ಉಪೇಂದ್ರ ಸಿನಿಮಾಗಳ ಹೆಸರೇಕೆ ವಿಚಿತ್ರ, ಅದರ ಹಿಂದಿದೆ ಕಾರಣ
Upendra: ಸೆಪ್ಟೆಂಬರ್ 18 ರಂದು ಉಪೇಂದ್ರ ಹುಟ್ಟುಹಬ್ಬ. ಉಪೇಂದ್ರ ನಿರ್ದೇಶನ ಮಾಡಿದ ಬಹುತೇಕ ಸಿನಿಮಾಗಳಿಗೆ ಒಂದು ಅಕ್ಷರದ ಹೆಸರು ಇಟ್ಟಿದ್ದಾರೆ. ಹೀಗೆ ಒಂದಕ್ಷರದ ಹೆಸರು ಇಡಲು ಪ್ರಮುಖ ಕಾರಣ ಇದೆ.
ಈಗಿನ ತಲೆ ಮಾರಿಗೆ ಉಪೇಂದ್ರ ಎಂದರೆ ಒಬ್ಬ ಆಕ್ಷನ್ ಹೀರೋ ಆದರೆ 90ರ ದಶಕದವರಿಗೆ ಅಥವಾ ನಿಜ ಸಿನಿಮಾ ಪ್ರೇಮಿಗಳಿಗೆ ಗೊತ್ತು ಉಪೇಂದ್ರರ ತಾಕತ್ತು. ಕತೆಯಲ್ಲಿ ಭಿನ್ನತೆ ಎಂಬುದನ್ನು ನಿಜವಾಗಿಯೂ ಕನ್ನಡ ಸಿನಿಮಾ ಪ್ರೇಕ್ಷಕರಿಗೆ ಪರಿಚಯಿಸಿದ್ದು ನಿರ್ದೇಶಕ ಉಪೇಂದ್ರ. ಸಿನಿಮಾದ ಕತೆ, ಪಾತ್ರ ಪೋಷಣೆಗಳಲ್ಲಿ ಮಾತ್ರವಲ್ಲ ಸಿನಿಮಾದ ಹೆಸರಿನಲ್ಲಿಯೂ ಪ್ರಯೋಗಗಳನ್ನು ಮಾಡಿದ್ದರು ಉಪ್ಪಿ. ಏಕ ಅಕ್ಷರಗಳನ್ನು ಹೆಸರುಗಳಾಗಿ ಬಳಸಲು ಆರಂಭಿಸಿದವರು ಉಪೇಂದ್ರ. ‘ಶ್’, ‘ಎ’, ‘ಓಂ’, ‘ಸ್ವಸ್ತಿಕ್’ ಹೀಗೆ ಸಿನಿಮಾ ಹೆಸರುಗಳನ್ನು ಭಿನ್ನವಾಗಿಯೇ ಇಡುತ್ತಿದ್ದರು. ಇದಕ್ಕೆ ಕಾರಣವೂ ಇದೆ.
ಉಪೇಂದ್ರ ನಿರ್ದೇಶಿಸಿದ ಮೊದಲ ಸಿನಿಮಾಕ್ಕೆ ‘ತರ್ಲೆ ನನ್ಮಗ’ ಎಂಬ ಸಾಮಾನ್ಯ ಹೆಸರನ್ನೇ ಇಟ್ಟಿದ್ದರು. ಆ ಸಿನಿಮಾ ಹಿಟ್ ಎನಿಸಿಕೊಂಡಿತು. ಆದರೆ ಭಾರಿ ದೊಡ್ಡ ಹಿಟ್ ಏನೂ ಆಗಿರಲಿಲ್ಲ. ಉಪೇಂದ್ರ ನಿರ್ದೇಶಿಸಿದ ಎರಡನೇ ಸಿನಿಮಾ ‘ಶ್’. ಈ ಸಿನಿಮಾಕ್ಕೆ ಕುಮಾರ್ ಗೋವಿಂದ್ ನಾಯಕ. ಸಿನಿಮಾ ಮಾಡಲು ನಿರ್ಧರಿಸಿ ಕುಮಾರ್ ಗೋವಿಂದ್ ಅವರನ್ನು ನಾಯಕನ್ನಾಗಿ ಹಾಕಿಕೊಳ್ಳುವ ನಿರ್ಣಯ ಮಾಡಿದಾಗ ಉಪೇಂದ್ರ ಅವರಿಗೆ ಅನುಮಾನ ಎದುರಾಯ್ತಂತೆ. ಸಿನಿಮಾದ ಕತೆ ಚೆನ್ನಾಗಿದೆ, ಚಿತ್ರಕತೆ ಎಲ್ಲ ಚೆನ್ನಾಗಿದೆ ಆದರೆ ಮೊದಲ ದಿನ ಸಿನಿಮಾಕ್ಕೆ ಕರೆದುಕೊಂಡು ಬರಲು ಏನಾದರೂ ಮಾಡಬೇಕು, ಸಿನಿಮಾ ಎಷ್ಟೇ ಚೆನ್ನಾಗಿದ್ದರು ಮೊದಲ ದಿನವೇ ಜನ ಬರದೇ ಹೋದರೆ ಮಾಡಿದ್ದೆಲ್ಲವೂ ವ್ಯರ್ಥವಾಗುತ್ತೆ ಎಂಬ ಯೋಚನೆ ಶುರುವಾಗಿತ್ತು.
ಉಪೇಂದ್ರ ಅವರೇ ಹೇಳಿಕೊಂಡಿರುವಂತೆ ‘ಆಗ ನಾನು ದೊಡ್ಡ ನಿರ್ದೇಶಕ ಅಲ್ಲ, ಎರಡನೇ ಸಿನಿಮಾ ಅಷ್ಟೆ, ನನ್ನ ಪರಿಚಯ ಪ್ರೇಕ್ಷಕರಿಗೆ ಇರಲಿಲ್ಲ. ಇನ್ನು ನಾಯಕ ಕುಮಾರ್ ಗೋವಿಂದ್ ಅವರಿಗೂ ಮೊದಲ ಸಿನಿಮಾ. ಹಾಗಾಗಿ ಸಿನಿಮಾದ ಹೆಸರೇ ಸಿನಿಮಾದ ಪ್ರಚಾರಕ್ಕೆ ಕಾರಣವಾಗುವಂತೆ ಒಂದು ಚರ್ಚೆ, ಕುತೂಹಲ ಹುಟ್ಟಿಸಬೇಕು, ಹಾರರ್ ಸಿನಿಮಾಕ್ಕೆ ‘ರಹಸ್ಯ’, ‘ನಿಗೂಢ’ ಎಂದೆಲ್ಲ ಹೆಸರಿಟ್ಟರೆ ಜನರಿಗೆ ಗೊತ್ತಾಗಿಬಿಡುತ್ತದೆ ಇದು ಹಾರರ್ ಸಿನಿಮಾ ಎಂದು, ಹಾಗಾಗಿ ಸಿನಿಮಾದ ಕತೆಗೂ ಹೊಂದಾಣಿಕೆ ಆಗಬೇಕು, ಕುತೂಹಲವೂ ಹುಟ್ಟಿಸಬೇಕು, ಚರ್ಚೆಯೂ ಆಗಬೇಕು ಅಂಥಹಾ ಹೆಸರಿಡಬೇಕು ಎಂಬ ಯೋಚನೆಯಲ್ಲಿದ್ದಾಗ, ಆಗೆಲ್ಲ ಡಾಕ್ಟರ್ ಶಾಪ್ಗಳಲ್ಲಿ ‘ಶ್’ ಎಂದು ಬೋರ್ಡ್ ಹಾಕಿರುತ್ತಿದ್ದರು, ಅದನ್ನೇ ಹೆಸರನ್ನಾಗಿ ಬಳಸಿಕೊಂಡೆವು, ಆ ಹೆಸರಿನ ಡಿಸೈನ್ ಅನ್ನು ಮನೋಹರ್ ಮಾಡಿದರು’ ಎಂದಿದ್ದಾರೆ.
ಇದನ್ನೂ ಓದಿ:‘ಉಪೇಂದ್ರ’ ರಿಲೀಸ್ಗೂ ಮೊದಲು ಅಭಿಮಾನಿಗಳನ್ನು ಕನ್ಫ್ಯೂಸ್ ಮಾಡಿದ ಉಪ್ಪಿ
ಅದಾದ ಬಳಿಕವೂ ಸಹ ಹೆಸರಿನ ಮೂಲಕವೇ ಸಿನಿಮಾದ ಬಗ್ಗೆ ಜನರಲ್ಲಿ ಕುತೂಹಲ ಮೂಡಿಸುವ ಪ್ರಯೋಗವನ್ನು ಮುಂದುವರೆಸಿದ ಉಪೇಂದ್ರ, ತಾವು ನಾಯಕನಾಗಿ ನಟಿಸಿದ ಮೊದಲ ಸಿನಿಮಾ ‘ಎ’ ಎಂದು ಹೆಸರಿಟ್ಟರು. ಆ ಮೂಲಕ ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದರು. ಅದಕ್ಕೂ ಮುಂಚೆ ಶಿವರಾಜ್ ಕುಮಾರ್ ನಟನೆಯ ಬ್ಲಾಕ್ ಬಸ್ಟರ್ ಸಿನಿಮಾಕ್ಕೆ ‘ಓಂ’ ಎಂದೇ ಹೆಸರಿಟ್ಟರು. ಉಪೇಂದ್ರ ಮಾಡಿದ ತೆಲುಗು ಸಿನಿಮಾಕ್ಕೂ ‘ರಾ’ ಎಂಬ ಸಿಂಗಲ್ ಅಕ್ಷರದ ಹೆಸರನ್ನೇ ಇಡಲಾಗಿತ್ತು. ಈಗಲೂ ಸಹ ಅದೇ ಟ್ರೆಂಡ್ ಮುಂದುವರೆಸಿರುವ ಉಪೇಂದ್ರ ತಮ್ಮ ಹೊಸ ಸಿನಿಮಾಕ್ಕೆ ‘ಯುಐ’ ಎಂದು ಹೆಸರಿಟ್ಟಿದ್ದಾರೆ. ಅಂದಹಾಗೆ ನಾಳೆ (ಸೆಪ್ಟೆಂಬರ್ 18) ಉಪೇಂದ್ರ ಹುಟ್ಟುಹಬ್ಬವಿದ್ದು, ‘ಯುಐ’ ಸಿನಿಮಾದ ಅಪ್ಡೇಟ್ ಬಿಡುಗಡೆ ಆಗುವ ಸಾಧ್ಯತೆ ಇದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ