‘ಕಲ್ಕಿ 2898 ಎಡಿ’ ಸಿನಿಮಾ ಮೂರನೇ ದಿನ ಗಳಿಸಿದ್ದೆಷ್ಟು?

|

Updated on: Jun 30, 2024 | 8:51 AM

ಪ್ರಭಾಸ್ ಮುಖ್ಯ ಪಾತ್ರದಲ್ಲಿ ನಟಿಸಿರುವ ‘ಕಲ್ಕಿ 2898 ಎಡಿ’ ಸಿನಿಮಾ ಬಿಡುಗಡೆ ಆಗಿ ಮೂರು ದಿನವಾಗಿದ್ದು, ಮೂರನೇ ದಿನ ಈ ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ ಗಳಿಸಿರುವುದೆಷ್ಟು? 200 ಕೋಟಿ ಕ್ಲಬ್ ದಾಟಿತೆ? ಇಲ್ಲಿದೆ ಮಾಹಿತಿ.

‘ಕಲ್ಕಿ 2898 ಎಡಿ’ ಸಿನಿಮಾ ಮೂರನೇ ದಿನ ಗಳಿಸಿದ್ದೆಷ್ಟು?
Follow us on

ಪ್ರಭಾಸ್ ನಟನೆಯ ‘ಕಲ್ಕಿ 2898 ಎಡಿ’ ಸಿನಿಮಾ ಗುರುವಾರ (ಜೂನ್ 27) ಬಿಡುಗಡೆ ಆಗಿದ್ದು ಚಿತ್ರಮಂದಿರಗಳಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಸಿನಿಮಾ ಬಿಡುಗಡೆ ಆಗಿ ಮೂರು ದಿನ ಮುಗಿದಿದ್ದು, ಮೂರನೇ ದಿನ ಸಿನಿಮಾ ಅದ್ಧೂರಿ ಕಲೆಕ್ಷನ್ ಮಾಡಿದೆ. ವಿಶೇಷವೆಂದರೆ ಎರಡನೇ ದಿನದ ಕಲೆಕ್ಷನ್ ಅನ್ನು ಹಿಂದಿಕ್ಕಿ ಬಾಕ್ಸ್ ಆಫೀಸ್ ಕಲೆಕ್ಷನ್ ಅನ್ನು ಏರಿಸಿಕೊಂಡಿದೆ. ಅಂದಹಾಗೆ ಸಿನಿಮಾದ ಬಿಡುಗಡೆ ಆದ ಮೂರನೇ ದಿನ ಅಂದರೆ ಶನಿವಾರ ‘ಕಲ್ಕಿ 2898 ಎಡಿ’ ಸಿನಿಮಾ ಮಾಡಿದ ಕಲೆಕ್ಷನ್ ಎಷ್ಟು? ಇಲ್ಲಿದೆ ಮಾಹಿತಿ.

‘ಕಲ್ಕಿ 2898 ಎಡಿ’ ಸಿನಿಮಾ ಬಿಡುಗಡೆ ಆದ ದಿನ ಭಾರತದಲ್ಲಿ 95.30 ಕೋಟಿ ರೂಪಾಯಿ ಹಣ ಗಳಿಸಿತ್ತು. ಆ ಮೂಲಕ ಈ ಹಿಂದೆ ಮೊದಲ ದಿನ ಅತಿ ಹೆಚ್ಚು ಹಣ ಗಳಿಸಿ ದಾಖಲೆ ಮಾಡಿದ್ದ ಕೆಲವು ಸಿನಿಮಾಗಳ ದಾಖಲೆಯನ್ನು ಪುಡಿಗಟ್ಟಿತ್ತು. ಎರಡನೇ ದಿನದ ಗಳಿಕೆಯಲ್ಲಿ ತುಸು ಇಳಿಮುಖ ಕಂಡು ಬಂದಿತ್ತು, ‘ಕಲ್ಕಿ 2898 ಎಡಿ’ ಸಿನಿಮಾವು ಬಿಡುಗಡೆ ಆದ ಎರಡನೇ ದಿನ ಭಾರತದಲ್ಲಿ 54 ಕೋಟಿ ಹಣವನ್ನು ಗಳಿಸಿ 200 ಕೋಟಿ ಗಳಿಕೆಯತ್ತ ದಾಪುಗಾಲು ಹಾಕಿತ್ತು.

ಇದೀಗ ಮೂರನೇ ದಿನ ‘ಕಲ್ಕಿ 2898 ಎಡಿ’ ಸಿನಿಮಾ ಭರ್ಜರಿ ಕಲೆಕ್ಷನ್ ಮಾಡಿದೆ. ಎರಡನೇ ದಿನದ ಕಲೆಕ್ಷನ್ ಅನ್ನು ಹಿಂದಿಕ್ಕಿ ಶನಿವಾರದಂದು ಭಾರತದ ಬಾಕ್ಸ್ ಆಫೀಸ್​ನಲ್ಲಿ 75 ಕೋಟಿ ರೂಪಾಯಿ ಹಣ ಗಳಿಸಿದೆ ಎನ್ನಲಾಗುತ್ತಿದೆ. ಎರಡನೇ ದಿನಕ್ಕೆ ಹೋಲಿಸಿದರೆ ಶನಿವಾರ ಕಲೆಕ್ಷನ್​ನಲ್ಲಿ 50% ಏರಿಕೆಯಾಗಿದೆ. ಶನಿವಾರ ವೀಕೆಂಡ್ ಆಗಿದ್ದ ಕಾರಣ ಕೆಲಕ್ಷನ್​ನಲ್ಲಿ ಏರಿಕೆಯಾಗಿದೆ. ಆ ಮೂಲಕ ‘ಕಲ್ಕಿ 2898 ಎಡಿ’ ಸಿನಿಮಾವು ಭಾರತದಲ್ಲಿ ಕೇವಲ ಮೂರು ದಿನಕ್ಕೆ 200 ಕೋಟಿ ಕಲೆಕ್ಷನ್ ಅನ್ನು ದಾಟಿದೆ. ಭಾರತದಲ್ಲಿ ಮೂರು ದಿನದಲ್ಲಿ ‘ಕಲ್ಕಿ’ ಸಿನಿಮಾ ಸುಮಾರು 225 ಕೋಟಿ ರೂಪಾಯಿ ಗಳಿಕೆ ಮಾಡಿದೆ.

ಇದನ್ನೂ ಓದಿ:ಬಾಕ್ಸ್ ಆಫೀಸ್​ನಲ್ಲಿ ಕಮಾಲ್ ಮಾಡಿದ ಪ್ರಭಾಸ್ ನಟನೆಯ ಟಾಪ್ ಐದು ಚಿತ್ರಗಳು ಇವು

ಇನ್ನು ನಾಲ್ಕನೇ ದಿನ ಭಾನುವಾರವಾಗಿದ್ದು ಈ ದಿನವೂ ಸಹ ‘ಕಲ್ಕಿ 2898 ಎಡಿ’ ಸಿನಿಮಾ ಭಾರಿ ದೊಡ್ಡ ಕಲೆಕ್ಷನ್ ಅನ್ನು ಮಾಡಲಿದೆ ಎನ್ನಲಾಗುತ್ತಿದೆ. ಶನಿವಾರದ ಕಲೆಕ್ಷನ್​ಗಿಂತಲೂ ಸಹ ಹೆಚ್ಚಿನ ಮೊತ್ತವನ್ನು ಭಾನುವಾರ ಗಳಿಸುವ ಸಾಧ್ಯತೆ ಇದ್ದು, ಭಾನುವಾರ ಒಂದೇ ದಿನ ಸುಮಾರು 100 ಕೋಟಿ ಗಳಿಸಲಿದೆ ಎನ್ನಲಾಗುತ್ತಿದೆ. ಒಂದೊಮ್ಮೆ ಹಾಗೇನಾದರೂ ಆದರೆ ಕೇವಲ ನಾಲ್ಕೇ ದಿನಕ್ಕೆ ಮುನ್ನೂರು ಕೋಟಿ ಗಳಿಕೆಯನ್ನು ‘ಕಲ್ಕಿ 2898 ಎಡಿ’ ಸಿನಿಮಾ ಮಾಡಲಿದೆ.

ಪ್ರಭಾಸ್, ಅಮಿತಾಬ್ ಬಚ್ಚನ್, ದೀಪಿಕಾ ಪಡುಕೋಣೆ, ಕಮಲ್ ಹಾಸನ್, ದಿಶಾ ಪಟಾಣಿ ಒಟ್ಟಿಗೆ ನಟಿಸಿರುವ ‘ಕಲ್ಕಿ’ ಸಿನಿಮಾ ಪೌರಾಣಿಕ ಕತೆಯ ಜೊತೆಗೆ ಭವಿಷ್ಯದ ಕತೆಯನ್ನು ಒಳಗೊಂಡಿದೆ. ಸಿನಿಮಾವನ್ನು ನಾಗ್ ಅಶ್ವಿನ್ ನಿರ್ದೇಶನ ಮಾಡಿದ್ದಾರೆ. ಸಿನಿಮಾಕ್ಕೆ ಅವರ ಮಾವ ಅಶ್ವಿನ್ ದತ್ ಬಂಡವಾಳ ಹೂಡಿದ್ದಾರೆ. ಸಿನಿಮಾದಲ್ಲಿ ಹಲವು ಸ್ಟಾರ್ ನಟ-ನಟಿಯರು ಅತಿಥಿ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:50 am, Sun, 30 June 24