ಸಾಹಸ ಸಿಂಹ ವಿಷ್ಣುವರ್ಧನ್ ಅಳಿಯ ಅನಿರುದ್ಧ ‘ಜೊತೆ ಜೊತೆಯಲಿ’ ಧಾರಾವಾಹಿ ಮೂಲಕ ಖ್ಯಾತಿ ಹೆಚ್ಚಿಸಿಕೊಂಡರು. ಕರ್ನಾಟಕದ ಮೂಲೆಮೂಲೆಯಲ್ಲೂ ಅನಿರುದ್ಧ ಅವರು ಆರ್ಯವರ್ಧನ್ ಆಗಿ ಹೆಚ್ಚು ಪರಿಚಿತರಾಗಿದ್ದಾರೆ. ಕೊವಿಡ್ ಮಿತಿಮೀರಿ ಹರಡುತ್ತಿರುವುದರಿಂದ ಶೂಟಿಂಗ್ ನಿಲ್ಲಿಸಲಾಗಿದೆ. ಹೀಗಾಗಿ, ಅನಿರುದ್ಧ ಮನೆಯಲ್ಲೇ ಸಮಯ ಕಳೆಯುತ್ತಿದ್ದಾರೆ. ಈ ಸಂದರ್ಭದಲ್ಲಿ ಅವರು ಏನು ಮಾಡುತ್ತಿದ್ದಾರೆ ಎಂಬುದರ ಬಗ್ಗೆ ಟಿವಿ9 ಕನ್ನಡ ಡಿಜಿಟಲ್ ಜತೆ ಅವರು ಮಾಹಿತಿ ಹಂಚಿಕೊಂಡಿದ್ದಾರೆ.
ಮಿಸ್ ಮಾಡುತ್ತಿಲ್ಲ ವ್ಯಾಯಾಮ-ಧ್ಯಾನ
ಅನಿರುದ್ಧ ಶೂಟಿಂಗ್ ಇದ್ದಾಗ ಒಂದಷ್ಟು ಕೆಲಸಗಳನ್ನು ತಪ್ಪದೇ ಮಾಡುತ್ತಿದ್ದರಂತೆ. ಈಗ ಲಾಕ್ಡೌನ್ನಲ್ಲೂ ಅದನ್ನು ಮುಂದುವರಿಸಿದ್ದಾರೆ. ‘ಬೆಳಗ್ಗೆ ಎದ್ದ ನಂತರ ವ್ಯಾಯಾಮ ಮತ್ತು ಧ್ಯಾನ ಮಾಡುತ್ತೇನೆ. ನಿತ್ಯ ಆರ್ಟಿಕಲ್ ಬರೆಯುತ್ತೇನೆ. ಶೂಟಿಂಗ್ ಟೈಮ್ನಲ್ಲಿ ಒಮ್ಮೊಮ್ಮೆ ಸಮಯ ಸಿಗುವುದಿಲ್ಲ. ಆಗ ಬರೆಯೋಕೆ ಆಗುತ್ತಿರಲಿಲ್ಲ. ಈಗ ಸಮಯ ಸಿಕ್ಕಿದೆ, ಬರವಣಿಗೆ ಮುಂದುವರಿಸಿದ್ದೇನೆ’ ಎಂದು ಮಾಹಿತಿ ನೀಡಿದ್ದಾರೆ ಅನಿರುದ್ಧ್.
ಸಿನಿಮಾ ವೀಕ್ಷಣೆ ಮೂಲಕ ಕಲಿಕೆ
ಒಟಿಟಿ ಪ್ಲಾಟ್ಫಾರ್ಮ್ಗಳಲ್ಲಿ ಸಾಕಷ್ಟು ಚಿತ್ರಗಳು ಲಭ್ಯವಿದೆ. ಲಾಕ್ಡೌನ್ ಸಂದರ್ಭದಲ್ಲಿ ಅದನ್ನು ಅನಿರುದ್ಧ ವೀಕ್ಷಣೆ ಮಾಡುತ್ತಿದ್ದಾರೆ. ‘ಒಟಿಟಿಯಲ್ಲಿ ಸಾಕಷ್ಟು ಸಿನಿಮಾಗಳಿವೆ. ನಿತ್ಯ ಸಿನಿಮಾ ನೋಡುತ್ತಿದ್ದೇನೆ. ನಟನೆಯಲ್ಲಿ ಇರುವವರಿಗೆ ಅದೂ ಒಂದು ಕಲಿಕೆ. ನಮಗೆ ಸಾಕಷ್ಟು ವಿಚಾರಗಳು ತಿಳಿಯುತ್ತವೆ’ ಎಂದು ಅನಿರುದ್ಧ್ ಹೇಳಿದ್ದಾರೆ.
ಅನಿರುದ್ಧ್ ಅಳಿಲು ಸೇವೆ
ಕೊರೊನಾ ಸಂದರ್ಭದಲ್ಲಿ ಸಾಕಷ್ಟು ಸೆಲೆಬ್ರಿಟಿಗಳು ಸಹಾಯಕ್ಕೆ ನಿಂತಿದ್ದಾರೆ. ಅನಿರುದ್ಧ್ ಕೂಡ ಈ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ‘ಕೊವಿಡ್ ಸಂಕಷ್ಟದ ಸಂದರ್ಭದಲ್ಲಿ ನಾನು ಅಳಿಲು ಸೇವೆ ಮಾಡುತ್ತಾ ಇದ್ದೇನೆ. ಕೆಲವರಿಗೆ ಬೆಡ್ ಸಿಗಲ್ಲ. ಕೆಲವರಿಗೆ ರೆಮಿಡಿಸಿವರ್ ಇಂಜೆಕ್ಷನ್ ಸಿಗಲ್ಲ. ನನಗೆ ಪರಿಚಯ ಇದ್ದವರಿಗೆ ಕರೆ ಮಾಡುತ್ತೇನೆ. ಅವರು ಮತ್ಯಾರಿಗೋ ಕರೆ ಮಾಡ್ತಾರೆ. ಇದು ಒಂದು ರೀತಿಯಲ್ಲಿ ಚೈನ್ ಲಿಂಕ್. ಒಟ್ಟಿನಲ್ಲಿ ಸಂಕಷ್ಟದಲ್ಲಿರುವವರಿಗೆ ಸಹಾಯವಾಗುತ್ತದೆ’ ಎಂದು ಸಂತಸ ವ್ಯಕ್ತಪಡಿಸುತ್ತಾರೆ ಅವರು.
ಇದು ಒಂದು ಸಂಘರ್ಷ
‘ಈಗ ನಡೆಯುತ್ತಿರುವುದು ಇದು ತುಂಬಾ ದೊಡ್ಡ ಸಂಘರ್ಷ. ಆರೋಗ್ಯದ ಜತೆಗೆ ಜೀವನವನ್ನೂ ನೋಡಿಕೊಂಡು ಹೋಗಬೇಕು. ನಿತ್ಯದ ಹೊಟ್ಟೆಪಾಡು ನೋಡಿಕೊಳ್ಳಲೇಬೇಕು. ಈ ಸಂಘರ್ಷದಲ್ಲಿ ಒಂದು ಸಕಾರಾತ್ಮಕತೆ ಇದೆ. ಎಲ್ಲರೂ ಪಾಸಿಟಿವ್ ಆಗಿ ಥಿಂಕ್ ಮಾಡುತ್ತಿದ್ದಾರೆ. ಕಾಳ ಸಂತೆಯಲ್ಲಿ ತೊಡಗಿಕೊಂಡವರು ಬೆರಳೆಣಿಕೆ ಇರಬಹುದು. ಅದನ್ನು ಬಿಟ್ಟು ಉಳಿದವರು ಸ್ವಾರ್ಥ ಇಲ್ಲದೆ ಸೇವೆ ಮಾಡುತ್ತಿದ್ದಾರೆ. ನಾನು ಅನ್ನೋದು ಬಿಟ್ಟು ನಾವು ಅನ್ನೋದು ಬಂದಿದೆ. ಎಲ್ಲರೂ ಒಂದು ಕುಟುಂಬ ಎನ್ನುವ ಫೀಲ್ ಬಂದಿದೆ’ ಎನ್ನುತ್ತಾರೆ ಅನಿರುದ್ಧ್.
ಮಗನಿಗೂ ಕೊರೊನಾ
ಅನಿರುದ್ಧ್ ಮಗನಿಗೂ ಕೊರೊನಾ ಸೋಂಕು ತಗುಲಿದೆ. ‘ನನ್ನ ಮಗನಿಗೂ ಕೊವಿಡ್ ಪಾಸಿಟಿವ್. ದೇವರ ದಯೆ ಇಂದ ತುಂಬಾ ಮೈಲ್ಡ್ ಆಗಿದೆ. ಅವನು ಐಸೋಲೆಷನ್ನಲ್ಲಿ ಇದಾನೆ. ಶನಿವಾರ (ಮೇ 15) ಐಸೋಲೇಷನ್ ಕಂಪ್ಲೀಟ್ ಆಗುತ್ತದೆ. ಚಿಕ್ಕ ಹುಡುಗನಾದ್ದರಿಂದ ಒಂದೇ ರೂಂನಲ್ಲಿ ಕೂತಿರೋದು ಕಷ್ಟ. ವಿಡಿಯೋ ಕಾಲ್ ಮಾಡ್ತೀವಿ, ಆದರೆ ಅದು ಸಾಕಾಗಲ್ಲ. ನನ್ನ ತಂದೆ-ತಾಯಿ ಮನೆಯಲ್ಲೇ ಇದಾರೆ. ಅವರಿಗೆ ಇಮ್ಯುನಿಟಿ ಸಿಸ್ಟಮ್ ಅಷ್ಟಾಗಿ ಸದೃಢವಾಗಿರಲ್ಲ. ಹೀಗಾಗಿ, ಬಂದು ನಮ್ಮ ಜತೆ ಕುಳಿತುಕೋ ಎಂದು ಹೇಳೋಕೂ ಸಾಧ್ಯವಾಗುತ್ತಿಲ್ಲ’ ಎಂದು ಅನಿರುದ್ಧ ಬೇಸರ ಹೊರ ಹಾಕಿದರು.
ಇದನ್ನೂ ಓದಿ: ನಾವು ತುಂಬಾ ಕೆಟ್ಟ ಪರಿಸ್ಥಿತಿಯಲ್ಲಿದ್ದೇವೆ; ಕೊವಿಡ್ನಿಂದ ಆಪ್ತನನ್ನು ಕಳೆದುಕೊಂಡು ಭಾವುಕರಾದ ನಟ ಅನಿರುದ್ಧ್
Published On - 2:55 pm, Sat, 15 May 21