
ದಳಪತಿ ವಿಜಯ್ (Thalapathy Vijay) ನಟನೆಯ ಕೊನೆಯ ಸಿನಿಮಾ ಎನ್ನಲಾಗುತ್ತಿರುವ ‘ಜನ ನಾಯಗನ್’ ಜನವರಿ 9 ರಂದು ಬಿಡುಗಡೆ ಆಗಲಿತ್ತು, ಆದರೆ ಕೊನೆಯ ಕ್ಷಣದಲ್ಲಿ ಸಿನಿಮಾಕ್ಕೆ ಸಮಸ್ಯೆ ಎದುರಾಗಿದೆ. ಸಿನಿಮಾಕ್ಕೆ ಸಿಬಿಎಫ್ಸಿ ಪ್ರಮಾಣ ಪತ್ರವನ್ನು ನೀಡಲಾಗಿಲ್ಲ. ಬದಲಿಗೆ ಸಿನಿಮಾವನ್ನು ಮರುಪರಿಶೀಲನೆಗೆ ಸಮಿತಿಯು ಸೂಚಿಸಿತ್ತು. ಸಿಬಿಎಫ್ಸಿ ವಿರುದ್ಧ ಸಿನಿಮಾ ನಿರ್ಮಾಪಕರು ಮದ್ರಾಸ್ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದು, ಅರ್ಜಿ ವಿಚಾರಣೆ ಇಂದು ನಡೆದಿದೆ. ಆದರೆ ಆದೇಶವನ್ನು ಸಿನಿಮಾದ ಬಿಡುಗಡೆ ದಿನಾಂಕದಂದೆ ಅಂದರೆ ಜನವರಿ 09ರಂದೇ ಪ್ರಕಟಿಸುವುದಾಗಿ ಹೈಕೋರ್ಟ್ ಹೇಳಿರುವುದರಿಂದ ಸಿನಿಮಾ ಬಿಡುಗಡೆಗೆ ಸಮಸ್ಯೆ ಎದುರಾಗಿದೆ.
‘ಜನ ನಾಯಗನ್’ ಸಿನಿಮಾಕ್ಕೆ ಪ್ರಮಾಣ ಪತ್ರ ನೀಡುವಂತೆ ಸಿಬಿಎಫ್ಸಿಗೆ ಸೂಚಿಸುವಂತೆ ನಿರ್ಮಾಪಕರು ಅರ್ಜಿ ಸಲ್ಲಿಸಿದ್ದರು. ಆದರೆ ಸಿನಿಮಾದ ವಿರುದ್ಧ ಸಿಬಿಎಫ್ಸಿ ಸಮಿತಿಯ ಒಬ್ಬ ಸದಸ್ಯರು ಆಕ್ಷೇಪಣೆ ಸಲ್ಲಿಸುರುವುದು ಮತ್ತು ಸಿನಿಮಾದ ವಿರುದ್ಧ ಇಮೇಲ್ ಮೂಲಕ ದೂರು ಸಲ್ಲಿಕೆ ಆಗಿರುವ ಕಾರಣ ಸಮಿತಿಯ ಮುಖ್ಯಸ್ಥರು ಏಕ ನಿರ್ಣಯದಿಂದ ಸಿನಿಮಾವನ್ನು ಮರುಪರಿಶೀಲನೆಗೆ ಸೂಚಿಸಿದ್ದರು.
ಇಂದು ನಡೆದ ವಿಚಾರಣೆಯಲ್ಲಿ ನ್ಯಾಯಾಲಯವು ಸಿಬಿಎಫ್ಸಿಯನ್ನು ತರಾಟೆಗೆ ತೆಗೆದುಕೊಂಡಿತು. ಸಮಿತಿ ಎತ್ತಿರುವ ಆಕ್ಷೇಪಣೆಗಳನ್ನು ನಿರ್ಮಾಪಕರು, ಚಿತ್ರತಂಡ ಈಗಾಗಲೇ ಒಪ್ಪಿಕೊಂಡು ಬದಲಾವಣೆಗೆ ತಯಾರಿರುವಾಗಲೂ ಮತ್ತೊಮ್ಮೆ ಏಕೆ ಮರುಪರಿಶೀಲನೆಗೆ ಕಳಿಸಲಾಗಿದೆ ಎಂದು ನ್ಯಾಯಾಲಯ ಪ್ರಶ್ನಿಸಿದೆ. ಅಲ್ಲದೆ, ದೂರಿನಲ್ಲಿ ಎತ್ತಲಾಗಿರುವ ಎಲ್ಲ ವಿಷಯಗಳನ್ನು ಈಗಾಗಲೇ ಒಪ್ಪಿಕೊಂಡ ಬಳಿಕವೂ ಮರುಪರಿಶೀಲನೆಯ ಅಗತ್ಯ ಏನಿದೆ ಎಂದು ಪ್ರಶ್ನೆ ಮಾಡಿದೆ.
ಇದನ್ನೂ ಓದಿ:‘ಜನ ನಾಯಗನ್’ ಬಳಿಕ ನ್ಯಾಯಾಲಯದ ಮೆಟ್ಟಿಲೇರಿದ ‘ರಾಜಾ ಸಾಬ್’ ಮತ್ತು ‘ಶಂಕರ ವರ ಪ್ರಸಾದ್’
ಎರಡೂ ಕಡೆಯ ವಾದಗಳನ್ನು ಆಲಿಸಿದ ಮದ್ರಾಸ್ ಹೈಕೋರ್ಟ್ ಆದೇಶವನ್ನು ಕಾಯ್ದಿರಿಸಿದೆ. ಹೈಕೋರ್ಟ್ನ ಆದೇಶವು ಜನವರಿ 9ರಂದು ಹೊರಬೀಳಲಿದೆ. ಆದರೆ ಅದೇ ದಿನ ಸಿನಿಮಾ ಬಿಡುಡಗೆ ದಿನಾಂಕವೂ ಆಗಿದೆ. ಹಾಗಾಗಿ ಸಿನಿಮಾದ ಬಿಡುಗಡೆ ಮುಂದೂಡಲ್ಪಡುವ ಸಾಧ್ಯತೆ ಇದೆ. ಸಿನಿಮಾದ ಮುಂಗಡ ಬುಕಿಂಗ್ ಈಗಾಗಲೇ ಓಪನ್ ಆಗಿದ್ದು, ಬೆಂಗಳೂರು, ಕೊಚ್ಚಿಯಲ್ಲಿ ಲಕ್ಷಾಂತರ ಪ್ರೇಕ್ಷಕರು ಮುಂಗಡವಾಗಿ ಟಿಕೆಟ್ ಬುಕ್ ಮಾಡಿಕೊಂಡಿದ್ದಾರೆ. ಆದರೆ ಈಗ ಸಿನಿಮಾದ ಬಿಡುಗಡೆ ಮುಂದೂಡಲ್ಪಡುವ ಸಾಧ್ಯತೆ ದಟ್ಟವಾಗಿ ಕಾಣುತ್ತಿದೆ.
ಇನ್ನು ‘ಜನ ನಾಯಗನ್’ ಸಿನಿಮಾಕ್ಕೆ ಬ್ರಿಟನ್ನಲ್ಲಿ ಸೆನ್ಸಾರ್ ಪ್ರಮಾಣ ಪತ್ರ ದೊರೆತಿದೆ. 15 ವರ್ಷಕ್ಕೂ ಹೆಚ್ಚಿನವರು ಯುಕೆಯಲ್ಲಿ ‘ಜನ ನಾಯಗನ್’ ಸಿನಿಮಾ ವೀಕ್ಷಿಸಬಹುದಾಗಿದ್ದು, ಸಿನಿಮಾ ಜನವರಿ 09ರಂದು ಯುಕೆಯಲ್ಲಿ ಬಿಡುಗಡೆ ಆಗಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ