
ಅಂದುಕೊಂಡಂತೆ ನಡೆದಿದ್ದರೆ ‘ಜನ ನಾಯಗನ್’ ಸಿನಿಮಾ (Jana Nayagan) ರಿಲೀಸ್ ಆಗಿ ಇಂದಿಗೆ (ಜನವರಿ 29) ಮೂರು ವಾರಗಳು ಕಳೆದಿರುತ್ತಿದ್ದವು. ಆದರೆ, ಸೆನ್ಸಾರ್ ಮಂಡಳಿ ಸೆನ್ಸಾರ್ ಪ್ರಮಾಣಪತ್ರ ನೀಡದೆ ಇರುವುದು ತಂಡಕ್ಕೆ ಚಿಂತೆಯನ್ನು ತಂದೊಡ್ಡಿದೆ. ಹೀಗಿರುವಾಗಲೇ ‘ಜನ ನಾಯಗನ್’ ತಂಡ ಕೋರ್ಟ್ನಿಂದ ಪ್ರಕರಣವನ್ನು ಹಿಂಪಡೆಯಲು ನಿರ್ಧರಿಸಿದೆ ಎಂದು ವರದಿ ಆಗಿದೆ. ಅದಕ್ಕೆ ಕಾರಣವೂ ಇದೆ.
ಜನವರಿ 9ಕ್ಕೆ ‘ಜನ ನಾಯಗನ್’ ಸಿನಿಮಾ ರಿಲೀಸ್ ಆಗಬೇಕಿತ್ತು. ಆದರೆ, ಅದು ಸಾಧ್ಯವಾಗಿಲ್ಲ. ಸೆನ್ಸಾರ್ ಪ್ರಮಾಣ ಪತ್ರ ಸಿಗದ ಕಾರಣ ಸಿನಿಮಾ ತಂಡ ಕೋರ್ಟ್ ಮೆಟ್ಟಿಲೇರಿತು. ಸ್ಥಳೀಯ ನ್ಯಾಯಾಲಯ, ಹೈಕೋರ್ಟ್ ಹಾಗೂ ಸುಪ್ರೀಂಕೋರ್ಟ್ನಲ್ಲಿ ಕೇಸ್ ದಾಖಲು ಮಾಡಲಾಯಿತು. ಆದರೆ, ಎಲ್ಲಿಯೂ ಸಿನಿಮಾಗೆ ನ್ಯಾಯ ಸಿಗುತ್ತಿಲ್ಲ.
ಈಗ ‘ಜನ ನಾಯಗನ್’ ತಂಡ ಒಂದು ನಿರ್ಧಾರಕ್ಕೆ ಬಂದಿದೆ ಎಂದು ವರದಿ ಆಗಿದೆ. ಕೆವಿಎನ್ ಸಂಸ್ಥೆ ಪ್ರಕರಣವನ್ನು ಕೋರ್ಟ್ನಿಂದ ಹಿಂಪಡೆಯುವ ನಿರ್ಧಾರಕ್ಕೆ ಬಂದಿದೆಯಂತೆ. ಚಿತ್ರವನ್ನು ಪುನರ್ವಿಮರ್ಶೆ ಸಮಿತಿಗೆ ಕಳಿಸಲು ನಿರ್ಧರಿಸಿದೆ ಎನ್ನಲಾಗಿದೆ.
ತಮಿಳುನಾಡಿನ ಸೆನ್ಸಾರ್ ಮಂಡಳಿ ‘ಜನ ನಾಯಗನ್’ ಸಿನಿಮಾದ ಕೆಲವು ವಿಷಯದ ಬಗ್ಗೆ ಪ್ರಶ್ನೆ ಮಾಡಿ, ಅದನ್ನು ಪುನರ್ ವಿಮರ್ಶಾ ಸಮಿತಿಗೆ ಕಳುಹಿಸಲು ನಿರ್ಧರಿಸಿತ್ತು. ಆದರೆ, ಅದಕ್ಕೆ ಸಮಯ ಹಿಡಿಯುತ್ತದೆ ಎಂಬ ಕಾರಣಕ್ಕೆ ಕೋರ್ಟ್ನಲ್ಲಿ ಪರಿಹಾರ ಕಂಡುಕೊಳ್ಳಲು ನಿರ್ಮಾಣ ಸಂಸ್ಥೆ ನಿರ್ಧರಿಸಿತ್ತು. ಆದರೆ, ಕೋರ್ಟ್ನಲ್ಲಿ ಯಾವುದೇ ಪರಿಹಾರ ಸಿಗೋ ಸೂಚನೆ ಕಾಣಿಸುತ್ತಿಲ್ಲ. ಹೀಗಾಗಿ, ಈ ನಿರ್ಧಾರಕ್ಕೆ ಬರಲಾಗಿದೆ ಎನ್ನಲಾಗುತ್ತಿದೆ.
ಇದನ್ನೂ ಓದಿ: ‘ಜನ ನಾಯಗನ್’ ವಿಳಂಬದಿಂದ ‘ಟಾಕ್ಸಿಕ್’,‘ಕೆಡಿ’ಗೆ ದೊಡ್ಡ ಹೊಡೆತ?
‘ಕೆವಿಎನ್’ ಸಂಸ್ಥೆ ಕೋರ್ಟ್ನಲ್ಲಿ ಸಿನಿಮಾದ ಬಜೆಟ್ ವಿಷಯವನ್ನು ಪ್ರಸ್ತಾಪ ಮಾಡುತ್ತಲೇ ಇದೆ. ‘ಚಿತ್ರಕ್ಕಾಗಿ 500 ಕೋಟಿ ರೂಪಾಯಿ ವ್ಯಯಿಸಲಾಗಿದೆ. ಈ ಬಗ್ಗೆ ಗಮನಹರಿಸಬೇಕು’ ಎಂದು ನಿರ್ಮಾಣ ಸಂಸ್ಥೆ ಹೇಳಿತ್ತು. ‘ಜನ ನಾಯಗನ್’ ಸಿನಿಮಾಗೆ ವಿಜಯ್ ಹೀರೋ. ಇದು ಅವರ ವೃತ್ತಿ ಜೀವನದ ಕೊನೆಯ ಸಿನಿಮಾ ಆಗಲಿದೆ. ಈ ಚಿತ್ರದ ಬಳಿಕ ಅವರು ರಾಜಕೀಯಕ್ಕೆ ಹೊರಳಲಿದ್ದಾರೆ. ಈ ಚಿತ್ರದಲ್ಲಿ ಮಲಯಾಳಂ ನಟಿ ಮಮಿತಾ ಬೈಜು, ಪೂಜಾ ಹೆಗ್ಡೆ ನಟಿಸಿದ್ದಾರೆ. ಎಚ್. ವಿನೋದ್ ನಿರ್ದೇಶನ ಚಿತ್ರಕ್ಕೆ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.