ಸದ್ಯ ಪ್ಯಾನ್ ಇಂಡಿಯಾ ಸಿನಿಮಾ (Pan India Movie) ಬಗ್ಗೆ ದೊಡ್ಡ ಮಟ್ಟದಲ್ಲಿ ಚರ್ಚೆಗಳು ನಡೆಯುತ್ತಿವೆ. ಈ ಕಾನ್ಸೆಪ್ಟ್ನಿಂದಾಗಿ ಸಿನಿಮಾ ಇಂಡಸ್ಟ್ರಿಯ ಚಿತ್ರಣ ನಿಧಾನವಾಗಿ ಬದಲಾಗುತ್ತಿದೆ. ಹಲವು ದೊಡ್ಡ ಬಜೆಟ್ ಚಿತ್ರಗಳು ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆಗುತ್ತಿರುವುದರಿಂದ ನಿರ್ಮಾಪಕರಿಗೆ ಲಾಭದಾಯಕವಾಗಿದೆ. ಬೇರೆ ಭಾಷೆಯವರಿಗೆ ನಮ್ಮ ಚಿತ್ರರಂಗದ ಪರಿಚಯವಾಗುತ್ತದೆ. ‘ಬಾಹುಬಲಿ’ ತೆರೆಕಂಡ (Bahubali Movie) ನಂತರದಲ್ಲಿ ಪ್ಯಾನ್ ಇಂಡಿಯಾ ಕಾನ್ಸೆಪ್ಟ್ ಹೆಚ್ಚು ಜನಪ್ರಿಯತೆ ಪಡೆದುಕೊಂಡಿತ್ತು. ಆದರೆ, ಆ ಮೊದಲೇ ಈ ರೀತಿಯ ಪ್ರಯತ್ನಗಳು ನಡೆದಿದ್ದವು. ಈ ಬಗ್ಗೆ ಕಮಲ್ ಹಾಸನ್ (Kamal Haasan) ಮಾತನಾಡಿದ್ದಾರೆ. ‘ಕೆಜಿಎಫ್’ ಹಾಗೂ ‘ಆರ್ಆರ್ಆರ್’ ತಂಡದ್ದು ಪ್ಯಾನ್ ಇಂಡಿಯಾ ವಿಚಾರದಲ್ಲಿ ಹೊಸ ಪ್ರಯತ್ನವಲ್ಲ ಎಂದಿದ್ದಾರೆ ಅವರು.
ಕಮಲ್ ಹಾಸನ್ ಅವರು ಸುಮಾರು 200 ಸಿನಿಮಾಗಳಲ್ಲಿ ನಟಿಸಿದ್ದಾರೆ. ಕನ್ನಡ, ತಮಿಳು, ತೆಲುಗು ಮೊದಲಾದ ಭಾಷೆಗಳಲ್ಲಿ ಅವರು ಅಭಿನಯಿಸಿದ್ದಾರೆ. ಸದ್ಯ, ‘ವಿಕ್ರಮ್’ ಸಿನಿಮಾ ಪ್ರಚಾರ ಕಾರ್ಯದಲ್ಲಿ ಬ್ಯುಸಿ ಆಗಿದ್ದಾರೆ. ಈ ಚಿತ್ರದ ಪ್ರಮೋಷನ್ಗೆ ದೆಹಲಿಗೆ ತೆರಳಿದ್ದರು. ಈ ವೇಳೆ ಅಲ್ಲಿ ಹಲವು ವಿಚಾರಗಳ ಬಗ್ಗೆ ಕಮಲ್ ಹಾಸನ್ ಮಾತನಾಡಿದ್ದಾರೆ.
‘ಪ್ಯಾನ್ ಇಂಡಿಯಾ ಎಂಬ ಕಾನ್ಸೆಪ್ಟ್ ಮೊದಲಿನಿಂದಲೂ ಇತ್ತು. ವಿ. ಶಾಂತಾರಾಮ್ ಅವರು ಪ್ಯಾನ್ ಇಂಡಿಯಾ ಸಿನಿಮಾ ಮಾಡಿದ್ದರು. 1960ರ ‘ಮುಘಲ್-ಇ-ಅಜಾಮ್’ ಹಾಗೂ 1965ರ ‘ಚೆಮ್ಮೀನ್’ ಸಿನಿಮಾ ಪ್ಯಾನ್ ಇಂಡಿಯಾ ಸಿನಿಮಾ ಆಗಿತ್ತು ‘ಆರ್ಆರ್ಆರ್’, ‘ಕೆಜಿಎಫ್’ ಮಾಡಿರುವುದು ಹೊಸತಲ್ಲ. ನಾವು ಬೇರೆಬೇರೆ ಭಾಷೆಗಳನ್ನು ಮಾತನಾಡುತ್ತೇವೆ. ಆದರೆ, ದೇಶಮಟ್ಟದಲ್ಲಿ ನಾವೆಲ್ಲರೂ ಒಂದು’ ಎಂದಿದ್ದಾರೆ ಕಮಲ್ ಹಾಸನ್.
ಇದನ್ನೂ ಓದಿ: ಯಶ್ ನಟನೆಯ ‘ಕೆಜಿಎಫ್: ಚಾಪ್ಟರ್ 2’ ವೀಕ್ಷಿಸಿದ ಕಮಲ್ ಹಾಸನ್, ಇಳಯರಾಜ ಹೇಳಿದ್ದೇನು?
‘ಕೆಜಿಎಫ್ 2’ ಹಾಗೂ ‘ಆರ್ಆರ್ಆರ್’ ಸಿನಿಮಾ ಕಲೆಕ್ಷನ್ 1000 ಕೋಟಿ ರೂಪಾಯಿ ದಾಟಿದೆ. ಇದಾದ ಬೆನ್ನಲ್ಲೇ ದಕ್ಷಿಣ ಭಾರತ ಹಾಗೂ ಉತ್ತರ ಭಾರತ ಎಂಬ ಚರ್ಚೆ ಶುರುವಾಗಿದೆ. ಈ ಬಗ್ಗೆ ಕೇಳಿದ ಪ್ರಶ್ನೆಗೆ ಕಮಲ್ ಹಾಸನ್ ಉತ್ತರಿಸಿದ್ದಾರೆ. ‘ನಾನು ಭಾರತೀಯ. ನೀವು ಯಾರು? ಮಧುರೈ ದೇವಸ್ಥಾನಕ್ಕೆ ನೀವು ತೆರಳಬಹುದು. ನಾನು ಕಾಶ್ಮೀರಕ್ಕೆ ಹೋಗಬಹುದು’ ಎಂದು ಹೇಳುವ ಮೂಲಕ ಈ ಚರ್ಚೆಗೆ ಬ್ರೇಕ್ ಹಾಕಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.