ನಟ ಪುನೀತ್ ರಾಜ್ಕುಮಾರ್ (Puneeth Rajkumar) ಅವರನ್ನು ಎಲ್ಲ ಸಂದರ್ಭದಲ್ಲಿಯೂ ನೆನಪಿಸಿಕೊಳ್ಳಲಾಗುತ್ತಿದೆ. ಗಣೇಶ ಚತುರ್ಥಿಯ (Ganesh Chaturthi 2022) ಈ ಶುಭ ದಿನದಂದು ಕೂಡ ಅಪ್ಪು ಗುಣಗಾನ ಮಾಡಲಾಗುತ್ತಿದೆ. ಅಭಿಮಾನಿಗಳು ಪುನೀತ್ ರಾಜ್ಕುಮಾರ್ಗೆ ದೇವರ ಸ್ಥಾನ ನೀಡಿದ್ದಾರೆ. ದೇವರ ಪಕ್ಕದಲ್ಲಿ ಅಪ್ಪು ಫೋಟೋ ಇಟ್ಟು ಪೂಜೆ ಮಾಡಿದ ಎಷ್ಟೋ ಉದಾಹರಣೆ ಇದೆ. ಈಗ ವಿನಾಯಕನ ಮೂರ್ತಿ ಪಕ್ಕದಲ್ಲಿ ಪುನೀತ್ ಪ್ರತಿಮೆ ಇರಿಸಿ ಹಬ್ಬವನ್ನು ಆಚರಿಸಲಾಗುತ್ತಿದೆ. ಉತ್ತರಕನ್ನಡ ಜಿಲ್ಲೆಯ ಅಂಕೋಲಾದ ಆವರ್ಸ ಗ್ರಾಮದಲ್ಲಿ ವಿಶೇಷವಾಗಿ ಪುನೀತ್ ಪ್ರತಿಮೆ ನಿರ್ಮಾಣ ಆಗಿದೆ. ಕನ್ನಡದ ಕೋಟ್ಯಧಿಪತಿ (Kannadada Kotyadhipathi) ಕಾರ್ಯಕ್ರಮವನ್ನು ನಡೆಸಿಕೊಡುತ್ತಿರುವ ರೀತಿಯಲ್ಲಿ ಅಪ್ಪು ಮೂಡಿಬಂದಿದ್ದಾರೆ. ಅವರ ಪಕ್ಕದಲ್ಲಿ ಪ್ರಶ್ನೆಗಳಿಗೆ ಉತ್ತರಿಸಲು ಸಿದ್ಧವಾಗಿ ಕುಳಿತಿರುವಂತೆ ಗಣೇಶನ ಮೂರ್ತಿ ಇದೆ. ಹಾಟ್ ಸೀಟ್ನಲ್ಲಿ ಕುಳಿತ ಗಣಪತಿಗೆ ಅಪ್ಪು ಪ್ರಶ್ನೆಗಳನ್ನು ಕೇಳುತ್ತಾರೇನೋ ಎಂಬಂತಿದೆ ಈ ದೃಶ್ಯ.
ಆವರ್ಸಾದ ಸಾರ್ವಜನಿಕ ಗಣೇಶೋತ್ಸವ ಸಮಿತಿಯಿಂದ ಈ ಗಣಪತಿ ಪ್ರತಿಷ್ಠಾಪನೆ ಮಾಡಲಾಗಿದೆ. ಕಲಾವಿದ ದಿನೇಶ್ ಮೇತ್ರಿ ಅವರು ಜೇಡಿ ಮಣ್ಣಿನಿಂದ ಅಪ್ಪು ಪ್ರತಿಮೆ ನಿರ್ಮಾಣ ಮಾಡಿದ್ದಾರೆ. ಇದನ್ನು ನೋಡಲು ಸಾವಿರಾರು ಜನರು ಬರುತ್ತಿದ್ದಾರೆ. ಪುನೀತ್ ರಾಜ್ಕುಮಾರ್ ಮಾಡಿದ ಸಮಾಜಸೇವೆಯಿಂದ ಪ್ರೇರಣೆಗೊಂಡ ಸಾರ್ವಜನಿಕ ಗಣೇಶೋತ್ಸವ ಸಮಿತಿಯವರು ಹಾಗೂ ಕಲಾವಿದ ದಿನೇಶ್ ಮೇತ್ರಿ ಅವರು ಅಪ್ಪು ಅವರಿಗೆ ಈ ರೀತಿ ವಿಶೇಷವಾಗಿ ಗೌರವ ಅರ್ಪಿಸಿದ್ದಾರೆ. ದಿನೇಶ್ ಮೇತ್ರಿ ಕೂಡ ಅಪ್ಪು ಅಭಿಮಾನಿ ಆಗಿದ್ದಾರೆ. ಒಂದು ತಿಂಗಳ ಅವಧಿಯಲ್ಲಿ ಅವರು ಗಣಪತಿ ಮತ್ತು ಪುನೀತ್ ಪ್ರತಿಮೆಯನ್ನು ನಿರ್ಮಿಸಿದ್ದಾರೆ.
ಎಲ್ಲೆಲ್ಲೂ ಗಣೇಶ ಚತುರ್ಥಿಯ ಸಂಭ್ರಮ ಮನೆ ಮಾಡಿದೆ. ಆದರೆ ಪುನೀತ್ ರಾಜ್ಕುಮಾರ್ ಅವರು ನಮ್ಮ ನಡುವೆ ಇಲ್ಲ ಎಂಬ ನೋವು ಅಭಿಮಾನಿಗಳನ್ನು ಕಾಡುತ್ತಿದೆ. ಹಾಗಾಗಿ ದೇವರ ಜೊತೆಗೆ ಪುನೀತ್ ಅವರಿಗೂ ಫ್ಯಾನ್ಸ್ ಪೂಜೆ ಸಲ್ಲಿಸುತ್ತಿದ್ದಾರೆ. ಆ ಮೂಲಕ ಅಪ್ಪು ಮಾಡಿದ ಸಾಮಾಜಿಕ ಕೆಲಸಗಳನ್ನು ಸ್ಮರಿಸಲಾಗುತ್ತಿದೆ.
ಹಲವು ಕಡೆಗಳಲ್ಲಿ ಈ ರೀತಿಯ ಪ್ರಯತ್ನ ಮಾಡಲಾಗಿದೆ. ದೇವರ ರೂಪದಲ್ಲಿ ಅಪ್ಪು ಅವರನ್ನು ಕಾಣಲಾಗುತ್ತಿದೆ. ಒಂದಷ್ಟು ದಿನಗಳ ಹಿಂದೆ ನಟ ರಾಘವೇಂದ್ರ ರಾಜ್ಕುಮಾರ್ ಅವರು ಕೂಡ ಒಂದು ಫೋಟೋ ಶೇರ್ ಮಾಡಿಕೊಂಡಿದ್ದರು. ‘ಪ್ರಕೃತಿ ಆರ್ಟ್ ಸೆಂಟರ್’ ಕಲಾವಿದರ ಕಲ್ಪನೆಯಲ್ಲಿ ಆ ವಿಶೇಷವಾದ ಮೂರ್ತಿ ಮೂಡಿಬಂದಿತ್ತು. ರಾಘವೇಂದ್ರ ರಾಜ್ಕುಮಾರ್ ಅವರಿಗೆ ಅದು ತುಂಬ ಇಷ್ಟವಾಗಿತ್ತು. ಫೇಸ್ಬುಕ್ನಲ್ಲಿ ಫೋಟೋ ಹಂಚಿಕೊಂಡಿದ್ದ ಅವರು, ‘ಎಂಥಾ ಅದ್ಭುತ ಯೋಚನೆ’ ಎಂದು ಕ್ಯಾಪ್ಷನ್ ನೀಡಿದ್ದರು.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.