ತಮಿಳಿನ ‘ವಿಕ್ರಮ್’ ಸಿನಿಮಾ (Vikram Movie) ಸೂಪರ್ ಹಿಟ್ ಆಗಿದೆ. ಕಮಲ್ ಹಾಸನ್ (Kamal Haasan) ಈ ಚಿತ್ರವನ್ನು ನಿರ್ಮಿಸಿ, ನಟಿಸಿದ್ದಾರೆ. ಈ ಚಿತ್ರಕ್ಕಾಗಿ ಅವರು ಸಾಕಷ್ಟು ಹಣ ಖರ್ಚು ಮಾಡಿದ್ದರು. ಈ ಚಿತ್ರದಲ್ಲಿ ಹಲವು ಸ್ಟಾರ್ಗಳು ನಟಿಸಿದ್ದಾರೆ. ಸಂಭಾವನೆ ರೂಪದಲ್ಲೇ ಸಾಕಷ್ಟು ಹಣ ಖರ್ಚಾಗಿದೆ. ಕೊವಿಡ್ ಕಾರಣದಿಂದ ಸಿನಿಮಾ ವಿಳಂಬವಾಗುತ್ತಲೇ ಇತ್ತು. ಇದರಿಂದಲೂ ನಿರ್ಮಾಪಕರಿಗೆ ತೊಂದರೆ ಉಂಟಾಯಿತು. ಆದರೆ, ಕಮಲ್ ಹಾಸನ್ ಎಲ್ಲಿಯೂ ರಾಜಿ ಮಾಡಿಕೊಳ್ಳಲಿಲ್ಲ. ಈಗ ಕಮಲ್ ಹಾಸನ್ ಅವರು ಸಿನಿಮಾ ಯಶಸ್ಸಿನ ಬಗ್ಗೆ ಮಾತನಾಡಿದ್ದಾರೆ. ಈ ಚಿತ್ರದ ಬಗ್ಗೆ ಸಾಕಷ್ಟು ನಂಬಿಕೆ ಇತ್ತು ಎಂಬ ಮಾತನ್ನು ಹೇಳಿದ್ದಾರೆ.
ತಮಿಳುನಾಡು ಒಂದರಲ್ಲೇ ‘ವಿಕ್ರಮ್’ ಸಿನಿಮಾ 127 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಕಮಲ್ ಹಾಸನ್ ವೃತ್ತಿ ಬದುಕಿನಲ್ಲೇ ಇದು ಅತ್ಯಂತ ಯಶಸ್ವಿ ಸಿನಿಮಾ. ದೇಶ ಮಟ್ಟದಲ್ಲಿ ಈ ಚಿತ್ರ ಒಟ್ಟೂ 210 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಇದು ಕಮಲ್ ಖುಷಿಯನ್ನು ಹೆಚ್ಚಿಸಿದೆ. ವಿದೇಶದಲ್ಲೂ ಈ ಸಿನಿಮಾ ಬೇಡಿಕೆ ಸೃಷ್ಟಿ ಆಗಿದೆ. ಹಲವು ರಾಷ್ಟ್ರಗಳಲ್ಲಿ ಸಿನಿಮಾ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ವಿಶ್ವ ಬಾಕ್ಸ್ ಆಫೀಸ್ನಲ್ಲಿ 300+ ಕೋಟಿ ರೂ. ಗಳಿಕೆ ಮಾಡಿದ ಬಗ್ಗೆ ವರದಿ ಆಗಿದೆ.
ಸಿನಿಮಾ ಯಶಸ್ಸಿನ ಬಗ್ಗೆ ಕಮಲ್ ಹಾಸನ್ ಮಾತನಾಡಿದ್ದಾರೆ. ‘ಎಲ್ಲರೂ ಪ್ರಗತಿ ಹೊಂದಬೇಕು ಎಂದಾದರೆ, ಹಣದ ಬಗ್ಗೆ ಚಿಂತೆ ಮಾಡದೆ ಇರುವ ನಾಯಕ ನಿಮಗೆ ಬೇಕು. ಕ್ಷಣ ಮಾತ್ರದಲ್ಲಿ ನಾನು 300 ಕೋಟಿ ರೂ. ಗಳಿಸಬಹುದು ಎಂದು ನಾನು ಹೇಳಿದಾಗ ಯಾರಿಗೂ ಅರ್ಥವಾಗಲಿಲ್ಲ. ನನ್ನಮೇಲೆ ನಾನೇ ಕಲ್ಲು ಹಾಕಿಕೊಳ್ಳುತ್ತಿದ್ದೇನೆ ಎಂದು ಎಲ್ಲರೂ ಭಾವಿಸಿದರು. ಈಗ ಹಣ ಹರಿದು ಬರುತ್ತಿದೆ. ಎಲ್ಲರೂ ಇದನ್ನು ನೋಡುತ್ತಿದ್ದಾರೆ. ನಾನು ನನ್ನ ಎಲ್ಲಾ ಸಾಲವನ್ನು ಮರುಪಾವತಿಸುತ್ತೇನೆ. ಮನಪೂರ್ವಕವಾಗಿ ಊಟ ಮಾಡುತ್ತೇನೆ’ ಎಂದಿದ್ದಾರೆ ಕಮಲ್.
ಇದನ್ನೂ ಓದಿ: ರಜಿನಿಕಾಂತ್- ನಾನು ಒಳ್ಳೆಯ ಫ್ರೆಂಡ್ಸ್, ಆದರೆ ಒಂದು ವಿಚಾರದ ಹೊರತಾಗಿ; ಎಂದ ಕಮಲ್ ಹಾಸನ್; ಏನದು?
ಸಿನಿಮಾ ಯಶಸ್ಸಿಗೆ ಕಾರಣರಾದವರಿಗೆ ಕಮಲ್ ಹಾಸನ್ ದುಬಾರಿ ಗಿಫ್ಟ್ ನೀಡಿದ್ದರು. ಅವರು ಈ ಮೊದಲೇ ಆ ಬಗ್ಗೆ ಅಂದುಕೊಂಡಿದ್ದರು. ‘ನನ್ನ ಕುಟುಂಬ ಮತ್ತು ಸ್ನೇಹಿತರಿಗೆ ನನ್ನಿಂದ ಸಾಧ್ಯವಿರುವ ಎಲ್ಲವನ್ನೂ ನೀಡುತ್ತೇನೆ. ಅದರ ನಂತರ ನನ್ನ ಬಳಿ ಏನೂ ಉಳಿದಿಲ್ಲ ಎಂದರೆ ನನ್ನ ಬಳಿ ಕೊಡಲು ಏನೂ ಇಲ್ಲ ಎಂದೇ ಹೇಳುತ್ತೇನೆ. ಬೇರೆಯವರ ಹಣವನ್ನು ತೆಗೆದುಕೊಂಡು ಇತರರಿಗೆ ಸಹಾಯ ಮಾಡುವಂತೆ ನಾನು ನಟಿಸಬೇಕಾಗಿಲ್ಲ. ನನಗೆ ಯಾವುದೇ ದೊಡ್ಡ ಹೆಸರು ಬೇಡ. ನಾನು ಒಳ್ಳೆಯ ಮನುಷ್ಯನಾಗಿರಲು ಬಯಸುತ್ತೇನೆ’ ಎಂದಿದ್ದಾರೆ ಕಮಲ್ ಹಾಸನ್.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.