
ಭಾರತೀಯ ಚಿತ್ರರಂಗಕ್ಕೆ ಕೆಲವು ಅತ್ಯದ್ಭುತ ಸಿನಿಮಾಗಳನ್ನು ನೀಡಿರುವ ನಿರ್ದೇಶಕ ಮಣಿರತ್ನಂ. ಭಾರತೀಯ ಸಿನಿಮಾ ರಂಗದ ದಿಕ್ಕು ಬದಲಾವಣೆ ಮಾಡಿದ ನಿರ್ದೇಶಕರಲ್ಲಿ ಮಣಿರತ್ನಂ ಪ್ರಮುಖರು. ಹಲವು ಎವರ್ಗ್ರೀನ್ ಸಿನಿಮಾಗಳನ್ನು ಮಣಿರತ್ನಂ ನೀಡಿದ್ದಾರೆ. ಅಂಥಹಾ ಅದ್ಭುತ ಸಿನಿಮಾಗಳನ್ನು ನೀಡಿರುವುದಕ್ಕೆ ಸಿನಿಮಾ ಪ್ರೇಮಿಗಳು ಮಣಿರತ್ನಂಗೆ ಧನ್ಯವಾದಗಳನ್ನು ಹೇಳುತ್ತಲೇ ಬಂದಿದ್ದಾರೆ. ಆದರೆ ಈಗ ಮಣಿರತ್ನಂ ಮೊದಲ ಬಾರಿಗೆ ಕೆಟ್ಟ ಸಿನಿಮಾ ಮಾಡಿದ್ದಕ್ಕೆ ಪ್ರೇಕ್ಷಕರ ಬಳಿ ಬಹಿರಂಗವಾಗಿ ಕ್ಷಮೆ ಕೇಳಿದ್ದಾರೆ.
ಕಮಲ್ ಹಾಸನ್, ತ್ರಿಷಾ, ಸಿಂಬು ಇನ್ನಿತರರು ನಟಿಸಿರುವ ‘ಥಗ್ ಲೈಫ್’ ಸಿನಿಮಾವನ್ನು ಮಣಿರತ್ನಂ ನಿರ್ದೇಶನ ಮಾಡಿದ್ದರು. ಸಿನಿಮಾ ಕೆಲ ವಾರಗಳ ಹಿಂದಷ್ಟೆ ಬಿಡುಗಡೆ ಆಯ್ತು. ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಹೀನಾಯ ಸೋಲು ಕಂಡಿತು. ಸಿನಿಮಾ ನೋಡಿದ ಒಬ್ಬರೂ ಸಹ ಸಿನಿಮಾದ ಬಗ್ಗೆ ಧನಾತ್ಮಕವಾಗಿ ಮಾತನಾಡಿದ್ದು ದಾಖಲಾಗಿಲ್ಲ. ವರ್ಷದ ಅತ್ಯಂತ ಕೆಟ್ಟ ಸಿನಿಮಾ ಎಂದು ಸಹ ಕೆಲ ವಿಮರ್ಶಕರು ಷರಾ ಬರೆದರು. ಸಿನಿಮಾ ಹೀನಾಯ ಸೋಲು ಕಂಡ ಬಳಿಕ ನಿರ್ದೇಶಕ ಮಣಿರತ್ನಂ ಮೊದಲ ಬಾರಿಗೆ ಬಹಿರಂಗವಾಗಿ ಕ್ಷಮೆ ಕೇಳಿದ್ದಾರೆ.
ತೆಲುಗು ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಮಣಿರತ್ನಂ, ‘ನಮ್ಮಿಬ್ಬರಿಂದ (ಮಣಿರತ್ನಂ-ಕಮಲ್ ಹಾಸನ್) ‘ನಾಯಗನ್’ ರೀತಿಯ ಸಿನಿಮಾ ನಿರೀಕ್ಷೆ ಮಾಡುತ್ತಿದ್ದ ಸಿನಿಮಾ ಪ್ರೇಮಿಗಳಿಗೆ ನಾನು ಬೇಷರತ್ ಕ್ಷಮೆ ಯಾಚಿಸುತ್ತೇನೆ. ನಮಗೆ ಮತ್ತೆ ಹಿಂದಕ್ಕೆ ಹೋಗುವುದಕ್ಕೆ ಇಷ್ಟವಿರಲಿಲ್ಲ. ಹೋಗುವುದಾದರೂ ಏಕೆ? ನಾವು ಹೊಸದಾಗಿಯೇ ಏನನ್ನಾದರೂ ಕೊಡಬೇಕು ಎಂದುಕೊಂಡೆವು. ಪ್ರೇಕ್ಷಕರು ಬೇರೆ ಏನೋ ನಿರೀಕ್ಷೆ ಮಾಡಿದ್ದರು, ಆದರೆ ಅವರು ನಿರೀಕ್ಷಿಸಿದಕ್ಕಿಂತಲೂ ಬಹಳ ಭಿನ್ನವಾದುದನ್ನು ನಾವು ಕೊಟ್ಟೆವು, ಇದರಿಂದ ಅವರಿಗೆ ಭ್ರಮನಿರಸನವಾಯ್ತು’ ಎಂದಿದ್ದಾರೆ.
‘ಥಗ್ ಲೈಫ್’ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ 50 ಕೋಟಿ ಸಹ ಗಳಿಸಿಲ್ಲ. ಸಿನಿಮಾಕ್ಕೆ ಕಮಲ್ ಹಾಸನ್ ಮತ್ತು ಮಣಿರತ್ನಂ ಬಂಡವಾಳ ತೊಡಗಿಸಿದ್ದಾರೆ. ಆದರೆ ಸಿನಿಮಾದ ಡಿಜಿಟಲ್ ಹಕ್ಕುಗಳನ್ನು ನೆಟ್ಫ್ಲಿಕ್ಸ್ 100 ಕೋಟಿಗೂ ಹೆಚ್ಚು ಹಣ ಕೊಟ್ಟು ಖರೀದಿ ಮಾಡಿದೆ ಎನ್ನಲಾಗುತ್ತಿದೆ. ಆದರೆ ಇದೀಗ ನೆಟ್ಫ್ಲಿಕ್ಸ್ ಸಹ ಒಪ್ಪಂದದಲ್ಲಿ ಬದಲಾವಣೆ ಮಾಡಿಕೊಳ್ಳುವ ಯತ್ನ ಮಾಡುತ್ತಿದೆ.
ಇದನ್ನೂ ಓದಿ:‘ಥಗ್ ಲೈಫ್’ ಸಿನಿಮಾ ಮೊದಲ ದಿನದ ಗಳಿಕೆ ಹಿಂದಿಕ್ಕಲು ವಿಫಲವಾದ ‘ಕುಬೇರ’, ‘ಸಿತಾರೇ ಜಮೀನ್ ಪರ್’
‘ಥಗ್ ಲೈಫ್’ ಸಿನಿಮಾಕ್ಕೆ ಕರ್ನಾಟಕದಿಂದ ಭಾರಿ ನಷ್ಟವೇ ಆಗಿದೆ. ‘ಥಗ್ ಲೈಫ್’ ಸಿನಿಮಾ ಪ್ರಚಾರದ ಸಂದರ್ಭದಲ್ಲಿ ಮಾತನಾಡಿದ್ದ ಕಮಲ್, ‘ಕನ್ನಡ ಭಾಷೆ ತಮಿಳು ಭಾಷೆಯಿಂದ ಜನಿಸಿದೆ’ ಎಂದಿದ್ದರು. ಇದು ರಾಜ್ಯದಲ್ಲಿ ತೀವ್ರ ವಿವಾದ ಎಬ್ಬಿಸಿತ್ತು. ಕನ್ನಡಪರ ಸಂಘಟನೆಗಳು ‘ಥಗ್ ಲೈಫ್’ ಸಿನಿಮಾವನ್ನು ನಿಷೇಧಿಸಬೇಕೆಂದು ಆಗ್ರಹಿಸಿದ್ದಲ್ಲದೆ, ಸಿನಿಮಾ ಬಿಡುಗಡೆ ಮಾಡಿದರೆ ಚಿತ್ರಮಂದಿರಗಳಿಗೆ ಬೆಂಕಿ ಹಚ್ಚುವುದಾಗಿ ಬೆದರಿಕೆ ಹಾಕಿದ್ದರು. ಇದೇ ಕಾರಣಕ್ಕೆ ಕರ್ನಾಟಕ ಯಾವ ಚಿತ್ರಮಂದಿರಗಳು ಸಹ ‘ಥಗ್ ಲೈಫ್’ ಸಿನಿಮಾ ಬಿಡುಗಡೆ ಮಾಡಲಿಲ್ಲ. ಇದೀಗ ಸುಪ್ರೀಂಕೋರ್ಟ್ ಆದೇಶದಂತೆ ‘ಥಗ್ ಲೈಫ್’ ಸಿನಿಮಾ ಅನ್ನು ರಾಜ್ಯದಲ್ಲಿ ಬಿಡುಗಡೆ ಮಾಡಬಹುದಾಗಿದೆ. ಆದರೆ ಯಾವ ವಿತರಕನೂ ಸಹ ಸಿನಿಮಾ ಬಿಡುಗಡೆ ಮಾಡಲು ಸಿದ್ಧವಿಲ್ಲ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ