‘ಕಣ್ಣಪ್ಪ’ ಸಿನಿಮಾದ ಹಾರ್ಡ್​ಡ್ರೈವ್ ಕಳವು, ನೀರಿನಲ್ಲಿ ಹೋಮವಾದ ನೂರಾರು ಕೋಟಿ

Kannappa movie: ಮಂಚು ಮನೋಜ್ ನಟನೆಯ ‘ಕಣ್ಣಪ್ಪ’ ಸಿನಿಮಾ ಬಹು ನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾಗಳಲ್ಲಿ ಒಂದು. ಭಾರಿ ದೊಡ್ಡ ಬಜೆಟ್ ಅನ್ನು ಈ ಸಿನಿಮಾ ಮೇಲೆ ಹೂಡಿಕೆ ಮಾಡಲಾಗಿದೆ. ಆದರೆ ಇದೀಗ ಸಿನಿಮಾ ತಂಡಕ್ಕೆ ಭಾರಿ ದೊಡ್ಡ ಆಘಾತ ಬಂದೆರಗಿದೆ. ಸಿನಿಮಾದ ಎರಡು ಹಾರ್ಡ್​ಡ್ರೈವ್​ಗಳು ಕಳುವಾಗಿವೆ.

‘ಕಣ್ಣಪ್ಪ’ ಸಿನಿಮಾದ ಹಾರ್ಡ್​ಡ್ರೈವ್ ಕಳವು, ನೀರಿನಲ್ಲಿ ಹೋಮವಾದ ನೂರಾರು ಕೋಟಿ
Kannappa

Updated on: May 30, 2025 | 12:28 PM

ಪ್ರಭಾಸ್ (Prabhas), ಅಕ್ಷಯ್ ಕುಮಾರ್, ಮೋಹನ್​ಲಾಲ್ ಅಂಥಹಾ ಸ್ಟಾರ್ ನಟರು ಅತಿಥಿ ಪಾತ್ರದಲ್ಲಿ ನಟಿಸಿರುವ, ಮಂಚು ಮನೋಜ್, ಮಂಚು ಮೋಹನ್​ಬಾಬು, ಕನ್ನಡದ ನಟ ದೇವರಾಜ್ ಇನ್ನೂ ಹಲವಾರು ಪ್ರತಿಭಾವಂತ ನಟರು ನಟಿಸಿರುವ ನೂರಾರು ಕೋಟಿ ಬಜೆಟ್​ನ ಪೌರಾಣಿಕ ಸಿನಿಮಾ ‘ಕಣ್ಣಪ್ಪ’ ಸಿನಿಮಾದ ಹಾರ್ಡ್​ಡ್ರೈವ್ ಕಳುವಾಗಿದೆ. ಇದರಿಂದಾಗಿ ನೂರಾರು ಕೋಟಿ ಬಜೆಟ್​ ಹಾಕಿ ನಿರ್ಮಿಸಿದ್ದ ಸಿನಿಮಾ ಕಳ್ಳರ ಪಾಲಾದಂತಾಗಿದೆ.

ಹೈದರಾಬಾದ್​ನ ಫಿಲಂ ನಗರ್​ ಪೊಲೀಸ್ ಠಾಣೆಯಲ್ಲಿ ‘ಕಣ್ಣಪ್ಪ’ ಸಿನಿಮಾದ ನಿರ್ಮಾಪಕರು ದೂರು ದಾಖಲಿಸಿದ್ದಾರೆ. ಯಾರೋ ಕೆಲ ಅಗಂತುಕರು ಕಚೇರಿಗೆ ನುಗ್ಗಿ ಹಾರ್ಡ್​ ಡ್ರೈವ್​ಗಳನ್ನು ಎತ್ತಿಕೊಂಡು ಹೋಗಿದ್ದಾರೆ ಎಂದು ಆರೋಪಿಸಿದ್ದಾರೆ. ಈಗ ಕಳುವಾಗಿರುವ ಎರಡು ಹಾರ್ಡ್​ ಡಿಸ್ಕ್​ಗಳಲ್ಲಿ ಸಿನಿಮಾಕ್ಕೆ ಸಂಬಂಧಿಸಿದ ಫೈನಲ್ ವಿಎಫ್​ಎಕ್ಸ್ ದೃಶ್ಯಗಳು ಇದ್ದವಂತೆ.

ಮುಂಬೈನ ಎಚ್​ಐವಿಇ ಸ್ಟುಡಿಯೋನಲ್ಲಿ ‘ಕಣ್ಣಪ್ಪ’ ಸಿನಿಮಾದ ವಿಎಫ್​ಎಕ್ಸ್ ಕೆಲಸ ಮಾಡಿಸಲಾಗಿತ್ತು. ಆ ಬಳಿಕ ಎಚ್​ಐವಿಇ ಸ್ಟುಡಿಯೋನವರು ಕೊರಿಯರ್​ನಲ್ಲಿ ಎರಡು ಹಾರ್ಡ್​ ಡಿಸ್ಕ್​ಗಳನ್ನು ಹೈದರಾಬಾದ್​ನ ಫಿಲಂ ನಗರ್​ನ ಫೋರ್ ಫ್ರೇಮ್ಸ್ ಸ್ಟುಡಿಯೋಕ್ಕೆ ಕೊರಿಯರ್ ಮಾಡಿದ್ದಾರೆ. ಆ ಕೊರಿಯರ್ ಅನ್ನು ರಘು ಎಂಬ ವ್ಯಕ್ತಿ ಪಡೆದುಕೊಂಡಿದ್ದಾರೆ. ಆ ಹಾರ್ಡ್​ ಡಿಸ್ಕ್​ಗಳನ್ನು ರಘು ಎಂಬಾತ ಚರಿತಾ ಹೆಸರಿನ ಯುವತಿಗೆ ನೀಡಿದ್ದರಂತೆ. ಆದರೆ ಈಗ ರಘು ಮತ್ತು ಚಿತ್ರಾ ಇಬ್ಬರೂ ಸಹ ಕಣ್ಮರೆಯಾಗಿದ್ದಾರೆ.

ಇದನ್ನೂ ಓದಿ:‘ಕಣ್ಣಪ್ಪ’ ಚಿತ್ರದ ಅವಧಿ ಇಷ್ಟೊಂದು ದೀರ್ಘವೇ? ಯಾರ ಪಾತ್ರ ಎಷ್ಟೊತ್ತಿದೆ?

ಈ ಇಬ್ಬರೂ ಸೇರಿ ಹಾರ್ಡ್​ ಡಿಸ್ಕ್​ಗಳನ್ನು ತೆಗೆದುಕೊಂಡು ಪರಾರಿ ಆಗಿದ್ದಾರೆ ಎಂಬ ಅನುಮಾನವನ್ನು ನಿರ್ಮಾಪಕರು ವ್ಯಕ್ತಪಡಿಸಿದ್ದು, ಫಿಲಂ ನಗರ್ ಪೊಲೀಸರು ಇದೀಗ ಪ್ರಕರಣ ತನಿಖೆ ನಡೆಸುತ್ತಿದ್ದಾರೆ. ರಘು ಹಾಗೂ ಚರಿತಾಗಾಗಿ ಹುಡುಕಾಟ ಆರಂಭವಾಗಿದೆ. ಕಳೆದ ವರ್ಷ ಬಿಡುಗಡೆ ಆಗಿದ್ದ ರಜನೀಕಾಂತ್ ನಟನೆಯ ‘ಲಾಲ್ ಸಲಾಂ’ ಸಿನಿಮಾದ ಹಾರ್ಡ್​ ಡ್ರೈವ್ ಸಹ ಇದೇ ರೀತಿ ಕಣ್ಮರೆಯಾಗಿತ್ತು. ಭಾರಿ ಬಜೆಟ್ ಹಾಕಿ ಮಾಡಿದ್ದ ಸಿನಿಮಾದ ಹಾರ್ಡ್​ ಡ್ರೈವ್ ಕಾಣೆ ಆದ ಕಾರಣ ಸಿನಿಮಾಕ್ಕೆ ಭಾರಿ ಹೊಡೆತ ಬಿತ್ತು.

‘ಕಣ್ಣಪ್ಪ’ ಸಿನಿಮಾ ಬೇಡರ ಕಣ್ಣಪ್ಪ ಕತೆ ಆಧರಿಸಿದ್ದು, ಸಿನಿಮಾದಲ್ಲಿ ಮಂಚು ಮನೋಜ್ ನಾಯಕ. ಸಿನಿಮಾ ನಿರ್ಮಾಣ ಮಾಡಿರುವುದು ಅವರ ತಂದೆ ಮೋಹನ್​ಬಾಬು. ಸಿನಿಮಾದ ಚಿತ್ರೀಕರಣವನ್ನು ನ್ಯೂಜಿಲೆಂಡ್, ಹೈದರಾಬಾದ್ ಇನ್ನೂ ಹಲವು ಕಡೆ ಮಾಡಲಾಗಿದೆ. ಸಿನಿಮಾದಲ್ಲಿ ಪ್ರಭಾಸ್, ಬಾಲಿವುಡ್ ನಟ ಅಕ್ಷಯ್​ಕುಮಾರ್, ಮೋಹನ್​ಲಾಲ್ ಇನ್ನೂ ಹಲವರು ನಟಿಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ