಚಿಕೊಳ್ಳುತ್ತಿದ್ದಾರೆ. ಅಲ್ಲದೆ, ಹಾಲಿವುಡ್ನ ದಿ ಗ್ರೇ ಮ್ಯಾನ್ ಚಿತ್ರದಲ್ಲಿ ಧನುಷ್ ನಟಿಸುತ್ತಿದ್ದು, ಆ ಸಿನಿಮಾ ಬಗ್ಗೆ ದೊಡ್ಡ ಮಟ್ಟದ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ.
ಸದ್ಯ ತಮ್ಮ ಹಾಲಿವುಡ್ ಚಿತ್ರದ ಶೂಟಿಂಗ್ಗಾಗಿ ಅವರು ಅಮೆರಿಕಕ್ಕೆ ತೆರಳಿದ್ದಾರೆ. ಇದೇ ವೇಳೆ ನಟ ರಜನಿಕಾಂತ್ ಅವರ ಆರೋಗ್ಯ ತಪಾಸಣೆ ಕೂಡ ಅಮೆರಿಕದಲ್ಲಿ ನಡೆಯುತ್ತಿದ್ದು, ಅವರಿಗೆ ಧನುಷ್ ನೆರವಾಗುತ್ತಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ:
ಧನುಷ್ ನಟನೆಯ ಕರ್ಣನ್ ಸಿನಿಮಾ ಮೇಲೆ ಕಣ್ಣಿಟ್ಟ ಟಾಲಿವುಡ್; ರಿಮೇಕ್ನಲ್ಲಿ ಹೀರೋ ಯಾರು?
ರಿಲೀಸ್ ಆಯ್ತು ‘ಜಗಮೇ ತಂಧೀರಮ್’ ಟ್ರೇಲರ್; ಸಿನಿಮಾದಿಂದ ಧನುಷ್ ಅಂತರ ಕಾಯ್ದುಕೊಂಡಿದ್ದೇಕೆ?