ಇಂಡಿಯನ್ 2 ಟ್ರೈಲರ್: ಸಮಾಜವ ತಿದ್ದಲು ಮತ್ತೆ ಬಂದ ಸೇನಾಪತಿ
1996 ರಲ್ಲಿ ಬಿಡುಗಡೆ ಆಗಿ ಬ್ಲಾಕ್ ಬಸ್ಟರ್ ಆಗಿದ್ದ ಕಮಲ್ ಹಾಸನ್ ನಟನೆಯ ‘ಇಂಡಿಯನ್’ ಸಿನಿಮಾದ ಸೀಕ್ವೆಲ್ ‘ಇಂಡಿಯನ್ 2’ ಬಿಡುಗಡೆಗೆ ಸಜ್ಜಾಗಿದೆ. ಸಿನಿಮಾದ ಟ್ರೈಲರ್ ಇಂದು ಬಿಡುಗಡೆ ಆಗಿದ್ದು, ಸಮರ ಕಲೆಯ ಯೋಧ ಸೇನಾಪತಿ ಮತ್ತೊಮ್ಮೆ ಬಂದಿದ್ದಾನೆ.
ಕಮಲ್ ಹಾಸನ್ ನಟಿಸಿ, ಶಂಕರ್ ನಿರ್ದೇಶನ ಮಾಡಿದ್ದ ‘ಇಂಡಿಯನ್’ ಸಿನಿಮಾ 1996 ರಲ್ಲಿ ಬಿಡುಗಡೆ ಆಗಿ ಭಾರಿ ಹಿಟ್ ಆಗಿತ್ತು, ಸೇನಾಪತಿ ಹಾಗೂ ಚಂದ್ರಭೋಸ್ ದ್ವಿಪಾತ್ರದಲ್ಲಿ ಕಮ್ ಹಾಸನ್ ನಟಿಸಿದ್ದರು. ಅಪರೂಪದ ಸಮರ ಕಲೆ ಕಲಿತಿರುವ ಸ್ವಾತಂತ್ರ್ಯ ಹೋರಾಟಗಾರ ಸೇನಾಪತಿ ಭ್ರಷ್ಟರ ವಿರುದ್ಧ ಹಿಂಸಾತ್ಮಕ ಸಮರಕ್ಕೆ ಇಳಿದಿದ್ದ. ಆ ಸಿನಿಮಾದ ಅಂತ್ಯದಲ್ಲಿ ಸೇನಾಪತಿ ವಿಮಾನ ನಿಲ್ದಾಣದಲ್ಲಿ ತಮ್ಮ ಮಗನನ್ನೇ ಕೊಲ್ಲುತ್ತಾನೆ, ಆದರೆ ಆ ಅಪಘಾತದಲ್ಲಿ ಸೇನಾಪತಿ ಪಾರಾಗಿ ಹಾಂಗ್ಕಾಂಗ್ ಸೇರಿರುತ್ತಾನೆ, ಯಾವಾಗ ನನ್ನ ಅವಶ್ಯಕತೆ ಬರುತ್ತದೆಯೋ ಆಗ ನಾನು ಮರಳಿ ಬರುತ್ತೇನೆ ಎನ್ನುತ್ತಾನೆ. ಇದೀಗ ಸುಮಾರು 18 ವರ್ಷಗಳ ಬಳಿಕ ಸೇನಾಪತಿ ಮತ್ತೆ ಬಂದಿದ್ದಾನೆ.
ಇದೀಗ ‘ಇಂಡಿಯನ್ 2’ ಸಿನಿಮಾದ ಟ್ರೈಲರ್ ಬಿಡುಗಡೆ ಆಗಿದ್ದು, ಸೇನಾಪತಿ ಪಾತ್ರ ಇದೀಗ ಮರಳಿ ಬಂದಿದೆ. ಮೊದಲ ಇಂಡಿಯನ್ ಸಿನಿಮಾ ಬಿಡುಗಡೆ ಆಗಿದ್ದಾಗ ನಿರ್ದೇಶಕ ಶಂಕರ್ ಸಿನಿಮಾದಲ್ಲಿ ಚರ್ಚಿಸಿದ್ದ ಭ್ರಷ್ಟಾಚಾರ, ಲಂಚಗುಳಿತನ ಇತರೆ ಸಾಮಾಜಿಕ ಪಿಡುಗುಗಳು ಈಗಲೂ ಹಾಗೆಯೇ ಇವೆ. ‘ಇಂಡಿಯನ್ 2’ ಸಿನಿಮಾದಲ್ಲಿಯೂ ಸಹ ಅವೇ ಸಾಮಾಜಿಕ ಪಿಡುಗುಗಳ ವಿರುದ್ಧ ಸೇನಾಪತಿ ಹೋರಾಡುತ್ತಿದ್ದಾನೆ. ಆದರೆ ಆಗಿನದ್ದಕ್ಕಿಂತಲೂ ಈ ಬಾರಿ ತಂತ್ರಜ್ಞಾನ ತುಸು ಮುಂದುವರೆದಿದೆ ಅಷ್ಟೆ.
ಇದೀಗ ಬಿಡುಗಡೆ ಆಗಿರುವ ಟ್ರೈಲರ್ನಲ್ಲಿ ಸಿದ್ಧಾರ್ಥ್ ಮುಖ್ಯವಾಗಿ ಕಾಣಿಸಿಕೊಂಡಿದ್ದಾರೆ. ಸಮಾಜದ ಅನಿಷ್ಠಗಳ ವಿರುದ್ಧ ಹೋರಾಡುವ ಯುವಕನ ಪಾತ್ರದಲ್ಲಿ ಸಿದ್ಧಾರ್ಥ್ ಕಾಣಿಸಿಕೊಂಡಿದ್ದಾರೆ. ಭ್ರಷ್ಟ ಆಡಳಿತ, ಸರ್ಕಾರಿ ವ್ಯವಸ್ಥೆಗಳಿಂದ ಬೇಸತ್ತು ಯುವಕರನ್ನು ಒಂದುಗೂಡಿಸಿಕೊಂಡು ಹೋರಾಡುವ ಪಾತ್ರದಲ್ಲಿ ಸಿದ್ಧಾರ್ಥ್ ಕಾಣಿಸಿಕೊಂಡಿದ್ದಾರೆ. ಇನ್ನು ಕಮಲ್ ಹಾಸನ್ ಸೇನಾಪತಿ ಪಾತ್ರದಲ್ಲಿ ಮತ್ತೊಮ್ಮೆ ಮಿಂಚಿದ್ದಾರೆ. 1996 ರ ‘ಇಂಡಿಯನ್’ ಸಿನಿಮಾಕ್ಕಿಂತಲೂ ‘ಇಂಡಿಯನ್ 2’ ಸಿನಿಮಾದಲ್ಲಿ ತುಸುವಷ್ಟೆ ಹೆಚ್ಚು ವಯಸ್ಸಾಗಿದೆ ಸೇನಾಪತಿಗೆ, ಆದರೆ ಆ ಸಮರ ಕಲೆಯನ್ನು ಸೇನಾಪತಿ ಮರೆತಿಲ್ಲ, ಅದಕ್ಕೆ ಸಾಕ್ಷಿಯಾಗಿ ಕೆಲವು ಆಕ್ಷನ್ ದೃಶ್ಯಗಳನ್ನು ಟ್ರೈಲರ್ನಲ್ಲಿ ಕಟ್ಟಿಕೊಡಲಾಗಿದೆ.
ಇದನ್ನೂ ಓದಿ:‘ಇಂಡಿಯನ್ 2’ ಬಜೆಟ್ ಮಿತಿಮೀರಲು ಕಾರಣವೇನು? ಕಮಲ್ ಹಾಸನ್ ಕೊಟ್ಟರು ಉತ್ತರ
ನಿರ್ದೇಶಕ ಶಂಕರ್ ಅದ್ಧೂರಿತನಕ್ಕೆ ಜನಪ್ರಿಯರು. ಅಂತೆಯೇ ‘ಇಂಡಿಯನ್ 2’ ಸಿನಿಮಾನಲ್ಲಿಯೂ ಅದ್ಧೂರಿತನ ಜೋರಾಗಿದೆ. ಈ ಹಿಂದಿನ ‘ಇಂಡಿಯನ್’ ಸಿನಿಮಾದಲ್ಲಿ ಎಆರ್ ರೆಹಮಾನ್ ಕೆಲವು ಅತ್ಯದ್ಭುತವಾದ ಹಾಡುಗಳನ್ನು ನೀಡಿದ್ದರು. ಆದರೆ ಹೊಸ ‘ಇಂಡಿಯನ್ 2’ ಸಿನಿಮಾಕ್ಕೆ ಅನಿರುದ್ಧ್ ರವಿಚಂದ್ರನ್ ಸಂಗೀತ ನೀಡಿದ್ದಾರೆ. ಅವರು ತಮ್ಮದೇ ಶೈಲಿಯ ಸಂಗೀತವನ್ನು ಈ ಸಿನಿಮಾಕ್ಕೆ ನೀಡಿದ್ದಾರೆ. ಸಿನಿಮಾನಲ್ಲಿ ಕಮಲ್, ಸಿದ್ಧಾರ್ಥ್ ಜೊತೆಗೆ ರಕುಲ್ ಪ್ರೀತ್ ಸಿಂಗ್, ಎಸ್ಜೆ ಸೂರ್ಯ, ಬಾಬಿ ಸಿಂಹ, ಸಮುದ್ರಕಿಣಿ, ಬ್ರಹ್ಮಾನಂದಂ ಇನ್ನೂ ಹಲವರು ನಟಿಸಿದ್ದಾರೆ. ಸಿನಿಮಾಕ್ಕೆ ಲೈಕಾ ಪ್ರೊಡಕ್ಷನ್ ಬಂಡವಾಳ ಹೂಡಿದ್ದಾರೆ. ಸಿನಿಮಾ ಜುಲೈ ತಿಂಗಳಲ್ಲಿ ಬಿಡುಗಡೆ ಆಗಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ