‘ವಿಕ್ರಮ್’ ಸಿನಿಮಾ (Vikram Movie) ಸೂಪರ್ ಹಿಟ್ ಆಗಿದೆ. ನಟ ಕಮಲ್ ಹಾಸನ್ ಅವರು (Kamal Haasan) ಈ ಸಿನಿಮಾ ಮೂಲಕ ಒಂದೊಳ್ಳೆಯ ಕಂಬ್ಯಾಕ್ ಮಾಡಿದ್ದಾರೆ. ಓರ್ವ ಹೀರೋಗೆ ಕಂಬ್ಯಾಕ್ ಮಾಡೋಕೆ ಯಾವೆಲ್ಲ ಅಂಶಗಳು ಬೇಕೋ ಅದು ಈ ಸಿನಿಮಾದಲ್ಲಿತ್ತು. ಹೀಗಾಗಿ, ಚಿತ್ರ ಸೂಪರ್ ಹಿಟ್ ಆಯಿತು. ವಿಶ್ವ ಮಟ್ಟದಲ್ಲಿ ಈ ಸಿನಿಮಾ ಕೇವಲ ನಾಲ್ಕು ದಿನದಲ್ಲಿ 200 ಕೋಟಿ ಕ್ಲಬ್ ಸಮೀಪದಲ್ಲಿದೆ. ಈ ಸಿನಿಮಾದಲ್ಲಿ ನಿರ್ದೇಶಕ ಲೋಕೇಶ್ ಕನಗರಾಜ್ ಅವರ ಶ್ರಮ ತುಂಬಾನೇ ದೊಡ್ಡದು. ಈ ಕಾರಣಕ್ಕೆ ಅವರಿಗೆ ನಟ ಕಮಲ್ ಹಾಸನ್ ಕಾರನ್ನು ಗಿಫ್ಟ್ ನೀಡಿದ್ದಾರೆ.
ಸಿನಿಮಾ ಗೆದ್ದಾಗ ನಿರ್ದೇಶಕರಿಗೆ ಹೀರೋಗಳು ಅಥವಾ ನಿರ್ಮಾಪಕರು ದುಬಾರಿ ಉಡುಗೊರೆ ನೀಡುತ್ತಾರೆ. ಈ ಮೊದಲು ಕೂಡ ಈ ರೀತಿ ಆಗಿದೆ. ಈಗ ಕಮಲ್ ಹಾಸನ್ ಅವರು ಲೋಕೇಶ್ಗೆ ಸುಮಾರು 70 ಲಕ್ಷ ರೂಪಾಯಿ ಮೌಲ್ಯದ ಲೆಕ್ಸಸ್ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ. ಲೋಕೇಶ್ಗೆ ಕಮಲ್ ಕೀ ಕೊಡುತ್ತಿರುವ ಫೋಟೋ ವೈರಲ್ ಆಗಿದೆ. ಈ ಕಾರು ಪಡೆಯಲು ಅವರು ಅರ್ಹರು ಎಂದು ಫ್ಯಾನ್ಸ್ ಕಮೆಂಟ್ ಮಾಡುತ್ತಿದ್ದಾರೆ. ಮಾಸ್ ಮಸಾಲ ಅಂಶ ಇದ್ದ ಮಾತ್ರಕ್ಕೆ ಸಿನಿಮಾ ಗೆಲ್ಲುವುದಿಲ್ಲ. ‘ವಿಕ್ರಮ್’ ಸಿನಿಮಾದಲ್ಲಿ ಮಾಸ್ ಅಂಶಗಳ ಜತೆಗೆ ಹಳೆಯ ಸಿನಿಮಾಗಳಿಗೆ ಕನೆಕ್ಷನ್, ಭಾವನಾತ್ಮಕ ಅಂಶಗಳನ್ನು ಕೂಡ ಬೆರೆಸಲಾಗಿತ್ತು. ಈ ಕಾರಣಕ್ಕೆ ಸಿನಿಮಾ ಸೂಪರ್ ಹಿಟ್ ಆಗಿದೆ.
ಕಮಲ್ ಹಾಸನ್ಗೆ ದುಬಾರಿ ಸಂಭಾವನೆ:
ಕಮಲ್ ಹಾಸನ್ ಅವರ ‘ರಾಜ್ ಕಮಲ್ ಫಿಲ್ಮ್ಸ್ ಇಂಟರ್ನ್ಯಾಷನಲ್’ ಬ್ಯಾನರ್ ಮೂಲಕ ‘ವಿಕ್ರಮ್’ ಸಿನಿಮಾ ಮೂಡಿಬಂದಿದೆ. ಅದ್ದೂರಿಯಾಗಿ ಈ ಚಿತ್ರವನ್ನು ನಿರ್ಮಿಸಲಾಗಿದೆ. ಮೇಕಿಂಗ್ ಕಂಡು ಎಲ್ಲರೂ ಮೆಚ್ಚುಗೆ ಸೂಚಿಸುತ್ತಿದ್ದಾರೆ. ಕಲಾವಿದರು ಮತ್ತು ತಂತ್ರಜ್ಞರ ಸಂಭಾವನೆಗೂ ಕೋಟ್ಯಂತರ ರೂಪಾಯಿ ಸುರಿಯಲಾಗಿದೆ. ಮೂಲಗಳ ಪ್ರಕಾರ, ಕಮಲ್ ಹಾಸನ್ ಬರೋಬ್ಬರಿ 50 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ ಎಂದು ಈ ಮೊದಲು ವರದಿ ಆಗಿತ್ತು.
ಕರ್ನಾಟಕದಲ್ಲಿ ಹೊಸ ದಾಖಲೆ
ತಮಿಳು ಹಾಗೂ ತೆಲುಗು ಸಿನಿಮಾಗಳಿಗೆ ಕರ್ನಾಟಕದಲ್ಲಿ ದೊಡ್ಡ ಮಾರುಕಟ್ಟೆ ಇದೆ ಎಂಬುದು ಈ ಮೊದಲೇ ಸಾಬೀತಾಗಿದೆ. ‘ವಿಕ್ರಮ್’ ಸಿನಿಮಾದಲ್ಲಿ ಈ ಟ್ರೆಂಡ್ ಮುಂದುವರಿದಿದೆ. ಬೆಂಗಳೂರು ಸೇರಿ ಕರ್ನಾಟಕದ ಅನೇಕ ಕಡೆಗಳಲ್ಲಿ ‘ವಿಕ್ರಮ್’ ಸಿನಿಮಾ ಒಳ್ಳೆಯ ರೀತಿಯಲ್ಲಿ ಪ್ರದರ್ಶನ ಕಾಣುತ್ತಿದೆ. ಈ ವರ್ಷ ಕರ್ನಾಟಕದ ಬಾಕ್ಸ್ ಆಫೀಸ್ನಲ್ಲಿ ಅತಿ ಹೆಚ್ಚು ಕಲೆಕ್ಷನ್ ಮಾಡಿದ ತಮಿಳು ಸಿನಿಮಾ ಎನ್ನುವ ಖ್ಯಾತಿ ‘ವಿಕ್ರಮ್’ಗೆ ಸಿಕ್ಕಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:16 pm, Tue, 7 June 22