ಕೈಯಲ್ಲಿ ಹಿಡಿದ ಪುಸ್ತಕದಿಂದ ಸಿಕ್ಕಿತು ಜೂ ಎನ್​ಟಿಆರ್ ಮುಂದಿನ ಸಿನಿಮಾದ ಸುಳಿವು

Jr NTR movies: ಜೂ ಎನ್​ಟಿಆರ್ ಪ್ರಸ್ತುತ ಪ್ರಶಾಂತ್ ನೀಲ್ ನಿರ್ದೇಶನದ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ಈ ನಡುವೆ ಜೂ ಎನ್​ಟಿಆರ್ ನಟನೆಯ ಮುಂದಿನ ಸಿನಿಮಾ ಬಗ್ಗೆ ಸುದ್ದಿ ಹರಿದಾಡುತ್ತಿವೆ. ‘ವಾರ್ 2’ ಸಿನಿಮಾದ ಹಾಡಿನ ಚಿತ್ರೀಕರಣದಲ್ಲಿ ಭಾಗಿ ಆಗಲು ಮುಂಬೈಗೆ ತೆರಳಿದ್ದ ಜೂ ಎನ್​ಟಿಆರ್ ಕೈಯಲ್ಲಿ ಪುಸ್ತಕವೊಂದು ಕಂಡಿದೆ. ಈ ಪುಸ್ತಕವೇ ಜೂ ಎನ್​ಟಿಆರ್ ಅವರ ಮುಂದಿನ ಸಿನಿಮಾದ ಸುಳಿವು ನೀಡಿದೆ.

ಕೈಯಲ್ಲಿ ಹಿಡಿದ ಪುಸ್ತಕದಿಂದ ಸಿಕ್ಕಿತು ಜೂ ಎನ್​ಟಿಆರ್ ಮುಂದಿನ ಸಿನಿಮಾದ ಸುಳಿವು
Jr Ntr

Updated on: Jun 26, 2025 | 3:47 PM

ಜೂ ಎನ್​ಟಿಆರ್ (Jr NTR) ಪ್ರಸ್ತುತ ಪ್ರಶಾಂತ್ ನೀಲ್ ನಿರ್ದೇಶನದ ಸಿನಿಮಾನಲ್ಲಿ ಬ್ಯುಸಿಯಾಗಿದ್ದಾರೆ. ಪ್ರಶಾಂತ್ ನೀಲ್, ಪಕ್ಕಾ ಆಕ್ಷನ್ ಸಿನಿಮಾ ಒಂದನ್ನು ಜೂ ಎನ್​ಟಿಆರ್​ಗಾಗಿ ನಿರ್ದೇಶಿಸುತ್ತಿದ್ದಾರೆ. ಸಿನಿಮಾನಲ್ಲಿ ರುಕ್ಮಿಣಿ ವಸಂತ್ ನಾಯಕಿ. ಇದರ ಜೊತೆಗೆ ಜೂ ಎನ್​ಟಿಆರ್ ‘ವಾರ್ 2’ ಸಿನಿಮಾದ ಕೊನೆಯ ಭಾಗದ ಚಿತ್ರೀಕರಣದಲ್ಲಿಯೂ ಭಾಗಿ ಆಗಿದ್ದಾರೆ. ಹೃತಿಕ್ ರೋಷನ್​ ಅವರಿಗೆ ಗಾಯವಾಗಿದ್ದ ಕಾರಣ ‘ವಾರ್ 2’ ಸಿನಿಮಾದ ಹಾಡಿನ ಚಿತ್ರೀಕರಣ ನಿಂತು ಹೋಗಿತ್ತು. ಅದು ಇಂದು ಮತ್ತೆ ಪ್ರಾರಂಭವಾಗಿದೆ. ಇದೇ ಕಾರಣಕ್ಕೆ ಜೂ ಎನ್​ಟಿಆರ್​ಗೆ ಮುಂಬೈಗೆ ತೆರಳಿದ್ದರು. ಮುಂಬೈನಲ್ಲಿ ಜೂ ಎನ್​ಟಿಆರ್ ಪಾಪರಾಟ್ಜಿಗಳ ಕಣ್ಣಿಗೆ ಬಿದ್ದಿದ್ದು, ಈ ವೇಳೆ ಜೂ ಎನ್​ಟಿಆರ್ ಕೈಯಲ್ಲಿ ಪುಸ್ತಕವೊಂದು ಇತ್ತು. ಇದು ಜೂ ಎನ್​ಟಿಆರ್ ಅವರ ಮುಂದಿನ ಸಿನಿಮಾದ ಸುಳಿವು ನೀಡಿದೆ.

ಜೂ ಎನ್​ಟಿಆರ್ ಮುಂಬೈ ವಿಮಾನ ನಿಲ್ದಾಣದಲ್ಲಿ ಇಳಿದು ಸ್ಟುಡಿಯೋ ಕಡೆ ಹೊರಟಾಗ ಅವರ ಕೈಯಲ್ಲಿ ಪುಸ್ತಕವೊಂದು ಇತ್ತು. ಅಸಲಿಗೆ ಆ ಪುಸ್ತಕ ದೇವರು ಮುರುಗಸ್ವಾಮಿ ಕುರಿತಾದದ್ದಾಗಿದೆ. ಆನಂದ ಬಾಲಸುಬ್ರಹ್ಮಣ್ಯನ್ ಅವರು ಬರೆದಿರುವ ‘ಮುರುಗ’ ಪುಸ್ತಕ ಜೂ ಎನ್​ಟಿಆರ್ ಕೈಯಲ್ಲಿದ್ದು, ‘ಮುರುಗ’ ಸಿನಿಮಾದ ತಯಾರಿಗಾಗಿ ಜೂ ಎನ್​ಟಿಆರ್ ಆ ಪುಸ್ತಕ ಓದುತ್ತಿದ್ದಾರೆ. ಆನಂದ್ ಬಾಲಸುಬ್ರಹ್ಮಣ್ಯನ್ ಬರೆದಿರುವ ಪುಸ್ತಕದಲ್ಲಿ ‘ಮುರುಗ: ಲಾರ್ಡ್ ಆಫ್ ವಾರ್, ಗಾಡ್ ಆಫ್ ವಿಸ್ಡಮ್’ (ಯುದ್ಧ ಹಾಗೂ ಜ್ಞಾನದ ದೇವರು) ಎಂಬ ಅಡಿಬರಹ ಇದೆ.

ಇದನ್ನೂ ಓದಿ:ಜೂ ಎನ್​ಟಿಆರ್ ಸಿನಿಮಾ ಸೆಟ್ ಸೇರಿದ ರುಕ್ಮಿಣಿ ವಸಂತ್, ಖುಷಿ ಹಂಚಿಕೊಂಡ ಚೆಲುವೆ

ಮುರುಗ ದೇವರ ಕುರಿತಾದ ಸಿನಿಮಾನಲ್ಲಿ ಜೂ ಎನ್​ಟಿಆರ್ ನಟಿಸಲಿದ್ದಾರೆ. ಸಿನಿಮಾ ನಿರ್ದೇಶನ ಮಾಡಲಿರುವುದು ಸ್ಟಾರ್ ನಿರ್ದೇಶಕ ತ್ರಿವಿಕ್ರಮ್ ಶ್ರೀನಿವಾಸ್. ಈ ಸುದ್ದಿಯನ್ನು ತ್ರಿವಿಕ್ರಮ್ ಶ್ರೀನಿವಾಸ್ ಅವರ ಆಪ್ತ ನಿರ್ಮಾಪಕ ನಾಗ ವಂಶಿ ಈಗಾಗಲೇ ಖಾತ್ರಿ ಪಡಿಸಿದ್ದಾರೆ. ತ್ರಿವಿಕ್ರಮ್ ಶ್ರೀನಿವಾಸ್ ಅವರು ಪೌರಾಣಿಕ ಕತೆಯನ್ನು ಜೂ ಎನ್​ಟಿಆರ್​ ಅವರಿಗಾಗಿ ರೆಡಿ ಮಾಡಿಕೊಂಡಿದ್ದು, ಸಿನಿಮಾನಲ್ಲಿ ಯುದ್ಧದ ಅದ್ಭುತ ಸನ್ನಿವೇಶಗಳು ಇರಲಿವೆಯಂತೆ.

ತ್ರಿವಿಕ್ರಮ್ ಶ್ರೀನಿವಾಸ್ ಅವರು ಮೊದಲಿಗೆ ವೆಂಕಟೇಶ್ ಅವರೊಟ್ಟಿಗೆ ಹಾಸ್ಯ ಮಿಶ್ರಿತ ಕೌಟುಂಬಿಕ ಸಿನಿಮಾ ಮಾಡಲಿದ್ದಾರೆ. ಅದರ ಬಳಿಕ ಜೂ ಎನ್​ಟಿಆರ್ ಜೊತೆಗಿನ ಸಿನಿಮಾ ಪ್ರಾರಂಭ ಆಗಲಿದೆ. ಆ ವೇಳೆಯಷ್ಟರಲ್ಲಿ ಜೂ ಎನ್​ಟಿಆರ್ ಪ್ರಶಾಂತ್ ನೀಲ್ ಜೊತೆಗಿನ ಸಿನಿಮಾ ಮುಗಿಸಿರಲಿದ್ದಾರೆ. ಆದರೆ ‘ದೇವರ 2’ ಸಿನಿಮಾ ಯಾವಾಗ ಪ್ರಾರಂಭ ಆಗಲಿದೆ ಎಂಬುದು ಖಾತ್ರಿ ಇಲ್ಲ. ತ್ರಿವಿಕ್ರಮ್ ಶ್ರೀನಿವಾಸ್ ಸಿನಿಮಾ ಮುಗಿದ ಬಳಿಕವೇ ‘ದೇವರ 2’ ಸಿನಿಮಾ ಪ್ರಾರಂಭ ಆಗುವ ಸಾಧ್ಯತೆ ಇದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ