
ಟಾಲಿವುಟ್ ಖ್ಯಾತ ನಟ ಜ್ಯೂ. ಎನ್ಟಿಆರ್ ಅವರಿಗೆ ಇಂದು (ಮೇ 20) ಜನ್ಮದಿನ. ಆದರೆ ಕೊರೊನಾ ವೈರಸ್ ಹಾವಳಿ ಮಿತಿ ಮೀರಿರುವುದರಿಂದ ಈ ಬಾರಿ ಸಾರ್ವಜನಿಕವಾಗಿ ಸಂಭ್ರಮಾಚರಣೆ ಮಾಡಲಾಗುತ್ತಿಲ್ಲ. ಈ ವೇಳೆ ಕೇವಲ ಸೋಶಿಯಲ್ ಮೀಡಿಯಾ ಮೂಲಕ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸಲಾಗುತ್ತಿದೆ. ಈಗಾಗಲೇ ಅಭಿಮಾನಿಗಳು ಕಾಮನ್ ಡಿಪಿ ಹಂಚಿಕೊಂಡು ಸಂಭ್ರಮಿಸುತ್ತಿದ್ದಾರೆ. ಅದರ ಜೊತೆಗೆ ಜ್ಯೂ. ಎನ್ಟಿಆರ್ ಜನ್ಮದಿನದ ಖುಷಿ ಹೆಚ್ಚಿಸಲು ರಾಜಮೌಳಿ ನಿರ್ದೇಶನದ ಆರ್ಆರ್ಆರ್ ಚಿತ್ರತಂಡ ಹೊಸ ಪೋಸ್ಟರ್ ಬಿಡುಗಡೆ ಮಾಡಿದೆ. ಈ ಸಿನಿಮಾದಲ್ಲಿ ಕೊಮರಾಮ್ ಭೀಮ್ ಎಂಬ ಪಾತ್ರಕ್ಕೆ ಜ್ಯೂ. ಎನ್ಟಿಆರ್ ಬಣ್ಣ ಹಚ್ಚುತ್ತಿದ್ದಾರೆ.
ಬಾಹುಬಲಿ ಚಿತ್ರದ ಭಾರಿ ಯಶಸ್ಸಿನ ಬಳಿಕ ನಿರ್ದೇಶಕ ರಾಜಮೌಳಿ ಅವರು ‘ಆರ್ಆರ್ಆರ್’ ಚಿತ್ರಕ್ಕೆ ಆ್ಯಕ್ಷನ್-ಕಟ್ ಹೇಳುತ್ತಿದ್ದಾರೆ. ಹಾಗಾಗಿ ಈ ಸಿನಿಮಾ ಮೇಲೆ ಅಭಿಮಾನಿಗಳಿಗೆ ಹೆಚ್ಚು ನಿರೀಕ್ಷೆ ಇದೆ. ಮುಖ್ಯಭೂಮಿಕೆಯಲ್ಲಿ ರಾಮ್ ಚರಣ್ ಮತ್ತು ಜ್ಯೂ. ಎನ್ಟಿಆರ್ ಅಭಿನಯಿಸುತ್ತಿದ್ದಾರೆ. ಬಾಲಿವುಡ್ ಕಲಾವಿದರಾದ ಆಲಿಯಾ ಭಟ್, ಅಜಯ್ ದೇವಗನ್ ಕೂಡ ನಟಿಸುತ್ತಿದ್ದಾರೆ. ಇಂದು ಜ್ಯೂ. ಎನ್ಟಿಆರ್ ಬರ್ತ್ಡೇ ಪ್ರಯುಕ್ತ, ಅವರು ನಿಭಾಯಿಸುತ್ತಿರುವ ಕೊಮರಾಮ್ ಭೀಮ್ ಪಾತ್ರದ ಝಲಕ್ ಅನ್ನು ಅಭಿಮಾನಿಗಳಿಗೆ ತೋರಿಸಲಾಗಿದೆ.
ಕೊರೊನಾ ವೈರಸ್ ಕಾರಣದಿಂದ ಆರ್ಆರ್ಆರ್ ಸಿನಿಮಾದ ಶೂಟಿಂಗ್ಗೆ ಬ್ರೇಕ್ ಹಾಕಲಾಗಿದೆ. ಮೇ 10ರಂದು ಜ್ಯೂ. ಎನ್ಟಿಆರ್ ಅವರಿಗೂ ಕೊರೊನಾ ವೈರಸ್ ಪಾಸಿಟಿವ್ ಆಗಿತ್ತು. ಆ ಬಗ್ಗೆ ಅವರು ಸೋಶಿಯಲ್ ಮೀಡಿಯಾ ಮೂಲಕ ಮಾಹಿತಿ ಹಂಚಿಕೊಂಡಿದ್ದರು. ಆಗಾಗ ಅವರು ತಮ್ಮ ಆರೋಗ್ಯದ ಬಗ್ಗೆ ಅಪ್ಡೇಟ್ ನೀಡುತ್ತಿದ್ದಾರೆ. ಇನ್ನೂ ಅವರು ಕೊವಿಡ್ನಿಂದ ಗುಣಮುಖರಾಗಿಲ್ಲ. ಅವರು ಮತ್ತು ಅವರ ಕುಟುಂಬದ ಸದಸ್ಯರು ಐಸೊಲೇಟ್ ಆಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
‘ಪ್ರೀತಿಯ ಅಭಿಮಾನಿಗಳೇ, ನಿಮ್ಮೆಲ್ಲರಿಗೂ ಧನ್ಯವಾದಗಳು. ನಿಮ್ಮ ಮೆಸೇಜ್, ವಿಡಿಯೋಗಳು ಹಾಗೂ ಶುಭ ಹಾರೈಕೆಗಳನ್ನು ನೋಡಿದ್ದೇನೆ. ನಿಮ್ಮ ಪ್ರೀತಿಗೆ ನಾನು ಋಣಿ ಆಗಿದ್ದೇನೆ. ಕೊವಿಡ್ನಿಂದ ನಾನು ಚೇತರಿಸಿಕೊಳ್ಳುತ್ತಿದ್ದೇನೆ. ಆದಷ್ಟು ಬೇಗ ನೆಗೆಟಿವ್ ರಿಪೋರ್ಟ್ ಬರಲಿದೆ ಎಂಬ ನಂಬಿಕೆ ಇದೆ. ಪ್ರತಿವರ್ಷ ನೀವೆಲ್ಲ ನನ್ನ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಮಾಡುತ್ತಿದ್ದಿರಿ. ಆದರೆ ಈ ಕಷ್ಟದ ಸಮಯದಲ್ಲಿ ನೀವೆಲ್ಲರೂ ಮನೆಯಲ್ಲಿ ಸುರಕ್ಷಿತವಾಗಿದ್ದರೆ ಅದೇ ನನಗೆ ಬಹುದೊಡ್ಡ ಉಡುಗೊರೆ’ ಎಂದು ಜ್ಯೂ. ಎನ್ಟಿಆರ್ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ:
ಕೊರೊನಾ ಬಗ್ಗೆ ಕನ್ನಡದಲ್ಲೇ ಜಾಗೃತಿ ಮೂಡಿಸಿದ್ದ ಜೂ. ಎನ್ಟಿಆರ್ಗೆ ಕೊರೊನಾ ಸೋಂಕು ದೃಢ
ಉಲ್ಟಾಪಲ್ಟಾ ಆಯ್ತು ರಾಜಮೌಳಿ ಲೆಕ್ಕಾಚಾರ; ಅಭಿಮಾನಿಗಳಿಗೆ ಸಿಕ್ಕಾಪಟ್ಟೆ ಬೇಸರ
(Jr NTR Birthday: Komaram Bheem New Poster released by Rajamouli directorial RRR film)