ರಿಲೀಸ್ ಆಯ್ತು ‘ಜಗಮೇ ತಂಧೀರಮ್’ ಟ್ರೇಲರ್; ಸಿನಿಮಾದಿಂದ ಧನುಷ್ ಅಂತರ ಕಾಯ್ದುಕೊಂಡಿದ್ದೇಕೆ?
Jagame Thandhiram Trailer: ಮಧುರೈನ ಗ್ಯಾಂಗ್ಸ್ಟರ್ ಆಗಿ ಧನುಷ್ ಕಾಣಿಸಿಕೊಂಡಿದ್ದಾರೆ. ಅವರ ಪಾತ್ರ ಕೆಲವು ಕಡೆಗಳಲ್ಲಿ ಗಂಭೀರತೆ ಪಡೆದುಕೊಂಡರೆ ಉಳಿದ ಕಡೆಗಲ್ಲಿ ವೀಕ್ಷಕರನ್ನು ನಗಿಸುತ್ತದೆ.
ನಿರ್ದೇಶನದಲ್ಲಿ ಕಾರ್ತಿಕ್ ಸುಬ್ಬರಾಜ್ ಹಾಗೂ ನಟನೆಯಲ್ಲಿ ಧನುಷ್ ಸಾಕಷ್ಟು ಭರವಸೆ ಮೂಡಿಸಿದ್ದಾರೆ. ಈಗ ಇವರ ಕಾಂಬಿನೇಷನ್ನಲ್ಲಿ ‘ಜಗಮೇ ತಂಧೀರಮ್’ ಸಿನಿಮಾ ಮೂಡಿಬರುತ್ತಿದೆ. ಈ ಸಿನಿಮಾ ನೇರವಾಗಿ ನೆಟ್ಫ್ಲಿಕ್ಸ್ನಲ್ಲಿ ರಿಲೀಸ್ ಆಗುತ್ತಿದೆ. ಈಗ ಚಿತ್ರದ ಟ್ರೇಲರ್ ರಿಲೀಸ್ ಆಗಿದ್ದು, ಸಿನಿ ಪ್ರಿಯರಿಗೆ ಸಾಕಷ್ಟು ಮನರಂಜನೆ ನೀಡಿದೆ.
ಮಧುರೈನ ಗ್ಯಾಂಗ್ಸ್ಟರ್ ಆಗಿ ಧನುಷ್ ಕಾಣಿಸಿಕೊಂಡಿದ್ದಾರೆ. ಅವರ ಪಾತ್ರ ಕೆಲವು ಕಡೆಗಳಲ್ಲಿ ಗಂಭೀರತೆ ಪಡೆದುಕೊಂಡರೆ ಉಳಿದ ಕಡೆಗಲ್ಲಿ ವೀಕ್ಷಕರನ್ನು ನಗಿಸುತ್ತದೆ. ಧನುಷ್ ಮಧುರೈನಿಂದ ಲಂಡನ್ಗೆ ತೆರಳುತ್ತಾರೆ. ಈ ಪ್ರಯಾಣವನ್ನು ಇಟ್ಟುಕೊಂಡು ಕಾರ್ತಿಕ್ ಸುಬ್ಬರಾಜ್ ಕಥೆ ಹೆಣೆದಿರುವುದು ಮೇಲ್ನೋಟಕ್ಕೆ ಸ್ಪಷ್ಟವಾಗುತ್ತದೆ. ‘ಗೇಮ್ ಆಫ್ ಥ್ರೋನ್ಸ್’ ಖ್ಯಾತಿಯ ಜೇಮ್ಸ್ ಕಾಸ್ಮೊ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಸಿನಿಮಾದ ಕೆಲ ಭಾಗವನ್ನು ತಮಿಳುನಾಡಿನಲ್ಲಿ ಶೂಟ್ ಮಾಡಲಾಗಿದೆ. ಇನ್ನೂ ಕೆಲ ಭಾಗವನ್ನು ಲಂಡನ್ ಹಾಗೂ ಇಂಗ್ಲೆಂಡ್ನ ಕೆಲ ಪ್ರಮುಖ ಪ್ರದೇಶದಲ್ಲಿ ಶೂಟ್ ಮಾಡಲಾಗಿದೆ. ಕಾರ್ತಿಕ್, ಧನುಷ್ ಹಾಗೂ ನೆಟ್ಫ್ಲಿಕ್ಸ್ ಕಾಂಬಿನೇಷನ್ನಲ್ಲಿ ಮೂಡಿಬರುತ್ತಿರುವ ಮೊದಲ ಸಿನಿಮಾ ಇದಾಗಿದೆ.
ಜಗಮೇ ತಂಧೀರಮ್ ಸಿನಿಮಾವನ್ನು ತುಂಬಾನೇ ಕಡಿಮೆ ಸಮಯದಲ್ಲಿ ಶೂಟ್ ಮಾಡಲಾಗಿದೆ. ಧನುಷ್ ವೃತ್ತಿ ಜೀವನದಲ್ಲಿ ಅತಿ ಕಡಿಮೆ ಅವಧಿಯಲ್ಲಿ ಸಿದ್ಧಗೊಂಡ ಚಿತ್ರ ಇದಾಗಿದೆ. ಶೂಟಿಂಗ್ ಮುಗಿದ ನಂತರದಲ್ಲಿ ಕಾರ್ತಿಕ್ಗೆ ಧನುಷ್ ಧನ್ಯವಾದ ಹೇಳಿದ್ದರು.
ಜಗಮೇ ತಂಧೀರಮ್ ಸಿನಿಮಾ 2020ರ ಏಪ್ರಿಲ್ನಲ್ಲಿ ಚಿತ್ರಮಂದಿರಗಳಲ್ಲಿ ರಿಲೀಸ್ ಆಗಬೇಕಿತ್ತು. ಆದರೆ, ಕೊವಿಡ್ ಕಾರಣದಿಂದ ಸಿನಿಮಾ ಮುಂದೂಡಲ್ಪಟ್ಟಿತ್ತು. ಈಗ ನೇರವಾಗಿ ಸಿನಿಮಾ ಒಟಿಟಿಯಲ್ಲಿ ರಿಲೀಸ್ ಆಗುತ್ತಿದೆ.
ಇನ್ನು, ಸಿನಿಮಾ ನೇರವಾಗಿ ಒಟಿಟಿಯಲ್ಲಿ ರಿಲೀಸ್ ಆಗುತ್ತಿದೆ ಎನ್ನುವ ಬಗ್ಗೆ ಘೋಷಣೆ ಆದಾಗಿನಿಂದಲೂ ಧನುಷ್ ಚಿತ್ರದಿಂದ ಅಂತರ ಕಾಯ್ದುಕೊಂಡಿದ್ದಾರೆ. ಅವರು ಸಿನಿಮಾ ಬಗ್ಗೆ ಅಷ್ಟಾಗಿ ಪ್ರಚಾರ ಮಾಡುತ್ತಿಲ್ಲ. ಇದರಿಂದ ಚಿತ್ರಕ್ಕೆ ಕೊಂಚ ಹಿನ್ನಡೆ ಆಗಬಹುದು.
ಇದನ್ನೂ ಓದಿ: ಧನುಷ್ ನಟನೆಯ ಕರ್ಣನ್ ಸಿನಿಮಾ ಮೇಲೆ ಕಣ್ಣಿಟ್ಟ ಟಾಲಿವುಡ್; ರಿಮೇಕ್ನಲ್ಲಿ ಹೀರೋ ಯಾರು?