ತಗ್ಗಿತು ‘ಲಕ್ಷ್ಮೀ ಬಾರಮ್ಮ’ ಟಿಆರ್ಪಿ; ಹೆಚ್ಚಿತು ‘ಅಮೃತಧಾರೆ’ ವೀಕ್ಷಣೆ, ಪುಟ್ಟಕ್ಕನಿಗೆ ಮೊದಲ ಸ್ಥಾನ
‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿ ಮೊದಲ ಸ್ಥಾನ ಪಡೆದುಕೊಂಡಿದೆ. ಇತ್ತೀಚೆಗೆ ಪ್ರಸಾರ ಆರಂಭಿಸಿದ ‘ಅಮೃತಧಾರೆ’ ಧಾರಾವಾಹಿಗೆ ದಿನ ಕಳೆದಂತೆ ವೀಕ್ಷಕರ ಸಂಖ್ಯೆ ಹೆಚ್ಚುತ್ತಿದೆ.
ಕನ್ನಡದ ವಾಹಿನಿಗಳ ಮಧ್ಯೆ ಕಾಂಪಿಟೇಷನ್ ಜೋರಾಗಿದೆ. ಹಲವು ವಿಶೇಷ ಕಥೆಗಳೊಂದಿಗೆ ಧಾರಾವಾಹಿಗಳು ಬರುತ್ತಿವೆ. ಈ ಎಲ್ಲಾ ಧಾರಾವಾಹಿಗಳ ಮಧ್ಯೆ ಯಾವುದು ಚೆನ್ನಾಗಿ ಮೂಡಿಬರುತ್ತಿದೆ ಎಂಬುದನ್ನು ತಿಳಿಯೋಕೆ ಇರೋ ಮಾನದಂಡ ಟಿಆರ್ಪಿ. ಈಗ ಜೂನ್ 9ರಿಂದ ಜೂನ್ 15ರವರೆಗಿನ ಧಾರಾವಾಹಿಗಳ ಟಿಆರ್ಪಿ ಮಾಹಿತಿ ರಿವೀಲ್ ಆಗಿದೆ. ಈ ಪೈಕಿ ‘ಪುಟ್ಟಕ್ಕನ ಮಕ್ಕಳು’ (Puttakkana Makkalu) ಧಾರಾವಾಹಿ ಮೊದಲ ಸ್ಥಾನ ಪಡೆದುಕೊಂಡಿದೆ. ಅಷ್ಟೇ ಅಲ್ಲ ಈ ಧಾರಾವಾಹಿ ಟಿಆರ್ಪಿಯಲ್ಲಿ ಭಾರೀ ಏರಿಕೆ ಕಂಡಿದೆ. ಇತ್ತೀಚೆಗೆ ಪ್ರಸಾರ ಆರಂಭಿಸಿದ ‘ಅಮೃತಧಾರೆ’ (Amruthadhare Serial) ಧಾರಾವಾಹಿಗೆ ದಿನ ಕಳೆದಂತೆ ವೀಕ್ಷಕರ ಸಂಖ್ಯೆ ಹೆಚ್ಚುತ್ತಿದೆ.
ಪುಟ್ಟಕ್ಕನ ಮಕ್ಕಳು
ಜೀ ಕನ್ನಡದಲ್ಲಿ ಪ್ರಸಾರ ಕಾಣುತ್ತಿರುವ ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿಯ ಟಿಆರ್ಪಿ ಕಳೆದ ವಾರಕ್ಕಿಂತ ಹೆಚ್ಚಿದೆ. ಉಮಾಶ್ರೀ ಅಭಿನಯದ ಈ ಧಾರಾವಾಹಿ ಮೊದಲ ಸ್ಥಾನ ಕಾಯ್ದುಕೊಂಡಿದೆ. ಈಗಾಗಲೇ ಈ ಧಾರಾವಾಹಿ 400+ ಎಪಿಸೋಡ್ ಪ್ರಸಾರ ಕಂಡಿದೆ.
‘ಗಟ್ಟಿಮೇಳ’
ಕಳೆದ ಕೆಲ ವಾರಗಳಿಂದ ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿ ಟಿಆರ್ಪಿ ರೇಸ್ನಲ್ಲಿ ಮೊದಲಿದ್ದರೆ ಎರಡನೇ ಸ್ಥಾನದಲ್ಲಿ ‘ಗಟ್ಟಿ ಮೇಳ’ ಇರುತ್ತಿದೆ. ಈ ವಾರವೂ ಅದು ಮುಂದುವರಿದಿದೆ. ಈ ಧಾರಾವಾಹಿ ಈ ವಾರ ಎರಡನೇ ಸ್ಥಾನದಲ್ಲಿದೆ.
‘ಶ್ರೀರಸ್ತು ಶುಭಮಸ್ತು’
‘ಶ್ರೀರಸ್ತು ಶುಭಮಸ್ತು’ ಧಾರಾವಾಹಿಗೆ ಬೇಡಿಕೆ ಹೆಚ್ಚುತ್ತಿದೆ. ಸುಧಾರಾಣಿ ಮೊದಲಾದವರು ನಟಿಸಿರುವ ಈ ಧಾರಾವಾಹಿಗೆ ಮೂರನೇ ಸ್ಥಾನ ಸಿಕ್ಕಿದೆ. ಈ ಮೂಲಕ ದಿನ ಕಳೆದಂತೆ ಈ ಧಾರಾವಾಹಿಯ ಬೇಡಿಕೆ ಹೆಚ್ಚುತ್ತಲೇ ಇದೆ.
‘ಸತ್ಯ’
ನಾಲ್ಕನೇ ಸ್ಥಾನದಲ್ಲಿ ‘ಸತ್ಯ ಧಾರಾವಾಹಿ ಇದೆ. ಮೊದಲ ಟಾಪ್ ನಾಲ್ಕೂ ಧಾರಾವಾಹಿಗಳು ಜೀ ಕನ್ನಡದಲ್ಲಿ ಪ್ರಸಾರ ಕಾಣುತ್ತಿವೆ ಅನ್ನೋದು ಇಲ್ಲಿ ಗಮನಿಸಬೇಕಾದ ಅಂಶ. ಈ ಧಾರಾವಾಹಿಗೆ ಕೆಲ ದಿನಗಳ ಕಾಲ ಟಿಆರ್ಪಿ ಕುಗ್ಗಿತ್ತು. ಈಗ ಧಾರಾವಾಹಿ ಮತ್ತೆ ಟ್ರ್ಯಾಕ್ಗೆ ಮರಳಿದೆ.
‘ಭಾಗ್ಯಲಕ್ಷ್ಮೀ’-ಲಕ್ಷ್ಮೀ ಬಾರಮ್ಮ
ಈ ಮೊದಲು ‘ಭಾಗ್ಯಲಕ್ಷ್ಮೀ’ ಧಾರಾವಾಹಿ ಮೂರು ಅಥವಾ ನಾಲ್ಕನೇ ಸ್ಥಾನದಲ್ಲಿ ಇರುತ್ತಿತ್ತು. ಈಗ ಈ ಧಾರಾವಾಹಿ ಐದನೇ ಸ್ಥಾನಕ್ಕೆ ಇಳಿದಿದೆ. ಟಾಪ್ ಐದರಲ್ಲಿ ಇರುತ್ತಿದ್ದ ‘ಲಕ್ಷ್ಮೀ ಬಾರಮ್ಮ’ ಧಾರಾವಾಹಿ ಆರನೇ ಸ್ಥಾನಕ್ಕೆ ಇಳಿದಿದೆ. ಈ ಎರಡೂ ಧಾರಾವಾಹಿಗಳ ಟಿಆರ್ಪಿ ಮೊದಲಿಗಿಂತ ಕೊಂಚ ತಗ್ಗಿದೆ. ಈ ಧಾರಾವಾಹಿ ಮತ್ತೆ ಕಂಬ್ಯಾಕ್ ಮಾಡಲಿದೆ ಅನ್ನೋದು ವೀಕ್ಷಕರ ಅಭಿಪ್ರಾಯ.
ಅಮೃತಧಾರೆ
ರಾಜೇಶ್ ನಟರಂಗ ಹಾಗೂ ಛಾಯಾ ಸಿಂಗ್ ನಟನೆಯ ‘ಅಮೃತಧಾರೆ’ ಧಾರಾವಾಹಿಗೆ ವೀಕ್ಷಕರ ಸಂಖ್ಯೆ ಹೆಚ್ಚುತ್ತಿದೆ. ವಾರ ಕಳೆದಂತೆ ಧಾರಾವಾಹಿಯ ಟಿಆರ್ಪಿ ಹೆಚ್ಚುತ್ತಿದೆ. ಈ ವಾರ ಈ ಧಾರಾವಾಹಿಗೆ ಏಳನೇ ಸ್ಥಾನ ಸಿಕ್ಕಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ