ನಟ ಅನಿಲ್ ಕಪೂರ್ಗೆ ‘ಪಲ್ಲವಿ ಅನುಪಲ್ಲವಿ’ ಆಫರ್ ಸಿಕ್ಕಿದ್ದು ಹೇಗೆ? ಇಲ್ಲಿದೆ ವಿವರ
‘ಪಲ್ಲವಿ ಅನುಪಲ್ಲವಿ’ ಸಿನಿಮಾ ರಿಲೀಸ್ ಆಗಿ 40 ವರ್ಷಗಳ ಮೇಲಾಗಿದೆ. ಈಗಲೂ ಸಿನಿಮಾ ಅನೇಕರ ಫೇವರಿಟ್ ಎನಿಸಿಕೊಂಡಿದೆ. ಅನಿಲ್ ಕಪೂರ್ ಅವರ ವೃತ್ತಿ ಜೀವನದಲ್ಲಿ ಈ ಸಿನಿಮಾ ಮುಖ್ಯ ಎನಿಸಿಕೊಂಡಿದೆ. ಅವರು ನಟಿಸಿದ ಏಕೈಕ ಕನ್ನಡ ಸಿನಿಮಾ ಇದು.
ನಟ ಅನಿಲ್ ಕಪೂರ್ (Anil Kapoor) ಅವರಿಗೆ ಇಂದು (ಡಿಸೆಂಬರ್ 24) ಜನ್ಮದಿನದ ಸಂಭ್ರಮ. ಅವರಿಗೆ ಎಲ್ಲ ಕಡೆಗಳಿಂದ ಶುಭಾಶಯ ಬರುತ್ತಿದೆ. ಅವರು ಹಲವು ಸಿನಿಮಾಗಳಲ್ಲಿ ನಟಿಸಿ ಫೇಮಸ್ ಆಗಿದ್ದಾರೆ. ಅನಿಲ್ ಕಪೂರ್ ಅವರು ಕನ್ನಡದ ‘ಪಲ್ಲವಿ ಅನುಪಲ್ಲವಿ’ (Pallavi Anupallavi) ಸಿನಿಮಾದಲ್ಲಿ ನಟಿಸಿದ್ದರು. ಈ ಮೂಲಕ ಕನ್ನಡ ಚಿತ್ರರಂಗಕ್ಕೆ ಪರಿಚಯಗೊಂಡರು. ಬಾಲಿವುಡ್ ನಟ ಅನಿಲ್ ಕಪೂರ್ಗೆ ಕನ್ನಡದ ಸಿನಿಮಾ (Kannada Cinema) ಆಫರ್ ಸಿಕ್ಕಿದ್ದು ಹೇಗೆ ಎನ್ನುವ ಬಗ್ಗೆ ಇಲ್ಲಿದೆ ವಿವರ.
ಅನಿಲ್ ಕಪೂರ್ ಅವರು ಚಿತ್ರರಂಗಕ್ಕೆ ಕಾಲಿಟ್ಟಿದ್ದು 1979ರಲ್ಲಿ. ಹಿಂದಿಯ ‘ಹಮಾರೆ ತುಮಾರೆ’ ಅವರ ನಟನೆಯ ಮೊದಲ ಸಿನಿಮಾ. ಈ ಚಿತ್ರದಲ್ಲಿ ಅವರು ಸಣ್ಣ ಪಾತ್ರ ಮಾಡಿದ್ದರು. 1980ರಲ್ಲಿ ರಿಲೀಸ್ ಆದ ತೆಲುಗಿನ ‘ವಂಶ ವೃಕ್ಷ’ ಸಿನಿಮಾದಲ್ಲಿ ಅನಿಲ್ ಕಪೂರ್ ನಟಿಸಿದರು. ಈ ಚಿತ್ರವನ್ನು ಬಾಪು ಅವರು ನಿರ್ದೇಶನ ಮಾಡಿದ್ದರು. ಆ ವರ್ಷ ಎರಡು ಹಿಂದಿ ಸಿನಿಮಾಗಳಲ್ಲಿ ಅನಿಲ್ ಕಪೂರ್ ನಟಿಸಿದ್ದರು.
ಮೊದಲಿಗೆ ‘ಪಲ್ಲವಿ ಅನುಪಲ್ಲವಿ’ ಸಿನಿಮಾ ನಿರ್ದೇಶನ ಮಾಡುವ ಆಲೋಚನೆ ಮಣಿರತ್ನಂ ಅವರಿಗೆ ಇರಲಿಲ್ಲ. ಈ ಬಗ್ಗೆ ಅವರು ವೇದಿಕೆ ಮೇಲೆ ಹೇಳಿಕೊಂಡಿದ್ದರು. ‘ನಾನು ನನ್ನ ಮೊದಲ ಸಿನಿಮಾ ಮಾಡಿದಾಗ ನನಗೆ ಸಿನಿಮಾ ಮಾಡೋದು ಹೇಗೆ ಎಂದು ಗೊತ್ತಿರಲಿಲ್ಲ. ನನಗೆ ಕನ್ನಡ ಬರುತ್ತಿರಲಿಲ್ಲ. ಆದರೂ ಕನ್ನಡ ಸಿನಿಮಾ ಮಾಡಿದೆ. ನಾನು ಒಂದು ಸ್ಕ್ರಿಪ್ಟ್ ರೆಡಿ ಮಾಡಿಕೊಂಡೆ. ಯಾವುದಾದರೂ ಒಂದು ದೊಡ್ಡ ನಿರ್ದೇಶಕನ ಮನ ಒಲಿಸಿ ಸಿನಿಮಾ ಮಾಡಬೇಕು ಎಂದುಕೊಂಡಿದ್ದೆ. ಆಗ ಅವರ ಜೊತೆ ಸಹಾಯಕ ನಿರ್ದೇಶಕನಾಗಿ ಸೇರಿಕೊಂಡು ಸಿನಿಮಾ ಬಗ್ಗೆ ಕಲಿಯಬೇಕು ಎಂದುಕೊಂಡಿದ್ದೆ. ಆದರೆ, ನಾನೇ ನಿರ್ದೇಶನ ಮಾಡಬೇಕಾಗಿ ಬಂತು’ ಎಂದು ಮಣಿರತ್ನಂ ಹೇಳಿದ್ದರು.
ಇದನ್ನೂ ಓದಿ: ಬಾಲಿವುಡ್ನ ಶ್ರೀಮಂತ ನಟ ಅನಿಲ್ ಕಪೂರ್ ಅವರ ಒಟ್ಟೂ ಆಸ್ತಿ ಎಷ್ಟು ಕೋಟಿ ರೂಪಾಯಿ?
‘ವಂಶ ವೃಕ್ಷ’ ಸಿನಿಮಾನ ಮಣಿರತ್ನಂ ವೀಕ್ಷಿಸಿದ್ದರು. ಈ ಚಿತ್ರದಲ್ಲಿ ಅನಿಲ್ ಕಪೂರ್ ಪಾತ್ರ ಮಣಿರತ್ನಂ ಅವರಿಗೆ ಇಷ್ಟ ಆಗಿತ್ತು. ತಮ್ಮ ಮೊದಲ ಸಿನಿಮಾಗೆ ಅನಿಲ್ ಸೂಕ್ತ ಎಂದು ಮಣಿರತ್ನಂ ನಿರ್ಧರಿಸಿದರು. ಅವರು ಅನಿಲ್ ಕಪೂರ್ಗೆ ಆಫರ್ ನೀಡಿದರು. ಅನಿಲ್ ಕಪೂರ್ ಅವರು ಖುಷಿಯಿಂದ ಒಪ್ಪಿ ಸಿನಿಮಾ ಮಾಡಿದರು. ಈ ಚಿತ್ರ ಸೂಪರ್ ಹಿಟ್ ಆಯಿತು. ಈ ಸಿನಿಮಾದಲ್ಲಿ ನಾಯಕಿ ಆಗಿ ನಟಿಸೋಕೆ ಮೊದಲು ಸುಹಾಸಿನಿಗೆ ಆಫರ್ ನೀಡಲಾಗಿತ್ತು. ಆದರೆ, ಈ ಆಫರ್ನ ಅವರು ತಿರಸ್ಕರಿಸಿದರು. ಆ ಬಳಿಕ ಕಿರಣ್ ವೈರಾಲೆ ಅವರು ತಂಡ ಸೇರಿಕೊಂಡರು. ಈ ಸಿನಿಮಾ ರಿಲೀಸ್ ಆಗಿ 40 ವರ್ಷಗಳ ಮೇಲಾಗಿದೆ. ಈಗಲೂ ಸಿನಿಮಾ ಅನೇಕರ ಫೇವರಿಟ್ ಎನಿಸಿಕೊಂಡಿದೆ. ಅನಿಲ್ ಕಪೂರ್ ಅವರ ವೃತ್ತಿ ಜೀವನದಲ್ಲಿ ಈ ಸಿನಿಮಾ ಮುಖ್ಯ ಎನಿಸಿಕೊಂಡಿದೆ. ಅವರು ನಟಿಸಿದ ಏಕೈಕ ಕನ್ನಡ ಸಿನಿಮಾ ಇದು.
ಅನಿಲ್ ಕಪೂರ್ ಅವರಿಗೆ ಈ ವರ್ಷ ಬರ್ತ್ಡೇ ವಿಶೇಷ ಎನಿಸಿಕೊಂಡಿದೆ. ಅವರ ನಟನೆಯ ‘ಅನಿಮಲ್’ ಸಿನಿಮಾ ಸೂಪರ್ ಹಿಟ್ ಆಗಿದೆ. ಈ ಚಿತ್ರ ಬಾಕ್ಸ್ ಆಫೀಸ್ನಲ್ಲಿ ನೂರಾರು ಕೋಟಿ ರೂಪಾಯಿ ಬಾಚಿಕೊಂಡಿದೆ. ಇದು ಅನಿಲ್ ಕಪೂರ್ ಖುಷಿ ಹೆಚ್ಚಿಸಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.