‘ಜೈಲರ್ 2’ ಸಿನಿಮಾದಲ್ಲಿ ಪವನ್ ಕಲ್ಯಾಣ್? ಶಾರುಖ್ ಮಾಡಬೇಕಿದ್ದ ಪಾತ್ರ ಈಗ ಪವರ್ ಸ್ಟಾರ್ ಪಾಲು

ರಜನಿಕಾಂತ್ ನಟನೆಯ ಬಹುನಿರೀಕ್ಷಿತ ‘ಜೈಲರ್ 2’ ಸಿನಿಮಾದಲ್ಲಿ ಅಭಿನಯಿಸಲು ಶಾರುಖ್ ಖಾನ್ ಒಪ್ಪಿಕೊಂಡಿಲ್ಲ. ಅವರ ಬದಲಿಗೆ ಪವನ್ ಕಲ್ಯಾಣ್ ಹೆಸರು ಕೇಳಿಬರುತ್ತಿದೆ. ಈ ಸಿನಿಮಾದಲ್ಲಿ ಅನೇಕ ಘಟಾನುಘಟಿ ಕಲಾವಿದರು ನಟಿಸುತ್ತಿದ್ದಾರೆ. ಹಾಗಾಗಿ ಭರ್ಜರಿ ನಿರೀಕ್ಷೆ ಸೃಷ್ಟಿ ಆಗಿದೆ. ಆ ಕುರಿತು ಇಲ್ಲಿದೆ ವಿವರ..

‘ಜೈಲರ್ 2’ ಸಿನಿಮಾದಲ್ಲಿ ಪವನ್ ಕಲ್ಯಾಣ್? ಶಾರುಖ್ ಮಾಡಬೇಕಿದ್ದ ಪಾತ್ರ ಈಗ ಪವರ್ ಸ್ಟಾರ್ ಪಾಲು
Shah Rukh Khan, Rajinikanth, Pawan Kalyan

Updated on: Apr 10, 2026 | 10:25 PM

ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ, ನೆಲ್ಸನ್ ದಿಲೀಪ್‌ಕುಮಾರ್ ನಿರ್ದೇಶನದ ‘ಜೈಲರ್ 2’ (Jailer 2) ಚಿತ್ರದ ಬಗ್ಗೆ ಈಗ ಒಂದು ಕುತೂಹಲಕಾರಿ ಸುದ್ದಿ ಕಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿದೆ. ಈ ಚಿತ್ರದಲ್ಲಿ ಬರಲಿರುವ ಒಂದು ಪ್ರಮುಖ ಅತಿಥಿ ಪಾತ್ರದಲ್ಲಿ ಬಾಲಿವುಡ್ ನಟ ಶಾರುಖ್ ಖಾನ್ (Shah Rukh Khan) ಬದಲು ಟಾಲಿವುಡ್‌ನ ‘ಪವರ್ ಸ್ಟಾರ್’ ಪವನ್ ಕಲ್ಯಾಣ್ (Pawan Kalyan) ಕಾಣಿಸಿಕೊಳ್ಳುವ ಸಾಧ್ಯತೆಯಿದೆ ಎಂದು ವರದಿಯಾಗಿದೆ. ಆ ಮೂಲಕ ‘ಜೈಲರ್ 2’ ಸಿನಿಮಾ ಮೇಲೆ ನಿರೀಕ್ಷೆ ಹೆಚ್ಚುವಂತಾಗಿದೆ.

ಮೊದಲಿಗೆ ಈ ಸಿನಿಮಾದಲ್ಲಿ ರಜನಿಕಾಂತ್ ಜೊತೆಗೆ ಶಾರುಖ್ ಖಾನ್ ಒಬ್ಬ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ವದಂತಿ ಇತ್ತು. ಶಾರುಖ್ ಕೂಡ ಈ ಪಾತ್ರದ ಬಗ್ಗೆ ಆಸಕ್ತಿ ತೋರಿಸಿದ್ದರು ಎನ್ನಲಾಗಿತ್ತು. ಆದರೆ, ಪ್ರಸ್ತುತ ಅವರು ತಮ್ಮ ‘ಕಿಂಗ್’ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿರುವ ಕಾರಣ, ಡೇಟ್ಸ್ ಹೊಂದಾಣಿಕೆಯಾಗದ ಹಿನ್ನೆಲೆಯಲ್ಲಿ ‘ಜೈಲರ್ 2’ ಆಫರ್ ತಿರಸ್ಕರಿಸಿದ್ದಾರೆ ಎನ್ನಲಾಗಿದೆ.

ಶಾರುಖ್ ಖಾನ್ ಡೇಟ್ಸ್ ಇಲ್ಲದ ಕಾರಣ ಚಿತ್ರತಂಡವು ಈಗ ಪವನ್ ಕಲ್ಯಾಣ್ ಅವರನ್ನು ಸಂಪರ್ಕಿಸಿದೆ ಎಂದು ವರದಿ ಆಗಿದೆ. ಒಂದು ವೇಳೆ ಇದು ನಿಜವಾದರೆ, ರಜನಿಕಾಂತ್ ಮತ್ತು ಪವನ್ ಕಲ್ಯಾಣ್ ಅವರನ್ನು ಒಂದೇ ಪರದೆಯ ಮೇಲೆ ನೋಡುವುದು ಅಭಿಮಾನಿಗಳಿಗೆ ಹಬ್ಬವೇ ಸರಿ. ಆದರೂ, ಈ ಬಗ್ಗೆ ಚಿತ್ರತಂಡದಿಂದ ಅಧಿಕೃತ ಘೋಷಣೆ ಹೊರಬೀಳಬೇಕಿದೆ.

‘ಜೈಲರ್’ ಮೊದಲ ಭಾಗದಲ್ಲಿ ಮ್ಯಾಜಿಕ್ ಮಾಡಿದ್ದ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಮತ್ತು ಮಲಯಾಳಂ ಸೂಪರ್ ಸ್ಟಾರ್ ಮೋಹನ್ ಲಾಲ್ ಅವರು ಈ ಸೀಕ್ವೆಲ್‌ನಲ್ಲೂ ತಮ್ಮ ಪಾತ್ರಗಳನ್ನು ಮುಂದುವರಿಸಲಿದ್ದಾರೆ. ಇದು ಚಿತ್ರದ ಮೇಲಿನ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ. ಅವರ ಜೊತೆ ಪವನ್ ಕಲ್ಯಾಣ್ ಕೂಡ ಸೇರಿಕೊಂಡರೆ ಸಿನಿಮಾದ ಮಾಸ್ ಎಲಿಮೆಂಟ್ ಹೆಚ್ಚಲಿದೆ.

ಇದನ್ನೂ ಓದಿ: ‘ಜೈಲರ್ 2’ನಲ್ಲಿ ಶಿವಣ್ಣ, ಈ ಬಾರಿ ಕೇವಲ ಅತಿಥಿ ಪಾತ್ರವಲ್ಲ

ಈ ಸಿನಿಮಾದ ಚಿತ್ರೀಕರಣ ಶೀಘ್ರದಲ್ಲೇ ಮುಕ್ತಾಯಗೊಳ್ಳಲಿದ್ದು, ಈ ವರ್ಷದ ಅಂತ್ಯದ ವೇಳೆಗೆ ‘ಜೈಲರ್ 2’ ಬೆಳ್ಳಿ ಪರದೆಯ ಮೇಲೆ ಅಬ್ಬರಿಸಲು ಸಿದ್ಧವಾಗುತ್ತಿದೆ ಎಂದು ಸ್ವತಃ ರಜನಿಕಾಂತ್ ಅವರೇ ಇತ್ತೀಚೆಗೆ ಸುಳಿವು ನೀಡಿದ್ದರು. ಮಿಥುನ್ ಚಕ್ರವರ್ತಿ, ವಿದ್ಯಾ ಬಾಲನ್, ಎಸ್.ಜೆ. ಸೂರ್ಯ ಕೂಡ ಈ ಚಿತ್ರದ ಪಾತ್ರವರ್ಗದಲ್ಲಿ ಇದ್ದಾರೆ. ಈ ಎಲ್ಲ ಕಾರಣಗಳಿಂದ ಹೈಪ್ ಜಾಸ್ತಿ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us