ವಿಜಯ್ ಅಭಿಮಾನಿಗಳ ಓಲೈಸಲು ಹೋಗಿ ಚಿರಂಜೀವಿ ಅಭಿಮಾನಿಗಳ ಎದುರು ಹಾಕಿಕೊಂಡ ಕೀರ್ತಿ ಸುರೇಶ್

Keerthy Suresh: ಕೀರ್ತಿ ಸುರೇಶ್ ಈ ಹಿಂದೆ ಸಂದರ್ಶನವೊಂದರಲ್ಲಿ ಮಾತನಾಡುತ್ತಾ, ದಳಪತಿ ವಿಜಯ್ ಮತ್ತು ಚಿರಂಜೀವಿ ಈ ಇಬ್ಬರಲ್ಲಿ ನಿಮ್ಮ ಪ್ರಕಾರ ಅದ್ಭುತ ಡ್ಯಾನ್ಸರ್ ಯಾರು? ಎಂಬ ಪ್ರಶ್ನೆಗೆ ವಿಜಯ್ ಎಂಬ ಉತ್ತರ ನೀಡಿದ್ದರು. ಇದು ಚಿರಂಜೀವಿ ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿತ್ತು. ಕೀರ್ತಿ ಸುರೇಶ್ ಅವರು ಈಗ ಮತ್ತೆ ಈ ಬಗ್ಗೆ ಮಾತನಾಡಿದ್ದಾರೆ.

ವಿಜಯ್ ಅಭಿಮಾನಿಗಳ ಓಲೈಸಲು ಹೋಗಿ ಚಿರಂಜೀವಿ ಅಭಿಮಾನಿಗಳ ಎದುರು ಹಾಕಿಕೊಂಡ ಕೀರ್ತಿ ಸುರೇಶ್
Keerthy Suresh

Updated on: Nov 27, 2025 | 9:02 AM

ಕೀರ್ತಿ ಸುರೇಶ್ (Keerthy Suresh), ದಕ್ಷಿಣ ಭಾರತದ ಖ್ಯಾತ ನಟಿ. ನಟನೆಗೆ ರಾಷ್ಟ್ರಪ್ರಶಸ್ತಿ ಪಡೆದಿರುವ ಈ ನಟಿ, ಪ್ರತಿಭಾವಂತ ನಟಿಯಾಗಿರುವ ಜೊತೆಗೆ ಸುಂದರಿ ಹಾಗೂ ಡ್ಯಾನ್ಸರ್ ಸಹ ಹೌದು. ಕೀರ್ತಿ ಸುರೇಶ್ ನಟನೆಯ ‘ರಿವಾಲ್ವರ್ ರೀಟಾ’ ಸಿನಿಮಾ ನಾಳೆ (ನವೆಂಬರ್ 28) ಬಿಡುಗಡೆ ಆಗುತ್ತಿದೆ. ಕೆಲ ದಿನಗಳ ಹಿಂದೆ ಕೀರ್ತಿ ಸುರೇಶ್ ತೆಲುಗು ಮಾಧ್ಯಮಳೊಟ್ಟಿಗೆ ಮಾತನಾಡುತ್ತಾ, ತಮಿಳಿನ ಸ್ಟಾರ್ ನಟ ವಿಜಯ್ ಮತ್ತು ಚಿರಂಜೀವಿ ಬಗ್ಗೆ ಮಾತನಾಡಿದರು. ಕೀರ್ತಿ ಸುರೇಶ್ ಆಡಿರುವ ಮಾತುಗಳು ಚಿರಂಜೀವಿ ಅಭಿಮಾನಿಗಳನ್ನು ಮತ್ತು ತೆಲುಗು ಸಿನಿಮಾ ಪ್ರೇಮಿಗಳನ್ನು ಕೆರಳಿಸಿದೆ. ಇದೀಗ ಕೀರ್ತಿ ಸುರೇಶ್ ಅದಕ್ಕೆ ಕ್ಷಮೆ ಕೇಳಿದ್ದಾರಾದರೂ, ತಮ್ಮ ಹೇಳಿಕೆಗೆ ಕ್ಷಮೆ ಕೇಳಬೇಕಾಗಿ ಬಂದಿರುವ ಬಗ್ಗೆ ಬೇಸರವನ್ನೂ ವ್ಯಕ್ತಪಡಿಸಿದ್ದಾರೆ.

ತೆಲುಗು ಮಾಧ್ಯಮವೊಂದರ ಸಂದರ್ಶನದಲ್ಲಿ ಸಂದರ್ಶಕ, ‘ವಿಜಯ್ ಹಾಗೂ ಚಿರಂಜೀವಿ ಇಬ್ಬರಲ್ಲಿ ಯಾರು ಒಳ್ಳೆಯ ಡ್ಯಾನ್ಸರ್?’ ಎಂದು ಪ್ರಶ್ನೆ ಕೇಳಿದ್ದರು. ಪ್ರಶ್ನೆಗೆ ನೇರವಾಗಿ ಉತ್ತರಿಸಿದ್ದ ಕೀರ್ತಿ ಸುರೇಶ್, ‘ನನಗೆ ವಿಜಯ್ ಅವರ ಡ್ಯಾನ್ಸ್ ಹೆಚ್ಚು ಇಷ್ಟ. ಅವರು ಅದ್ಭುತವಾಗಿ ಡ್ಯಾನ್ಸ್ ಮಾಡುತ್ತಾರೆ. ಮಾತ್ರವಲ್ಲ ಅವರು ಬಹಳ ಹ್ಯಾಂಡ್ಸಮ್ ಸಹ ಎಂದು ಕೀರ್ತಿ ಸುರೇಶ್ ಹೇಳಿದ್ದರು. ಕೀರ್ತಿ ಅವರ ಈ ಮಾತಿಗೆ ಚಿರಂಜೀವಿ ಅಭಿಮಾನಿಗಳು ಆಕ್ರೋಶ ಹೊರಹಾಕಿದ್ದರು.

ಇದನ್ನೂ ಓದಿ:ರಾಷ್ಟ್ರಪ್ರಶಸ್ತಿ ಸಿಕ್ಕರೂ ಆರು ತಿಂಗಳು ಕೆಲಸ ಇರದೇ ಕೂತಿದ್ದೆ: ಕೀರ್ತಿ ಸುರೇಶ್

ಬಳಿಕ ಇತ್ತೀಚೆಗೆ ಮತ್ತೆ ಇದೇ ವಿಷಯವಾಗಿ ಕೀರ್ತಿ ಸುರೇಶ್ ಅವರನ್ನು ಪ್ರಶ್ನೆ ಮಾಡಲಾಗಿದ್ದು, ‘ಯಾರು ಹ್ಯಾಂಡ್ಸಮ್ ಎಂಬುದು ವಿಷಯವಲ್ಲ. ಸ್ವತಃ ಚಿರಂಜೀವಿ ಅವರಿಗೆ ಗೊತ್ತು ನಾನು ಎಷ್ಟು ದೊಡ್ಡ ವಿಜಯ್ ಫ್ಯಾನ್ ಎಂಬುದು. ನಾವು ಒಟ್ಟಿಗೆ ಕೆಲಸ ಮಾಡಿದಾಗ ಈ ಬಗ್ಗೆ ಮಾತನಾಡಿದ್ದೇವೆ. ನಾನು ವಿಜಯ್ ಡ್ಯಾನ್ಸ್​ನ ಫ್ಯಾನ್ ಎಂಬುದನ್ನು ಚಿರಂಜೀವಿ ಅವರಿಗೂ ಹೇಳಿದ್ದೇನೆ. ನನ್ನ ಪ್ರಾಮಾಣಿಕತೆಯನ್ನು ಅವರು ಮೆಚ್ಚಿಕೊಂಡಿದ್ದಾರೆ. ಅವರು ಈ ವಿಷಯವನ್ನು ಕ್ರೀಡಾ ಸ್ಪೂರ್ತಿಯಿಂದ ತೆಗೆದುಕೊಂಡಿದ್ದಾರೆ’ ಎಂದಿದ್ದಾರೆ.

‘ಈ ಹಿಂದೆ ನನ್ನನ್ನು ಅವರು ಈ ಬಗ್ಗೆ ಪ್ರಶ್ನೆ ಮಾಡಿದಾಗ ನನ್ನ ಮನಸ್ಸಿನಲ್ಲಿ ಏನಿತ್ತೊ ಅದನ್ನು ಹೇಳಿದ್ದೇನೆ. ನಾನು ವಿಜಯ್ ಅವರ ಸಿನಿಮಾಗಳನ್ನು ಹೆಚ್ಚು ನೋಡಿರುವುದರಿಂದ ನನಗೆ ಹಾಗೆ ಅನಿಸಿರಬಹುದು. ನಾನು ಚಿರಂಜೀವಿ ಅವರ ಅಭಿಮಾನಿಯೂ ಹೌದು. ಅವರೊಂದಿಗೆ ನನ್ನ ತಾಯಿ ಸಹ ನಟಿಸಿದ್ದಾರೆ ಅವರು ಎಂಥಹಾ ಮಹಾನ್ ವ್ಯಕ್ತಿ ಎಂಬುದು ಎಲ್ಲರಿಗೂ ಗೊತ್ತಿದೆ. ಯಾರೂ ಸಹ ಇನ್ನೊಬ್ಬರಿಗಿಂತಲೂ ಮೇಲು-ಕೀಳು ಅಲ್ಲ. ಒಂದೊಮ್ಮೆ ನಾನು ಆಡಿರುವ ಮಾತುಗಳಿಂದ ಚಿರಂಜೀವಿ ಅವರ ಅಭಿಮಾನಿಗಳ ಮನಸ್ಸಿಗೆ ಬೇಸರ ಆಗಿದ್ದರೆ ನನ್ನನ್ನು ಕ್ಷಮಿಸಿ, ನನಗೆ ಏನು ಅನ್ನಿಸಿತೊ ಅದನ್ನು ಹೇಳುವುದು ಸಹ ಅಪರಾಧ ಎಂಬುದು ಬಹಳ ಬೇಸರ ತರಿಸುತ್ತದೆ’ ಎಂದಿದ್ದಾರೆ ಕೀರ್ತಿ ಸುರೇಶ್.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ