252 ಕೋಟಿ ರೂ. ಡ್ರಗ್ಸ್ ಕೇಸ್ ವಿಚಾರಣೆಗೆ ಬಂದ ಒರಿ: ಮುತ್ತಿಕೊಂಡ ಅಭಿಮಾನಿಗಳು
ಡಗ್ಸ್ ಕೇಸ್ ವಿಚಾರಣೆಗೆ ಒರಿ ಬಂದಾಗ ಫೋಟೋ ತೆಗೆದುಕೊಳ್ಳಬೇಕು ಎಂಬ ಆಸೆಯಿಂದ ಅಭಿಮಾನಿಗಳು ಮುಗಿಬಿದ್ದರು. 252 ಕೋಟಿ ರೂ. ಬೆಲೆಯ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಒರಿ ಅವರನ್ನು ಇಂದು (ನ.26) ವಿಚಾರಣೆಗೆ ಒಳಪಡಿಸಲಾಗಿದೆ. ಬಾಲಿವುಡ್ ಸೆಲೆಬ್ರಿಟಿಗಳ ಜತೆ ಒರಿ ಸ್ನೇಹ ಹೊಂದಿದ್ದಾರೆ. ಅದರಲ್ಲೂ ಸ್ಟಾರ್ ಕಿಡ್ಗಳ ಜೊತೆ ಅವರು ಬಹಳ ಆಪ್ತವಾಗಿದ್ದಾರೆ.

ಹಿಂದಿ ಚಿತ್ರರಂಗದ ಬಹುತೇಕ ಸೆಲೆಬ್ರಿಟಿಗಳಿಗೆ ಒರಿ ಅಲಿಯಾಸ್ ಒರ್ಹಾನ್ ಅವತ್ರಮಣಿ (Orhan Awatramani) ಬೆಸ್ಟ್ ಫ್ರೆಂಡ್ ಆಗಿದ್ದಾರೆ. ಎಲ್ಲ ಸೆಲೆಬ್ರಿಟಿಗಳ ಪಾರ್ಟಿಯಲ್ಲಿ ಒರಿ ಹಾಜರಿ ಹಾಕುತ್ತಾರೆ. ಆ ಮೂಲಕ ಅವರು ಸಿಕ್ಕಾಪಟ್ಟೆ ಪ್ರಚಾರ ಪಡೆಯುತ್ತಾರೆ. ಈಗ ಒರಿ ಹೆಸರು ಡ್ರಗ್ಸ್ ಕೇಸ್ನಲ್ಲಿ (Drugs Case) ತಳುಕುಹಾಕಿಕೊಂಡಿದೆ. 252 ಕೋಟಿ ರೂ. ಮೌಲ್ಯದ ಡ್ರಗ್ಸ್ ಜಪ್ತಿ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಒರಿ ಅವರನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಅಧಿಕಾರಿಗಳ ಎದುರು ಹಾಜರಾಗಲು ಬಂದ ಒರಿ (Orry) ಅವರನ್ನು ನೋಡಲು ಅಭಿಮಾನಿಗಳು ಮುಗಿ ಬಿದ್ದಿದ್ದಾರೆ.
ಮುಂಬೈ ಪೊಲೀಸರ ಆ್ಯಂಟಿ ನಾರ್ಕೋಟಿಕ್ ಸೆಲ್ ಅಧಿಕಾರಿಗಳು ಒರಿ ಅವರಿಗೆ ನೋಟಿಸ್ ನೀಡಿದ್ದರು. ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಕಳಿಸಲಾಗಿತ್ತು. ವಿಚಾರಣೆಗೆ ಹಾಜರಾಗಲು ಸಮಯಾವಕಾಶ ಬೇಕು ಎಂದು ಅವರು ಈ ಮೊದಲು ಮನವಿ ಮಾಡಿಕೊಂಡಿದ್ದರು. ಇಂದು (ನವೆಂಬರ್ 26) ಒರಿ ಅವರು ಖುದ್ದಾಗಿ ಬಂದು ವಿಚಾರಣೆ ಎದುರಿಸಿದ್ದಾರೆ.
ಆ್ಯಂಟಿ ನಾರ್ಕೋಟಿಕ್ ಸೆಲ್ ಕಚೇರಿಗೆ ಒರಿ ಅವರು ಬಂದಾಗ ಅಪಾರ ಸಂಖ್ಯೆಯ ಜನರು ಜಮಾಯಿಸಿದ್ದರು. ಒರಿ ಜೊತೆ ಫೋಟೋ ತೆಗೆದುಕೊಳ್ಳಬೇಕು ಎಂಬ ಆಸೆಯಿಂದ ಅಭಿಮಾನಿಗಳು ಮುಗಿಬಿದ್ದರು. ಜನರು ಹಾಗೂ ಪಾಪರಾಜಿಗಳು ಒರಿ ಅವರನ್ನು ಮುತ್ತಿಕೊಂಡರು. ಅವರಿಗೆ ಎಷ್ಟು ಜನಪ್ರಿಯತೆ ಇದೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ ಆಗಿದೆ. ಒರಿ ಅವರ ಅನೇಕ ವಿಡಿಯೋಗಳು ವೈರಲ್ ಆಗಿವೆ.
View this post on Instagram
ಸೋಶಿಯಲ್ ಮೀಡಿಯಾದಲ್ಲಿ ಒರಿ ಅವರು ಬಹಳ ಆ್ಯಕ್ಟೀವ್ ಆಗಿದ್ದಾರೆ. ಅವರ ವರ್ತನೆ ಕಂಡರೆ ಜನರಿಗೆ ವಿಚಿತ್ರ ಎನಿಸುತ್ತದೆ. ಬಾಲಿವುಡ್ ಸೆಲೆಬ್ರಿಟಿಗಳ ಜೊತೆ ಒರಿ ಸ್ನೇಹ ಹೊಂದಿದ್ದಾರೆ. ಅದರಲ್ಲೂ ಸ್ಟಾರ್ ಕಿಡ್ಗಳ ಜೊತೆ ಅವರು ಹೆಚ್ಚು ಆಪ್ತವಾಗಿದ್ದಾರೆ. ಸೆಲೆಬ್ರಿಟಿಗಳು ಆಯೋಜಿಸುವ ಪಾರ್ಟಿಯಲ್ಲಿ ಒರಿ ಕಾಣಿಸಿಕೊಳ್ಳುತ್ತಾರೆ. ಫಾರಿನ್ ಟ್ರಿಪ್ಗಳಲ್ಲಿ ಕೂಡ ಸೆಲೆಬ್ರಿಟಿಗಳಿಗೆ ಅವರು ಸಾಥ್ ನೀಡುತ್ತಾರೆ.
ಇದನ್ನೂ ಓದಿ: ಶ್ರೀದೇವಿ ಮಗಳು ಜಾನ್ವಿ ಕಪೂರ್ಗೆ ಒರಿ ಜೊತೆ ಮದುವೆ ಆಗಿದೆಯಾ?
252 ಕೋಟಿ ರೂ. ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ನ ಕೆಲವು ಸೆಲೆಬ್ರಿಟಿಗಳನ್ನು ವಿಚಾರಣೆಗೆ ಒಳಪಡಿಸಲಾಗುತ್ತಿದೆ. ಶ್ರದ್ಧಾ ಕಪೂರ್ ಅವರ ಸಹೋದರ ಸಿದ್ಧಾಂತ್ ಕೂಡ ಈಗಾಗಲೇ ವಿಚಾರಣೆಯಲ್ಲಿ ಪಾಲ್ಗೊಂಡಿದ್ದಾರೆ. ಈಗ ಒರಿ ವಿಚಾರಣೆ ಮಾಡಲಾಗಿದೆ. ಇನ್ಸ್ಟಾಗ್ರಾಮ್ನಲ್ಲಿ ಒರಿ ಅವರನ್ನು 20 ಲಕ್ಷ ಜನರು ಫಾಲೋ ಮಾಡುತ್ತಾರೆ. ಬೋನಿ ಕಪೂರ್, ಊರ್ವಶಿ ರೌಟೇಲ, ಅನನ್ಯಾ ಪಾಂಡೆ, ಖುಷಿ ಕಪೂರ್, ದೀಪಿಕಾ ಪಡುಕೋಣೆ, ಸುಹಾನಾ ಖಾನ್ ಮುಂತಾದ ಸೆಲೆಬ್ರಿಟಿಗಳ ಜೊತೆ ಇರುವ ಫೊಟೋವನ್ನು ಒರಿ ಹಂಚಿಕೊಂಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




