ಕರ್ನಾಟಕ ಮೂಲದ ಹಲವು ನಟಿಯರು ಟಾಲಿವುಡ್ನಲ್ಲಿ ಮಿಂಚುತ್ತಿದ್ದಾರೆ. ಅಲ್ಲಿನ ಸ್ಟಾರ್ ನಟರಿಗೆ ಹೀರೋಯಿನ್ ಆಗುವ ಅವಕಾಶ ಅವರಿಗೆ ಸಿಗುತ್ತಿದೆ. ರಶ್ಮಿಕಾ ಮಂದಣ್ಣ (Rashmika Mandanna) ಸೃಷ್ಟಿ ಮಾಡಿಕೊಂಡಿರುವ ಬೇಡಿಕೆ ನೋಡಿದರೆ ಎಂಥವರಿಗೂ ಅಚ್ಚರಿ ಆಗುತ್ತದೆ. ‘ಗೀತಾ ಗೋವಿಂದಂ’ ಚಿತ್ರದ ಯಶಸ್ಸಿನ ಬಳಿಕ ಅವರು ಕನ್ನಡಕ್ಕಿಂತ ಹೆಚ್ಚಾಗಿ ಟಾಲಿವುಡ್ನಲ್ಲೇ ಭದ್ರವಾಗಿ ನೆಲೆ ಕಂಡುಕೊಂಡಿದ್ದಾರೆ. ಅದೇ ರೀತಿ ಪೂಜಾ ಹೆಗ್ಡೆ (Pooja Hegde) ಮತ್ತು ಕೃತಿ ಶೆಟ್ಟಿ (Krithi Shetty) ಕೂಡ ತೆಲುಗು ಚಿತ್ರದಲ್ಲಿ ಮಿಂಚುತ್ತಿದ್ದಾರೆ. ಈಗ ಅವರಿಗೆ ಪೈಪೋಟಿ ನೀಡಲು ಕನ್ನಡತಿ ಶ್ರೀಲೀಲಾ (Sreeleela) ಸಜ್ಜಾಗಿದ್ದಾರೆ. ಅವರಿಗೂ ಟಾಲಿವುಡ್ನಲ್ಲಿ ಭರ್ಜರಿ ಆಫರ್ ಬರುತ್ತಿದೆ ಎಂಬ ಸುದ್ದಿ ಕೇಳಿಬಂದಿದೆ.
ಕನ್ನಡದಲ್ಲಿ ‘ಕಿಸ್’ ಮತ್ತು ‘ಭರಾಟೆ’ ಸಿನಿಮಾಗಳಲ್ಲಿ ನಟಿಸಿರುವ ಶ್ರೀಲೀಲಾ ಅವರು ಅಪ್ಪಟ ಕನ್ನಡತಿ. ಸ್ಯಾಂಡಲ್ವುಡ್ನ ಹಲವು ಪ್ರಾಜೆಕ್ಟ್ಗಳನ್ನು ಕೈಯಲ್ಲಿ ಇಟ್ಟುಕೊಂಡಿರುವ ಅವರು ಈಗ ಟಾಲಿವುಡ್ಗೆ ಎಂಟ್ರಿ ನೀಡುತ್ತಿದ್ದಾರೆ. ‘ಪೆಳ್ಳಿ ಸಂದಡಿ’ ಸಿನಿಮಾ ಮೂಲಕ ಅವರು ತೆಲುಗು ಪ್ರೇಕ್ಷಕರನ್ನು ರಂಜಿಸಲಿದ್ದಾರೆ. 25 ವರ್ಷಗಳ ಹಿಂದೆ ‘ಪೆಳ್ಳಿ ಸಂದಡಿ’ ಚಿತ್ರ ಮೂಡಿಬಂದಿತ್ತು. ಅದೇ ಕಥೆಯನ್ನು ಪ್ರಸ್ತುತ ತಲೆಮಾರಿಗೆ ಅನ್ವಯ ಆಗುವಂತೆ ಹೊಸ ಸಿನಿಮಾ ಕಟ್ಟಿಕೊಡಲಾಗುತ್ತಿದೆ. ಆ ಚಿತ್ರಕ್ಕೆ ನಾಯಕಿಯಾಗುವ ಚಾನ್ಸ್ ಶ್ರೀಲೀಲಾಗೆ ಸಿಕ್ಕಿದೆ. ಆ ಚಿತ್ರ ತೆರೆಕಾಣುವುದಕ್ಕೂ ಮುನ್ನವೇ ಅವರಿಗೆ ಹೊಸ ಹೊಸ ಆಫರ್ಗಳು ಬರುತ್ತಿವೆ.
ಟಾಲಿವುಡ್ನ ಯುವ ನಟರಿಗೆ ಶ್ರೀಲೀಲಾ ಸೂಕ್ತವಾಗುತ್ತಾರೆ ಎಂಬ ಅಭಿಪ್ರಾಯ ಈಗಾಗಲೇ ಅಲ್ಲಿನ ಕೆಲವು ನಿರ್ದೇಶಕರಿಂದ ವ್ಯಕ್ತವಾಗುತ್ತಿದೆಯಂತೆ. ಹಾಗಾಗಿ ಮುಂಬರುವ ಕೆಲವು ಸಿನಿಮಾಗಳಿಗೆ ಶ್ರೀಲೀಲಾ ಅವರೇ ನಾಯಕಿಯಾಗಬೇಕು ಎಂದು ಅವರ ಕಾಲ್ಶೀಟ್ ಪಡೆಯಲು ಅನೇಕ ನಿರ್ಮಾಪಕರು ಪ್ರಯತ್ನಿಸುತ್ತಿದ್ದಾರೆ ಎಂಬ ಗುಸುಗುಸು ಕೇಳಿಬಂದಿದೆ. ಆದರೆ ಈ ಬಗ್ಗೆ ಸದ್ಯಕ್ಕೆ ಯಾವುದೇ ಅಧಿಕೃತ ಘೋಷಣೆ ಆಗಿಲ್ಲ. ಒಂದು ವೇಳೆ ಶ್ರೀಲೀಲಾ ಮಿಂಚಲು ಆರಂಭಿಸಿದರೆ ರಶ್ಮಿಕಾ ಮಂದಣ್ಣ, ಪೂಜಾ ಹೆಗ್ಡೆ, ಕೃತಿ ಶೆಟ್ಟಿಗೆ ಕೊಂಚ ಹಿನ್ನಡೆ ಆಗಬಹುದು ಎಂಬ ಮಾತನ್ನೂ ತೆಗೆದುಹಾಕುವಂತಿಲ್ಲ.
ಈಗಾಗಲೇ ‘ಪೆಳ್ಳಿ ಸಂದಡಿ’ ಸಿನಿಮಾದ ‘ಪ್ರೇಮಂಟೆ ಏಂಟಿ..’ ಹಾಡಿನ ಮೂಲಕ ಪಡ್ಡೆ ಹುಡುಗರ ಹೃದಯಕ್ಕೆ ಶ್ರೀಲೀಲಾ ಕಿಚ್ಚು ಹಚ್ಚಿದ್ದಾರೆ. ‘ಬುಜ್ಜುಲು ಬುಜ್ಜುಲು..’ ಗೀತೆಯಲ್ಲಿ ಅವರು ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದಾರೆ. ಮೊದಲ ಸಿನಿಮಾ ರಿಲೀಸ್ಗೂ ಮುನ್ನವೇ ಇಷ್ಟೆಲ್ಲ ಸದ್ದು ಮಾಡುತ್ತಿರುವ ಅವರಿಗೆ ಟಾಲಿವುಡ್ನಲ್ಲಿ ಒಳ್ಳೆಯ ಭವಿಷ್ಯ ಇದೆ ಎಂಬ ಮಾತುಗಳು ಕೇಳಿಬರುತ್ತಿವೆ.
ಇದನ್ನೂ ಓದಿ:
ಜಿಮ್ನಲ್ಲಿ ಒಟ್ಟಾಗಿ ವರ್ಕೌಟ್ ಮಾಡಿದ ರಶ್ಮಿಕಾ ಮಂದಣ್ಣ-ವಿಜಯ್ ದೇವರಕೊಂಡ; ಫೋಟೋ ವೈರಲ್
ಮಾಡೋಕೆ ಏನೂ ಕೆಲಸ ಇಲ್ಲದಿದ್ದರೆ ರಶ್ಮಿಕಾ ಮಂದಣ್ಣ ಏನು ಮಾಡ್ತಾರೆ? ಫೋಟೋ ಸಹಿತ ಸಿಕ್ತು ಉತ್ತರ