‘ಆರ್ಆರ್ಆರ್‘ (RRR) ಸಿನಿಮಾದ ಭರ್ಜರಿ ಯಶಸ್ಸಿನ ಬಳಿಕ ಜೂ ಎನ್ಟಿಆರ್ (Jr NTR) ಹಾಗೂ ರಾಮ್ ಚರಣ್ (Ram Charan) ಇಬ್ಬರೂ ಗ್ಲೋಬಲ್ ಸ್ಟಾರ್ಗಳಾಗಿದ್ದಾರೆ. ಅವರ ಮುಂದಿನ ಸಿನಿಮಾ ಹೇಗಿರಲಿದೆ ಎಂದು ಭಾರತದ ಸಿನಿಮಾ ಪ್ರೇಮಿಗಳ ಜೊತೆಗೆ ವಿಶ್ವ ಸಿನಿಮಾ ಪ್ರೇಮಿಗಳೂ ಎದುರು ನೋಡುತ್ತಿದ್ದಾರೆ. ರಾಮ್ ಚರಣ್, ಶಂಕರ್ ನಿರ್ದೇಶನದ ‘ಗೇಮ್ ಚೇಂಜರ್’ ಸಿನಿಮಾದಲ್ಲಿ ಬ್ಯುಸಿಯಾದರೆ ಜೂ ಎನ್ಟಿಆರ್ ಕೊರಟಾಲ ಶಿವ ಜೊತೆಗೆ ‘ದೇವರ’ ಸಿನಿಮಾಕ್ಕೆ ಕೈ ಜೋಡಿಸಿದ್ದಾರೆ. ಸಾಮಾನ್ಯ ಕಮರ್ಷಿಯಲ್ ಸಿನಿಮಾ ಮಾದರಿಯಲ್ಲೇ ಆರಂಭವಾದ ‘ದೇವರ’, ‘ಆರ್ಆರ್ಆರ್’ ಸಿನಿಮಾ ಸೂಪರ್ ಹಿಟ್ ಆದ ಬಳಿಕ ಬಜೆಟ್ ಅನ್ನು ಹೆಚ್ಚಿಸಿಕೊಂಡು ದೊಡ್ಡ ಸ್ಕೇಲ್ನಲ್ಲಿ ನಿರ್ಮಾಣವಾಗುತ್ತಿದೆ. ಇದೀಗ ಈ ಸಿನಿಮಾದಿಂದ ಪ್ರಮುಖ ಅಪ್ಡೇಟ್ ಒಂದು ಹೊರಬಿದ್ದಿದೆ.
‘ದೇವರ’ ಸಿನಿಮಾವು ಎರಡು ಭಾಗಗಳಲ್ಲಿ ತೆರೆಗೆ ಬರಲಿದೆಯಂತೆ. ಹೀಗೆಂದು ಸ್ವತಃ ಸಿನಿಮಾದ ನಿರ್ದೇಶಕ ಕೊರಟಾಲ ಶಿವ ಹೇಳಿಕೊಂಡಿದ್ದಾರೆ. ”ಸಿನಿಮಾದ ಚಿತ್ರೀಕರಣ ಆರಂಭ ಮಾಡುವ ಹೊತ್ತಿಗೆ ನಮಗೆ ಗೊತ್ತಾಯಿತು, ಈ ಸಿನಿಮಾದ ಕತೆ ಬಹಳ ಪವರ್ಫುಲ್ ಆಗಿದೆ. ಸಿನಿಮಾದ ಪಾತ್ರಗಳು ಬಹಳ ಗಟ್ಟಿಯಾಗಿವೆ. ಹಾಗಾಗಿ ಆ ಪಾತ್ರಗಳಿಗೆ ಸರಿಯಾದ ಸ್ಪೇಸ್ ನೀಡಲು ಒಂದು ಸಿನಿಮಾ ಸಾಕಾಗುವುದಿಲ್ಲ, ಹಾಗಾಗಿ ನಾವು ಎರಡು ಪಾರ್ಟ್ಗಳಲ್ಲಿ ಸಿನಿಮಾವನ್ನು ಬಿಡುಗಡೆ ಮಾಡಲಿದ್ದೇವೆ” ಎಂದಿದ್ದಾರೆ.
ಎರಡು ಭಾಗಗಳಲ್ಲಿ ಬಿಡುಗಡೆ ಆಗಿ ಸೂಪರ್ ಹಿಟ್ ಆದ ‘ಬಾಹುಬಲಿ’, ‘ಕೆಜಿಎಫ್’, ಎರಡು ಪಾರ್ಟ್ಗಳಲ್ಲಿ ಬರಲು ತಯಾರಾಗಿರುವ ‘ಪುಷ್ಪ’, ‘ಬ್ರಹ್ಮಾಸ್ತ್ರ’, ‘ಸಲಾರ್’ ಇನ್ನಿತರೆ ಕಮರ್ಷಿಯಲ್ ಸಿನಿಮಾಗಳ ಸಾಲಿಗೆ ‘ದೇವರ’ ಸಿನಿಮಾ ಸೇರಿದಂತಾಗಿದೆ. ‘ದೇವರ’ ಸಿನಿಮಾದಲ್ಲಿ ‘ಬಾಹುಬಲಿ’ ಮಾದರಿಯಲ್ಲಿಯೇ ಅಪ್ಪ-ಮಗನ ಕತೆ ಇದ್ದು, ಅಪ್ಪನ ಪಾತ್ರಕ್ಕೆ ಒಂದು ಭಾಗ, ಮಗನ ಪಾತ್ರಕ್ಕೆ ಒಂದು ಭಾಗವನ್ನು ಕೊರಟಾಲ ಶಿವ ಮೀಸಲಿಡಲಿದ್ದಾರೆ.
ಇದನ್ನೂ ಓದಿ: ಅಲ್ಲಿ ಎಲ್ಲರೂ ಮೃಗಗಳೇ ಯಾರಿಗೂ ಸಾವಿನ ಬಗ್ಗೆ ಭಯವಿಲ್ಲ, ಆದರೆ..: ಜೂ ಎನ್ಟಿಆರ್ ಹೊಸ ಸಿನಿಮಾ ಕತೆ
ಕಡಲ ತೀರದಲ್ಲಿ ನಡೆಯುವ ಕತೆಯನ್ನು ‘ದೇವರ’ ಒಳಗೊಂಡಿದ್ದು, ಭಾರಿ ಪ್ರಮಾಣದ ಆಕ್ಷನ್ ದೃಶ್ಯಗಳು ಸಿನಿಮಾದಲ್ಲಿ ಇರಲಿವೆ. ಸಿನಿಮಾದ ಆಕ್ಷನ್ಗಾಗಿಯೇ ಹಾಲಿವುಡ್ನ ಜನಪ್ರಿಯ ಹಾಲಿವುಡ್ ಸ್ಟಂಟ್ ಕೊರಿಯೋಗ್ರಾಫರ್ ಅನ್ನು ಕರೆತರಲಾಗಿದೆ. ಅದರಲ್ಲಿಯೂ ನೀರಿನಾಳದಲ್ಲಿ ನಡೆಯುವ ಹಲವು ಇಂಟೆನ್ಸ್ ಫೈಟ್ ದೃಶ್ಯಗಳಿದ್ದು, ಅವುಗಳ ಚಿತ್ರೀಕರಣ ಪ್ರಸ್ತುತ ಚಾಲ್ತಿಯಲ್ಲಿದೆ. ನೀರಿನಾಳದ ಆಕ್ಷನ್ ದೃಶ್ಯಗಳೇ ಈ ಸಿನಿಮಾದ ಜೀವಾಳ ಎನ್ನಲಾಗುತ್ತಿದೆ.
ಈ ಸಿನಿಮಾವು ಜೂ ಎನ್ಟಿಆರ್ ವೃತ್ತಿ ಜೀವನದ ಮೊದಲ ಎರಡು ಭಾಗಗಳಲ್ಲಿ ಬಿಡುಗಡೆ ಆಗಲಿರುವ ಸಿನಿಮಾ ಆಗಲಿದೆ. ಈ ಸಿನಿಮಾ ಮೂಲಕ ಬಾಲಿವುಡ್ ನಟಿ ಜಾನ್ಹವಿ ಕಪೂರ್ ಮೊದಲ ಬಾರಿಗೆ ದಕ್ಷಿಣದ ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ. ಸಿನಿಮಾವನ್ನು ಯುವಸುಧಾ ಆರ್ಟ್ಸ್ ಮತ್ತು ಎನ್ಟಿಆರ್ ಆರ್ಟ್ಸ್ ಜಂಟಿಯಾಗಿ ನಿರ್ಮಾಣ ಮಾಡುತ್ತಿದೆ. ಎನ್ಟಿಆರ್ ಆರ್ಟ್ಸ್ ಸ್ವತಃ ಜೂ ಎನ್ಟಿಆರ್ ಅವರದ್ದೇ ನಿರ್ಮಾಣ ಸಂಸ್ಥೆಯಾಗಿದೆ. ಸಿನಿಮಾಕ್ಕೆ ತಮಿಳಿನ ಅನಿರುದ್ಧ್ ರವಿಚಂದ್ರನ್ ಸಂಗೀತ ನೀಡುತ್ತಿದ್ದಾರೆ. ಸಿನಿಮಾದ ಮೊದಲ ಭಾಗ 2024ರ ಏಪ್ರಿಲ್ 5ರಂದು ತೆರೆಗೆ ಬರಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ