‘ಪಲ್ಲವಿ ಅನುಪಲ್ಲವಿ’ ಚಿತ್ರಕ್ಕೆ 43 ವರ್ಷ; ಮತ್ತೆ ಕನ್ನಡ ಚಿತ್ರರಂಗದಲ್ಲಿ ಅನಿಲ್ ಕಪೂರ್?
ಬಾಲಿವುಡ್ ಸ್ಟಾರ್ ನಟ ಅನಿಲ್ ಕಪೂರ್ ಅವರು ‘ಪಲ್ಲವಿ ಅನುಪಲ್ಲವಿ’ ಸಿನಿಮಾವನ್ನು ನೆನಪಿಸಿಕೊಂಡಿದ್ದಾರೆ. 1983ರ ಜನವರಿ 7ರಂದು ಕನ್ನಡದ ಆ ಸಿನಿಮಾ ರಿಲೀಸ್ ಆಗಿತ್ತು. ಇಂದಿಗೆ 43 ವರ್ಷಗಳು ಕಳೆದಿವೆ. ಮತ್ತೆ ಕನ್ನಡ ಸಿನಿಮಾಗಳಲ್ಲಿ ನಟಿಸಲು ಅನಿಲ್ ಕಪೂರ್ ಅವರು ಉತ್ಸಾಹ ಹೊಂದಿದ್ದಾರೆ.

ನಟ ಅನಿಲ್ ಕಪೂರ್ (Anil Kapoor) ಅವರು ಬಾಲಿವುಡ್ನಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ಹೀರೋ ಆಗಿ ಮಾತ್ರವಲ್ಲದೇ ಪೋಷಕ ಪಾತ್ರಗಳ ಮೂಲಕವೂ ಅವರು ಜನಮನ ಗೆದ್ದಿದ್ದಾರೆ. ಚಿತ್ರರಂಗದಲ್ಲಿ ಅವರಿಗೆ ನಾಲ್ಕೂವರೆ ದಶಕಗಳ ಅನುಭವ ಇದೆ. ಹಿಂದಿ ಚಿತ್ರರಂಗದಲ್ಲಿ ಹೀರೋ ಆಗಿ ಮಿಂಚುವುದಕ್ಕೂ ಮುನ್ನ ಅವರು ತೆಲುಗು ಮತ್ತು ಕನ್ನಡ ಸಿನಿಮಾದಲ್ಲಿ ನಟಿಸಿದ್ದರು. ಅನಿಲ್ ಕಪೂರ್ ಅವರು ಅಭಿನಯಿಸಿದ ಏಕೈಕ ಕನ್ನಡ ಸಿನಿಮಾ ‘ಪಲ್ಲವಿ ಅನುಪಲ್ಲವಿ’ (Pallavi Anupallavi) ತೆರೆಕಂಡು ಈಗ 43 ವರ್ಷಗಳು ಕಳೆದಿವೆ. ಅದನ್ನು ಈಗ ಅನಿಲ್ ಕಪೂರ್ ನೆನಪು ಮಾಡಿಕೊಂಡಿದ್ದಾರೆ.
ಮಣಿರತ್ನಂ ನಿರ್ದೇಶನ ಮಾಡಿದ್ದ ‘ಪಲ್ಲವಿ ಅನುಪಲ್ಲವಿ’ ಸಿನಿಮಾ 1983ರ ಜನವರಿ 7ರಂದು ಬಿಡುಗಡೆ ಆಗಿತ್ತು. ಅನಿಲ್ ಕಪೂರ್ ಅವರು ಹೀರೋ ಆಗಿ ನಟಿಸಿದ್ದರು. ಇಳೆಯರಾಜ ಸಂಗೀತ ನೀಡಿದ ಹಾಡುಗಳು ಸೂಪರ್ ಹಿಟ್ ಆದವು. ಇಂದಿಗೂ ಸಿನಿಪ್ರಿಯರಿಗೆ ‘ಪಲ್ಲವಿ ಅನುಪಲ್ಲವಿ’ ಸಿನಿಮಾದ ಹಾಡುಗಳು ಫೇವರಿಟ್ ಆಗಿವೆ. ‘ಓ ಪ್ರೇಮಿ ಓ ಪ್ರೇಮಿ’ ಹಾಡಿನ ತುಣುಕನ್ನು ಅನಿಲ್ ಕಪೂರ್ ಅವರು ಇಂದು (ಜನವರಿ 7) ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
‘43 ವರ್ಷಗಳ ಹಿಂದೆ ನಾನು ಕನ್ನಡ ಚಿತ್ರರಂಗದಲ್ಲಿ ಮೊದಲ ಹೆಜ್ಜೆ ಇಟ್ಟೆ. ಅಂದಿನಿಂದ ಇಂದಿನ ತನಕ, ಕನ್ನಡ ಸಿನಿಮಾ ಬೆಳೆದ ಭಾರತೀಯ ಚಿತ್ರರಂಗವನ್ನು ಜಾಗತಿಕ ಮಟ್ಟದಲ್ಲಿ ಮರು ವ್ಯಾಖ್ಯಾನಿಸುತ್ತಿರುವುದನ್ನು ನೋಡಿದರೆ ಅಚ್ಚರಿ ಆಗುತ್ತದೆ’ ಎಂದು ಅನಿಲ್ ಕಪೂರ್ ಅವರು ‘ಎಕ್ಸ್’ (ಟ್ವಿಟರ್) ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.
43 years ago, I took my first step into the Kannada film industry. From then to now, it’s incredible to see how Kannada cinema is booming and redefining Indian cinema globally. pic.twitter.com/jfh3Hbzsse
— Anil Kapoor (@AnilKapoor) January 7, 2026
ಕನ್ನಡ ಚಿತ್ರರಂಗದ ಈಗಿನ ಸಾಧಕರಿಗೂ ಅನಿಲ್ ಕಪೂರ್ ಸಲಾಂ ಎಂದಿದ್ದಾರೆ. ‘ಕನ್ನಡ ಚಿತ್ರರಂಗವನ್ನು ಮೇಲಕ್ಕೆ ತೆಗೆದುಕೊಂಡು ಹೋಗಿದ್ದಕ್ಕಾಗಿ ಯಶ್, ಪ್ರಶಾಂತ್ ನೀಲ್, ರಿಷಬ್ ಶೆಟ್ಟಿ ಹಾಗೂ ಕಾಂತಾರ, ಕೆಜಿಎಫ್ ತಂಡಗಳಿಗೆ ನಾನು ಸೆಲ್ಯೂಟ್ ಎನ್ನುತ್ತೇನೆ. ಈ ಅದ್ಭುತ ಚಿತ್ರರಂಗದ ಜೊತೆ ನನ್ನ ಕೊನೆಯ ಒಡನಾಟ ಇದಲ್ಲ ಎಂದು ಭಾವಿಸುತ್ತೇನೆ’ ಎಂದು ಅನಿಲ್ ಕಪೂರ್ ಹೇಳಿದ್ದಾರೆ.
ಇದನ್ನೂ ಓದಿ: ನಟ ಅನಿಲ್ ಕಪೂರ್ಗೆ ‘ಪಲ್ಲವಿ ಅನುಪಲ್ಲವಿ’ ಆಫರ್ ಸಿಕ್ಕಿದ್ದು ಹೇಗೆ? ಇಲ್ಲಿದೆ ವಿವರ
ಈ ಮೂಲಕ ಮತ್ತೆ ಕನ್ನಡ ಚಿತ್ರರಂಗದಲ್ಲಿ ಕೆಲಸ ಮಾಡಲು ಅನಿಲ್ ಕಪೂರ್ ಅವರು ಉತ್ಸಾಹ ತೋರಿಸಿದ್ದಾರೆ. ಈಗಾಗಲೇ ‘ಟಾಕ್ಸಿಕ್’ ಸಿನಿಮಾದಲ್ಲಿ ಅನಿಲ್ ಕಪೂರ್ ನಟಿಸಿರಬಹುದು ಎಂದು ಕೆಲಸ ಅಭಿಮಾನಿಗಳು ಊಹಿಸಿದ್ದಾರೆ. ಪ್ರಶಾಂತ್ ನೀಲ್ ಅವರ ‘ಡ್ರ್ಯಾಗನ್’ ಸಿನಿಮಾದಲ್ಲಿ ಅನಿಲ್ ಕೂಡ ಕೂಡ ಇರಬಹುದು ಎಂದು ಫ್ಯಾನ್ಸ್ ಕಮೆಂಟ್ ಮಾಡುತ್ತಿದ್ದಾರೆ. ಇದೆಲ್ಲವೂ ಬರೀ ಊಹೆಗಳಷ್ಟೇ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




