2020ರಲ್ಲಿ ಕಂಗನಾ ರಣಾವತ್ (Kangana Ranaut) ಮನೆಯನ್ನು ಬೃಹತ್ ಮುಂಬೈ ಮಹಾನಗರ ಪಾಲಿಕೆ ಅವರು ಕೆಡವಿದ್ದರು. ಇದಕ್ಕೆ ಸಂಬಂಧಿಸಿ ಅವರಿಗೆ ಪರಿಹಾರ ಹಣ ಸಿಗಬೇಕಿತ್ತು. ಆದರೆ, ಈವರೆಗೂ ಅವರಿಗೆ ಹಣ ಸಿಕ್ಕಿಲ್ಲ. ಈ ಬಗ್ಗೆ ಅವರು ಅಸಮಾಧಾನ ಹೊರಹಾಕಿದ್ದಾರೆ. ‘ಅದು ತೆರಿಗೆದಾರರ ಹಣ. ಹೀಗಾಗಿ, ನನಗೆ ಅದು ಬೇಡ’ ಎಂದು ಕಂಗನಾ ಹೇಳಿದ್ದಾರೆ. ಅವರ ಹೇಳಿಕೆ ಅನೇಕರಲ್ಲಿ ಅಚ್ಚರಿ ಮೂಡಿಸಿದೆ. ಅವರು ಈ ರೀತಿ ಹೇಳುವುದಕ್ಕೂ ಒಂದು ಕಾರಣ ಇದೆ. ಅದೇನು ಎಂಬುದಕ್ಕೆ ಈ ಸ್ಟೋರಿಯಲ್ಲಿ ಉತ್ತರ ಇದೆ.
ಅಕ್ರಮ ನಿರ್ಮಾಣ ಆರೋಪ ಹೊರಿಸಿ ಕಂಗನಾ ಅವರ ಮನೆಯ ಒಂದು ಭಾಗವನ್ನು 2020ರಲ್ಲಿ ಕೆಡವಲಾಯಿತು. ಈ ವಿಚಾರದಲ್ಲಿ ಶಿವಸೇನೆ ಹಾಗೂ ಕಂಗನಾ ಮಧ್ಯೆ ಕಿತ್ತಾಟ ನಡೆಯಿತು. ಈ ಪ್ರಕರಣದಲ್ಲಿ ಕಂಗನಾ ವೈ+ ಕೆಟಗರಿ ಭದ್ರತೆ ನೀಡಲಾಯಿತು. ‘ಕಂಗನಾ ರಣಾವತ್ ಅವರು ತೆರಿಗೆದಾರರ ಹಣವನ್ನು ಹಾಳು ಮಾಡುತ್ತಿದ್ದಾರೆ’ ಎಂದು ಭದ್ರತೆ ನೀಡಿದ ವಿಚಾರವನ್ನು ಅನೇಕರು ಟೀಕೆ ಮಾಡಿದ್ದರು. ಈಗ ಕಂಗನಾ ತಮಗೆ ಬರಬೇಕಿದ್ದ ಪರಿಹಾರ ಹಣವನ್ನು ನಿರಾಕರಿಸಿದ್ದಾರೆ.
ಇತ್ತೀಚೆಗೆ ಕಂಗನಾಗೆ ಈ ಬಗ್ಗೆ ಪ್ರಶ್ನೆ ಮಾಡಲಾಗಿದೆ. ‘ನನಗೆ ಪರಿಹಾರ ಹಣ ಸಿಕ್ಕಿಲ್ಲ. ನನಗೆ ಆದ ನಷ್ಟವನ್ನು ಅಳೆಯಲು ಮೌಲ್ಯಮಾಪಕರು ಬರಬೇಕಿತ್ತು. ಈಗ ನಾನು ಮಹಾರಾಷ್ಟ್ರ ಸಿಎಂ ಏಕ್ನಾಥ್ ಶಿಂಧೆ ಅವರನ್ನು ಭೇಟಿ ಮಾಡಿದ್ದೇನೆ. ಮೌಲ್ಯಮಾಪಕರನ್ನು ಕಳಿಸಬೇಡಿ. ನನಗೆ ಪರಿಹಾರ ಹಣ ಬೇಡ ಎಂದು ಹೇಳಿದ್ದೇನೆ’ ಎಂಬುದಾಗಿ ಅವರು ತಿಳಿಸಿದ್ದಾರೆ.
ಇದನ್ನೂ ಓದಿ: ‘ಹಾಸಿಗೆಯಲ್ಲಿ ನೀವು ಏನು ಮಾಡುತ್ತೀರಿ ಎಂಬುದು ನಿಮ್ಮ ಐಡೆಂಟಿಟಿ ಅಲ್ಲ’: ಕಂಗನಾ ರಣಾವತ್
‘ಅವರು ನನಗೆ ಪರಿಹಾರ ನೀಡಬೇಕೆಂದು ನ್ಯಾಯಾಲಯ ಹೇಳಿದೆ. ಆದರೆ ಅವರು ಎಂದಿಗೂ ಮೌಲ್ಯಮಾಪಕರನ್ನು ಕಳುಹಿಸಲಿಲ್ಲ. ನಾನು ಆ ಬಗ್ಗೆ ಬೇಡಿಕೆಯನ್ನೂ ಇಟ್ಟಿಲ್ಲ. ಏಕೆಂದರೆ ಅದು (ಪರಿಹಾರದ ಹಣ) ತೆರಿಗೆ ಪಾವತಿದಾರರ ಹಣ ಮತ್ತು ನನಗೆ ಆ ಹಣ ಬೇಡ’ ಎಂದಿದ್ದಾರೆ ಕಂಗನಾ.
ಕಂಗನಾ ರಣಾವತ್ ಅವರು ಪಿ.ವಾಸು ನಿರ್ದೇಶನದ ‘ಚಂದ್ರಮುಖಿ 2’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ತಮಿಳಿನ ಹಾರರ್ ಸಿನಿಮಾ ‘ಚಂದ್ರಮುಖಿ’ ಚಿತ್ರದ ಸೀಕ್ವೆಲ್ ಇದಾಗಿದೆ. ಈ ಚಿತ್ರದಲ್ಲಿ ಕಂಗನಾ ಡ್ಯಾನ್ಸರ್ ಪಾತ್ರ ಮಾಡುತ್ತಿದ್ದಾರೆ. ಇದರ ಜೊತೆಗೆ ‘ಎಮರ್ಜೆನ್ಸಿ’ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ಇಂದಿರಾ ಗಾಂಧಿ ಹೇರಿದ್ದ ತುರ್ತು ಪರಿಸ್ಥಿತಿ ಆಧರಿಸಿ ಸಿನಿಮಾ ಸಿದ್ಧಗೊಳ್ಳುತ್ತಿದೆ. ಈ ಚಿತ್ರದಲ್ಲಿ ಕಂಗನಾ ಅವರು ಇಂದಿರಾ ಗಾಂಧಿ ಪಾತ್ರ ಮಾಡುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ