
ಚಿತ್ರರಂಗಗಳಲ್ಲಿ ಫ್ಯಾನ್ಸ್ ವಾರ್ಗಳು ಸಾಮಾನ್ಯ. ಕನ್ನಡದಲ್ಲಿಯೂ ಇದು ದೊಡ್ಡ ಮಟ್ಟದಲ್ಲಿಯೇ ಇದೆ. ನೆರೆಯ ತೆಲುಗು ರಾಜ್ಯಗಳಲ್ಲಿ ಅಂತೂ ಫ್ಯಾನ್ಸ್ ವಾರ್ಗೆ ದೊಡ್ಡ ಇತಿಹಾಸವೇ ಇದೆ. ನಂದಮೂರಿ ಕುಟುಂಬ ಹಾಗೂ ಮೆಗಾ ಕುಟುಂಬದ ಫ್ಯಾನ್ಸ್ಗಳ ನಡುವೆ ಹಾದಿ-ಬೀದಿ ಜಗಳಗಳೇ ನಡೆದಿವೆ. ಕೆಲವು ಕೊಲೆಗಳು ಸಹ ನಡೆದುಬಿಟ್ಟಿವೆ. ಆದರೆ ಇತ್ತೀಚೆಗೆ ಎಲ್ಲ ಸ್ಟಾರ್ ನಟರು ಪರಸ್ಪರ ಆತ್ಮೀಯತೆ ತೋರಿಸುತ್ತಾ, ಪರಸ್ಪರರ ಸಿನಿಮಾಗಳಿಗೆ ಬೆಂಬಲ ನೀಡುತ್ತಿರುವ ಕಾರಣ ಫ್ಯಾನ್ಸ್ ವಾರ್ ಸಹ ಕಡಿಮೆ ಆಗಿತ್ತು. ಆದರೆ ಇದೀಗ ಪ್ರಭಾಸ್ ಸಿನಿಮಾ ನಿರ್ದೇಶಕ ಜೂ ಎನ್ಟಿಆರ್ ಅವರಿಗೆ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದು, ಜೂ ಎನ್ಟಿಆರ್ ಅಭಿಮಾನಿಗಳು ಸಹಜವಾಗಿಯೇ ಕೆರಳಿ ಕೆಂಡವಾಗಿದ್ದಾರೆ.
ಪ್ರಭಾಸ್ ನಟನೆಯ ‘ರಾಜಾ ಸಾಬ್’ ಸಿನಿಮಾದ ಹಾಡೊಂದು ಇತ್ತೀಚೆಗೆ ಬಿಡುಗಡೆ ಆಯ್ತು. ಈ ಸಂದರ್ಭದಲ್ಲಿ ಮಾತನಾಡಿದ್ದ ಸಿನಿಮಾದ ನಿರ್ದೇಶಕ ಮಾರುತಿ, ಜೂ ಎನ್ಟಿಆರ್ ಬಗ್ಗೆ ಪರೋಕ್ಷ ಟಾಂಗ್ ನೀಡಿದ್ದರು. ಇದು ಜೂ ಎನ್ಟಿಆರ್ ಅಭಿಮಾನಿಗಳನ್ನು ಕೆರಳಿಸಿದ್ದು, ಜೂ ಎನ್ಟಿಆರ್ ಅಭಿಮಾನಿಗಳು ಈಗ ಪ್ರಭಾಸ್ ವಿರುದ್ಧ ಟ್ರೋಲಿಂಗ್ ಆರಂಭಿಸಿದ್ದು, ‘ರಾಜಾ ಸಾಬ್’ ಸಿನಿಮಾ ನೋಡದಂತೆ ಜೂ ಎನ್ಟಿಆರ್ ಅಭಿಮಾನಿಗಳಿಗೆ ಕರೆ ನೀಡಿದ್ದಾರೆ. ಅಷ್ಟಕ್ಕೂ ಮಾರುತಿ ಹೇಳಿದ್ದೇನು?
‘ರಾಜಾ ಸಾಬ್’ ಹಾಡು ಬಿಡುಗಡೆ ವೇಳೆ, ನಿರ್ದೇಶಕ ಮಾರುತಿ ಪ್ರಭಾಸ್ ಅನ್ನು ವಿಪರೀತ ಕೊಂಡಾಡಿದರು. ‘ನಾನು ರೆಬೆಲ್ ಯೂನಿವರ್ಸಿಟಿಯ ವಿದ್ಯಾರ್ಥಿ. ನನ್ನ ಪ್ರತಿಭೆ ನೋಡಿ ರೆಬೆಲ್ ಪ್ರಭಾಸ್ ಅವರು ತಮ್ಮ ಯೂನಿವರ್ಸಿಟಿಯಲ್ಲಿ ಅವಕಾಶ ನೀಡಿದ್ದಾರೆ. ಪ್ರಭಾಸ್ ಫೋಟೊವನ್ನು ಜೇಬಿನಲ್ಲಿ ಇರಿಸಿಕೊಂಡರೂ ಸಾಕು ಯಾರು ಬೇಕಾದರು ದೊಡ್ಡ ನಿರ್ದೇಶಕರಾಗಿಬಿಡುತ್ತಾರೆ’ ಎಂದೆಲ್ಲ ವಿಪರೀತ ಹೊಗಳಿದರು. ಮುಂದುವರೆದು, ‘ಈ ಸಂಕ್ರಾಂತಿ ಹಬ್ಬಕ್ಕೆ ಅಭಿಮಾನಿಗಳು ಕಾಲರ್ ಮೇಲೇರಿಸುತ್ತಾರೆ ಎಂದು ನಾನು ಹೇಳುವುದಿಲ್ಲ. ಏಕೆಂದರೆ ಕಾಲರ್ ಮೇಲೇರಿಸುವುದು ಪ್ರಭಾಸ್ ಪಾಲಿಗೆ ಅತ್ಯಂತ ಚಿಕ್ಕ ವಿಷಯ’ ಎಂದು ಮಾರುತಿ ಹೇಳಿದರು. ಮಾರುತಿ ಅವರ ಈ ಮಾತೇ ಜೂ ಎನ್ಟಿಆರ್ ಅಭಿಮಾನಿಗಳನ್ನು ಕೆರಳಿಸಿರುವುದು.
ಇದನ್ನೂ ಓದಿ:ಪ್ರಭಾಸ್ ನಟನೆಯ ‘ಸ್ಪಿರಿಟ್’ ಸಿನಿಮಾದಲ್ಲಿ ರಣಬೀರ್ ಕಪೂರ್ ಅತಿಥಿ ಪಾತ್ರ?
ಜೂ ಎನ್ಟಿಆರ್ ನಟನೆಯ ‘ವಾರ್ 2’ ಸಿನಿಮಾದ ಬಿಡುಗಡೆ ಸಂದರ್ಭದಲ್ಲಿ ಜೂ ಎನ್ಟಿಆರ್ ಅವರು ಪ್ರೀ ರಿಲೀಸ್ ಕಾರ್ಯಕ್ರಮದಲ್ಲಿ ಮಾತನಾಡಿ, ಕಾಲರ್ ಮೇಲೇರಿಸಿದ್ದರು. ಮಾತ್ರವಲ್ಲದೆ, ಈ ಸಿನಿಮಾ ನೋಡಿದ ಮೇಲೆ ಅಭಿಮಾನಿಗಳು, ಚಿತ್ರಮಂದಿರದಿಂದ ಕಾಲರ್ ಮೇಲೇರಿಸಿಕೊಂಡು ಬರುತ್ತಾರೆ ಎಂದಿದ್ದರು. ಸ್ವತಃ ಜೂ ಎನ್ಟಿಆರ್ ಕಾಲರ್ ಮೇಲೇರಿಸಿ ಫೋಟೊಕ್ಕೆ ಫೋಸು ನೀಡಿದ್ದರು. ಆದರೆ ಈಗ ಮಾರುತಿ, ಜೂ ಎನ್ಟಿಆರ್ ಅವರ ಮಾತಿಗೆ ಟಾಂಗ್ ಕೊಟ್ಟಿರುವುದು ಜೂ ಎನ್ಟಿಆರ್ ಅಭಿಮಾನಿಗಳನ್ನು ಕೆರಳಿಸಿದೆ.
ಪ್ರಭಾಸ್ ನಟನೆಯ ‘ದಿ ರಾಜಾ ಸಾಬ್’ ಸಿನಿಮಾ ಹಾರರ್ ಕಾಮಿಡಿ ಸಿನಿಮಾ ಆಗಿದ್ದು, ಪ್ರಭಾಸ್ ಎರಡು ಶೇಡ್ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರಭಾಸ್ ಲವ್ವರ್ ಬಾಯ್ ಆಗಿ ಹಾಗೂ ಅತೃಪ್ತ ಆತ್ಮದ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾದಲ್ಲಿ ಮಾಳವಿಕಾ ಮೋಹನನ್, ರಿಧಿ ಕಪೂರ್ ಮತ್ತು ನಿಧಿ ಅಗರ್ವಾಲ್ ಅವರುಗಳು ನಾಯಕಿಯರಾಗಿ ನಟಿಸಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ