‘ಸಮಯ ಕೊಡಿ ಇಲ್ಲ ಹಣ ಕೊಡಿ’: ರಿಷಬ್ ಸಿನಿಮಾ ನಿರ್ದೇಶಕನ ಡಿಮ್ಯಾಂಡ್
Rishab Shetty movie: ರಿಷಬ್ ಶೆಟ್ಟಿ ನಟಿಸಲಿರುವ ತೆಲುಗು ಪ್ಯಾನ್ ಇಂಡಿಯಾ ಸಿನಿಮಾ ‘ಜೈ ಹನುಮಾನ್’ ಸಿನಿಮಾದ ನಿರ್ದೇಶಕ ಪ್ರಶಾಂತ್ ವರ್ಮಾ ವೃತ್ತಿಪರತೆ ಕೊರತೆಯ ಆರೋಪ ಎದುರಿಸುತ್ತಿದ್ದಾರೆ. ಇದೀಗ ಗೋವಾ ಸಿನಿಮೋತ್ಸವದಲ್ಲಿ ಅವರು ನಿರ್ಮಾಪಕರುಗಳಿಗೆ ಷರತ್ತೊಂದನ್ನು ವಿಧಿಸಿದ್ದಾರೆ. ಪ್ರಶಾಂತ್ ವರ್ಮಾ ವಿಧಿಸಿರುವ ಷರತ್ತು ಏನು? ಇಲ್ಲಿದೆ ನೋಡಿ ಮಾಹಿತಿ...

ರಿಷಬ್ ಶೆಟ್ಟಿ (Rishab Shetty) ನಟಿಸಿ ನಿರ್ದೇಶಿಸಿರುವ ‘ಕಾಂತಾರ: ಚಾಪ್ಟರ್ 1’ ಸಿನಿಮಾ ಭಾರಿ ದೊಡ್ಡ ಹಿಟ್ ಆಗಿದೆ. ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಭಾರಿ ಸದ್ದು-ಸುದ್ದಿ ಮಾಡಿದೆ. ‘ಕಾಂತಾರ: ಚಾಪ್ಟರ್ 1’ ಸಿನಿಮಾದ ಬಳಿಕ ರಿಷಬ್ ಶೆಟ್ಟಿ ತೆಲುಗಿನ ಪ್ಯಾನ್ ಇಂಡಿಯಾ ಸಿನಿಮಾ ‘ಜೈ ಹನುಮಾನ್’ ಸಿನಿಮಾದ ಚಿತ್ರೀಕರಣದಲ್ಲಿ ತೊಡಗಿಕೊಳ್ಳುವವರಿದ್ದರು. ಆದರೆ ಆ ಸಿನಿಮಾ ನಿರ್ದೇಶನ ಮಾಡಲಿದ್ದ ಪ್ರಶಾಂತ್ ವರ್ಮಾ ಖುದ್ದು ವಿವಾದದಲ್ಲಿ ಸಿಲುಕಿದ್ದಾರೆ. ಕೆಲ ನಿರ್ಮಾಪಕರು ಪ್ರಶಾಂತ್ ವರ್ಮಾ ವಿರುದ್ಧ ನಿರ್ಮಾಪಕರ ಸಂಘಕ್ಕೆ ದೂರು ಸಲ್ಲಿಸಿದ್ದಾರೆ.
ಪ್ರಶಾಂತ್ ವರ್ಮಾ, ಅಡ್ವಾನ್ಸ್ ಹಣ ಪಡೆದು ಸಿನಿಮಾ ಪ್ರಾರಂಭ ಮಾಡುತ್ತಿಲ್ಲ, ಸಿನಿಮಾಕ್ಕೆ ಅತಿಯಾದ ಸಮಯ ತೆಗೆದುಕೊಳ್ಳುತ್ತಿದ್ದಾರೆ ಎಂಬ ದೂರುಗಳು ಕೆಲ ನಿರ್ಮಾಪಕರುಗಳಿಂದ ಕೇಳಿ ಬಂದಿದೆ. ಈ ಬಗ್ಗೆ ಸ್ವತಃ ಪ್ರಶಾಂತ್ ವರ್ಮಾ ಕೆಲ ವಾರಗಳ ಹಿಂದೆ ಅಧಿಕೃತವಾಗಿ ಹೇಳಿಕೆ ಬಿಡುಗಡೆ ಮಾಡಿ ಸ್ಪಷ್ಟನೆ ನೀಡುವ ಪ್ರಯತ್ನ ಮಾಡಿದ್ದರು. ಆದರೆ ನಿರ್ಮಾಪಕರ ಕಡೆಯಿಂದ ಒತ್ತಡ ಹೆಚ್ಚಾಗುತ್ತಲೂ ಪ್ರಶಾಂತ್, ಗೋವಾ ಸಿನಿಮೋತ್ಸವದಲ್ಲಿ ಹೇಳಿಕೆಯೊಂದನ್ನು ನೀಡಿದ್ದಾರೆ.
ಸಿನಿಮಾಗಳ ಪೋಸ್ಟ್ ಪ್ರೊಡಕ್ಷನ್ ಬಗ್ಗೆ ಮಾತನಾಡಿರುವ ಪ್ರಶಾಂತ್ ವರ್ಮಾ, ‘ಸಿನಿಮಾಗಳ ಬಿಡುಗಡೆ ದಿನಾಂಕದ ಮೇಲೆ ನಿರ್ದೇಶಕನಿಗೆ ಹಕ್ಕು ಇರಬೇಕು. ಬಿಡುಗಡೆ ದಿನಾಂಕವನ್ನು ನಿರ್ದೇಶಕನೇ ನಿರ್ಧಾರ ಮಾಡಬೇಕು’ ಎಂದಿದ್ದಾರೆ. ಮುಂದುವರೆದು, ‘ನನಗೆ ಅರ್ಥ ಆಗಿರುವುದೇನೆಂದರೆ ವಿಎಫ್ಎಕ್ಸ್ ಕಲಾವಿದರಿಗೆ ಸಾಕಷ್ಟು ಕೊಡಬೇಕಾಗುತ್ತದೆ. ಆದರೆ ನಿಮ್ಮಲ್ಲಿ ಹಣ ಇದ್ದರೆ ಅದನ್ನು ಯಾವುದಾದರೂ ಸಂಸ್ಥೆಗೆ ನೀಡಿ ಅವರ ಕೈಯಲ್ಲಿ ವಿಎಫ್ಎಕ್ಸ್ ಮಾಡಿಸಿಕೊಳ್ಳಿ’ ಎಂದಿದ್ದಾರೆ ಪ್ರಶಾಂತ್ ವರ್ಮಾ.
ಇದನ್ನೂ ಓದಿ: ಹಿರಿಯ ದೈವ ನರ್ತಕರ ಸನ್ಮಾನಿಸಿದ ರಿಷಬ್ ಶೆಟ್ಟಿ: ವಿಡಿಯೋ
‘ನನ್ನ ಮೊದಲ ಕೆಲವು ಸಿನಿಮಾಗಳಲ್ಲಿ ಆದ ಕೆಟ್ಟ ಅನುಭವದ ಬಳಿಕ ಈಗ ಯಾವುದೇ ಹೊಸ ಸಿನಿಮಾಕ್ಕೆ ಒಪ್ಪಂದ ಮಾಡಿಕೊಳ್ಳುವಾಗಲೂ ಕಡ್ಡಾಯವಾಗಿ ಷರತ್ತು ಹಾಕುತ್ತೇನೆ, ಅದೇನೆಂದರೆ ನನ್ನ ಸಿನಿಮಾಗಳ ಬಿಡುಗಡೆ ದಿನಾಂಕವನ್ನು ನಾನೇ ನಿಗದಿ ಪಡಿಸುತ್ತೇನೆ ಎಂದು. ಅದಿಲ್ಲವಾದರೆ ನಾನು ಸಿನಿಮಾ ನಿರ್ದೇಶಿಸಲು ಒಪ್ಪಿಕೊಳ್ಳುವುದಿಲ್ಲ. ಸಿನಿಮಾ ಚಿತ್ರೀಕರಣ ಆದ ಬಳಿಕವೇ ಹೆಚ್ಚು ಕೆಲಸ ಇರುತ್ತದೆ. ಅದನ್ನು ಸೂಕ್ತವಾಗಿ ರೆಡಿ ಮಾಡಬೇಕಾಗುತ್ತದೆ. ನಿರ್ಮಾಪಕರು ನನಗೆ ಸಮಯ ಕೊಡಲು ಇಚ್ಛೆ ಹೊಂದಿದ್ದರಷ್ಟೆ ಸಿನಿಮಾ ಮಾಡುತ್ತೇನೆ’ ಎಂದಿದ್ದಾರೆ.
ಪ್ರಶಾಂತ್ ವರ್ಮಾ ಕೈಯಲ್ಲಿ ಈಗ ಕೆಲವು ಸಿನಿಮಾಗಳಿವೆ. ರಿಷಬ್ ಶೆಟ್ಟಿ ನಟನೆಯ ‘ಜೈ ಹನುಮಾನ್ ನಿರ್ದೇಶನ ಮಾಡಬೇಕಿದೆ. ಅದರ ಜೊತೆಗೆ ಹೊಂಬಾಳೆ ಫಿಲಮ್ಸ್ಗಾಗಿ ಅವರು ಒಂದು ಸಿನಿಮಾ ಮಾಡಲು ಅಡ್ವಾನ್ಸ್ ಪಡೆದಿದ್ದಾರೆ. ಮೈತ್ರಿ ಮೂವಿ ಮೇಕರ್ಸ್ ಜೊತೆಗೂ ಒಪ್ಪಂದ ಮಾಡಿಕೊಂಡಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 1:06 pm, Wed, 26 November 25




