‘ನನ್ನೊಂದಿಗೆ ಸಿನಿಮಾ ಮಾಡಿ’: ತಮಿಳು ನಿರ್ದೇಶಕನ ಬಳಿ ಮನವಿ ಮಾಡಿದ ಜೂ ಎನ್​ಟಿಆರ್

|

Updated on: Sep 17, 2024 | 10:37 PM

ಜೂ ಎನ್​ಟಿಆರ್ ನಟನೆಯ ‘ದೇವರ’ ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ. ಈ ನಡುವೆ ಜೂ ಎನ್​ಟಿಆರ್, ತಮ್ಮ ಮೆಚ್ಚಿನ ನಿರ್ದೇಶಕರ ಬಳಿ ಮನವಿ ಮಾಡಿದ್ದು, ತಮಗಾಗಿ ಸಿನಿಮಾ ನಿರ್ದೇಶನ ಮಾಡುವಂತೆ ಕೇಳಿಕೊಂಡಿದ್ದಾರೆ. ಯಾರು ಆ ನಿರ್ದೇಶಕ?

‘ನನ್ನೊಂದಿಗೆ ಸಿನಿಮಾ ಮಾಡಿ’: ತಮಿಳು ನಿರ್ದೇಶಕನ ಬಳಿ ಮನವಿ ಮಾಡಿದ ಜೂ ಎನ್​ಟಿಆರ್
Follow us on

ಜೂ ಎನ್​ಟಿಆರ್, ತೆಲುಗಿನ ಸ್ಟಾರ್ ನಟ ಮಾತ್ರವಲ್ಲ ವರ್ಸಟೈಲ್ ನಟ. ನಟನೆ, ಡ್ಯಾನ್ಸ್, ಫೈಟ್ ಎಲ್ಲದಕ್ಕೂ ಸೈ. ಯಾವುದೇ ಸನ್ನಿವೇಶವಾದರೂ ಆಳಕ್ಕಿಳಿದು ನಟಿಸುವ ನಟ. ಸ್ವತಃ ರಾಜಮೌಳಿ ಹೆಚ್ಚು ಬಾರಿ ಕೆಲಸ ಮಾಡಿದ ಏಕೈಕ ನಟ ಜೂ ಎನ್​ಟಿಆರ್. ರಾಜಮೌಳಿಯವರೇ ಹೇಳಿಕೊಂಡಿರುವಂತೆ ಜೂ ಎನ್​ಟಿಆರ್ ಅವರ ನಟನಾ ಪ್ರತಿಭೆಯನ್ನು ಯಾವ ನಿರ್ದೇಶಕರೂ ಸರಿಯಾಗಿ ಬಳಸಿಕೊಂಡಿಲ್ಲವಂತೆ. ಹಲವು ದೊಡ್ಡ ನಿರ್ದೇಶಕರೇ ಜೂ ಎನ್​ಟಿಆರ್ ಜೊತೆಗೆ ಕೆಲಸ ಮಾಡಲು ತುದಿಗಾಲಲ್ಲಿ ನಿಂತಿದ್ದಾರೆ. ಆದರೆ ಜೂ ಎನ್​ಟಿಆರ್​ಗೆ ತಮಿಳಿನ ಒಬ್ಬ ನಿರ್ದೇಶಕರ ಸಿನಿಮಾದಲ್ಲಿ ನಟಿಸುವ ಆಸೆಯಂತೆ. ಆ ಬಗ್ಗೆ ಅವರೇ ಹೇಳಿಕೊಂಡಿದ್ದಾರೆ.

‘ದೇವರ’ ಸಿನಿಮಾದ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿರುವ ಜೂ ಎನ್​ಟಿಆರ್, ತಮ್ಮ ಸಿನಿಮಾದ ಪ್ರಚಾರಕ್ಕೆ ಚೆನ್ನೈಗೆ ತೆರಳಿದ್ದರು. ಸಂದರ್ಶನವೊಂದರಲ್ಲಿ ‘ತಮಿಳು ಸಿನಿಮಾ ಯಾವಾಗ ಮಾಡುತ್ತೀರಿ?’ ಎಂಬ ಪ್ರಶ್ನೆ ಜೂ ಎನ್​ಟಿಆರ್​ಗೆ ಎದುರಾಗಿದೆ. ಕೂಡಲೇ ಉತ್ತರಿಸಿರುವ ಜೂ ಎನ್​ಟಿಆರ್, ನಾನು ವೆಟ್ರಿಮಾರನ್ ಅವರ ದೊಡ್ಡ ಅಭಿಮಾನಿ, ಈ ಮೂಲಕ ಅವರ ಬಳಿ ಮನವಿ ಮಾಡುತ್ತಿದ್ದೇನೆ, ಸರ್ ದಯವಿಟ್ಟು ನನ್ನೊಂದಿಗೆ ಒಂದು ತಮಿಳು ಸಿನಿಮಾ ಮಾಡಿ, ಆ ನಂತರ ಬೇಕಾದರೆ ನಾವು ಅದನ್ನು ತೆಲುಗಿಗೆ ಡಬ್ ಮಾಡಿಕೊಳ್ಳೋಣ. ದಯವಿಟ್ಟು ನನ್ನೊಂದಿಗೆ ಸಿನಿಮಾ ಮಾಡಿ’ ಎಂದು ಮನವಿ ಮಾಡಿದ್ದಾರೆ.

ಇದನ್ನೂ ಓದಿ:ಅಭಿಮಾನಿಯ ಕೊನೆ ಆಸೆ ಈಡೇರಿಸಲು ಮುಂದಾದ ಜೂ ಎನ್​ಟಿಆರ್

ಜೂ ಎನ್​ಟಿಆರ್​ಗೆ ವೆಟ್ರಿಮಾರನ್ ಸಿನಿಮಾಗಳೆಂದರೆ ಬಹಳ ಇಷ್ಟವಂತೆ. ಅವರೊಟ್ಟಿಗೆ ಕೆಲಸ ಮಾಡುವ ಆಸೆಯಿದೆಯಂತೆ. ಈ ಹಿಂದೆ ವೆಟ್ರಿಮಾರನ್ ಸಹ ಜೂ ಎನ್​ಟಿಆರ್ ಜೊತೆ ಕೆಲಸ ಮಾಡುವ ಉತ್ಸಾಹ ವ್ಯಕ್ತಪಡಿಸಿದ್ದರು. ‘ಅಸುರನ್’ ಸಿನಿಮಾ ಮುಗಿದ ಬಳಿಕ ಹೊಸ ಸಿನಿಮಾಕ್ಕಾಗಿ ಜೂ ಎನ್​ಟಿಆರ್ ಜೊತೆ ಮಾತನಾಡಿದ್ದರಂತೆ. ಇಬ್ಬರಿಗೂ ಡೇಟ್ಸ್ ಸಮಸ್ಯೆ ಎದುರಾದ ಕಾರಣ ಆ ಸಿನಿಮಾ ಟೇಕ್ ಆಫ್ ಆಗಲಿಲ್ಲವಂತೆ.

ವೆಟ್ರಿಮಾರನ್ ಹಲವು ನಟರ ಫೇವರೇಟ್ ನಿರ್ದೇಶಕ. ‘ಪೊಲ್ಲಾಧವನ್’, ‘ಆಡುಕುಳಂ’, ‘ವಿಸಾರನೈ’, ‘ವಡಾ ಚೆನ್ನೈ’, ‘ಅಸುರನ್’, ‘ವಿಡುದಲೈ’ ಸಿನಿಮಾಗಳನ್ನು ವೆಟ್ರಿಮಾರನ್ ನಿರ್ದೇಶನ ಮಾಡಿದ್ದಾರೆ. ಇದೀಗ ವೆಟ್ರಿಮಾರನ್ ನಿರ್ದೇಶನದ ‘ವಿಡುದಲೈ ಪಾರ್ಟ್ 2’ ಸಿನಿಮಾ ಬಿಡುಗಡೆ ಆಗಲು ಸಜ್ಜಾಗಿದೆ. ಇನ್ನು ಜೂ ಎನ್​ಟಿಆರ್ ನಟನೆಯ ‘ದೇವರ’ ಸಿನಿಮಾ ಸೆಪ್ಟೆಂಬರ್ 27ಕ್ಕೆ ಬಿಡುಗಡೆ ಆಗಲಿದೆ. ಸಿನಿಮಾವನ್ನು ಕೊರಟಾಲ ಶಿವ ನಿರ್ದೇಶನ ಮಾಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ