‘ಜನ ನಾಯಗನ್’ ಬಳಿಕ ನ್ಯಾಯಾಲಯದ ಮೆಟ್ಟಿಲೇರಿದ ‘ರಾಜಾ ಸಾಬ್’ ಮತ್ತು ‘ಶಂಕರ ವರ ಪ್ರಸಾದ್’
The Raja Saab: ಸಂಕ್ರಾಂತಿಗೆ ತೆಲುಗಿನ ಹಲವು ದೊಡ್ಡ ಸಿನಿಮಾಗಳು ಬಲು ಅದ್ಧೂರಿಯಾಗಿ ಬಿಡುಗಡೆ ಆಗುತ್ತಿವೆ. ಪ್ರಭಾಸ್, ಮೆಗಾಸ್ಟಾರ್ ಚಿರಂಜೀವಿ, ರವಿತೇಜ ಅಂಥಹಾ ಸ್ಟಾರ್ ನಟರ ಸಿನಿಮಾಗಳು ಸಹ ಸಂಕ್ರಾಂತಿಗೆ ತೆರೆಗೆ ಬರುತ್ತಿವೆ. ಆದರೆ ಇದೀಗ ಪ್ರಭಾಸ್ ನಟನೆಯ ‘ದಿ ರಾಜಾ ಸಾಬ್’ ಮತ್ತು ಚಿರಂಜೀವಿ ನಟನೆಯ ‘ಮನ ಶಂಕರ ವರ ಪ್ರಸಾದ್ ಗಾರು’ ಸಿನಿಮಾ ತಂಡಗಳು ನ್ಯಾಯಾಲಯದ ಮೆಟ್ಟಿಲೇರಿವೆ.

ಸಂಕ್ರಾಂತಿ (Sankranthi) ಹಬ್ಬಕ್ಕೆ ಪ್ರತಿ ಬಾರಿಯಂತೆ ಈ ಬಾರಿಯೂ ತೆಲುಗು ಚಿತ್ರರಂಗದ ದೊಡ್ಡ ಸಿನಿಮಾಗಳು ತೆರೆಗೆ ಬರಲು ಸಜ್ಜಾಗಿವೆ. ಪ್ರಭಾಸ್ ನಟನೆಯ ‘ದಿ ರಾಜಾ ಸಾಬ್’, ಮೆಗಾಸ್ಟಾರ್ ಚಿರಂಜೀವಿ ನಟನೆಯ ‘ಮನ ಶಂಕರ ವರ ಪ್ರಸಾದ್ ಗಾರು’, ರವಿತೇಜ ನಟನೆಯ ‘ಭರ್ತ ಪ್ರಜಲಕು ವಿಜ್ಞಪ್ತಿ’, ನವೀನ್ ಪೋಲಿಶೆಟ್ಟಿ ನಟನೆಯ ‘ಅನಗನಗಾ ಒಕ ರಾಜು’, ಶರವಣ ನಟನೆಯ ‘ನಾರಿ ನಡುಮ ಮುರಾರಿ’ ಸಿನಿಮಾಗಳು ತೆರೆಗೆ ಬರುತ್ತಿವೆ. ಇವುಗಳ ಜೊತೆಗೆ ತಮಿಳಿನ ‘ಜನ ನಾಯಗನ್’ ಮತ್ತು ‘ಪರಾಶಕ್ತಿ’ ಸಿನಿಮಾಗಳು ಸಹ ಬಿಡುಗಡೆ ಆಗುತ್ತಿವೆ.
ಆದರೆ ಇದೀಗ ಪ್ರಭಾಸ್ ನಟನೆಯ ‘ದಿ ರಾಜಾ ಸಾಬ್’ ಮತ್ತು ಚಿರಂಜೀವಿ ನಟನೆಯ ‘ಮನ ಶಂಕರ ವರ ಪ್ರಸಾದ್ ಗಾರು’ ಸಿನಿಮಾಗಳು ಹಠಾತ್ತನೆ ಕೋರ್ಟ್ ಮೆಟ್ಟಿಲೇರಿವೆ. ತೆಲಂಗಾಣ ಹೈಕೋರ್ಟ್ಗೆ ಎರಡೂ ಸಿನಿಮಾಗಳು ಪಿಟಿಷನ್ ಸಲ್ಲಿಸಿದ್ದು, ತಮ್ಮ ಸಿನಿಮಾಗಳ ಟಿಕೆಟ್ ದರ ಹೆಚ್ಚಳಕ್ಕೆ ಅನುಮತಿ ನೀಡುವಂತೆ ಮನವಿ ಮಾಡಿವೆ.
ದೊಡ್ಡ ಸಿನಿಮಾಗಳು ಬಿಡುಗಡೆ ಆದಾಗೆಲ್ಲ ಚಿತ್ರತಂಡಗಳು ಆಂಧ್ರ ಮತ್ತು ತೆಲಂಗಾಣಗಳಲ್ಲಿ ಸರ್ಕಾರಕ್ಕೆ ಮನವಿ ಸಲ್ಲಿಸಿ ನಿರ್ದಿಷ್ಟ ದಿನಗಳ ವರೆಗೆ ಟಿಕೆಟ್ ದರ ಹೆಚ್ಚಳ ಮತ್ತು ಹೆಚ್ಚುವರಿ ಶೋಗಳನ್ನು ಪ್ರದರ್ಶಿಸಲು ಅನುಮತಿ ಪಡೆದುಕೊಳ್ಳುತ್ತವೆ. ಆದರೆ ಇತ್ತೀಚೆಗೆ ತೆಲಂಗಾಣ ಹೈಕೋರ್ಟ್, ಈ ಟಿಕೆಟ್ ದರ ಹೆಚ್ಚಳದ ಕುರಿತಂತೆ ಸಲ್ಲಿಕೆ ಆಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದರ ವಿಚಾರಣೆ ನಡೆಸಿ, ಟಿಕೆಟ್ ದರ ಹೆಚ್ಚಳ ಮಾಡದಂತೆ ಆದೇಶ ನೀಡಿದೆ. ಇದೇ ಕಾರಣಕ್ಕೆ ಇದೀಗ ‘ದಿ ರಾಜಾ ಸಾಬ್’ ಮತ್ತು ‘ಮನ ಶಂಕರ ವರ ಪ್ರಸಾದ್’ ಚಿತ್ರತಂಡಗಳು ತೆಲಂಗಾಣ ಹೈಕೋರ್ಟ್ ಮೆಟ್ಟಿಲೇರಿವೆ.
ಇದನ್ನೂ ಓದಿ:ಇನ್ಮುಂದೆ ಸೆಟ್ಬ್ಯಾಕ್ ಬಿಡದೆ ಮನೆ ನಿರ್ಮಾಣಕ್ಕೆ ಅವಕಾಶ: ಸಂಕ್ರಾಂತಿ ಗಿಫ್ಟ್ ನೀಡಿದ ಸರ್ಕಾರ
ಆದರೆ ಆಂಧ್ರ ಪ್ರದೇಶದಲ್ಲಿ ಈ ಸಮಸ್ಯೆ ಇಲ್ಲ. ಎರಡೂ ಸಿನಿಮಾಗಳಿಗೆ ಆಂಧ್ರದಲ್ಲಿ ಟಿಕೆಟ್ ದರ ಹೆಚ್ಚಳಕ್ಕೆ ಸುಲಭವಾಗಿ ಅನುಮತಿ ದೊರೆತಿದೆ. ಆದರೆ ತೆಲಂಗಾಣದಲ್ಲಿ ಹೈಕೋರ್ಟ್ ಆದೇಶ ಇರುವ ಕಾರಣ ಅನುಮತಿ ನೀಡಲಾಗಿಲ್ಲ. ಇದೀಗ ‘ದಿ ರಾಜಾ ಸಾಬ್’ ಮತ್ತು ‘ಮನ ಶಂಕರ ವರ ಪ್ರಸಾದ್’ ಅವರುಗಳು ಈಗ ಸಲ್ಲಿಕೆ ಮಾಡಿರುವ ಅರ್ಜಿಯನ್ನು ಬುಧವಾರ ವಿಚಾರಣೆಗೆ ತೆಗೆದುಕೊಳ್ಳೂವುದಾಗಿ ಹೇಳಲಾಗಿದೆ.
ಈ ಹಿಂದೆ ‘ಅಖಂಡ 2’ ಸಿನಿಮಾ ಬಿಡುಗಡೆ ಸಂದರ್ಭದಲ್ಲಿ ತೆಲಂಗಾಣದಲ್ಲಿ ಟಿಕೆಟ್ ದರ ಹೆಚ್ಚಿಸಲಾಗಿತ್ತು. ಆದರೆ ಅದೇ ಸಮಯದಲ್ಲಿ ತೆಲಂಗಾಣ ಹೈಕೋರ್ಟ್ ಆದೇಶ ಹೊರಡಿಸಿ, ಟಿಕೆಟ್ ದರ ಹೆಚ್ಚಳ ಮಾಡುವಂತಿಲ್ಲ ಎಂದಿತ್ತು. ಅಲ್ಲದೆ ತಮ್ಮ ಆದೇಶ ಉಲ್ಲಂಘನೆ ಮಾಡಿದ್ದಕ್ಕೆ ಚಿತ್ರತಂಡಕ್ಕೆ ಛೀಮಾರಿ ಸಹ ಹಾಕಿತ್ತು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




